ಆರೋಗ್ಯ ಕವಚ-108 ನೇಮಕ: ಹಳಬರನ್ನೇ ಮುಂದುವರಿಸಬಹುದಲ್ಲವೇ? ಸರ್ಕಾರಕ್ಕೆ ಹೈಕೋರ್ಟ್ ಪ್ರಶ್ನೆ

ಸರ್ಕಾರ ಹಳೆಯ ಒಪ್ಪಂದವನ್ನು ರದ್ದುಪಡಿಸಿ ಹೊಸ ನೇಮಕಾತಿಗೆ ಮುಂದಾಗಿದೆ. ಇದು ನೌಕರರ ಸೇವಾ ಭದ್ರತೆಗೆ ಧಕ್ಕೆ ತರುತ್ತದೆ ಎಂದು ಅರ್ಜಿದಾರರ ಪರ ವಕೀಲರು ಕೋರ್ಟ್​ಗೆ ಮಾಹಿತಿ ನೀಡಿದರು.

Update: 2025-10-14 14:41 GMT
ಸಾಂದರ್ಭಿಕ ಚಿತ್ರ
Click the Play button to listen to article

ರಾಜ್ಯದಲ್ಲಿ ‘ಆರೋಗ್ಯ ಕವಚ-108’ ಆಂಬುಲೆನ್ಸ್ ಸೇವೆಗೆ ಹೊಸದಾಗಿ ಚಾಲಕರು (ಪೈಲಟ್) ಮತ್ತು ತುರ್ತು ಚಿಕಿತ್ಸಾ ತಂತ್ರಜ್ಞರನ್ನು (ಇಎಂಟಿ) ನೇಮಕ ಮಾಡಿಕೊಳ್ಳುವ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೂ, ಈವರೆಗೆ ಸೇವೆ ಸಲ್ಲಿಸುತ್ತಿರುವ ಹಳೆಯ ಸಿಬ್ಬಂದಿಯನ್ನೇ ಮುಂದುವರಿಸಬಹುದಲ್ಲವೇ ಎಂದು ಕರ್ನಾಟಕ ಹೈಕೋರ್ಟ್ ರಾಜ್ಯ ಸರ್ಕಾರವನ್ನು ಪ್ರಶ್ನಿಸಿದೆ. ಅಲ್ಲದೆ, ಯಾವ ಜಿಲ್ಲೆಗಳಲ್ಲಿ ನೇಮಕಾತಿ ಪ್ರಕ್ರಿಯೆ ಪೂರ್ಣಗೊಂಡಿದೆ ಎಂಬ ಬಗ್ಗೆ ಎರಡು ದಿನಗಳ ಒಳಗೆ ಮಾಹಿತಿ ನೀಡುವಂತೆ ಸರ್ಕಾರಕ್ಕೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ.

‘ಅಖಿಲ ಕರ್ನಾಟಕ 108 ಆಂಬುಲೆನ್ಸ್ ನೌಕರರ ಹಿತರಕ್ಷಣಾ ಸಂಘ’ ಹಾಗೂ ಇತರರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಅಶೋಕ್ ಎಸ್. ಕಿಣಗಿ ಅವರ ನೇತೃತ್ವದ ಏಕಸದಸ್ಯ ಪೀಠವು ಸೋಮವಾರ ನಡೆಸಿತು.

ಅರ್ಜಿದಾರರ ವಾದ

ಅರ್ಜಿದಾರರ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಆದಿತ್ಯ ಸೋಂಧಿ, "2008ರಿಂದ ಆರೋಗ್ಯ ಇಲಾಖೆ ಮತ್ತು ಜಿವಿಕೆ-ಇಎಂಆರ್‌ಐ ಸಂಸ್ಥೆಯ ನಡುವಿನ ಒಪ್ಪಂದದ ಅಡಿಯಲ್ಲಿ 3,500ಕ್ಕೂ ಹೆಚ್ಚು ಸಿಬ್ಬಂದಿ ತುರ್ತು ಆರೋಗ್ಯ ಸೇವೆ ಸಲ್ಲಿಸುತ್ತಿದ್ದಾರೆ. ಅವರ ವೇತನ ಬಾಕಿ, ಸ್ಥಳ ನಿಯೋಜನೆ ಸೇರಿದಂತೆ ಹಲವು ವಿಷಯಗಳು ನ್ಯಾಯಾಲಯದಲ್ಲಿ ಇನ್ನೂ ಇತ್ಯರ್ಥವಾಗಿಲ್ಲ. ಈ ಮಧ್ಯೆ, ಸರ್ಕಾರ ಹಳೆಯ ಒಪ್ಪಂದವನ್ನು ರದ್ದುಪಡಿಸಿ ಹೊಸ ನೇಮಕಾತಿಗೆ ಮುಂದಾಗಿದೆ. ಇದು ನೌಕರರ ಸೇವಾ ಭದ್ರತೆಗೆ ಧಕ್ಕೆ ತರುತ್ತದೆ. ಮಾನವೀಯ ದೃಷ್ಟಿಯಿಂದ ಈ ಪ್ರಕರಣವನ್ನು ಪರಿಗಣಿಸಿ, ಅವರನ್ನು ಸೇವೆಯಲ್ಲಿ ಮುಂದುವರಿಸಬೇಕು ಮತ್ತು ವಿಷಯ ಇತ್ಯರ್ಥವಾಗುವವರೆಗೆ ಹೊಸ ನೇಮಕಾತಿ ಅಧಿಸೂಚನೆಗೆ ತಡೆ ನೀಡಬೇಕು," ಎಂದು ಮನವಿ ಮಾಡಿದರು.

ಸರ್ಕಾರದ ಆಕ್ಷೇಪ

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸರ್ಕಾರದ ಪರ ವಕೀಲರು, "ಹೊಸ ನೇಮಕಾತಿ ಪ್ರಕ್ರಿಯೆಯಲ್ಲಿ ಅನುಭವ ಮತ್ತು ತರಬೇತಿಯನ್ನು ಮಾನದಂಡವಾಗಿ ನಿಗದಿಪಡಿಸಲಾಗಿದೆ. ಈ ಮಾನದಂಡಗಳನ್ನು ಪೂರೈಸುವ ಹಳೆಯ ನೌಕರರಿಗೆ ಆದ್ಯತೆ ನೀಡಲಾಗುವುದು. ಇದು ಸರ್ಕಾರದ ನೀತಿ ನಿರ್ಧಾರವಾಗಿದೆ. ಈಗಾಗಲೇ ಜಿಲ್ಲಾವಾರು ನೇಮಕಾತಿ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಈಗ ಸೇವೆಯಲ್ಲಿರುವವರೆಲ್ಲರೂ ಜಿವಿಕೆ-ಇಎಂಆರ್‌ಐ ಸಂಸ್ಥೆಯ ಸಿಬ್ಬಂದಿಯಾಗಿರುವುದರಿಂದ, ಅವರನ್ನು ಮುಂದುವರಿಸುವುದಾಗಿ ಸಾರಾಸಗಟಾಗಿ ಭರವಸೆ ನೀಡಲು ಸಾಧ್ಯವಿಲ್ಲ," ಎಂದು ನ್ಯಾಯಪೀಠಕ್ಕೆ ತಿಳಿಸಿದರು.

ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಪೀಠವು, ನೇಮಕಾತಿ ಪ್ರಕ್ರಿಯೆ ಪೂರ್ಣಗೊಳ್ಳುವ ತನಕ ಈಗ ಸೇವೆಯಲ್ಲಿರುವ ಸಿಬ್ಬಂದಿಯನ್ನೇ ಏಕೆ ಮುಂದುವರಿಸಬಾರದು ಎಂದು ಸರ್ಕಾರಿ ವಕೀಲರನ್ನು ಮರುಪ್ರಶ್ನಿಸಿತು. ಜೊತೆಗೆ, ಈವರೆಗೆ ಯಾವ ಜಿಲ್ಲೆಗಳಲ್ಲಿ ನೇಮಕಾತಿ ಪ್ರಕ್ರಿಯೆ ಪೂರ್ಣಗೊಂಡಿದೆ ಮತ್ತು ಎಲ್ಲೆಲ್ಲಿ ಬಾಕಿ ಇದೆ ಎಂಬ ಬಗ್ಗೆ ಸಮಗ್ರ ಮಾಹಿತಿ ನೀಡುವಂತೆ ನಿರ್ದೇಶನ ನೀಡಿ, ವಿಚಾರಣೆಯನ್ನು ಅಕ್ಟೋಬರ್ 16ಕ್ಕೆ ಮುಂದೂಡಿತು.

Tags:    

Similar News