
ಧರ್ಮಸ್ಥಳದ ವಿರುದ್ಧ ಅಪಪ್ರಚಾರ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್
ರಾಜ್ಯ ಸರ್ಕಾರದ ಗೃಹ ಇಲಾಖೆ, ರಾಜ್ಯ ಪೊಲೀಸ್ ಮಹಾನಿರ್ದೇಶಕರು, ಬೆಂಗಳೂರು ನಗರ ಪೊಲೀಸ್ ಆಯುಕ್ತರು, ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, SIT, ಆದಾಯ ತೆರಿಗೆ ಇಲಾಖೆ ಹಾಗೂ ಜಾರಿ ನಿರ್ದೇಶನಾಲಯಕ್ಕೆ ನೋಟಿಸ್ ಜಾರಿ ಮಾಡಲಾಗಿದೆ.
ದಕ್ಷಿಣ ಕನ್ನಡದ ಪ್ರಸಿದ್ಧ ಪುಣ್ಯಕ್ಷೇತ್ರ ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಅದರ ಧರ್ಮಾಧಿಕಾರಿಗಳ ವಿರುದ್ಧ ನಡೆಯುತ್ತಿರುವ ವ್ಯವಸ್ಥಿತ ಷಡ್ಯಂತ್ರದ ಕುರಿತು ಸಮಗ್ರ ತನಿಖೆಗೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್, ರಾಜ್ಯ ಸರ್ಕಾರ ಸೇರಿದಂತೆ ಹಲವು ತನಿಖಾ ಸಂಸ್ಥೆಗಳಿಗೆ ನೋಟಿಸ್ ಜಾರಿಗೊಳಿಸಿದೆ.
ಶ್ರೀ ಕ್ಷೇತ್ರ ಧರ್ಮಸ್ಥಳದ ಭಕ್ತರಾದ ತೇಜಸ್ ಎ. ಗೌಡ, ಭಾಸ್ಕರ್ ಬಡೆಕೊಟ್ಟು, ಸುರೇಂದ್ರ ಪ್ರಭು ಮತ್ತು ಧನಕೀರ್ತಿ ಅರಿಗ ಅವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ಏಕಸದಸ್ಯ ಪೀಠವು ವಿಚಾರಣೆ ನಡೆಸಿತು. ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣನವರ್, ಟಿ. ಜಯಂತ್ ಮತ್ತು ಎಂ.ಡಿ. ಸಮೀರ್ ಅವರ ಚಟುವಟಿಕೆಗಳು, ಹಣಕಾಸಿನ ಮೂಲ ಮತ್ತು ಸಂಪರ್ಕ ಜಾಲದ ಬಗ್ಗೆ ವಿಶೇಷ ತನಿಖಾ ತಂಡದಿಂದ (SIT) ತನಿಖೆ ನಡೆಸಲು ನಿರ್ದೇಶಿಸುವಂತೆ ಅರ್ಜಿಯಲ್ಲಿ ಕೋರಲಾಗಿತ್ತು.
ಕೆಲ ಕಾಲ ವಾದ-ಪ್ರತಿವಾದಗಳನ್ನು ಆಲಿಸಿದ ಪೀಠವು, ರಾಜ್ಯ ಸರ್ಕಾರದ ಗೃಹ ಇಲಾಖೆ, ರಾಜ್ಯ ಪೊಲೀಸ್ ಮಹಾನಿರ್ದೇಶಕರು, ಬೆಂಗಳೂರು ನಗರ ಪೊಲೀಸ್ ಆಯುಕ್ತರು, ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, SIT, ಆದಾಯ ತೆರಿಗೆ ಇಲಾಖೆ ಹಾಗೂ ಜಾರಿ ನಿರ್ದೇಶನಾಲಯಕ್ಕೆ ನೋಟಿಸ್ ಜಾರಿ ಮಾಡಿ, ಆಕ್ಷೇಪಣೆ ಸಲ್ಲಿಸಲು ಸೂಚಿಸಿದೆ. ವಿಚಾರಣೆಯನ್ನು ಅಕ್ಟೋಬರ್ 16ಕ್ಕೆ ಮುಂದೂಡಲಾಗಿದೆ.
ಅರ್ಜಿಯಲ್ಲಿನ ಪ್ರಮುಖ ಆರೋಪಗಳೇನು?
ಅರ್ಜಿದಾರರು ತಮ್ಮ ಮನವಿಯಲ್ಲಿ ಹಲವು ಗಂಭೀರ ಆರೋಪಗಳನ್ನು ಮಾಡಿದ್ದಾರೆ. "ಮಹೇಶ್ ಶೆಟ್ಟಿ ತಿಮರೋಡಿ ಅವರು ಸೌಜನ್ಯ ಪ್ರಕರಣದ ಹೆಸರಿನಲ್ಲಿ ಹೋರಾಟ ನಡೆಸುತ್ತಿದ್ದು, ಇದಕ್ಕಾಗಿ ವಕೀಲರಿಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದಾರೆ. ಈ ಹೋರಾಟದಲ್ಲಿ ಭಾಗಿಯಾದ ಸೌಜನ್ಯ ಅವರ ತಾಯಿ ಸೇರಿದಂತೆ ಪ್ರತಿಯೊಬ್ಬರೂ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಯನ್ನು ಖರೀದಿಸಿದ್ದಾರೆ. ಈ ಹಣದ ಮೂಲ ಯಾವುದು?" ಎಂದು ಅರ್ಜಿದಾರ ತೇಜಸ್ ಗೌಡ ಪ್ರಶ್ನಿಸಿದ್ದಾರೆ.
ಕುಡ್ಲ ರ‍್ಯಾಂಪೇಜ್ ಎಂಬ ಯೂಟ್ಯೂಬ್ ಚಾನೆಲ್, ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ನಿರಂತರವಾಗಿ ಷಡ್ಯಂತ್ರದ ವರದಿಗಳನ್ನು ಪ್ರಸಾರ ಮಾಡುತ್ತಿದೆ. SIT ತನಿಖೆಯ ಸಮಯದಲ್ಲಿ, ತಮ್ಮದೇ ವರದಿಗಳನ್ನು SITಯ ವರದಿ ಎಂಬಂತೆ ಬಿಂಬಿಸಿ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ. ಈ ಸುದ್ದಿಯ ಮೂಲವನ್ನು ಪತ್ತೆ ಮಾಡಬೇಕು," ಎಂದು ಮತ್ತೊಬ್ಬ ಅರ್ಜಿದಾರ ಧನಕೀರ್ತಿ ಅವರು ತಮ್ಮ ದೂರಿನಲ್ಲಿ ಒತ್ತಾಯಿಸಿದ್ದಾರೆ.