ಉದ್ದೇಶಿತ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಷ್ಟು ಅವಶ್ಯಕ? ಏನು ರಾಜಕೀಯ?
ಈ ವಿಚಾರದಲ್ಲಿ ಡಿಸಿಎಂ ಹಾಗೂ ಸಿಎಂ ಬಣದ ಸಚಿವರ ಹಗ್ಗಜಗ್ಗಾಟ ಆರಂಭವಾಗಿದೆ. ಶತಾಯಗತಾಯ ವಿಮಾನ ನಿಲ್ದಾಣವನ್ನು ರಾಮನಗರ ಜಿಲ್ಲೆಗೆ ಕೊಂಡೊಯ್ಯಲು ಡಿಸಿಎಂ ಡಿಕೆ ಶಿವಕುಮಾರ್ ಹಠಕ್ಕೆ ಬಿದ್ದಿದ್ದಾರೆ.;
ಬೆಂಗಳೂರಿನಲ್ಲಿ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪನೆ ಪ್ರಕ್ರಿಯೆ ಗರಿಗೆದರಿದೆ. ಬೆಂಗಳೂರು ಹೊರವಲಯದಲ್ಲಿ ಗುರುತಿಸಿರುವ ಮೂರು ಪ್ರಸ್ತಾವಿತ ಸ್ಥಳಗಳನ್ನು ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದ(ಎಎಐ) ಅಧಿಕಾರಿಗಳು ಪರಿಶೀಲಿಸುವ ಮೂಲಕ ವಿಮಾನ ನಿಲ್ದಾಣ ಯೋಜನೆ ಚುರುಕು ಪಡೆದಿದೆ.
ಕನಕಪುರ ರಸ್ತೆಯಲ್ಲಿ ಎರಡು, ನೆಲಮಂಗಲ-ಕುಣಿಗಲ್ ರಸ್ತೆಯಲ್ಲಿ ಒಂದು ಸ್ಥಳವನ್ನು ರಾಜ್ಯ ಸರ್ಕಾರ ಅಂತಿಮಗೊಳಿಸಿದೆ. ಕನಕಪುರ ರಸ್ತೆಯ ಹಾರೋಹಳ್ಳಿ ಸಮೀಪ 4800 ಎಕರೆ ಇದ್ದರೆ, ಕನಕಪುರ ರಸ್ತೆಯಲ್ಲಿ 5000 ಎಕರೆ, ನೆಲಮಂಗಲ-ಕುಣಿಗಲ್ ರಸ್ತೆಯ ಸೋಲೂರು ಬಳಿ 5200 ಎಕರೆ ಭೂಮಿ ಲಭ್ಯವಿದೆ. ಈ ಜಾಗಗಳನ್ನು ವೀಕ್ಷಿಸಿರುವ ಪ್ರಾಧಿಕಾರದ ತಂಡ ಶೀಘ್ರವೇ ಅಂತಿಮ ವರದಿ ಸಲ್ಲಿಸಲಿದೆ.
ಈ ಮಧ್ಯೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಜಾಗದ ವಿಚಾರದಲ್ಲಿ ರಾಜಕೀಯ ಹಗ್ಗಜಗ್ಗಾಟವೂ ಆರಂಭವಾಗಿದೆ. ಹಾಗಾದರೆ ಬೆಂಗಳೂರಿನ ಯಾವ ದಿಕ್ಕಿಗೆ ಎರಡನೇ ವಿಮಾನ ನಿಲ್ದಾಣ ಅಗತ್ಯವಾಗಿದೆ. ಪ್ರಯಾಣಿಕರ ದಟ್ಟಣೆ ಹೇಗಿದೆ, ಮೂಲ ಸೌಕರ್ಯ ವ್ಯವಸ್ಥೆ ಹೇಗೆ, ಕಾರ್ಯಾಚರಣೆಗೆ ಪೂರಕವಾಗುವ ಸಂಗತಿಗಳೇನು ಎಂಬುದರ ವರದಿ ಇಲ್ಲಿದೆ.
ಬೆಂಗಳೂರು ದಕ್ಷಿಣವೇ ಏಕೆ?
ಬೆಂಗಳೂರು ಉತ್ತರದಲ್ಲಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ದಕ್ಷಿಣ ಬೆಂಗಳೂರಿನ ಪ್ರಯಾಣಿಕರ ಅವಲಂಬನೆ ಹೆಚ್ಚಾಗಿದೆ. ಬೆಂಗಳೂರು ದಕ್ಷಿಣದಲ್ಲೇ ಹೊಸ ನಿಲ್ದಾಣ ಸ್ಥಾಪಿಸುವುದರಿಂದ ಹಳೆ ಮೈಸೂರು ಭಾಗದ ಜಿಲ್ಲೆಗಳ ಪ್ರಯಾಣಿಕರಿಗೂ ಅನುಕೂಲವಾಗಲಿದೆ. ಅಲ್ಲದೇ ತ್ವರಿತ ಸಾರಿಗೆ ವ್ಯವಸ್ಥೆ ಕಲ್ಪಿಸಿದರೆ ಪಶ್ಚಿಮ ಬೆಂಗಳೂರಿನ ನಿವಾಸಿಗಳಿಗೆ ಇದರಿಂದ ಪ್ರಯೋಜನವಾಗಲಿದೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ.
ವಿಮಾನ ನಿಲ್ದಾಣ ಪ್ರಾಧಿಕಾರ ತಂಡೆದಿಂದ ಸ್ಥಳ ವೀಕ್ಷಣೆ
ತಳಮಳ ಸೃಷ್ಟಿಸಿದ ತಮಿಳುನಾಡು ನಿರ್ಧಾರ
ಹೊಸೂರಿನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪಿಸಲು ಮುಂದಾಗಿರುವ ತಮಿಳುನಾಡು ಸರ್ಕಾರದ ಕ್ರಮವು ತಳಮಳ ಸೃಷ್ಟಿಸಿದೆ. ವೈಟ್‌ಫೀಲ್ಡ್, ಎಲೆಕ್ಟ್ರಾನಿಕ್ ಸಿಟಿಯ ವೃತ್ತಿಪರರು ಚೆನ್ನೈಗೆ ಪ್ರಯಾಣಿಸಲು ಎಕ್ಸ್‌ಪ್ರೆಸ್ ವೇ ನಿರ್ಮಿಸಿರುವುದರಿಂದ ಬಹುತೇಕರು ಹೊಸೂರಿನತ್ತ ಪ್ರಯಾಣಿಸುವ ಆತಂಕ ಕಾಡುತ್ತಿದೆ. ಇನ್ನು ಬೆಂಗಳೂರು ದಕ್ಷಿಣದಲ್ಲಿ ವಿಮಾನ ನಿಲ್ದಾಣ ತಲೆಎತ್ತಿದರೆ ರಾಜ್ಯಕ್ಕೆ ಕಾಡುತ್ತಿರುವ ಆತಂಕವೇ ತಮಿಳುನಾಡಿಗೂ ಕಾಡಲಾರಂಭಿಸಿದೆ.
ನೆಲಮಂಗಲ-ಕುಣಿಗಲ್ ರಸ್ತೆ ಏಕೆ?
ನೆಲಮಂಗಲದಲ್ಲಿ ಪುಣೆ ಹೆದ್ದಾರಿ, ಹಾಸನ ಹೆದ್ದಾರಿ ಹಾದು ಹೋಗುವುದರಿಂದ ಉತ್ತಮ ಸಾರಿಗೆ ವ್ಯವಸ್ಥೆ ಇರಲಿದೆ. ಅಲ್ಲದೇ ನೆಲಮಂಗಲ ತಾಲೂಕಿನ ಮೋಟಗಾನಹಳ್ಳಿ ಸುತ್ತಮುತ್ತ 5000ಸಾವಿರಕ್ಕೂ ಹೆಚ್ಚು ಸರ್ಕಾರಿ ಭೂಮಿ ಲಭ್ಯವಿರುವುದರಿಂದ ವಿಮಾನ ನಿಲ್ದಾಣ ಸ್ಥಾಪನೆಗೆ ಅನುಕೂಲವಾಗಲಿದೆ ಎಂಬ ವಾದವೂ ಇದೆ. ಆದರೆ, ಈ ಭಾಗದ ರೈತರು ವಿಮಾನ ನಿಲ್ದಾಣ ವಿರೋಧಿಸಿ ಹೋರಾಟಕ್ಕಿಳಿರುವುದನ್ನು ಪರಿಗಣಿಸಿ ವಿಮಾನ ನಿಲ್ದಾಣಗಳ ಪ್ರಾಧಿಕಾರ ಅಂತಿಮವಾಗಿ ಸೂಕ್ತ ಸ್ಥಳ ಗುರುತಿಸಲಿದೆ.
“ಉದ್ದೇಶಿತ ಎರಡನೇ ವಿಮಾನ ನಿಲ್ದಾಣವನ್ನು ಬೆಂಗಳೂರಿನ ಅಗತ್ಯಗಳನ್ನು ಗಮನದಲ್ಲಿ ಇಟ್ಟುಕೊಂಡು ನಿರ್ಮಿಸಲು ಸರ್ಕಾರ ತೀರ್ಮಾನಿಸಿದೆ. ಸ್ಥಳ ಪರಿಶೀಲನೆಯ ಬಳಿಕ ಪ್ರಾಧಿಕಾರದ ಅಭಿಪ್ರಾಯ ಏನೆಂಬುದನ್ನು ತಿಳಿದುಕೊಂಡು, ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.
ವಿಮಾನ ನಿಲ್ದಾಣ ರಾಜಕೀಯ ಹಗ್ಗಜಗ್ಗಾಟ
ಈ ಮಧ್ಯೆ ಹೊಸ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಜಾಗದ ವಿಚಾರದಲ್ಲಿ ರಾಜಕೀಯ ಹಗ್ಗಜಗ್ಗಾಟವೂ ಆರಂಭವಾಗಿದೆ. ಹಾಗಾದರೆ ಬೆಂಗಳೂರಿನ ಯಾವ ದಿಕ್ಕಿಗೆ ಎರಡನೇ ವಿಮಾನ ನಿಲ್ದಾಣ ಅಗತ್ಯವಾಗಿದೆ. ಪ್ರಯಾಣಿಕರ ದಟ್ಟಣೆ ಹೇಗಿದೆ, ಮೂಲ ಸೌಕರ್ಯ ವ್ಯವಸ್ಥೆ ಹೇಗೆ, ಕಾರ್ಯಾಚರಣೆಗೆ ಪೂರಕವಾಗುವ ಸಂಗತಿಗಳೇನು ಎಂಬುದರ ವರದಿ ಇಲ್ಲಿದೆ.
ವಿಮಾನ ನಿಲ್ದಾಣದ ಜಾಗ ಅಂತಿಮಗೊಳಿಸುವ ವಿಚಾರದಲ್ಲಿ ಡಿಸಿಎಂ ಹಾಗೂ ಸಿಎಂ ಬಣದ ಸಚಿವರ ಹಗ್ಗಜಗ್ಗಾಟ ಆರಂಭವಾಗಿದೆ. ಶತಾಯಗತಾಯ ವಿಮಾನ ನಿಲ್ದಾಣವನ್ನು ರಾಮನಗರ ಜಿಲ್ಲೆಗೆ ಕೊಂಡೊಯ್ಯಲು ಹಠಕ್ಕೆ ಬಿದ್ದಿರುವ ಡಿಸಿಎಂ ಡಿಕೆ ಶಿವಕುಮಾರ್ ಅವರು ಕನಕಪುರ ರಸ್ತೆಯಲ್ಲಿ ಎರಡು ಜಾಗಗಳನ್ನು ಅಂತಿಮಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಹಿಂದೆ ಬಿಡದಿ ಸಮೀಪ ವಿಮಾನ ನಿಲ್ದಾಣಕ್ಕೆ ಜಾಗ ಗುರುತಿಸಲಾಗಿತ್ತು. ಆದರೆ, ಬಿಡದಿಯಲ್ಲಿ ಟೌನ್‌ಶಿಪ್ ತಲೆ ಎತ್ತುತ್ತಿರುವುದರಿಂದ ಅದನ್ನು ಕೈ ಬಿಡಲಾಗಿತ್ತು. ಉತ್ತರದಲ್ಲಿರುವ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಪರ್ಯಾಯವಾಗಿ ದಕ್ಷಿಣದಲ್ಲಿ ಹೊಸ ವಿಮಾನ ನಿಲ್ದಾಣ ಸ್ಥಾಪನೆಗೆ ನಿರ್ಧರಿಸಿ, ಜಾಗ ನಿಗದಿ ಮಾಡಲಾಗಿದೆ.
ಈ ಮಧ್ಯೆ ತುಮಕೂರು ಜಿಲ್ಲೆಯಲ್ಲಿ ವಿಮಾನ ನಿಲ್ದಾಣ ಸ್ಥಾಪನೆಗೆ ಡಾ.ಜಿ. ಪರಮೇಶ್ವರ್ ಪಟ್ಟು ಹಿಡಿದಿದ್ದರು. ತುಮಕೂರಿನಲ್ಲಿ ವಿಮಾನ ನಿಲ್ದಾಣ ಆರಂಭಿಸುವುದರಿಂದ ಮಧ್ಯ ಕರ್ನಾಟಕ, ಉತ್ತರ ಕರ್ನಾಟಕ ಹಾಗೂ ಮಲೆನಾಡಿನ ಜಿಲ್ಲೆಗಳಿಗೂ ಅನುಕೂಲವಾಗಲಿದೆ ಎಂದು ಹೇಳಿದ್ದರು. ಆದರೆ, ಅಂತಿಮವಾಗಿ ನೆಲಮಂಗಲ-ಕುಣಿಗಲ್ ರಸ್ತೆಯ ಸೋಂಪುರದ ಬಳಿ ಒಂದು ಜಾಗ ಗುರುತಿಸಲಾಗಿದೆ. ಈಗ ಮೂರೂ ಜಾಗಗಳನ್ನು ಪರಿಶೀಲಿಸಿರುವ ವಿಮಾನ ನಿಲ್ದಾಣಗಳ ಪ್ರಾಧಿಕಾರ ತಂಡ ಅಂತಿಮವಾಗಿ ಯಾವ ಜಾಗವನ್ನು ಆಯ್ಕೆ ಮಾಡಲಿದೆ ಎಂಬುದು ಕುತೂಹಲ ಮೂಡಿಸಿದೆ.
ಕನಕಪುರ ಹಾಗೂ ನೆಲಮಂಗಲದಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಉತ್ತರ ಕರ್ನಾಟಕ ಮತ್ತು ಬಯಲುಸೀಮೆ ಕ್ಷೇತ್ರಗಳ ಶಾಸಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಸ್ಥಳಗಳ ಬದಲು ತುಮಕೂರಿನ ಶಿರಾದಲ್ಲಿ ವಿಮಾನ ನಿಲ್ದಾಣ ನಿರ್ಮಿಸುವಂತೆ ಒತ್ತಾಯಿಸಿ 30ಕ್ಕೂ ಹೆಚ್ಚು ಶಾಸಕರು ಪಕ್ಷಾತೀತವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವುದರಿಂದ ಯೋಜನೆಗೆ ಮತ್ತಷ್ಟು ರಾಜಕೀಯ ಹಗ್ಗಜಗ್ಗಾಟಕ್ಕೆ ಕಾರಣವಾಗಿದೆ.
ಏರ್‌ಪೋರ್ಟ್ ಸ್ಥಾಪನೆಗೆ ಸವಾಲುಗಳು ಏನು?
ಬೆಂಗಳೂರಿನ ಅಭಿವೃದ್ಧಿ ನಗರ ಕೇಂದ್ರೀತವಾಗಿದೆ. ಹೊರವಲಯದಲ್ಲಿ ಇನ್ನೂ ಮೂಲಸೌಕರ್ಯ ಕೊರತೆ ದೊಡ್ಡ ಸಮಸ್ಯೆಯಾಗಿದೆ. ಎರಡನೇ ವಿಮಾನ ನಿಲ್ದಾಣ ಸ್ಥಾಪನೆ ಪ್ರಕ್ರಿಯೆ ಆರಂಭಿಸಲು ಮೊದಲು ಸ್ಥಳ ನಿಗದಿಯಾಗಬೇಕು. ವಿಮಾನ ಪ್ರಯಾಣಿಕರು ಸುಲಭವಾಗಿ ತಲುಪುವಂತಾಗಲು ಆದ್ಯತೆಯ ಮೇಲೆ ರಸ್ತೆ ಸೇರಿ ಕನಿಷ್ಠ ಮೌಲಸೌಕರ್ಯ ಅಭಿವೃದ್ಧಿಪಡಿಸಬೇಕು. ಸಾವಿರಾರು ಕೋಟಿ ಬಂಡವಾಳ ಅಗತ್ಯವಾಗಿರುವುದರಿಂದ ದೊಡ್ಡ ಹೂಡಿಕೆದಾರರನ್ನು ಆಕರ್ಷಿಸುವುದು ಸದ್ಯ ಸವಾಲಾಗಿದೆ.
ವಿಮಾನ ನಿಲ್ದಾಣಕ್ಕೆ ಎಷ್ಟು ಭೂಮಿ ಅಗತ್ಯ?
ಬೆಂಗಳೂರಿನ ಎರಡನೇ ವಿಮಾನ ನಿಲ್ದಾಣಕ್ಕೆ ಸುಮಾರು 5000 ಸಾವಿರ ಎಕರೆ ಭೂಮಿ ಅಗತ್ಯವಾಗಿದೆ. ವಿಮಾನಗಳ ನಿಲುಗಡೆ ಸ್ಥಳಾವಕಾಶ, ರನ್ ವೇ ನಿರ್ಮಾಣ ಹಾಗೂ ಪ್ರಯಾಣಿಕರಿಗೆ ಮೂಲ ಸೌಕರ್ಯ ಒದಗಿಸಲು ಸಾಕಷ್ಟು ಜಾಗ ಬೇಕಾಗಲಿದೆ. ಜೊತೆಗೆ ವಿಮಾನ ನಿಲ್ದಾಣದ ರನ್ವೇ ಸುತ್ತಮುತ್ತ ನಿರ್ದಿಷ್ಟ ಜಾಗವನ್ನು ಖಾಲಿ ಉಳಿಸಬೇಕಾಗಿರುತ್ತದೆ.
ಸರ್ಕಾರಿ ಭೂಮಿ ಲಭ್ಯತೆ ಆಧರಿಸಿ ವಿಮಾನ ನಿಲ್ದಾಣ ಸ್ಥಾಪನೆ ಮಾಡುವುದರಿಂದ ವೆಚ್ಚ ಕಡಿಮೆಯಾಗಲಿದೆ.
ಕನಕಪುರದ ಎರಡು ಜಾಗ ಹಾಗೂ ನೆಲಮಂಗಲ-ಕುಣಿಗಲ್ ರಸ್ತೆಯಲ್ಲಿ ವಿಮಾನ ನಿಲ್ದಾಣಕ್ಕಾಗಿ ಜಾಗ ನೀಡಲು ಈಗಾಗಲೇ ರೈತರು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದು, ಅವರನ್ನು ಸಂಭಾಳಿಸುವುದು ಸರ್ಕಾರದ ಮುಂದಿರುವ ಸವಾಲಾಗಿದೆ.
ರಾಮನಗರ ಜಿಲ್ಲೆಯ ಹಾರೋಹಳ್ಳಿಯ ಬಳಿ ಬೆಂಗಳೂರು-ಕನಕಪುರ ರಸ್ತೆಯಲ್ಲಿ 5,000 ಎಕರೆ ಜಮೀನಿದೆ. ಇದು ಮೈಸೂರು ರಸ್ತೆಯಿಂದ 17 ಕಿ.ಮೀ, ನೈಸ್ ರಸ್ತೆಯಿಂದ 35 ಕಿ.ಮೀ ದೂರದಲ್ಲಿದೆ. ಉದ್ದೇಶಿತ ಜಾಗದಲ್ಲಿ ವಿಮಾನ ನಿಲ್ದಾಣ ಸ್ಥಾಪನೆಯಾದರೆ 12 ಗ್ರಾಮಗಳನ್ನು ಸ್ಥಳಾಂತರಿಸಬೇಕಾಗಿದೆ.
ಹೊಸ ವಿಮಾನ ನಿಲ್ದಾಣ ಅವಶ್ಯಕತೆ ಏಕೆ ?
ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಿರುವುದರಿಂದ ಎರಡನೇ ವಿಮಾನ ನಿಲ್ದಾಣ ಸ್ಥಾಪನೆ ಅವಶ್ಯವಾಗಿದೆ.
ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದ ಅಂಕಿ ಅಂಶಗಳ ಪ್ರಕಾರ 2024 ರಲ್ಲಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದಾಖಲೆ ಪ್ರಮಾಣದ ಪ್ರಯಾಣಿಕರು ಸಂಚರಿಸಿದ್ದಾರೆ. ಅಂದರೆ ವಾರ್ಷಿಕ 4.73 ಕೋಟಿ ಪ್ರಯಾಣಿಕರು ದೇಶಿಯ ಹಾಗೂ ಅಂತಾರಾಷ್ಟ್ರೀಯ ವಿಮಾನ ಸೇವೆ ಬಳಸಿದ್ದಾರೆ. 2023 ರಲ್ಲಿ ಇದರ ಪ್ರಮಾಣ 3.72 ಕೋಟಿ ಇತ್ತು. 2024 ಅಕ್ಟೋಬರ್ 20 ರಂದು ಒಂದೇ ದಿನ 1,26,532 ಪ್ರಯಾಣಿಕರು ಸಂಚರಿಸಿರುವುದು ದಾಖಲಾಗಿದೆ. ಅಂತಾರಾಷ್ಟ್ರೀಯ ವಿಮಾನಯಾನಕ್ಕಾಗಿ ಟರ್ಮಿನಲ್ -2 ನಿರ್ಮಾಣ ಮಾಡಿದರೂ ಪ್ರಯಾಣಿಕರ ಒತ್ತಡ ಹೆಚ್ಚಾಗಿದ್ದ ಹಿನ್ನೆಲೆಯಲ್ಲಿ 2 ನೇ ವಿಮಾನ ನಿಲ್ದಾಣದ ಅವಶ್ಯಕತೆ ಕಂಡು ಬಂದಿದೆ.
9 ವರ್ಷದ ನಂತರವಷ್ಟೇ ವಿಮಾನ ನಿಲ್ದಾಣ ನಿರ್ಮಾಣ
ಬೆಂಗಳೂರಿನಲ್ಲಿ ಎರಡನೇ ವಿಮಾನ ನಿಲ್ದಾಣ ಸ್ಥಾಪನೆ ಪ್ರಕ್ರಿಯೆಗಳು ಆರಂಭವಾದರೂ ವಿಮಾನ ನಿಲ್ದಾಣ ಕಾಮಗಾರಿ ಆರಂಭಿಸುವಂತಿಲ್ಲ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪನೆ ವೇಳೆ ನಡೆದಿರುವ ಒಪ್ಪಂದದಂತೆ 200 ಕಿ.ಮೀ. ವ್ಯಾಪ್ತಿಯೊಳಗೆ 2034 ರವರೆಗೆ ಯಾವುದೇ ಹೊಸ ವಿಮಾನ ನಿಲ್ದಾಣ ಆರಂಭಿಸುವಂತಿಲ್ಲ ಎಂಬುದಿದೆ.
ಆದರೆ, ಸ್ಥಳ ಸಮೀಕ್ಷೆ, ಎಎಐ ಅನುಮೋದನೆ ಸೇರಿದಂತೆ ಅಗತ್ಯ ತಾಂತ್ರಿಕ ಪ್ರಕ್ರಿಯೆಗಳು , ಭೂಸ್ವಾಧೀನ ಪ್ರಕ್ರಿಯೆಗಳು ಮುಗಿಸಿಕೊಂಡು, 2034 ರ ನಂತರವೇ ವಿಮಾನ ನಿಲ್ದಾಣ ಸ್ಥಾಪಿಸುವುದು ಸರ್ಕಾರದ ಮುಂದಿನ ಉದ್ದೇಶವಾಗಿದೆ. ಹೊಸ ವಿಮಾನ ನಿಲ್ದಾಣವು ವಾರ್ಷಿಕವಾಗಿ 10 ಕೋಟಿ ಜನರ ಪ್ರಯಾಣಕ್ಕೆ ಅನುಕೂಲವಾಗುವಂತೆ ನಿರ್ಮಿಸುವುದು ಸರ್ಕಾರದ ಉದ್ದೇಶವಾಗಿದೆ. ವಿಮಾನ ನಿಲ್ದಾಣಕ್ಕೆ ಸಮತಟ್ಟಾದ ಭೂಮಿ ಅವಶ್ಯ ಇರುವುದರಿಂದ ಈ ಮೂರು ಜಾಗಗಳನ್ನು ಅಂತಿಮಗೊಳಿಸಿದ್ದು, ವಿಮಾನ ನಿಲ್ದಾಣಗಳ ಪ್ರಾಧಿಕಾರ ವೀಕ್ಷಣೆ ನಡೆಸಿದೆ. ಕಾರ್ಯಸಾಧ್ಯತೆಗಳ ಅಧ್ಯಯನದ ಬಳಿಕ ಅಧಿಕಾರಿಗಳ ತಂಡ ವರದಿ ನೀಡಲಿದೆ.
ಹುಬ್ಬಳ್ಳಿ, ಬೆಳಗಾವಿ ನಿಲ್ದಾಣ ಅಂತಾರಾಷ್ಟ್ರೀಯ ದರ್ಜೆಗೇರಿಸಲು ಪತ್ರ
ಹುಬ್ಬಳ್ಳಿ ಮತ್ತು ಬೆಳಗಾವಿ ವಿಮಾನ ನಿಲ್ದಾಣಗಳನ್ಜು ಅಂತಾರಾಷ್ಟ್ರೀಯ ಮಟ್ಟಕ್ಕೆ ಏರಿಸಬೇಕಾದ ಅಗತ್ಯವಿದೆ. ಈ ಸಂಬಂಧ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುವಂತೆ ಸಚಿವ ಎಂ.ಬಿ.ಪಾಟೀಲ ಅವರು ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಎರಡೂ ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳಾಗಲು ಅರ್ಹವಾಗಿವೆ. ಪ್ರಯಾಣಿಕರ ದಟ್ಟಣೆ ಕೂಡ ಇದೆ. ಸದ್ಯ ಈ ಭಾಗದವರು ವಿದೇಶಕ್ಕೆ ಹೋಗಬೇಕಾದರೆ ಗೋವಾಕ್ಕೆ ಹೋಗಬೇಕು. ಅದರ ಬದಲು ಈ ನಿಲ್ದಾಣಗಳನ್ನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳಾಗಿ ಘೋಷಿಸಬೇಕು ಎಂದು ಮನವಿ ಮಾಡಿದ್ದಾರೆ.