ASER Report : ರಾಜ್ಯದ ಶಾಲೆಗಳಲ್ಲಿ ದಾಖಲಾತಿ ಇಳಿಕೆ, ಕಲಿಕಾ ಸಾಮರ್ಥ್ಯ ಹೆಚ್ಚಳ

ASER Report: 5 ವರ್ಷದ ವಯಸ್ಸಿನ ಮಕ್ಕಳಲ್ಲಿಯೂ ಈ ಅಂಕಿ ಅಂಶ ಏರಿಕೆ ಕಂಡಿದೆ. ಇದು 2018ರಲ್ಲಿ 58.5% ರಿಂದ 2022ರ ಶೇಕಡಾ 62.2 ರಿಂದ ಇದೀಗ ಶೇಕಡಾ 71.4ಕ್ಕೆ ಏರಿಕೆಯಾಗಿದೆ.;

Update: 2025-01-28 19:15 GMT
ಸಾಂದರ್ಭಿಕ ಚಿತ್ರ.

2024ನೇ ಸಾಲಿನ ವಾರ್ಷಿಕ ಶಿಕ್ಷಣ ಸ್ಥಿತಿಗತಿ ವರದಿ (ASER) ಮಂಗಳವಾರ ಪ್ರಕಟಗೊಂಡಿದ್ದು, ದೇಶವ್ಯಾಪಿ ನಡೆಸಿದ ಸಮೀಕ್ಷೆಯಲ್ಲಿ ಮಕ್ಕಳ ಕಲಿಕೆಯ ಸಾಮರ್ಥ್ಯ ಹೆಚ್ಚಳಗೊಂಡಿರುವುದು ಪತ್ತೆಯಾಗಿದೆ. ಆದರೆ, ಶಾಲೆಗಳಿಗೆ ದಾಖಲಾಗುವ ಮಕ್ಕಳ ಪ್ರಮಾಣ ಇಳಿಕೆಯಾಗಿದೆ ಎಂಬ ಆತಂಕಕಾರಿ ಅಂಶ ಬಹಿರಂಗಗೊಂಡಿದೆ. ಅದರ ಪ್ರಮಾಣ ಕೊರೊನಾ ಪೂರ್ವದಲ್ಲಿ ಇದ್ದ ಸ್ಥಿತಿಗೆ ತಲುಪಿದೆ. ಕರ್ನಾಟಕದ ಶಿಕ್ಷಣ ಸ್ಥಿತಿ ಅವಲೋಕಿಸುವುದಾದರೆ ಗುಣಮಟ್ಟ ಹಾಗೂ ಮಕ್ಕಳ ದಾಖಲಾತಿಯ ಪ್ರಮಾಣ ಇಳಿಕೆಯಾಗಿದೆ. ಮೂಲಸೌಕರ್ಯ ಹೆಚ್ಚಳವಾಗಿದೆ ಎಂಬುದೇ ಸಮಾಧಾನಕರ ವಿಚಾರ.

2018ರಲ್ಲಿ ಶೇಕಡಾ 65.4 ಮಕ್ಕಳು ಸರ್ಕಾರಿ ಶಾಲೆಗಳಲ್ಲಿ ದಾಖಲಾಗಿದ್ದರು. ಇದು 2022ರಲ್ಲಿ ಶೇಕಡಾ74.0 ಕ್ಕೆ ಏರಿತ್ತು. ಆದರೆ 2024ರಲ್ಲಿ ಶೇಕಡಾ 67.7ಕ್ಕೆ ಇಳಿದಿದೆ. 2022ನೇ ಸಾಲಿನಲ್ಲಿ 6ರಿಂದ 14 ವರ್ಷದ ಮಕ್ಕಳು ಶಾಲೆಗೆ ದಾಖಲಾಗಿದ್ದ ಪ್ರಮಾಣ ಶೇ.76ರಷ್ಟು ಇದ್ದರೆ 2024ರ ವೇಳೆಗೆ ಶೇ.71ಕ್ಕೆ ಇಳಿಕೆಯಾಗಿದೆ. 4 ವರ್ಷದ ಮಕ್ಕಳ ದಾಖಲಾತಿಯಲ್ಲಿ ಹೆಚ್ಚಳವಾಗಿದ್ದು 2022 ರಲ್ಲಿ 82% ರಿಂದ 2024ರಲ್ಲಿ 83.3% ಕ್ಕೆ ಏರಿಕೆಯಾಗಿದೆ. ಅದೇ ರೀತಿ 2024ರಲ್ಲಿ ಪೂರ್ವ ಪ್ರಾಥಮಿಕ ಶಾಲೆಗೆ ದಾಖಲಾದವರು ಶೇಕಡಾ 95%ಕ್ಕಿಂತ ಹೆಚ್ಚಿದೆ.

5 ವರ್ಷದ ವಯಸ್ಸಿನ ಮಕ್ಕಳಲ್ಲಿಯೂ ಈ ಅಂಕಿ ಅಂಶ ಏರಿಕೆ ಕಂಡಿದೆ. ಇದು 2018ರಲ್ಲಿ 58.5% ರಿಂದ 2022ರ ಶೇಕಡಾ 62.2 ರಿಂದ ಇದೀಗ ಶೇಕಡಾ 71.4ಕ್ಕೆ ಏರಿಕೆಯಾಗಿದೆ.

ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಎರಡು ವರ್ಷಗಳಲ್ಲಿ ಶೇ.5ರಷ್ಟು ದಾಖಲಾತಿ ಕುಸಿತ ಕಂಡು ಬಂದಿರುವುದು ಕಳವಳದ ಸಂಗತಿ. 2022ರಲ್ಲಿ ಶೇ.2.2 ಮಕ್ಕಳು ಶಾಲೆಗೆ ಬರದಿದ್ದರೆ ಅದರ ಪ್ರಮಾಣ 2024ಕ್ಕೆ ಶೇ.2.8ರಷ್ಟು ಏರಿಕೆ ಕಂಡಿದೆ. 

ಸಮಾಧಾನಕರ ವಿಚಾರವೆಂದರೆ ಪೂರ್ವ ಪ್ರಾಥಮಿಕ ಶಾಲೆಗಳಲ್ಲಿ ನಾಲ್ಕು ವರ್ಷ ವಯಸ್ಸಿನ ಶೇ.95ರಷ್ಟು ಮಕ್ಕಳು ಹಾಗೆಯೇ 5 ವರ್ಷದ ಶೇ. 90ಕ್ಕಿಂತ ಹೆಚ್ಚು ಮಕ್ಕಳು ಕಲಿಯುತ್ತಿದ್ದಾರೆ. ಈ ವಿಚಾರದಲ್ಲಿ ದೇಶದಲ್ಲಿ ಕರ್ನಾಟಕ ಅಗ್ರ ರಾಜ್ಯಗಳ ಪಟ್ಟಿಯಲ್ಲಿದೆ.

ತರಗತಿಗೆ ತಕ್ಕಂತೆ ಓದುವ ಸಾಮರ್ಥ್ಯ ಇಲ್ಲ

ಸರ್ಕಾರಿ ಶಾಲೆಗಳಲ್ಲಿ 3ನೇ ತರಗತಿಯಲ್ಲಿರುವ ಮಕ್ಕಳಲ್ಲಿ ಶೇ. 15ರಷ್ಟು ಮಾತ್ರ 2ನೇ ತರಗತಿಯ ಪಠ್ಯ ಓದಬಲ್ಲರು. 8ನೇ ತರಗತಿಯ ಮಕ್ಕಳಲ್ಲಿ ಶೇ. 40 ಮಕ್ಕಳು 2ನೇ ತರಗತಿ ಮಟ್ಟದ ಪಠ್ಯವನ್ನು ಓದಿ ಅರ್ಥ ಮಾಡಿಕೊಳ್ಳಲು ಶಕ್ತರಾಗಿದ್ದಾರೆ ಎಂದು ವರದಿ ಹೇಳಿದೆ.

ಸರ್ಕಾರಿ ಶಾಲೆಗಳಲ್ಲಿ 3ನೇ ತರಗತಿಯಲ್ಲಿ ಓದುತ್ತಿರುವ ಶೇ.23 ಮಕ್ಕಳು ಮಾತ್ರ ಕಳೆಯುವ ಲೆಕ್ಕ ಮಾಡಬಲ್ಲರು. ಖಾಸಗಿ ಶಾಲೆಯಲ್ಲಿ ಅದರ ಪ್ರಮಾಣ ಶೇಕಡಾ 31. ಇನ್ನು ಸರ್ಕಾರಿ ಶಾಲೆಯಲ್ಲಿ ಐದನೇ ತರಗತಿ ಓದುತ್ತಿರುವ ಶೇ. 19 ಮತ್ತು ಎಂಟನೇ ತರಗತಿಯಲ್ಲಿ ಓದುತ್ತಿರುವ ಶೇ. 35 ಮಕ್ಕಳು ಭಾಗಕಾರ ಮಾಡುತ್ತಾರೆ. ಖಾಸಗಿ ಶಾಲೆಯಲ್ಲಿ ಅನುಕ್ರಮವಾಗಿ ಶೇ. 25 ಹಾಗೂ ಶೇ.43ರಷ್ಟು ಮಕ್ಕಳು ಈ ಸಾಮರ್ಥ್ಯ ಹೊಂದಿದ್ದಾರೆ.

ಅಂಗನವಾಡಿ ಕಡೆ ಒಲವು

2018 ರಿಂದ ಅಂಗನವಾಡಿ ಕೇಂದ್ರಗಳು ಭಾರತದಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣಕ್ಕೆ ಹೆಚ್ಚಿನ ಕೊಡುಗೆ ನೀಡುತ್ತಿವೆ. ರಾಜ್ಯದಲ್ಲಿ 3 ಮತ್ತು 4 ವರ್ಷ ವಯಸ್ಸಿನ ಶೇಕಡಾ 75%ಕ್ಕಿಂತ ಹೆಚ್ಚು ಮಕ್ಕಳು ಅಂಗನವಾಡಿ ಕೇಂದ್ರಗಳಿಗೆ ದಾಖಲಾಗಿದ್ದಾರೆ.

ಸ್ಮಾರ್ಟ್‌ಫೋನ್‌ ಬಳಕೆಯಲ್ಲಿ ಗಂಡುಮಕ್ಕಳು ಟಾಪ್‌

ಮೊಬೈಲ್‌ ಅಥವಾ ಸ್ಮಾರ್ಟ್‌ಫೋನ್‌ ಬಳಸುವ ವಿಚಾರದಲ್ಲಿ ಲಿಂಗ ಅಂತರ ಕಂಡು ಬಂದಿದೆ. ಕರ್ನಾಟಕದಲ್ಲಿ ಶೇಕಡಾ 72.4 ಹೆಣ್ಣು ಮಕ್ಕಳು ಸ್ಮಾರ್ಟ್‌ಫೋನ್‌ ಬಳಸಿದರೆ ಶೇಕಡಾ 81.5 ಗಂಡು ಮಕ್ಕಳು ಸ್ಮಾರ್ಟ್‌ಫೋನ್‌ ಬಳಸುತ್ತಿದ್ದಾರೆ. ಆಂಧ್ರಪ್ರದೇಶ ಮತ್ತು ಕೇರಳದಲ್ಲಿ, ಹುಡುಗಿಯರೇ ಇಲ್ಲಿ ಟಾಪ್‌

ಶೇ.23 ಶಾಲೆಗಳಲ್ಲಿ ಕುಡಿಯುವ ನೀರಿಲ್ಲ

ರಾಜ್ಯದ ಶಾಲೆಗಳಲ್ಲಿ ಮೂಲಸೌಕರ್ಯ ಹೆಚ್ಚಳವಾಗಿದೆ ಎಂಬುದಾಗಿ ಸಮೀಕ್ಷೆ ಹೇಳಿದೆ. ಪ್ರಮುಖವಾಗಿ ಕುಡಿಯುವ ನೀರು ಹಾಗೂ ಶೌಚಾಲಯ ಸಮಸ್ಯೆ ಬಾಧಿಸುತ್ತಿದೆ. ಆದಾಗ್ಯೂ ಶೇ.23 ಶಾಲೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಿದ್ದು ಶೇ. 3.7 ಶಾಲೆಗಳಲ್ಲಿ ಶೌಚಾಲಯದ ಕೊರತೆಯಿದೆ.  

Tags:    

Similar News