Cancer & Areca | ಅಡಿಕೆಯಿಂದ ಕ್ಯಾನ್ಸರ್‌: ಏನು ಹೇಳುತ್ತವೆ ಐಐಎಸ್‌ಸಿ, ಕಿದ್ವಾಯಿ, ಸಿಪಿಸಿಆರ್‌ಐ ಸಂಶೋಧನೆ?

ತಂಬಾಕುರಹಿತ ಅಡಿಕೆ ಸೇವನೆಯಿಂದ ಆರೋಗ್ಯಕ್ಕೆ ಏನೂ ಸಮಸ್ಯೆ ಇಲ್ಲ ಎಂಬ ಕುರಿತು ಹಲವು ಸಂಶೋಧನೆಗಳು ನಡೆದಿವೆ ಎಂದು ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಟಾನ ಹೇಳಿದೆ.

Update: 2024-12-17 02:00 GMT

ಅಡಿಕೆ- ವೀಳ್ಯದೆಲೆ ತಿನ್ನುವುದರಿಂದ ಕ್ಯಾನ್ಸರ್‌ ಬರುತ್ತದೆಯೇ? ಎಂಬ ಪ್ರಶ್ನೆ ಈಗ ಎಲ್ಲರನ್ನೂ ಕಾಡುತ್ತಿದೆ. ಅದರಲ್ಲೂ ವಿಶ್ವಸಂಸ್ಥೆಯ ಅಂಗಸಂಸ್ಥೆ ಐಎಆರ್‌ಸಿ(International Agency for Research on Cancer) ಇತ್ತೀಚಿನ ತನ್ನ ಸಮೀಕ್ಷೆಯಲ್ಲಿ ಭಾರತವೂ ಸೇರಿದಂತೆ ಅಡಿಕೆ ಬಳಸುವ ದಕ್ಷಿಣ ಮತ್ತು ಪೂರ್ವ ಏಷ್ಯಾ ಭಾಗದಲ್ಲಿ ಬಾಯಿ ಕ್ಯಾನ್ಸರ್‌ ಪ್ರಕರಣಗಳು ಹೆಚ್ಚುತ್ತಿವೆ ಎಂದು ಹೇಳಿದ ಬಳಿಕ, ಅಡಿಕೆಯ ಭವಿಷ್ಯದ ಮೇಲೆ ಕರಿನೆರಳು ಬಿದ್ದಿದೆ. 

ಆದರೆ, ಅಡಿಕೆ ಮತ್ತು ಕ್ಯಾನ್ಸರ್‌ ನಡುವಿನ ನಂಟಿನ ಕುರಿತು ಭಾರತೀಯ ವಿಜ್ಞಾನ ಸಂಸ್ಥೆ ಸೇರಿದಂತೆ ದೇಶದ ಮುಂಚೂಣಿ ವಿಜ್ಞಾನ ಸಂಸ್ಥೆಗಳು ಮತ್ತು ವೈದ್ಯಕೀಯ ಸಂಸ್ಥೆಗಳು ವರ್ಷಗಳಿಂದ ನಡೆಸಿದ ಸಂಶೋಧನೆಗಳು ಏನು ಹೇಳುತ್ತವೆ ಎಂಬ ಕುತೂಹಲ ಕೂಡ ಈಗ ಮುನ್ನೆಲೆಗೆ ಬಂದಿದೆ.

ಭಾರತೀಯ ವಿಜ್ಞಾನ ಸಂಸ್ಥೆ(ಐಐಎಸ್‌ಸಿ), ಮದ್ರಾಸ್ ಕ್ಯಾನ್ಸರ್ ಇನ್ಸ್ಟಿಟ್ಯೂಟ್(ಎಂಸಿಐ), ಸಿಪಿಸಿಆರ್‌ಐ, ಕಿದ್ವಾಯಿ ಗಂಥಿ ಸಂಸ್ಥೆಗಳು ಹಲವು ವರ್ಷಗಳಿಂದ ಅಡಿಕೆಯ ಆರೋಗ್ಯ ಪರಿಣಾಮಗಳ ಕುರಿತು ಹಲವು ಸಂಶೋಧನೆ ಮತ್ತು ಅಧ್ಯಯನಗಳನ್ನು ನಡೆಸಿವೆ. ಅಂತಹ ಆ ಸಂಶೋಧನೆಗಳು ಮತ್ತು ಅಧ್ಯಯನ ವರದಿಗಳು ಅಡಿಕೆಯ ಕ್ಯಾನ್ಸರ್‌ ಸಾಧ್ಯತೆಗಳ ಬಗ್ಗೆ, ಅಥವಾ ಅದರ ಪ್ರಯೋಜನಗಳ ಕುರಿತು ಏನು ಹೇಳುತ್ತವೆ?

ತಂಬಾಕುರಹಿತ ಅಡಿಕೆ ಬಳಕೆಯಿಂದ, ಅಂದರೆ ತಂಬಾಕುರಹಿತ ಎಲೆಯಡಿಕೆ ಜಗಿಯುವುದರಿಂದ ಮನುಷ್ಯನ ಆರೋಗ್ಯಕ್ಕೆ ಏನೂ ಸಮಸ್ಯೆ ಇಲ್ಲ ಎಂದು ಹಲವು ಸಂಶೋಧನೆಗಳು ಹೇಳಿವೆ ಎಂದು ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನದ ಸಂಯೋಜಕ ಡಾ. ಸರ್ಪಂಗಳ ಕೇಶವ ಭಟ್ ʼದ ಫೆಡರೆಲ್‌ ಕರ್ನಾಟಕʼ ಕ್ಕೆ ಹೇಳಿದ್ದಾರೆ.

ಕೆಲವು ಸಂಶೋಧನೆಗಳನ್ನು ಅವರು ಇಲ್ಲಿ ಪಟ್ಟಿ ಮಾಡಿದ್ದಾರೆ. ಹಾಗೂ ಇಂಥ ಸಂಶೋಧನೆಗಳಿಗೆ ದಶಕಗಳ ಇತಿಹಾಸವಿದೆ ಎಂಬುದನ್ನು ಬೊಟ್ಟು ಮಾಡಿದ್ದಾರೆ.

ಪ್ರಾಣಿಗಳ ಮೇಲೆ ನಡೆಸಿದ ಅಧ್ಯಯನಗಳು

"Failure to produce tumors in the Hamster cheek pouch by exposure to ingredients of betel quid -------" ಎನ್ನುವ ಒಂದು ವೈಜ್ಞಾನಿಕ ಅಧ್ಯಯನದ ಫಲಿತಾಂಶವನ್ನು ಅಮೆರಿಕದ ಮೇರಿಲ್ಯಾಂಡ್ ನಲ್ಲಿರುವ ನ್ಯಾಷನಲ್ ಕ್ಯಾನ್ಸರ್ ರೀಸರ್ಚ್ ಇನ್ಸ್ಟಿಟ್ಯೂಟ್ ನ ಡಾ. ದುನ್ ಹಮ್ ಮತ್ತು ಹೆರಾಲ್ಡ್ ಎಂಬ ವಿಜ್ಞಾನಿಗಳು "Journal of the National Cancer Institute" ನ 1962 ನೇ ಆವೃತ್ತಿಯ (Vol 29 No 6) 1047 ರಿಂದ 1067 ವರೆಗಿನ ಪುಟಗಳಲ್ಲಿ ಪ್ರಕಟಿಸಿದ್ದಾರೆ. ಅವರ ಅಧ್ಯಯನದಲ್ಲಿ ಅಡಿಕೆ, ವೀಳ್ಯದೆಲೆ, ಸುಣ್ಣ ಮತ್ತು ಇತರ ಕೆಲವು ವಸ್ತುಗಳನ್ನು ಬೇರೆ ಬೇರೆಯಾಗಿಯೂ ಮತ್ತು ಸಮೂಹವಾಗಿಯೂ ಹಾಮ್ ಸ್ಟರ್ ಎನ್ನುವ ಮೂಷಿಕಗಳ ಬಾಯಿಯ ಒಳ ಚೀಲಗಳಲ್ಲಿ ಅವುಗಳ ಜೀವನ ಪರ್ಯಂತ ಇಟ್ಟು ನೋಡಿದಾಗಲೂ ಯಾವುದೇ ರೀತಿಯ ಬಾಯಿ ಕ್ಯಾನ್ಸರ್ ಕಂಡು ಬರಲಿಲ್ಲ ಎಂಬುದಾಗಿ ಹೇಳಿದ್ದಾರೆ.

ಚಿಕ್ಕಿಲಿಗಳ ಮೇಲೆ ನಡೆದಿತ್ತು ಪ್ರಯೋಗ

1974ರಲ್ಲಿ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ(IISc) ಮತ್ತು ವಿಕ್ಟೋರಿಯಾ ಹಾಸ್ಪಿಟಲ್ ನ ಡಾ. ಲಲಿತಾ ಕುಮಾರಿ ಮತ್ತು ಅವರ ತಂಡ ಚಿಕ್ಕಿಲಿಗಳ ಮೇಲೆ ನಡೆಸಿದ ಒಂದು ವೈಜ್ಞಾನಿಕ ಅಧ್ಯಯನದಲ್ಲಿ ಅಡಿಕೆ ಕ್ಯಾನ್ಸರ್ ಕಾರಕವಲ್ಲ ಬದಲು ಕ್ಯಾನ್ಸರ್ ಬೆಳವಣಿಗೆಯನ್ನು ತಡೆಯುತ್ತದೆ ಎಂಬುದಾಗಿ ಹೇಳಿದೆ.

ಅವರು ಒಂದು ಗುಂಪಿನ ಚಿಕ್ಕಿಲಿಗಳ ಚರ್ಮಕ್ಕೆ ಕ್ಯಾನ್ಸರ್ ಉಂಟುಮಾಡುವ ರಾಸಾಯನಿಕ benzpyrine (bp) ಮಾತ್ರ ಹಚ್ಚಿದ್ದರು. ಇನ್ನೊಂದು ಗುಂಪಿನ ಚಿಕ್ಕಿಲಿಗಳಿಗೆ ಆ ರಾಸಾಯನಿಕ ಹಚ್ಚಿ ಆ ನಂತರ ಆ ಜಾಗದ ಮೇಲೆ ಅಡಿಕೆಯ ಸಾರವನ್ನೂ ಹಚ್ಚಿದ್ದರು. ಈ ಪ್ರಯೋಗದಲ್ಲಿ ಬರೀ bp ಹಚ್ಚಿದ ಚಿಕ್ಕಿಲಿಗಳಲ್ಲಿ 31 ನೇ ವಾರಕ್ಕೆ ಕ್ಯಾನ್ಸರ್ ಬೆಳವಣಿಗೆ ಕಂಡು ಬಂದು 39 ನೇ ವಾರದಲ್ಲಿ ಎಲ್ಲಾ ಚಿಕ್ಕಿಲಿಗಳಲ್ಲೂ ಕ್ಯಾನ್ಸರ್ ಗೋಚರಿಸಿತ್ತು. ಆದರೆ, bp ಹಚ್ಚಿದ ನಂತರ ಅದರ ಮೇಲೆ ಅಡಿಕೆಯ ಸಾರ ಹಚ್ಚಿದ ಚಿಕ್ಕಿಲಿಗಳಲ್ಲಿ 40ನೇ ವಾರದವರೆಗೂ ಏನೊಂದೂ ಕ್ಯಾನ್ಸರ್ ಲಕ್ಷಣಗಳು ಗೋಚರಿಸಲಿಲ್ಲ ಎಂಬುದಾಗಿ ಅವರು ಹೇಳಿದ್ದಾರೆ.

ತಂಬಾಕು ಬೆರೆಸದ ತಾಂಬೂಲದ ಸಾರ ಉಪಯೋಗಿಸಿದಾಗಲೂ ಇದೇ ರೀತಿಯ ಫಲಿತಾಂಶ ಅವರಿಗೆ ಸಿಕ್ಕಿತ್ತು. ರೋಗ ನಿರೋಧಕ ಶಕ್ತಿ ಕುಂದಿದ ಚಿಕ್ಕಿಲಿಗಳಲ್ಲೂ ಅಡಿಕೆಯ ಸಾರ ಕ್ಯಾನ್ಸರನ್ನು ಉಂಟುಮಾಡಲಿಲ್ಲ ಎಂಬುದಾಗಿಯೂ ಅವರು ಕಂಡುಕೊಂಡಿದ್ದಾರೆ. ಈ ಎಲ್ಲಾ ವಿಷಯಗಳನ್ನು ವಿವರವಾಗಿ 1974 ರ 'Indian Journal of Plantation Crops' (Vol 2, No 1) ಎಂಬ ವೈಜ್ಞಾನಿಕ ನಿಯತಕಾಲಿಕದ 23 ರಿಂದ 29 ನೇ ಪುಟಗಳಲ್ಲಿ "Inhibitory activity of Areca catechu on development of mouse skin tumors -------" ಎಂಬ ಶಿರೋನಾಮೆಯಲ್ಲಿ ಪ್ರಕಟಿಸಿದ್ದಾರೆ ಎಂಬುದನ್ನು ಡಾ. ಸರ್ಪಂಗಳ ಕೇಶವ ಭಟ್ ಗಮನ ಸೆಳೆದಿದ್ದಾರೆ.


ಮಾನವನ ಮೇಲೆಯೂ ಅಧ್ಯಯನಗಳಾಗಿವೆ

1959 ರಲ್ಲಿ ಮದ್ರಾಸ್ ಕ್ಯಾನ್ಸರ್ ಇನ್ಸ್ಟಿಟ್ಯೂಟ್ (Adyar Cancer Institute)ನ ಡಾ. ಶಾಂತ ಮತ್ತು ಡಾ. ಕೃಷ್ಣಮೂರ್ತಿ ಮಾನವನ ಮೇಲೆಯೂ ಅಡಿಕೆಯ ಪರಿಣಾಮಗಳ ಕುರಿತು ಅಧ್ಯಯನ ಮಾಡಿದ್ದಾರೆ. ವೀಕ್ಷಣಾ (case-control) ಅಧ್ಯಯನದಲ್ಲಿ ತಂಬಾಕುರಹಿತ ತಾಂಬೂಲ ಜಗಿಯುವುದು ಒಳ ಕೆನ್ನೆಯ ಕ್ಯಾನ್ಸರ್ ಗೆ ಕಾರಣವಲ್ಲ ಎಂಬುದನ್ನು ಸಾಬೀತುಮಾಡಿದ್ದಾಗಿ ಡಾ. ಕೇಶವ ಭಟ್ ಹೇಳಿದ್ದಾರೆ.

ಅವರ ಅಧ್ಯಯನದಲ್ಲಿ ಒಟ್ಟಾರೆ 206 ಒಳ ಕೆನ್ನೆಯ ಕ್ಯಾನ್ಸರ್ ರೋಗಿಗಳು ಮತ್ತು 278 ಮಂದಿ ಕ್ಯಾನ್ಸರ್ ಇಲ್ಲದ ಇತರ ರೋಗಿಗಳಿದ್ದರು. ಕ್ಯಾನ್ಸರ್ ರೋಗಿಗಳಲ್ಲಿ ಬರೀ ಶೇ 9 ರಿಂದ 17 ಜನರು ತಂಬಾಕುರಹಿತ ತಾಂಬೂಲ ಜಗಿಯುತ್ತಿದ್ದರು. ಆದರೆ, 278 ಮಂದಿ ಕ್ಯಾನ್ಸರ್ ರೋಗಿಗಳಲ್ಲದವರಲ್ಲಿ ಶೇ 52 ಜನರು ತಂಬಾಕುರಹಿತ ತಾಂಬೂಲ ತಿನ್ನುವ ಅಬ್ಯಾಸದವರಿದ್ದರು. ಆದರೆ, ಒಳ ಕೆನ್ನೆಯ ಕ್ಯಾನ್ಸರ್ ರೋಗಿಗಳಲ್ಲಿ ಶೇ 80 ರಿಂದ 85 ಜನರು ತಂಬಾಕು ಸೇರಿಸಿದ ತಾಂಬೂಲ ಜಗಿಯುವವರಾಗಿದ್ದರು. ಆದರೆ, ಕ್ಯಾನ್ಸರ್ ರೋಗಿಗಳಲ್ಲದವರಲ್ಲಿ ಬರೀ ಶೇ 12.5 ಜನರು ಮಾತ್ರ ತಂಬಾಕು ಸೇರಿಸಿದ ತಾಂಬೂಲ ಜಗಿಯುವ ಅಬ್ಯಾಸದವರಿದ್ದರಷ್ಟೇ.

ಇದರಿಂದಾಗಿ ಅವರು "pure betel and nut chewing appears to be no significance" ಎಂಬುದಾಗಿ ಹೇಳಿದ್ದಾರೆ. ಈ ಎಲ್ಲಾ ವಿವರಗಳನ್ನು ಅವರು ‘A study of aetiological factors in oral squamous cell carcinoma’ ಎನ್ನುವ ಶಿರೋನಾಮೆಯಲ್ಲಿ 1959 ರ 'British Journal of Cancer' (Vol 13, No 3) ಎನ್ನುವ ವೈಜ್ಞಾನಿಕ ನಿಯತಕಾಲಿಕದ 381 ರಿಂದ 388 ನೇ ಪುಟಗಳಲ್ಲಿ ಪ್ರಕಟಿಸಿದ್ದಾರೆ.

"Pan chewing without tobacco did not increase the risk of oral cancer" ಎಂಬುದಾಗಿ ಬೆಂಗಳೂರಿನ ಕಿದ್ವಾಯಿ ಮೆಮೋರಿಯಲ್ ಇನ್ಸ್ಟಿಟ್ಯೂಟ್ ಆಫ್ ಅಂಕಾಲಜಿಯ ಡಾ. ನಂದಕುಮಾರ್ ಮತ್ತು ಅವರ ತಂಡ ನಡೆಸಿದ ಇನ್ನೊಂದು ವೀಕ್ಷಣಾ ಅಧ್ಯಯನದಲ್ಲಿ ಹೇಳಿದ್ದಾರೆ.

ಅವರು ಒಟ್ಟಾರೆ 348 ಬಾಯಿ ಕ್ಯಾನ್ಸರ್ ರೋಗಿಗಳನ್ನು ಮತ್ತು ಅಷ್ಟೇ ಸಂಖ್ಯೆಯ ಇತರರನ್ನು ಸೇರಿಸಿ ಅಧ್ಯಯನ ಮಾಡಿದ್ದರು. ತಂಬಾಕುರಹಿತ ತಾಂಬೂಲ ಜಗಿಯುವವರಲ್ಲಿ ಬಾಯಿ ಕ್ಯಾನ್ಸರ್ ನ ಪ್ರಮಾಣ ತಾಂಬೂಲ ಜಗಿಯದವರಿಗಿಂತ ವಾಸ್ತವವಾಗಿ ಹೆಚ್ಚಿಲ್ಲ (p= 0.114) ಎಂಬುದಾಗಿ ಅವರು ತಿಳಿಸಿದ್ದಾರೆ. ಈ ವಿಷಯಗಳನ್ನು ಅವರು ವಿವರವಾಗಿ 1990 ರ "British Journal of Cancer" (Vol 62) ಎನ್ನುವ ವೈಜ್ಞಾನಿಕ ನಿಯತಕಾಲಿಕದ 847 ರಿಂದ 851 ನೇ ಪುಟಗಳಲ್ಲಿ "A population based case - control investigation on cancers of the oral cavity ------ " ಎನ್ನುವ ಶಿರೋನಾಮೆಯಲ್ಲಿ ಪ್ರಕಟಿಸಿದ್ದಾರೆ.

ಸಿಪಿಸಿಆರ್ ಐ ಮಾನವಕೇಂದ್ರಿತ ಅಧ್ಯಯನ

2000ರಲ್ಲಿ ಸಿ ಪಿ‌ ಸಿ ಆರ್ ಐ ಕಾಸರಗೋಡು, ಅದರ ಪ್ರಾಂತೀಯ ಕ್ಷೇತ್ರ ವಿಟ್ಲ ಮತ್ತು ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನ, ಮಂಗಳೂರು ಜಂಟಿಯಾಗಿ ಡಾ. ಜೋಸ್ ಮತ್ತು ಡಾ. ಕೇಶವ ಭಟ್ ಅವರ ನೇತೃತ್ವದಲ್ಲಿ ನಡೆಸಿದ ಒಂದು ವೈಜ್ಞಾನಿಕ ಸಮೀಕ್ಷೆಯಲ್ಲಿ ಸಾಂಪ್ರದಾಯಿಕ ತಾಂಬೂಲ ಜಗಿಯುವುದು ಆರೋಗ್ಯಕ್ಕೆ ಪೂರಕ ಎಂಬುದಾಗಿ ಕಂಡು ಕೊಂಡಿದ್ದಾರೆ.

ಈ ಅಧ್ಯಯನದಲ್ಲಿ ಒಟ್ಟು 917 ಜನರನ್ನು ಸಮೀಕ್ಷೆ ಮಾಡಲಾಗಿತ್ತು. ಅದರಲ್ಲಿ 232 ಜನರು ತಾಂಬೂಲ ಅಥವಾ ಬೇರೆ ಯಾವುದೇ ಜಗಿಯುವ ಅಭ್ಯಾಸ ಇಲ್ಲದೇ ಇರುವವರು, 292 ಜನರು ತಂಬಾಕುರಹಿತ ಸಾಂಪ್ರದಾಯಿಕ ತಾಂಬೂಲ ಜಗಿಯುವವರು ಮತ್ತು 393 ಜನರು ತಂಬಾಕು ಸೇರಿಸಿದ ಸಾಂಪ್ರದಾಯಿಕ ತಾಂಬೂಲ ಜಗಿಯುವವರು ಇದ್ದರು. ತಾಂಬೂಲ ಜಗಿಯದೇ ಇರುವವರಲ್ಲಿ 31 ಜನರು ಒಂದಲ್ಲ ಒಂದು ಆರೋಗ್ಯ ಸಮಸ್ಯೆಗಳನ್ನು ಹೇಳಿಕೊಂಡಿದ್ದರು.

ಆದರೆ ತಂಬಾಕುರಹಿತ ಸಾಂಪ್ರದಾಯಿಕ ತಾಂಬೂಲ ಜಗಿಯುವವರಲ್ಲಿ ಬರೀ 14 ಮತ್ತು ತಂಬಾಕು ಸೇರಿಸಿದ ಸಾಂಪ್ರದಾಯಿಕ ತಾಂಬೂಲ ಜಗಿಯುವವರಲ್ಲಿ 18 ಜನರು ಅಂತಹ ಸಮಸ್ಯೆಗಳನ್ನು ಹೇಳಿಕೊಂಡಿದ್ದರು.

ಹಾಗೆಯೇ, ತಾಂಬೂಲ ಜಗಿಯದೇ ಇರುವವರಲ್ಲಿ ಇಬ್ಬರು ಕ್ಯಾನ್ಸರ್ ರೋಗಿಗಳಿದ್ದರು. ಆದರೆ ತಂಬಾಕುರಹಿತ ಸಾಂಪ್ರದಾಯಿಕ ತಾಂಬೂಲ ಜಗಿಯುವವರಲ್ಲಿ ಅಂತಹ ರೋಗಿಗಳು ಯಾರೂ ಇರಲಿಲ್ಲ, ಮತ್ತು ತಂಬಾಕು ಸೇರಿಸಿದ ಸಾಂಪ್ರದಾಯಿಕ ತಾಂಬೂಲ ಜಗಿಯುವವರಲ್ಲಿ ಒಬ್ಬರು ಮಾತ್ರ ಕ್ಯಾನ್ಸರ್ ತೊಂದರೆಯಿಂದ ಬಳಲುತ್ತಿದ್ದರು. ಈ ಎಲ್ಲಾ ವಿವರಗಳನ್ನು 2020 (Vol 22, No 1) ರ "Indian Journal of Arecanut, Spices and Medicinal Plants" ಎನ್ನುವ ವೈಜ್ಞಾನಿಕ ನಿಯತಕಾಲಿಕದ 3 ರಿಂದ 14 ನೇ ಪುಟಗಳಲ್ಲಿ "Traditional chewing of arecanut / betel quid and human health - a survey report" ಎನ್ನುವ ಶಿರೋನಾಮೆಯಲ್ಲಿ ಪ್ರಕಟಿಸಲಾಗಿದೆ.

2020ರಲ್ಲಿ ಕಾಸರಗೋಡು ಸಿಪಿಸಿಆರ್ ಐ ಮತ್ತು ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನ, ಮಂಗಳೂರು ಜಂಟಿಯಾಗಿ ನಡೆಸಿದ ವೈಜ್ಞಾನಿಕ ಸಮೀಕ್ಷೆಯಲ್ಲಿ ಕೂಡ ತಂಬಾಕುರಹಿತ ಸಾಂಪ್ರದಾಯಿಕ ತಾಂಬೂಲ ಜಗಿಯುವುದು ಆರೋಗ್ಯಕ್ಕೆ ಪೂರಕ ಎಂಬುದಾಗಿ ಕಂಡು ಕೊಂಡಿದ್ದಾರೆ.

Tags:    

Similar News