ಅಡಿಕೆ ಆತಂಕ | ಮಂಡಳಿ ಸ್ಥಾಪನೆಗೆ ವಿರೋಧ: ಕೇಂದ್ರದ ನಿಲುವಿನ ಹಿಂದಿನ ಗುಟ್ಟೇನು?
ಅಡಿಕೆ ಮಂಡಳಿ ವಿಷಯದಲ್ಲಿ ಕೇಂದ್ರದ ನಿಲುವು ಇದೀಗ ಬೆಳೆಗಾರರ ನಡುವೆ ವ್ಯಾಪಕ ಚರ್ಚೆಗೆ ಗ್ರಾಸವಾಗಿರುವಂತೆಯೇ, ಆ ಕುರಿತ ಬೆಳೆಗಾರರ ಪ್ರಾತಿನಿಧಿಕ ಸಂಸ್ಥೆಗಳ ಮೌನ ಕೂಡ ಟೀಕೆಗೆ ಗುರಿಯಾಗಿದೆ.;
ಅಡಿಕೆ ಮಂಡಳಿ ವಿಷಯದಲ್ಲಿ ಕೇಂದ್ರದ ನಿಲುವು ಇದೀಗ ಬೆಳೆಗಾರರ ನಡುವೆ ವ್ಯಾಪಕ ಚರ್ಚೆಗೆ ಗ್ರಾಸವಾಗಿರುವಂತೆಯೇ, ಆ ಕುರಿತ ಬೆಳೆಗಾರರ ಪ್ರಾತಿನಿಧಿಕ ಸಂಸ್ಥೆಗಳ ಮೌನ ಕೂಡ ಟೀಕೆಗೆ ಗುರಿಯಾಗಿದೆ.
ವಿಶ್ವ ಮಟ್ಟದಲ್ಲಿ ಅಡಿಕೆ ಬೆಳೆಯಲ್ಲಿ ಭಾರತವೇ ಮುಂಚೂಣಿಯಲ್ಲಿರುವ ರಾಷ್ಟ್ರ. ಜಾಗತಿಕವಾಗಿ ಉತ್ಪಾದನೆಯಾಗುವ ಒಟ್ಟು ಅಡಿಕೆಯಲ್ಲಿ ಭಾರತದ ಪಾಲು ಶೇ.55ಕ್ಕಿಂತ ಹೆಚ್ಚಿದೆ. ಇನ್ನು ದೇಶದಲ್ಲೇ ಅತಿ ಹೆಚ್ಚು ಅಡಿಕೆ ಉತ್ಪಾದಕ ರಾಜ್ಯ ಕರ್ನಾಟಕ. ದೇಶದ ಒಟ್ಟು ಉತ್ಪಾದನೆಯ ಶೇ.52ರಷ್ಟು ಉತ್ಪಾದನೆ ಮೂಲಕ ರಾಜ್ಯ ಮೊದಲ ಸ್ಥಾನದಲ್ಲಿದೆ. ರಾಜ್ಯದ 15ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಅಡಿಕೆ ಬೆಳೆಯಲಾಗುತ್ತಿದ್ದು, ಮಲೆನಾಡು, ಕರಾವಳಿ ಮತ್ತು ಮಧ್ಯಕರ್ನಾಟಕ ಆರ್ಥಿಕತೆಯ ಬೆನ್ನಲುಬಾಗಿರುವ ಅಡಿಕೆ, ಸರಿಸುಮಾರು ಅರ್ಧ ರಾಜ್ಯದ ಜನರ ಬದುಕಿಗೆ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಆಸರೆಯಾಗಿದೆ.
ಇಷ್ಟು ವ್ಯಾಪಕತೆ ಮತ್ತು ಆರ್ಥಿಕ ಮಹತ್ವ ಹೊಂದಿರುವ ಅಡಿಕೆ ಬೆಳೆ ಇದೀಗ ಕ್ಯಾನ್ಸರ್‌ಕಾರಕ ಎಂಬ ಹಣೆಪಟ್ಟಿ ಹೊತ್ತು ನಿಷೇಧ ಭೀತಿ, ಎಲೆಚುಕ್ಕೆ ಸೇರಿದಂತೆ ಹತ್ತಾರು ರೋಗ, ಗುಟ್ಕಾ ಕಂಪನಿ, ಮಂಡಿ ಮಾಲೀಕರ ಏಕಸ್ವಾಮ್ಯದ ಮಾರುಕಟ್ಟೆಯ ಏರಿಳಿತ, ವ್ಯಾಪಕ ಬೆಳೆ ವಿಸ್ತರಣೆ ಸೇರಿದಂತೆ ಹತ್ತು ಹಲವು ಬಿಕ್ಕಟ್ಟುಗಳನ್ನು ಎದುರಿಸುತ್ತಿದೆ.
ಈ ಹಂತದಲ್ಲಿ ಅಡಿಕೆಯ ಬೆಳೆ ಮತ್ತು ಬೆಳೆಗಾರರ ಭವಿಷ್ಯ ಕಾಯುವ ನಿಟ್ಟಿನಲ್ಲಿ ಪರ್ಯಾಯ ಉತ್ಪನ್ನಗಳು ಮತ್ತು ರೋಗಬಾಧೆ ನಿವಾರಣೆಯ ಸಾಧ್ಯತೆಗಳ ಸಂಶೋಧನೆ ಮತ್ತು ಪ್ರಯೋಗಗಳು ನಡೆಯಬೇಕಿದೆ. ಜೊತೆಗೆ ನ್ಯಾಯಾಲಯದಲ್ಲಿರುವ ಕಾನೂನು ಹೋರಾಟ ಜೊತೆಜೊತೆಗೆ ಸರ್ಕಾರ ಮತ್ತು ಆಡಳಿತದ ಮಟ್ಟದಲ್ಲಿ ಸಮರೋಪಾದಿಯ ವ್ಯವಸ್ಥಿತ ಪ್ರಯತ್ನಗಳು ಕೂಡ ಆಗಬೇಕಿದೆ.
ಈ ಹಿನ್ನೆಲೆಯಲ್ಲಿ ಕರ್ನಾಟಕವೂ ಸೇರಿದಂತೆ ದೇಶದ ಅಡಿಕೆ ಬೆಳೆಗಾರರ ಹಿತ ಕಾಯಲು ಕೇಂದ್ರ ಸರ್ಕಾರದ ಅಡಿಯಲ್ಲಿ ಅಡಿಕೆ ಮಂಡಳಿ ರಚನೆಯ ಅಗತ್ಯವಿದೆ ಎಂಬ ಕೂಗು ಬೆಳೆಗಾರರ ವಲಯದಲ್ಲಿ ಎದ್ದಿತ್ತು. ಆ ಬೇಡಿಕೆಗೆ ಸ್ಪಂದಿಸಿ ರಾಜ್ಯ ಸರ್ಕಾರ 2017ರಲ್ಲಿ ಅಡಿಕೆ ಮಂಡಳಿ ರಚನೆಯ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿತ್ತು. ಆದರೆ, ಇದೀಗ ಕೇಂದ್ರ ಸರ್ಕಾರ ʼಅಡಿಕೆ ಮಂಡಳಿ ರಚನೆಯ ಅಗತ್ಯವೇ ಇಲ್ಲʼ ಎಂಬ ಒಕ್ಕಣೆಯೊಂದಿಗೆ ತೋಟಗಾರಿಕೆ ಇಲಾಖೆಗೆ ಪತ್ರ ಬರೆದಿದೆ.
ಆದರೆ, ಅಡಿಕೆ ಮಂಡಳಿಯ ವಿಷಯದಲ್ಲಿ ಬೆಳೆಗಾರರ ಪ್ರಾತಿನಿಧಿಕ ಸಂಸ್ಥೆಗಳು ಬೆಳೆಗಾರರ ಪರ ದನಿ ಎತ್ತುತ್ತಿಲ್ಲ ಎಂಬ ಅಸಮಾಧಾನ ಕೂಡ ಬೆಳೆಗಾರರ ವಲಯದಲ್ಲಿ ವ್ಯಕ್ತವಾಗುತ್ತಿದೆ.
ಮಂಡಳಿ ಪ್ರಸ್ತಾವನೆಗೆ ವಿರೋಧ ಯಾಕೆ?
ಆ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲಾ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಬಿ ಎ ರಮೇಶ್ ಹೆಗ್ಡೆ ಅವರನ್ನು ʼದ ಫೆಡರಲ್ ಕರ್ನಾಟಕʼ ಮಾತನಾಡಿಸಿದಾಗ, ಅವರು “ಸಿಎಂ ಸಿದ್ದರಾಮಯ್ಯ ಅವರ ಅಧಿಕಾರದ ಮೊದಲ ಅವಧಿಯಲ್ಲೇ ಅಡಿಕೆ ಮಂಡಳಿ ಸ್ಥಾಪನೆಗೆ ವೈಜ್ಞಾನಿಕ ವಿವರ ಮತ್ತು ಪ್ರಾಯೋಗಿಕ ಮಾಹಿತಿಯೊಂದಿಗೆ ಸಂಪೂರ್ಣ ಪ್ರಸ್ತಾವನೆಯನ್ನು ಕೇಂದ್ರಕ್ಕೆ ಸಲ್ಲಿಸಲಾಗಿತ್ತು. ಆದರೆ, ಕೇಂದ್ರ ಇದೀಗ ಎಂಟು ವರ್ಷಗಳ ಬಳಿಕ ಪ್ರಸ್ತಾವನೆಯನ್ನು ಏಕಾಏಕಿ ತಿರಸ್ಕರಿಸಿದೆ. ಕೇಂದ್ರದ ಈ ಕ್ರಮದ ಹಿಂದೆ ಬಿಜೆಪಿ ಮತ್ತು ಆರ್‌ಎಸ್‌ಎಸ್‌ನ ಅಂಗಸಂಸ್ಥೆಯಾದ ಸಹಕಾರ ಭಾರತಿಯ ಹಿಡಿತದಲ್ಲೇ ಇರುವ ಮ್ಯಾಮ್ಕೋಸ್ ಮತ್ತು ಕ್ಯಾಂಪ್ಕೊದ ಹಿತ ಕಾಯುವ ಗುಪ್ತಕಾರ್ಯಸೂಚಿ ಇರುವಂತಿದೆ” ಎಂದು ಹೇಳಿದರು.
“ಬೆಳೆಗಾರರ ಪ್ರಾತಿನಿಧಿಕ ಸಂಸ್ಥೆಗಳು ಎಂದು ಹೇಳಿಕೊಳ್ಳುತ್ತಿರುವ ಸಹಕಾರ ಸಂಸ್ಥೆಗಳು ರಾಜ್ಯದ ಬಹುತೇಕ ಅಡಿಕೆ ಮಾರುಕಟ್ಟೆ ಮತ್ತು ಬೆಳೆಗಾರರ ಮೇಲೆ ಹಿಡಿತ ಹೊಂದಿವೆ. ಒಂದು ವೇಳೆ ಮಂಡಳಿ ಕಾರ್ಯರೂಪಕ್ಕೆ ಬಂದರೆ ತಮ್ಮ ಆ ಹಿಡಿತ ತಪ್ಪಿಹೋಗಲಿದೆ ಎಂಬ ಆತಂಕ ಈ ಸಂಸ್ಥೆಗಳದ್ದು. ತಮ್ಮ ಏಕಸ್ವಾಮ್ಯ ಉಳಿಸಿಕೊಳ್ಳುವ ಹಿನ್ನೆಲೆಯಲ್ಲಿಯೇ ಮಂಡಳಿ ರಚನೆಯ ಪ್ರಸ್ತಾಪದ ಸಂದರ್ಭದಲ್ಲೇ ಈ ಸಂಸ್ಥೆಗಳು ಅದಕ್ಕೆ ಪ್ರಬಲ ವಿರೋಧ ವ್ಯಕ್ತಪಡಿಸಿದ್ದವು. ಇದೀಗ ತಮ್ಮದೇ ಸರ್ಕಾರದ ಕಡೆಯಿಂದ ಪ್ರಸ್ತಾವನೆಯನ್ನು ತಳ್ಳಿಹಾಕಿಸಿವೆ” ಎಂದು ಅವರು ಆರೋಪಿಸಿದರು.
ಸಹಕಾರ ಸಂಸ್ಥೆಗಳು ಹೇಳುವುದೇನು?
ಆದರೆ, ಈ ಆರೋಪದ ಕುರಿತು ʼದ ಫೆಡರಲ್ ಕರ್ನಾಟಕʼದೊಂದಿಗೆ ಮಾತನಾಡಿದ ಮ್ಯಾಮ್ಕೋಸ್ ಮತ್ತು ಕ್ಯಾಂಪ್ಕೊ ಪ್ರತಿನಿಧಿಗಳು, ಮಂಡಳಿ ಸ್ಥಾಪನೆಯ ವಿಷಯದಲ್ಲಿ ತಮ್ಮ ಈ ಹಿಂದಿನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ. ಅಲ್ಲದೆ, ನಮ್ಮದೇ ಕೇಂದ್ರ ಸರ್ಕಾರದ ನಿಲುವಿನ ಬಗ್ಗೆ ನಾವು ಈಗ ಪ್ರಶ್ನಿಸಲು ಸಾಧ್ಯವಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ಮ್ಯಾಮ್ಕೋಸ್ ಉಪಾಧ್ಯಕ್ಷರಾದ ಮಹೇಶ್ ಎಚ್ ಎಸ್ ಹುಲ್ಕುಳಿ ಅವರು ಪ್ರತಿಕ್ರಿಯಿಸಿ, “ಮಂಡಳಿಯಿಂದ ಯಾವುದೇ ಪ್ರಯೋಜನವಿಲ್ಲ. ಸಂಶೋಧನೆಗೆ ಈಗಾಗಲೇ ಸರ್ಕಾರಿ ಸಂಸ್ಥೆಗಳೇ ಇವೆ. ಬೆಳೆಗಾರರ ಹಿತ ಕಾಯಲು ಮ್ಯಾಮ್ಕೋಸ್, ಕ್ಯಾಂಪ್ಕೊದಂತಹ ಸಹಕಾರ ಸಂಸ್ಥೆಗಳಿವೆ. ಇನ್ನು ನಿಷೇಧ, ಆರೋಗ್ಯಕ್ಕೆ ಹಾನಿಕರ ಎಂಬ ಸಂಗತಿಗಳ ಕುರಿತು ಕಾನೂನು ಮತ್ತು ಸರ್ಕಾರದ ಮಟ್ಟದಲ್ಲಿ ಹೋರಾಟ ನಡೆಸಲು ನಾವೆಲ್ಲಾ ಸೇರಿ ಅಡಿಕೆ ಮಹಾಮಂಡಳ ಮಾಡಿಕೊಂಡಿದ್ದೇವೆ. ಹಾಗಿರುವಾಗ ಬೆಳೆಗಾರರಿಗೆ ಮಂಡಳಿಯಿಂದ ಲಾಭ ಆಗುತ್ತೆ ಅನ್ನುವ ನಂಬಿಕೆ ಇಲ್ಲ. ಹಾಗಾಗಿ ಮಂಡಳಿಯ ಅಗತ್ಯವೇನಿದೆ? ಯಾಕೆ ಎಂಬುದು ನಮ್ಮ ಪ್ರಶ್ನೆ. ಮಂಡಳಿಯ ವಿಷಯದಲ್ಲಿ ನಮ್ಮ ಈ ಹಿಂದಿನ ನಿಲುವೇ ಈಗಲೂ ಇದೆ. ಬದಲಾವಣೆ ಇಲ್ಲ” ಎಂದು ಮ್ಯಾಮ್ಕೋಸ್ ನಿಲುವನ್ನು ಸಮರ್ಥಿಸಿಕೊಂಡರು.
ಇನ್ನು ಮತ್ತೊಂದು ಪ್ರಮುಖ ಸಂಸ್ಥೆಯಾದ ಕ್ಯಾಂಪ್ಕೊ ನಿಲುವಿನ ಕುರಿತು ʼದ ಫೆಡರಲ್ ಕರ್ನಾಟಕʼ ಆ ಸಂಸ್ಥೆಯ ಪ್ರಮುಖರನ್ನು ಸಂಪರ್ಕಿಸಿದಾಗ, ಈ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸಲು ನಿರಾಕರಿಸಿದ ಅವರು, ʼಅಂತಿಮವಾಗಿ ಮಂಡಳಿ ಅಗತ್ಯವಿಲ್ಲ ಎಂಬ ಕ್ಯಾಂಪ್ಕೊದ ಹಿಂದಿನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ, ಈಗಲೂ ಸಂಸ್ಥೆ ಅದೇ ನಿಲುವನ್ನೇ ಪ್ರತಿಪಾದಿಸುತ್ತದೆʼ ಎಂದು ಸ್ಪಷ್ಟಪಡಿಸಿದರು.
ಆದರೆ, ಸಹಕಾರ ವಲಯದ ಮತ್ತೊಂದು ಪ್ರಮುಖ ಸಂಸ್ಥೆಯಾಗಿ, ಬೆಳೆಗಾರರ ಹಿತ ಕಾಯುವ ನಿಟ್ಟಿನಲ್ಲಿ ದಶಕಗಳಿಂದ ಗಣನೀಯ ಕೆಲಸಗಳನ್ನು ಮಾಡಿಕೊಂಡು ಬಂದಿರುವ ಶಿರಸಿಯ ಟಿಎಸ್ಎಸ್ ಮಾತ್ರ ಈ ವಿಷಯದಲ್ಲಿ ಉಳಿದ ಸಹಕಾರಿ ಸಂಸ್ಥೆಗಳಿಗಿಂತ ಭಿನ್ನ ನಿಲುವನ್ನು ವ್ಯಕ್ತಪಡಿಸಿದೆ.
ʼದ ಫೆಡರಲ್ ಕರ್ನಾಟಕʼದೊಂದಿಗೆ ಮಾತನಾಡಿದ ತೋಟಗಾರ್ಸ್ ಕೋ-ಅಪರೇಟಿವ್ ಸೇಲ್ಸ್ ಸೊಸೈಟಿ(ಟಿಎಸ್ಎಸ್) ಅಧ್ಯಕ್ಷರಾದ ಗೋಪಾಲಕೃಷ್ಣ ವೆಂಕಟರಮಣ ವೈದ್ಯ ಅವರು, “ಅಡಿಕೆ ಬೆಳೆಗಾರರ ಹಿತ ಕಾಯಲು ಸಹಕಾರ ಸಂಸ್ಥೆಗಳು ಇವೆ ಎಂಬ ಕಾರಣಕ್ಕೆ ಅಡಿಕೆ ಮಂಡಳಿ ಬೇಡ ಎಂಬುದು ಸರಿಯಲ್ಲ. ಕ್ಯಾಂಪ್ಕೊ ಆಗಲಿ, ಮ್ಯಾಮ್ಕೋಸ್ ಆಗಲಿ ಅಥವಾ ನಮ್ಮದೇ ಟಿಎಸ್ಎಸ್ ಆಗಲೀ ಒಂದೊಂದು ಸಂಸ್ಥೆಗಳಾಗಿ ನಾವು ಇಡೀ ಕರ್ನಾಟಕ ಮತ್ತು ದೇಶದ ಅಡಿಕೆ ಬೆಳೆಗಾರರ ಹಿತ ಕಾಯಲು ಸಾಧ್ಯವಿಲ್ಲ. ಆ ದೃಷ್ಟಿಯಿಂದ ಸಹಕಾರ ಸಂಸ್ಥೆಗಳಿವೆ ಎಂಬ ಕಾರಣ ನೀಡಿ ಮಂಡಳಿ ರಚನೆ ಬೇಡ ಎಂಬ ಸರ್ಕಾರದ ನಿಲುವು ಸರಿಯಲ್ಲ. ಅಡಿಕೆ ಬೆಳೆ ಮತ್ತು ಬೆಳೆಗಾರರಿಗೆ ಇಂದು ಎದುರಾಗಿರುವ ಸವಾಲು, ಮತ್ತು ಬಿಕ್ಕಟ್ಟುಗಳಿಗೆ ಕಾನೂನು ಮತ್ತು ಆಡಳಿತ ವ್ಯಾಪ್ತಿಯಲ್ಲಿ ಪರಿಹಾರ ಕಂಡುಕೊಳ್ಳಲು ಕಾನೂನು ಮತ್ತು ಸಾಂವಿಧಾನಿಕ ಬಲ ಹೊಂದಿರುವ ಅಡಿಕೆ ಮಂಡಳಿ ಬೇಕು” ಎಂದು ಅಭಿಪ್ರಾಯಪಟ್ಟರು.
“ಮಾರುಕಟ್ಟೆ ಸಮಸ್ಯೆ, ನಿರಂತರ ರೋಗಬಾಧೆ, ನಿಷೇಧದ ಭೂತ ಮುಂತಾದ ಆತಂಕಕಾರಿ ಸಂಗತಿಗಳು ಬೆಳೆಗಾರರ ಭವಿಷ್ಯವನ್ನೇ ಮಂಕಾಗಿಸಿವೆ. ಆ ಹಿನ್ನೆಲೆಯಲ್ಲಿ ಸರ್ಕಾರದ ಮಟ್ಟದಲ್ಲಿ ವ್ಯವಹರಿಸಲು, ಸಾಂವಿಧಾನಿಕ ಸ್ಥಾನಮಾನ ಇರುವ ಒಂದು ಅಖಿಲ ಭಾರತ ಮಟ್ಟದ ಅಧಿಕೃತ ವ್ಯವಸ್ಥೆಯಾಗಿ ಮಂಡಳಿಯ ಅಗತ್ಯ ತುಂಬಾ ಇದೆ. ಆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಮೂಲಕ ಕೇಂದ್ರ ಸರ್ಕಾರಕ್ಕೆ ಪುನರ್ ಪ್ರಸ್ತಾಪ ಸಲ್ಲಿಸಲು ಕೋರಲಾಗುವುದು. ತನ್ನ ನಿಲುವನ್ನು ಪುನರ್ ಪರಿಶೀಲನೆ ನಡೆಸುವಂತೆ ಕೇಂದ್ರದ ಮೇಲೆ ಒತ್ತಡ ಹೇರಲು ಬೆಳೆಗಾರರ ಸಂಸ್ಥೆಗಳು ಪ್ರಯತ್ನಿಸಲಿವೆ” ಎಂದೂ ಅವರು ಹೇಳಿದರು.
ಒಟ್ಟಾರೆ, ಅಡಿಕೆ ಮಂಡಳಿಯ ವಿಷಯದಲ್ಲಿ ಕೇಂದ್ರ ಸರ್ಕಾರದ ಧೋರಣೆ ರಾಜ್ಯದ ಅಡಿಕೆ ಬೆಳೆಗಾರರ ನಡುವೆ ಪರ- ವಿರೋಧದ ಚರ್ಚೆ ಹುಟ್ಟುಹಾಕಿದೆ. ಅದರಲ್ಲೂ ಕೇಂದ್ರದ ಬಿಜೆಪಿ ಸರ್ಕಾರ, ತನ್ನ ಮಾತೃಸಂಸ್ಥೆ ಆರ್‌ಎಸ್‌ಎಸ್‌ನ ಅಂಗಸಂಸ್ಥೆಯಾದ ʼಸಹಕಾರ ಭಾರತಿʼಯ ಹಿಡಿತದಲ್ಲೇ ಇರುವ ಕ್ಯಾಂಪ್ಕೊ ಮತ್ತು ಮ್ಯಾಮ್ಕೋಸ್ ಸಹಕಾರ ಸಂಸ್ಥೆಗಳ ಹಿತ ಕಾಯುವ ನಿಟ್ಟಿನಲ್ಲಿ ಒಟ್ಟೂ ಅಡಿಕೆ ಬೆಳೆಗಾರರ ಹಿತವನ್ನು ಬಲಿಕೊಡುವ ಪ್ರಯತ್ನ ನಡೆಸಿದೆ ಎಂಬ ವ್ಯಾಪಕ ಆಕ್ರೋಶಕ್ಕೂ ಸರ್ಕಾರದ ನಿಲುವು ಕಾರಣವಾಗಿದೆ.