April Price Shock | ಇಂದಿನಿಂದಲೇ ತಟ್ಟಲಿದೆ ಬೆಲೆಯೇರಿಕೆ ಬಿಸಿ ! ಜನ ಜೀವನದ ಮೇಲೆ ದುಬಾರಿ ದರದ ಸವಾರಿ

ಸಾರಿಗೆ ಬಸ್, ನಮ್ಮ ಮೆಟ್ರೋ ಪ್ರಯಾಣ ದರ ಏರಿಕೆಯಿಂದ ಹೈರಾಣಾಗಿರುವ ಜನರಿಗೆ ನಂದಿನಿ ಹಾಲಿನ ದರ, ವಿದ್ಯುತ್ ಶುಲ್ಕ, ಅಬಕಾರಿ ಸುಂಕ, ಟೋಲ್‌ ದರ ಸೇರಿದಂತೆ ಬೆಲೆ ಏರಿಕೆಯ ಬಿಸಿ ಏ.1 ರಿಂದ ಜಾರಿಯಾಗಲಿವೆ. ಇದರಿಂದ ಜನಜೀವಕ್ಕೆ ದರದ ಹೊರೆ ಬೀಳಲಿದೆ.;

Update: 2025-03-31 13:10 GMT

ಹೊಸ ಆರ್ಥಿಕ ವರ್ಷ ಆರಂಭವಾಗುತ್ತಿದ್ದಂತೆ ದರ ಏರಿಕೆಯ ಬರೆ ರಾಜ್ಯದ ಜನತೆ ಮೇಲೆ ಮತ್ತೆ ಬೀಳಲಿದೆ! ಏಪ್ರಿಲ್ ತಿಂಗಳ ಬಿಸಿಲು ಬೆಲೆ ಏರಿಕೆ  ಬೆಂಕಿಯಾಗಿ ಗ್ರಾಹಕನ ಜೇಬು ಸುಡಲಿದೆ. ಸಾರಿಗೆ ಬಸ್, ನಮ್ಮ ಮೆಟ್ರೋ ಪ್ರಯಾಣ ದರ ಏರಿಕೆಯಿಂದ ಹೈರಾಣಾಗಿರುವ ಜನ ಜೀವನ ಇದೀಗ ಮತ್ತಷ್ಟು ತುಟ್ಟಿಯಾಗಲಿದೆ. 

ನಂದಿನಿ ಹಾಲಿನ ದರ, ವಿದ್ಯುತ್ ಶುಲ್ಕ ಸೇರಿದಂತೆ ರಾಜ್ಯ ಹಾಗೂ ಕೇಂದ್ರ ಬಜೆಟ್‌ನಲ್ಲಿನ ಬೆಲೆ ಏರಿಕೆಯ ಘೋಷಣೆಗಳು ಏ.1 ರಿಂದ ಜಾರಿಯಾಗಲಿವೆ. ಇದರಿಂದ ಜನಜೀವನವೂ ದುಬಾರಿ ಆಗಲಿದೆ.

ರಾಜ್ಯ ಹಾಗೂ ಕೇಂದ್ರ ಸರ್ಕಾರದ ಬೆಲೆ ಏರಿಕೆ ನೀತಿಗಳ ವಿರುದ್ಧ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶವೂ ವ್ಯಕ್ತವಾಗಿದೆ. ಹಾಗಾದರೆ, ಏ.1 ರಿಂದ ಯಾವುದೆಲ್ಲ ದರ ಏರಿಕೆಯಾಗಲಿದೆ, ಜೊತೆಗೆ ಯಾವ ದರಗಳು ಹೆಚ್ಚಳವಾಗುವ ಸಾಧ್ಯತೆ ಇದೆ ಎಂಬ ಮಾಹಿತಿ ಇಲ್ಲಿದೆ.


ಹಾಲಿನ ದರ 4 ರೂ. ಹೆಚ್ಚಳ

ನಂದಿನಿ ಹಾಲು ಹಾಗೂ ಮೊಸರಿನ ದರವನ್ನು ಲೀಟರ್‌ಗೆ 4.ರೂ. ಹೆಚ್ಚಿಸಲು ರಾಜ್ಯ ಸರ್ಕಾರ ಅನುಮೋದನೆ ನೀಡಿದೆ. ಹೊಸ ದರಗಳು ಏ.1 ರಿಂದ ಜಾರಿಯಾಗಲಿದ್ದು, ಗ್ರಾಹಕರ ಮೇಲೆ ಖರೀದಿಯ ಹೊರೆ ಹೆಚ್ಚಲಿದೆ.

ಕಳೆದ ಎರಡು ವರ್ಷಗಳಲ್ಲಿ ಕೆಎಂಎಫ್, ಮೂರು ಬಾರಿ ಹಾಲಿನ ದರ ಏರಿಕೆ ಮಾಡಿರುವುದು ಜನಸಾಮಾನ್ಯರಿಗೆ ನುಂಗಲಾರದ ತುತ್ತಾಗಿದೆ. 2023 ಆಗಸ್ಟ್ ತಿಂಗಳಲ್ಲಿ ಲೀಟರ್ ಹಾಲಿನ ದರವನ್ನು 3 ರೂ. ಹೆಚ್ಚಿಸಲಾಗಿತ್ತು ಆಗ ಲೀಟರ್‌ ಹಾಲಿನ ದರ 39ರೂ. ಗಳಿಂದ 42ಕ್ಕೆ ಹೆಚ್ಚಳವಾಗಿತ್ತು. 2024 ಜೂನ್ ತಿಂಗಳಲ್ಲಿ ಲೀಟರ್ ಹಾಲಿನ ದರವನ್ನು 50ಮಿಲಿ ಹೆಚ್ಚುವರಿ ಹಾಲಿನ ಜೊತೆಗೆ 2 ರೂ. ಹೆಚ್ಚಿಸಲಾಗಿತ್ತು. ಆಗ ಲೀಟರ್‌ ಹಾಲಿನ ದರ 42ರಿಂದ 44ರೂ. ಆಗಿತ್ತು.  ಈಗ 50ಎಂಎಲ್‌ ಹಾಲಿನ ಜೊತೆಗೆ 2ರೂ.ಗಳನ್ನು ಹಿಂಪಡೆಯಲಿದೆ. ಇದರಿಂದ ಹಾಲಿನ ದರ 42ರೂ. ಆಗಲಿದೆ. ಹೊಸ ದರ 4ರೂ. ಸೇರಿದರೆ ಲೀಟರ್‌ ಹಾಲಿನ ಬೆಲೆ 46ರೂ. ಆಗಲಿದೆ.


ವಿದ್ಯುತ್ ದರ ಏರಿಕೆ

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ಹಾಗೂ ವಿದ್ಯುತ್ ಸರಬರಾಜು ಕಂಪನಿಗಳು ಸಲ್ಲಿಸಿದ್ದ ವಿದ್ಯುತ್ ದರ ಪರಿಷ್ಕರಣೆಯಂತೆ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ ದರ ಏರಿಕೆ ಮಾಡಿದೆ.

ಕೆಪಿಟಿಸಿಎಲ್ ಹಾಗೂ ಎಸ್ಕಾಂ ನೌಕರರ ಪಿಂಚಣಿ ಹಾಗೂ ಗ್ರಾಚ್ಯುಯಿಟಿಗೆ ಸರ್ಕಾರ ಪಾವತಿಸಬೇಕಾದ ಪಾಲನ್ನು ಗ್ರಾಹಕರಿಂದ ಸಂಗ್ರಹಿಸಿ ನೀಡುವ ಸಲುವಾಗಿ ಪ್ರತಿ ಯೂನಿಟ್‌ಗೆ 36 ಪೈಸೆ ಹೆಚ್ಚಳ ಮಾಡಿದೆ. ಈ ದರಗಳು ಏ.1 ರಿಂದ ಜಾರಿಯಾಗಲಿವೆ. ಗೃಹ ಜ್ಯೋತಿ ಯೋಜನೆ ವ್ಯಾಪ್ತಿಯಲ್ಲಿಲ್ಲದ ಕುಟುಂಬಗಳು, ವಾಣಿಜ್ಯ ಕಟ್ಟಡಗಳು, ಕೈಗಾರಿಕೆಗಳಿಗೆ ವಿದ್ಯುತ್ ದರ ಏರಿಕೆ ಭಾರವಾಗಲಿದೆ.

ಗೃಹೋಪಯೋಗಿ ಸೇರಿ ಎಲ್ಲಾ ಬಗೆಯ ವಿದ್ಯುತ್‌ ಶುಲ್ಕವನ್ನು ಪ್ರತಿ ಕೆವಿಗೆ (ಕಿಲೋ ವ್ಯಾಟ್‌) 25 ರೂ. ಹೆಚ್ಚಳ ಮಾಡಿ ಕೆಇಆರ್‌ಸಿ ಆದೇಶ ಹೊರಡಿಸಿತ್ತು. ಇದಕ್ಕೆ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ಯೂನಿಟ್‌ಗೆ 10 ಪೈಸೆ ಕಡಿಮೆ ಮಾಡಿದೆ.  

ಪರಿಷ್ಕರಿಸಿದ ನಂತರ ವಿದ್ಯುತ್‌ ದರ ಯೂನಿಟ್‌ಗೆ 5 ರೂ. 80 ಪೈಸೆ ಆಗಲಿದೆ.  ಮುಂದಿನ ಮೂರು ವರ್ಷಗಳ ದರ ಪರಿಷ್ಕರಣೆ ಪ್ರಕಾರ 2027-28ಕ್ಕೆ ಯೂನಿಟ್‌ಗೆ 5 ಪೈಸೆ ಇಳಿಸಿ, 5 ರೂ. 75 ಪೈಸೆಗೆ ನಿಗದಿಪಡಿಸಲಾಗಿದೆ. ಅದೇ ರೀತಿ ಮಾಸಿಕ ನಿಗದಿತ ಶುಲ್ಕವನ್ನು 2025-26ಕ್ಕೆ 145 ರೂ., 2026-27ಕ್ಕೆ 150 ರೂ. ಮತ್ತು 2027-28ಕ್ಕೆ 160 ರೂ.ಗಳನ್ನು ನಿಗದಿ ಮಾಡಿದೆ. 

"ಆಳುವ ಸರ್ಕಾರಗಳ ಬೆಲೆ ಏರಿಕೆ ನೀತಿಗಳಿಂದ ಜನಸಾಮಾನ್ಯರು ಪರಿತಪಿಸುತ್ತಿದ್ದಾರೆ.  ಪ್ರತಿ ವರ್ಷ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಜನರು ಬದುಕು ಸಾಗುಸುವುದೇ ದುಸ್ತರವಾಗಿದೆ. ಚುನಾವಣೆಯಲ್ಲಿ ನೀಡಿದ ಉಚಿತ ಕೊಡುಗೆಗಳಿಗೆ ಹಣ ಹೊಂದಿಸಲು ಸರ್ಕಾರ ಜನರ ಮೇಲೆ ಬೆಲೆ ಏರಿಕೆಯ ಭಾರ ಹೊರಿಸುತ್ತಿದೆ. ರಾಜ್ಯದ ಹಣಕಾಸು ಸ್ಥಿತಿಗತಿಗಳನ್ನು ಪರಿಶೀಲಿಸಿಮ ಯೋಜನೆ, ಕೊಡುಗೆಗಳನ್ನು ನೀಡಬೇಕು. ವಿನಾಕಾರಣ ಜನರ ಮೇಲೆ ತೆರಿಗೆ, ಬೆಲೆ ಏರಿಕೆಯ ಭಾರ ಹೊರಿಸುವುದು ಸರಿಯಲ್ಲ" ಎಂದು ಕರ್ನಾಟಕ ಪ್ರಾಂತ್ಯ ರೈತ ಸಂಘದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಾರ್ಯದರ್ಶಿ ಚಂದ್ರ ತೇಜಸ್ವಿ ಅವರು "ದ ಫೆಡರಲ್‌ ಕರ್ನಾಟಕ"ಕ್ಕೆ ತಿಳಿಸಿದರು.  


ಅಬಕಾರಿ ಸುಂಕ ಹೆಚ್ಚಳ?

2025-26ನೇ ಸಾಲಿಗೆ ಬಜೆಟ್‌ನಲ್ಲಿ ಸಿಎಂ ಸಿದ್ದರಾಮಯ್ಯ ಅವರು ಅಬಕಾರಿ ಸುಂಕದ ಸ್ಲ್ಯಾಬ್ ಅನ್ನು ಹೊರರಾಜ್ಯದ ಪ್ರೀಮಿಯಂ ಮದ್ಯದ ಬೆಲೆಗೆ ಸರಿದೂಗಿಸುವ ಕುರಿತು ಘೋಷಿಸಿದ್ದಾರೆ. ಇದರಿಂದ ರಾಜ್ಯದಲ್ಲಿ ಮದ್ಯದ ದರ ಮತ್ತಷ್ಟು ದುಬಾರಿಯಾಗುವ ಸಾಧ್ಯತೆ ಇದೆ.

ಐಎಂಎಲ್‌( ಇಂಡಿಯನ್‌ ಮೇಲ್‌ ಲಿಕ್ಕರ್‌) ಮೊದಲ ನಾಲ್ಕು ಸ್ಲ್ಯಾಬ್‌ಗಳು ಅಂದರೆ ಕಡಿಮೆ ಬೆಲೆ ಹೊಂದಿರುವ ಮದ್ಯದ ಬೆಲೆಗಳು ಏ.1 ರಿಂದ ಹೆಚ್ಚಾಗುವ ಸಾಧ್ಯತೆಯಿದೆ. 180 ಮಿಲಿಗೆ ಐಎಂಎಲ್‌ ಮದ್ಯಕ್ಕೆ ಗರಿಷ್ಠ ಚಿಲ್ಲರೆ ಬೆಲೆ (ಎಂಆರ್‌ಪಿ) 65 ರೂ. ಆಗುವ ಸಾಧ್ಯತೆಯಿದೆ. ಪ್ರಸ್ತುತ 180 ಮಿಲಿಯ ಐಎಂಎಲ್‌ ಮದ್ಯಗಳು 50ರಿಂದ 55ರೂ. ಇದೆ.  

ಪ್ರಸಕ್ತ ಸಾಲಿನಲ್ಲಿ ಅಬಕಾರಿ ಇಲಾಖೆಯಿಂದ 40 ಸಾವಿರ ಕೋಟಿ ರೂ.ಗಳ ಆದಾಯ ಸಂಗ್ರಹ ಗುರಿ ಹೊಂದಿರುವುದನ್ನು ಅಬಕಾರಿ ಸುಂಕದ ಸ್ಲ್ಯಾಬ್ ಪರಿಷ್ಕರಿಸಲು ರಾಜ್ಯ ಸರ್ಕಾರ ಮುಂದಾಗಿದೆ.

ದೀಪದ ಎಣ್ಣೆಯೂ ದುಬಾರಿ

ದೀಪದ ಎಣ್ಣೆಯ ದರವೂ ದುಬಾರಿಯಾಗಿದೆ. ಸದ್ದಿಲ್ಲದೇ ಉರಿಯುವ ದೀಪದ ಎಣ್ಣೆಯ ಬೆಲೆ ಕೂಡ ಸದ್ದಿಲ್ಲದೇ 15 ರಿಂದ 30 ರೂ ಹೆಚ್ಚಳವಾಗಿದೆ. ವಿವಿಧ ಬ್ರ್ಯಾಂಡ್ಗಳ ದೀಪದ ಎಣ್ಣೆಯ ದರವು ಸರಾಸರಿ ಶೇ 20% ರಷ್ಟು ಏರಿಕೆಯಾಗಿದೆ.

ಖಾಸಗಿ ಕಂಪೆನಿಗಳ ದೀಪದ ಎಣ್ಣೆ ದರ 125 ರೂ.ಗಳಿಂದ 175 ರೂ.ವರೆಗೆ ಏರಿಕೆಯಾಗಿದೆ. ಪೂಜೆಗಾಗಿ ಬಳಸುವ ಎಣ್ಣೆಯನ್ನು ಅನಿವಾರ್ಯವಾಗಿ ದುಬಾರಿ ದರ ತೆತ್ತು ಖರೀದಿಸುವ ಸ್ಥಿತಿ ನಿರ್ಮಾಣವಾಗಿದೆ. ಕೇಂದ್ರ ಸರ್ಕಾರ ತೈಲ ಸುಂಕ ಕಡಿಮೆ ಮಾಡಿದರೂ ಎಣ್ಣೆಯ ದರ ಹೆಚ್ಚಿರುವುದು ಸಾರ್ವಜನಿಕರನ್ನು ಸಂಕಷ್ಟಕ್ಕೆ ದೂಡಿದೆ.


ಟೋಲ್ ದರವೂ ಏರಿಕೆ

ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚರಿಸುವ ವಾಹನ ಸವಾರರು ಏ.1 ರಿಂದ ಹೆಚ್ಚುವರಿ ಟೋಲ್ ಶುಲ್ಕ ಪಾವತಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಕೇಂದ್ರ ಬಜೆಟ್‌ನಲ್ಲಿ ಟೋಲ್ ಸಂಗ್ರಹ ಶುಲ್ಕ ಹೆಚ್ಚಿಸಿದ್ದು, ಏ.1 ರಿಂದ ಶೇ.3 ರಿಂದ 5 ರಷ್ಟು ಏರಿಕೆಯಾಗಲಿದೆ.

ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್‌ ವೇ, ಬೆಂಗಳೂರು-ತಿರುಪತಿ ರಸ್ತೆ, ಬೆಂಗಳೂರು-ಹೈದರಾಬಾದ್ ರಸ್ತೆ, ಬೆಂಗಳೂರು ವಿಮಾನ ನಿಲ್ದಾಣ ರಸ್ತೆ, ದಾಬಸ್‌ಪೇಟೆ-ದೇವನಹಳ್ಳಿ ನಡುವಿನ ಉಪನಗರ ವರ್ತುಲ ರಸ್ತೆ ಸೇರಿದಂತೆ ಒಟ್ಟು 66 ಟೋಲ್‌ಗಳಲ್ಲಿ ಶುಲ್ಕ ಪರಿಷ್ಕರಣೆಯಾಗಲಿದ್ದು, ಹೊರ ದರಗಳು ಏ.1 ರಿಂದ ಜಾರಿಯಾಗಲಿವೆ.

ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್‌ ವೇನಲ್ಲಿ ಪ್ರಸ್ತುತ ಕಾರುಗಳಿಗೆ ಏಕಮುಖದ ಪ್ರಯಾಣಕ್ಕೆ 155ರೂ ಇದೆ. ಎಲ್‌ಸಿವಿ/ಎಲ್‌ಜಿವಿ/ ಮಿನಿ ಬಸ್‌ಗಳಿಗೆ 235 ರೂ. ಹಾಗೂ ಟ್ರಕ್‌/ ಬಸ್‌ ಗಳಿಗೆ 525 ರೂ. ಟೋಲ್‌ ಶುಲ್ಕವಿದೆ. ಈ ಶುಲ್ಕದಲ್ಲಿ ತಲಾ ಶೇ 3ರಿಂದ 5ರಷ್ಟು ಪರಿಷ್ಕರಣೆಯಾಗಲಿದೆ.

"ರಾಜ್ಯ ಹೆದ್ದಾರಿಗಳಲ್ಲಿ ಯಾವುದೇ ಟೋಲ್‌ ಶುಲ್ಕ ಹೆಚ್ಚಿಸಿಲ್ಲ. ಕೇಂದ್ರ ಸರ್ಕಾರವು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಮಾತ್ರ ಟೋಲ್‌ ಶುಲ್ಕ ಹೆಚ್ಚಿಸಿದೆ. ಹೆದ್ದಾರಿ ಅವಲಂಬಿಸುವ ವಾಹನ ಸವಾರರಿಗೆ ಟೋಲ್‌ ಕೊಂಚ ದುಬಾರಿಯಾಗಿದೆ. ರಸ್ತೆ ಅಭಿವೃದ್ಧಿ ಹಿನ್ನೆಲೆಯಲ್ಲಿ ಇದು ಅನಿವಾರ್ಯವೂ ಆಗಿದೆ" ಎಂದು ಯಲಹಂಕ- ಹಿಂದೂಪುರ ರಾಜ್ಯ ಹೆದ್ದಾರಿಯ ಟೋಲ್‌ ಉಸ್ತುವಾರಿ ವಿನೋದ್‌ ʼದ ಫೆಡರಲ್‌ ಕರ್ನಾಟಕʼಕ್ಕೆ ತಿಳಿಸಿದರು. 


ಬಿಬಿಎಂಪಿಯಿಂದ ದುಪ್ಪಟ್ಟು ತೆರಿಗೆ

ಬಿಬಿಎಂಪಿ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಕಟ್ಟದ ಮಾಲೀಕರಿಗೆ ಏ.1 ರಂದು ದೊಡ್ಡ ಶಾಕ್ ಕಾದಿದೆ. ಆಸ್ತಿ ತೆರಿಗೆ ಪಾವತಿಗೆ ನೀಡಿದ್ದ ಗಡುವು ಮುಗಿದಿರುವ ಹಿನ್ನೆಲೆಯಲ್ಲಿ ಏ.1 ರಿಂದ ದುಪ್ಪಟ್ಟು ಆಸ್ತಿ ತೆರಿಗೆ ವಸೂಲಿ ಮಾಡಲು ಬಿಬಿಎಂಪಿ ನಿರ್ಧರಿಸಿದೆ. ಜೊತೆಗೆ ವಿಳಂಬ ಪಾವತಿಗೆ ಶೇ 9 ರಷ್ಟು ಬಡ್ಡಿಯನ್ನೂ ವಿಧಿಸಲಿದೆ.

2022-23 ಕ್ಕಿಂತ ಪೂರ್ವದ ತೆರಿಗೆ ಬಾಕಿಗೆ ಶೇ 9 ರಷ್ಟು ಬಡ್ಡಿ ದರ ವಿಧಿಸಲಾಗುತ್ತದೆ. 2023-24 ಹಾಗೂ 2024-25 ನೇ ಸಾಲಿನ ತೆರಿಗೆ ಬಾಕಿಗೆ ಶೇ 15 ರಷ್ಟು ಬಡ್ಡಿ ವಿಧಿಸಲಾಗುತ್ತದೆ.


ಲಿಫ್ಟ್, ಜನರೇಟರ್, ಟಿಸಿ ಪರಿಶೀಲನಾ ಶುಲ್ಕ ಹೆಚ್ಚಳ

ಇಂಧನ ಇಲಾಖೆಯ ಎಲೆಕ್ಟ್ರಿಕಲ್ ಇನ್ಸ್ಪೆಕ್ಟರೇಟ್ ವಿಭಾಗ ಪ್ರತಿ ವರ್ಷದಂತೆ ಪರಿಶೀಲನಾ ಮತ್ತು ನವೀಕರಣ ಶುಲ್ಕವನ್ನು ಏರಿಕೆ ಮಾಡಿದೆ. ಲಿಫ್ಟ್ ಪರಿಶೀಲನಾ ಹಾಗೂ ನವೀಕರಣ ವೆಚ್ಚ 800 ರಿಂದ 1000 ರೂ. ಇತ್ತು. ಈಗ ಆ ದರವು 5 ಸಾವಿರದಿಂದ 8 ಸಾವಿರ ರೂ.ಗೆ ಏರಿಸಲಾಗುತ್ತಿದೆ.

ಮನೆ, ಕಚೇರಿ, ಫ್ಯಾಕ್ಟರಿಗೆ 25 ಕೆವಿಎ ಟ್ರಾನ್ಸ್ಫಾರ್ಮರ್ ಪರಿಶೀಲನಾ ವೆಚ್ಚವನ್ನು 1300 ರೂ.ನಿಂದ 1500 ರೂ. ಇತ್ತು. ಈಗ ಆ ದರವನ್ನು 3 ರಿಂದ 5 ಸಾವಿರ ರೂ.ಗೆ ಏರಿಕೆ ಮಾಡಲು ತೀರ್ಮಾನಿಸಿದೆ.

5 ರಿಂದ 10 ಕೆವಿ ಸಾಮರ್ಥ್ಯದ ಸಣ್ಣ ಜನರೇಟರ್ ಪರಿಶೀಲನೆ ಮತ್ತು ನವೀಕರಣ ಶುಲ್ಕವನ್ನು 2 ಸಾವಿರ ರೂ.ಗಳಿಂದ 5 ರಿಂದ 8 ಸಾವಿರ ರೂ. ಏರಿಕೆ ಮಾಡಲಾಗಿದೆ.

ಹೊಸ ಮನೆ, ಅಪಾರ್ಟ್‌ಮೆಂಟ್‌, ಫ್ಯಾಕ್ಟರಿ ಕಟ್ಟುವವರಿಗೂ, ಈಗಾಗಲೇ ನಿರ್ಮಾಣವಾಗಿರುವ ಅಪಾರ್ಟ್‌ಮೆಂಟ್‌, ಫ್ಯಾಕ್ಟರಿ, ಮನೆ ಮಾಲೀಕರಿಗೂ ಹೊರೆ ಆಗಲಿದೆ.

ದುಬಾರಿಯಾಗಲಿದೆ ಆನ್‌ಲೈನ್‌ ಸೇವೆ

ಪ್ಲಾಟ್ಫಾರಂ ಆಧರಿತ ಗಿಗ್ ಕಾರ್ಮಿಕರ ಬದುಕಿನ ನಿಧಿ ಮತ್ತು ಕಲ್ಯಾಣ ಶುಲ್ಕ ಮಸೂದೆ ಜಾರಿಯಾಗಿದೆ. ಪ್ಲಾಟ್‌ಫಾರಂ ಕಾರ್ಮಿಕರ ಆಧರಿತವಾಗಿ ನಡೆಯುವ ಅರ್ಹ ಆನ್-ಲೈನ್ ವಹಿವಾಟುಗಳ ಮೇಲೆ ಸೆಸ್ ವಿಧಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದ್ದು, ಏ.1 ರಿಂದಲೇ ಗಿಗ್ ಕಾರ್ಮಿಕರ ಸಂಬಂಧಿತ ಆನ್‌ಲೈನ್‌ ಸೇವೆಗಳು ದುಬಾರಿಯಾಗಲಿವೆ.

ಇದರಿಂದ ಆಪ್ ಆಧಾರಿತ ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ಕಾರ್ಮಿಕರಿಗೆ ಅನುಕೂಲ ಆಗಲಿದೆ. ಆದರೆ, ಗ್ರಾಹಕರಿಗೆ ಹೊರೆಯಾಗಿ ಪರಿಣಮಿಸಲಿದೆ. ನೂತನವಾಗಿ ನಿರ್ಮಿಸುವ ಬಹು ಮಹಡಿ ಕಟ್ಟಡಗಳಿಂದ ಹೆಚ್ಚುವರಿ ತೆರಿಗೆ ವಿಧಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.

ಕಟ್ಟಡ ಮಾಲೀಕರಿಗೂ ಸೆಸ್ ಭಾರ

ಅಗ್ನಿಶಾಮಕ ಇಲಾಖೆಯ ಕಾರ್ಯಕ್ಷಮತೆ ಹೆಚ್ಚಿಸುವ ಸಲುವಾಗಿ ರಾಜ್ಯ ಸರ್ಕಾರ ಜಾರಿಗೆ ತಂದಿರುವ “ದ ಕರ್ನಾಟಕ ಫೈರ್ ಫೋರ್ಸ್ ಆಕ್ಟ್ 1964”ರ ಅನ್ವಯ ರಾಜ್ಯದಲ್ಲಿ ಹೊಸದಾಗಿ ನಿರ್ಮಾಣವಾಗುವ ಬಹುಮಹಡಿ ಕಟ್ಟಡಗಳಿಗೆ ಶೇ 1ರ ದರದಲ್ಲಿ 'ಫೈರ್ ಸೆಸ್'(ಅಗ್ನಿ ಸುಂಕ) ವಿಧಿಸಲು ತೀರ್ಮಾನಿಸಲಾಗಿದೆ. ಇದು ಕೂಡ ಏ.1 ರಿಂದ ಜಾರಿಗೆ ಬರಲಿದೆ.

ಕೇಂದ್ರದಿಂದಲೂ ಬೆಲೆ ಏರಿಕೆ ಹೊರೆ

ಕೇಂದ್ರ ಸರ್ಕಾರ ಮಂಡಿಸಿದ ಆರ್ಥಿಕ ಆಯವ್ಯಯದಲ್ಲಿ ಹಲವು ವಸ್ತುಗಳ ಬೆಲೆ ಏರಿಕೆಯಾಗಿದ್ದು, ಇದರ ಬಿಸಿ ಜನಸಾಮಾನ್ಯರಿಗೆ ತಟ್ಟಲಿದೆ. ಫ್ಲ್ಯಾಟ್ ಪ್ಯಾನೆಲ್ ಡಿಸ್ ಪ್ಲೇ ಮೇಲೆ ತೆರಿಗೆ ಹೆಚ್ಚಳ, ಹೆಣೆದ ಬಟ್ಟೆಗಳ ಮೇಲೆ ತೆರಿಗೆ ಹೆಚ್ಚಳ, ಅಬಕಾರಿ ಮೇಲಿನ ಸುಂಕ ಏರಿಕೆ ಬಿಸಿ ನೇರವಾಗಿ ಗ್ರಾಹಕರಿಗೆ ತಟ್ಟಲಿದೆ.

ಇದಲ್ಲದೇ ತಂಬಾಕು ಪದಾರ್ಥಗಳು, ಟೆಲಿಕಾಂ ಉಪಕರಣಗಳ ಮೇಲಿನ ಸುಂಕ ಹೆಚ್ಚಳ, ಚಿನ್ನ ಮತ್ತು ಬೆಳ್ಳಿಯ ಮೇಲಿನ ಆಮದು ಸುಂಕ ಹೆಚ್ಚಳವೂ ಜನರಿಗೆ ಹೊರೆಯಾಗಲಿದೆ.

ಈ ಹಿಂದಿನ ದರ ಏರಿಕೆಗಳು

ಬಸ್ ಪ್ರಯಾಣ ದರ: ರಾಜ್ಯ ಸರ್ಕಾರ ಇತ್ತೀಚೆಗೆ ಶೇ 15 ರಷ್ಟು ಬಸ್ ಪ್ರಯಾಣ ದರ ಏರಿಕೆ ಮಾಡುವ ಮೂಲಕ ಜನ ಸಾಮಾನ್ಯರ ಮೇಲೆ ಬರೆ ಎಳೆದಿತ್ತು. ಹೊಸ ವರ್ಷದ ಸಂಭ್ರಮದಲ್ಲಿದ್ದ ಜನರಿಗೆ ನಾಲ್ಕೂ ಸಾರಿಗೆ ನಿಗಮಗಳ ಬಸ್ ಪ್ರಯಾಣ ದರ ಏರಿಕೆ ಮಾಡಲಾಗಿತ್ತು.

ಮೆಟ್ರೋ ಪ್ರಯಾಣ ದರ: ಬಸ್ ದರ ಏರಿಕೆಯ ಬೆನ್ನಲ್ಲೇ ನಮ್ಮ ಮೆಟ್ರೋ ದರವನ್ನು ಬಿಎಂಆರ್ಸಿಎಲ್ ಶೇ 100 ರಷ್ಟು ಏರಿಕೆ ಮಾಡಿತ್ತು. ಮೆಟ್ರೋ ಪ್ರಯಾಣ ದರ ಏರಿಕೆಗೆ ಎಲ್ಲೆಡೆ ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಸೀಮಿತ ಸ್ಟೇಜ್‌ಗಳಲ್ಲಿ ಶೇ 10 ರಷ್ಟು ದರ ಪರಿಷ್ಕರಣೆ ಮಾಡಲಾಗಿತ್ತು. ಆದರೆ, ಇದರಿಂದ ಪ್ರಯಾಣಿಕರಿಗೆ ಯಾವುದೇ ಅನುಕೂಲ ಆಗಿರಲಿಲ್ಲ.

ನೀರಿನ ದರ ಏರಿಕೆಗೂ ಸಿದ್ಧತೆ

ರಾಜ್ಯದಲ್ಲಿ ಪ್ರತಿಯೊಂದು ವಸ್ತುಗಳ ಬೆಲೆ ಗಗನಕ್ಕೇರಿದ ಬೆನ್ನಲ್ಲೇ ನೀರಿನ ದರ ಏರಿಕೆಗೂ ರಾಜ್ಯ ಸರ್ಕಾರ ಮುಂದಾಗಿದೆ. 2014 ರಿಂದ ಬೆಂಗಳೂರಿನಲ್ಲಿ ನೀರಿನ ದರ ಪರಿಷ್ಕರಿಸಿಲ್ಲ ಎಂಬುದನ್ನೇ ನೆಪವಾಗಿರಿಸಿಕೊಂಡು ಬೆಂಗಳೂರು ಜಲ ಮಂಡಳಿ ಲೀಟರ್ಗೆ 7 ರಿಂದ 8 ಪೈಸೆ ದರ ಏರಿಕೆಗೆ ಪ್ರಸ್ತಾವನೆ ಸಲ್ಲಿಸಿದೆ. ಆದರೆ, ರಾಜ್ಯ ಸರ್ಕಾರ ಪ್ರತಿ ಲೀಟರ್‌ಗೆ ಕೇವಲ ಒಂದು ಪೈಸೆ ಹೆಚ್ಚಳಕ್ಕೆ ಚಿಂತನೆ ನಡೆಸುತ್ತಿದೆ. ಅದು ಇನ್ನಷ್ಟೇ ಘೋಷಣೆಯಾಗಬೇಕಿದೆ.

ವೃತ್ತಿಪರ ತೆರಿಗೆ ಹೆಚ್ಚಳ

ರಾಜ್ಯ ಸರ್ಕಾರ ಬಜೆಟ್‌ನಲ್ಲಿ ವೃತ್ತಿಪರ ತೆರಿಗೆಯನ್ನು 200ರೂ. ಗಳಿಂದ 300 ರೂ.ಗೆ ಹೆಚ್ಚಿಸಿದ್ದು, ಏ.1ರಿಂದ ಜಾರಿಯಾಗಲಿದೆ. ಮಾಸಿಕ 15 ಸಾವಿರಕ್ಕಿಂತ ಹೆಚ್ಚಿ ಆದಾಯ ಗಳಿಸುವ ವೃತ್ತಿಪರರಿಗೆ ಇದು ಅನ್ವಯವಾಗಲಿದೆ.

15 ಸಾವಿರ ರೂ.ಗಿಂತ ಹೆಚ್ಚು ಆದಾಯ ಗಳಿಸುವವರು ಪ್ರತಿ ತಿಂಗಳು 300ರೂ.ಗಳನ್ನು ವೃತ್ತಿಪರ ತೆರಿಗೆಯನ್ನಾಗಿ ಪಾವತಿಸಬೇಕು. ವಾರ್ಷಿಕ 36,000 ರೂ.ಪಾವತಿಸಬೇಕಾಗುತ್ತದೆ.

ಹೊಸ ವಾಹನ ಖರೀದಿದಾರರಿಗೆ ತೆರಿಗೆ ಭಾರ

2024-25ನೇ ಸಾಲಿನ ಬಜೆಟ್‌ನಲ್ಲಿ ಮೋಟಾರು ವಾಹನ ತೆರಿಗೆ ಹೆಚ್ಚಳ ಕುರಿತು ಪ್ರಸ್ತಾಪಿಸಿದ್ದು, ಇದರಿಂದ 15 ಸಾವಿರ ಕೋಟಿ ಸಂಗ್ರಹಿಸುವ ಗುರಿ ಸರ್ಕಾರದ ಮುಂದಿದೆ. ಹೊಸ ವಾಹನ ಖರೀದಿಸುವವರಿಗೆ ಮೋಟಾರು ವಾಹನ ತೆರಿಗೆ ಹೆಚ್ಚಲಿದೆ. ಇದರಿಂದ ವಾಹನದ ಬೆಲೆಯೂ ದುಬಾರಿಯಾಗಲಿದೆ.

ಈ ಹಿಂದಿನ ವರ್ಷ ಮೋಟಾರು ವಾಹನ ತೆರಿಗೆ 12,500 ಕೋಟಿ ಇತ್ತು. ಆದರೆ, ಎಷ್ಟು ಪ್ರಮಾಣದಲ್ಲಿ ತೆರಿಗೆ ಹೆಚ್ಚಿಸಲಾಗುತ್ತದೆ ಎಂಬ ಪ್ರಸ್ತಾಪವನ್ನೂ ಮಾಡಿಲ್ಲ.

Tags:    

Similar News