ಎಂಎಲ್‌ಸಿಗಳಿಗೆ ಶಾಸಕರಷ್ಟೇ ಸಮಾನ ಗೌರವ, ಅನುದಾನ ಕೊಡಿ; ಟಿ.ಎ.ಶರವಣ ಮನವಿ
ವಿಧಾನಸಭಾ ಶಾಸಕರ ಕಷ್ಟ ಸುಖಗಳನ್ನು ಕೇಳುವಂತೆಯೇ, ವಿಧಾನ ಪರಿಷತ್ ಸದಸ್ಯರು ಕೂಡ ಕರ್ನಾಟಕದ ಚುನಾಯಿತ ಪ್ರತಿನಿಧಿಗಳು ಎಂದು ಟಿ.ಎ. ಶರವಣ ಪ್ರತಿಪಾದಿಸಿದ್ದಾರೆ.;
ರಾಜ್ಯದಲ್ಲಿ ಪರಿಷತ್ ಸದಸ್ಯರಿಗೆ ವಿಧಾನಸಭೆ ಶಾಸಕರಂತೆಯೇ ಸಮಾನ ಗೌರವ ಮತ್ತು ಅನುದಾನ ನೀಡಬೇಕು ಎಂದು ಜೆಡಿಎಸ್ ಪಕ್ಷದ ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಆಗ್ರಹಿಸಿದ್ದಾರೆ.
ಬೆಂಗಳೂರಿನಲ್ಲಿ ಮಂಗಳವಾರ ಕಾಂಗ್ರೆಸ್ ಪಕ್ಷದ ವಿಧಾನ ಪರಿಷತ್ ಶಾಸಕರ ಸಭೆ ಹಿನ್ನೆಲೆಯಲ್ಲಿ ಶರವಣ ಅವರು ಈ ಬೇಡಿಕೆ ಮುಂದಿಟ್ಟಿದ್ದಾರೆ. ಮುಖ್ಯಮಂತ್ರಿಗಳು ಕಾಂಗ್ರೆಸ್ ಪಕ್ಷದ ಪರಿಷತ್ ಸದಸ್ಯರ ಸಭೆ ನಡೆಸುತ್ತಿರುವ ಬಗ್ಗೆ ಮಾಧ್ಯಮಗಳ ಮೂಲಕ ತಿಳಿದಿದೆ. ಇದು ನಿಜಕ್ಕೂ ಒಂದು ಉತ್ತಮ ಸಂಪ್ರದಾಯ, ಆದರೆ, ಶಾಸಕರಷ್ಟೇ ಪರಿಷತ್ ಸದಸ್ಯರಿಗೂ ಸರಿಯಾದ ಸ್ಥಾನಮಾನ, ಅನುದಾನ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ವಿಧಾನಸಭೆ ಶಾಸಕರ ಕಷ್ಟ ಸುಖಗಳನ್ನು ಕೇಳುವಂತೆಯೇ ನಾವು ಕೂಡ ಚುನಾಯಿತ ಪ್ರತಿನಿಧಿಗಳು. ಅನುದಾನ ಹಂಚಿಕೆಯಲ್ಲಿ ಶೇ.50 ರಷ್ಟಾದರೂ ಕೊಡಬೇಕು. ಬಿಜೆಪಿ, ಕಾಂಗ್ರೆಸ್ ಅಥವಾ ಜೆಡಿಎಸ್ ಯಾವುದೇ ಪಕ್ಷದ ಸದಸ್ಯರಾಗಿದ್ದರೂ ಅವರ ಕಷ್ಟ ಸುಖಗಳನ್ನು ಆಲಿಸಬೇಕು. ಶಾಸಕರಿಗೆ ನೀಡುವ ಅನುದಾನದಷ್ಟು ನೀಡಲು ಆಗದಿದ್ದರೂ ಕನಿಷ್ಠ ಶೇ 50ರಷ್ಟು ಅನುದಾನವನ್ನಾದರೂ ನೀಡಬೇಕು ಎಂದು ಮನವಿ ಮಾಡಿದ್ದಾರೆ.
ಶಿಕ್ಷಕರ, ಪದವೀಧರರ, ಸ್ಥಳೀಯ ಸಂಸ್ಥೆಗಳ ಕ್ಷೇತ್ರಗಳಿರಲಿ ಅಥವಾ ನಾಮನಿರ್ದೇಶಿತ ಸದಸ್ಯರಿರಲಿ, 75 ಮಂದಿ ವಿಧಾನ ಪರಿಷತ್ ಸದಸ್ಯರ ಬಳಿಗೆ ಬಂದು ಚರ್ಚಿಸುತ್ತಾರೆ. ಹೀಗಾಗಿ ವಿಧಾನಪರಿಷತ್ ಸದಸ್ಯರು ಕೂಡ ಅಭಿವೃದ್ಧಿಗೆ ಹಣವನ್ನು ವೆಚ್ಚ ಮಾಡಬೇಕಾಗುತ್ತದೆ ಎಂದು ತಿಳಿಸಿದ್ದಾರೆ.
ಸಮಿತಿಗಳಲ್ಲಿ ಸ್ಥಾನಮಾನ
ಬಗರ್‌ಹುಕುಂ ಸಮಿತಿ ಸೇರಿದಂತೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ರಚಿಸುವ ವಿವಿಧ ಸರ್ಕಾರಿ ಸಮಿತಿಗಳಲ್ಲಿ ಶಾಸಕರನ್ನು ಅಧ್ಯಕ್ಷರನ್ನಾಗಿ ಮಾಡುವಂತೆ ವಿಧಾನ ಪರಿಷತ್ ಸದಸ್ಯರಿಗೂ ಅಧ್ಯಕ್ಷರು, ಉಪಾಧ್ಯಕ್ಷರು ಸೇರಿದಂತೆ ಸೂಕ್ತ ಜವಾಬ್ದಾರಿಗಳನ್ನು ನೀಡಬೇಕು.ಈ ವಿಷಯಗಳ ಬಗ್ಗೆಯೂ ಮುಖ್ಯಮಂತ್ರಿ ಚರ್ಚಿಸಬೇಕು ಎಂದು ಶರವಣ ಆಗ್ರಹಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನ ಪರಿಷತ್ ಸದಸ್ಯರಿಗೂ ಅನುದಾನ ನೀಡುವ ಮತ್ತು ಸಮಿತಿಗಳಲ್ಲಿ ಸ್ಥಾನ ನೀಡುವ ಸಂಪ್ರದಾಯವನ್ನು ಜಾರಿಗೆ ತರಬೇಕು ಎಂದು ಮನವಿ ಮಾಡಿದ್ದಾರೆ.