Coastal Tension |ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಕೋಮು ಸಂಘರ್ಷ ತಡೆ ಕಾರ್ಯಪಡೆ ; ಗೃಹ ಸಚಿವ ಡಾ.ಜಿ.ಪರಮೇಶ್ವರ್‌

ಮಂಗಳೂರು ಹಾಗೂ ಉಡುಪಿ ಜಿಲ್ಲೆಯಲ್ಲಿ ಆಗಿಂದಾಗ್ಗೆ ಕೋಮು ಸಾಮರಸ್ಯ ಕದಡುವ ಘಟನೆಗಳು ನಡೆಯುತ್ತಿದ್ದು, ಅಶಾಂತಿ ಸೃಷ್ಟಿಯಾಗಿದೆ. ಇಂತಹ ಘಟನೆಗಳಿಗೆ ಕಡಿವಾಣ ಹಾಕಲು ಕೋಮುವಿರೋಧಿ ಕಾರ್ಯಪಡೆ ಅಗತ್ಯವಾಗಿದೆ ಎಂದು ಪರಮೇಶ್ವರ್‌ ಹೇಳಿದ್ದಾರೆ.;

Update: 2025-05-03 11:19 GMT

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಕೋಮು ಸಂಘರ್ಷ ತಡೆಗಟ್ಟುವ ನಿಟ್ಟಿನಲ್ಲಿ ಎಎನ್‍ಎಫ್‍ ಮಾದರಿಯಲ್ಲಿ ಕೋಮು ಸಂಘರ್ಷ ನಿಗ್ರಹ ಕಾರ್ಯಪಡೆ (Anti Communal Task Force) ರಚಿಸಲಾಗುವುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಹೇಳಿದರು.

ಮಂಗಳೂರು ಸುತ್ತಮುತ್ತ ಸರಣಿ ಕೋಮು ಹತ್ಯೆಗಳು, ಹಲ್ಲೆಗಳು ನಡೆದು ಪ್ರಕ್ಷುಬ್ದತೆ ನೆಲೆಸಿರುವ ಪರಿಸ್ಥಿತಿ ಅವಲೋಕನಕ್ಕೆ ಬಂದಿದ್ದ ಅವರು ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.

‘ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮ್ತೆ ಸೌಹಾರ್ದತೆ ನೆಲೆಸಬೇಕು. ಇಲ್ಲಿಗೆ ಹೂಡಿಕೆದಾರರು ಬರಬೇಕು. ಮಕ್ಕಳು ಶಿಕ್ಷಣ ಪಡೆಯಲು ಬರಬೇಕು. ಅದಕ್ಕಾಗಿ ನಿರ್ಭೀತ ವಾತಾವರಣ ಕಲ್ಪಿಸುವ ದೃಷ್ಟಿಯಲ್ಲಿ ಈ ಕಾರ್ಯಪಡೆ ಸ್ಥಾಪಿಸಲಾಗುವುದು’ ಎಂದರು.

‘ಪೊಲೀಸ್‍ ಇಲಾಖೆಯ ಎಡಿಜಿಪಿ ಮಟ್ಟದ ಅಧಿಕಾರಿಗಳ ನೇತೃತ್ವದಲ್ಲಿ ಈ ಕಾರ್ಯಪಡೆ ಕೆಲಸ ಮಾಡಲಿದೆ. ಹಾಲಿ ಇರುವ ಪೊಲೀಸ್‍ ವ್ಯವಸ್ಥೆಯಿಂದಲೇ ಈ ವಿಭಾಗವನ್ನು ರಚಿಸಲಾಗುತ್ತದೆ. ನಕ್ಸಲ್‍ ಚಟುವಟಿಕೆಗಳು ಇಳಿಮುಖವಾಗಿರುವ ಕಾರಣ ಅಲ್ಲಿನ ಎಎನ್‍ಎಫ್‍ ಸಿಬ್ಬಂದಿಯನ್ನು ಕಡಿತಗೊಳಿಸಿ ಈ ಕಾರ್ಯಪಡೆಗೆ ಬಳಸಲಾಗುವುದು’ ಎಂದರು.

‘ಜಿಲ್ಲೆಯಲ್ಲಿ ಪ್ರಚೋದನಕಾರಿ ಭಾಷಣ ಮಾಡುವವರನ್ನು ನಿಯಂತ್ರಿಸಬೇಕಿದೆ. ಕೋಮು ಸಂಘರ್ಷಕ್ಕೆ ಕಾರಣವಾಗಬಹುದಾದ ಎಲ್ಲ ಸನ್ನಿವೇಶಗಳ ಮೇಲೆ ನಿಗಾ ವಹಿಸಬೇಕಾಗುತ್ತದೆ. ಇಂಥಹ ಸಂಘರ್ಷಗಳು ಉಂಟಾಗುವುದನ್ನು ಮೂಲದಲ್ಲೇ ಚಿವುಟಿಹಾಕಲು ಇಂಥದ್ದೊಂದು ಪಡೆಯ ಅಗತ್ಯವಿದೆ’ ಎಂದು ಅವರು ಅಭಿಪ್ರಾಯಪಟ್ಟರು.

‘ಮಂಗಳೂರಿನಲ್ಲಿ ನಡೆದ ಸರಣಿ ಹತ್ಯೆಗಳ ಹಿಂದೆ ಕಾಣದ ಶಕ್ತಿಗಳು ಅಡಗಿರುವ ಸಾಧ್ಯತೆ ಇದೆ. ಯಾರೇ ಇದ್ದರೂ ಅವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲಾಗುವುದು’ ಎಂದರು.

ಪತ್ರಿಕಾಗೋಷ್ಠಿಗೂ ಮುನ್ನ ನಗರದ ಪ್ರವಾಸಿ ಮಂದಿರದಲ್ಲಿ ಕಾಂಗ್ರೆಸ್‍ ಹಾಗೂ ಮುಸ್ಲಿಂ ಮುಖಂಡರ ಸಭೆಯಲ್ಲಿ ಅವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‍ ಗುಂಡೂರಾವ್‍ ಭಾಗವಹಿಸಿದ್ದರು. ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಆತಂಕಕಾರಿ ಘಟನೆಗಳ ಬಗೆಗೆ ಸಭೆಯಲ್ಲಿ ಕಳವಳ ವ್ಯಕ್ತವಾಯಿತು. ಕೆಲಹೊತ್ತು ಬಿರುಸಿನ ಚರ್ಚೆಗಳೂ ನಡೆದವು.

ಸುಹಾಸ್‍ ಹತ್ಯೆ: 8 ಆರೋಪಿಗಳ ಸೆರೆ

ಬಜ್ಪೆ ಸಮೀಪ ಕಿನ್ನಿಪದವಿನಲ್ಲಿ ನಡೆದ ರೌಡಿ ಶೀಟರ್‍ ಸುಹಾಸ್ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 8 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

2023ರಲ್ಲಿ ಅಬ್ದುಲ್ ಸಫ್ವಾನ್ ಮೇಲೆ ಮಾರಣಾಂತಿಕ ಹಲ್ಲೆ ಆಗಿತ್ತು. ಸಫ್ವಾನ್​​ಗೆ ಸುಹಾಸ್ ಶೆಟ್ಟಿ ತನ್ನನ್ನು ಕೊಲೆ ಮಾಡುವ ಆತಂಕ ಇತ್ತು. ಹಾಗಾಗಿ ಸುಹಾಸ್ ಶೆಟ್ಟಿಯನ್ನು ಕೊಲೆ ಮಾಡಲು ತೀರ್ಮಾನಿಸಿದ್ದರು. ಅದಕ್ಕಾಗಿ ಫಾಜಿಲ್​ ತಮ್ಮನನ್ನು ಸಂಪರ್ಕಿಸಿ ಕೊಲೆ ಮಾಡಲು ತೀರ್ಮಾನಿಸಿದ್ದರು ಎಂದು ಆರೋಪಿಗಳು ಬಾಯಿಬಿಟ್ಟಿದ್ದಾರೆ.

ಫಾಸಿಲ್‍ ಹತ್ಯೆಗೆ ಇದು ಪ್ರತೀಕಾರದ ಕೊಲೆ ಎಂದು ಹೇಳಲಾಗದು. ಕೊಲೆಯ ಹಿಂದೆ ಇರಬಹುದಾದ ಇತರ ಕಾರಣಗಳ ಬಗ್ಗೆಯೂ ತನಿಖೆ ನಡೆಯುತ್ತಿದೆ ಎಂದು ನಗರದ ಪೊಲೀಸ್‍ ಆಯುಕ್ತ ಅನುಪಮ್‍ ಅಗರ್ ವಾಲ್‍ ಮಾಹಿತಿ ನೀಡಿದರು.

ಸುಹಾಸ್ ಕೊಲೆ ಮಾಡಲು ಸಫ್ವಾನ್​ ತಂಡಕ್ಕೆ ಆದಿಲ್ 5 ಲಕ್ಷ ರೂಪಾಯಿ ನೀಡಿದ್ದ. ನಿಯಾಜ್ ಸ್ನೇಹಿತರಾದ ನಾಗರಾಜ್ ಮತ್ತು ರಂಜಿನ್ ಸಂಪರ್ಕಿಸಿದ್ದರು. ಈ ಇಬ್ಬರು ಸಫ್ವಾನ್ ಮನೆಯಲ್ಲಿ ಎರಡು ದಿನಗಳ ಕಾಲ ವಾಸವಿದ್ದರು. ಮೇ 1ರಂದು ಸುಹಾಸ್ ಚಲನವಲನ ಗಮನಿಸಿ ಕೊಲೆ ಮಾಡಿದ್ದಾರೆ ಎಂದು ಕಮಿಷನರ್‌ ಮಾಹಿತಿ ನೀಡಿದರು.

ಬುರ್ಖಾಧಾರಿ ಮಹಿಳೆ ವಶಕ್ಕೆ

ಸುಹಾಸ್‍ ಕೊಲೆಗೆ ಬುರ್ಖಾಧಾರಿ ಮಹಿಳೆಯೂ ಸೇರಿದ್ದ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪೊಲೀಸ್‍ ಆಯುಕ್ತರು, ‘ ಆ ಮಹಿಳೆಯು ಆರೋಪಿ ನಿಯಾಜ್ ನ ಸಂಬಂಧಿ. ಯಾವುದೋ ಕೆಲಸಕ್ಕೆ ಅವರು ಅಲ್ಲಿ ಬಂದಿದ್ದರು ಎಂದು ಹೇಳಿಕೆ ನೀಡಿದ್ದಾರೆ. ಅವರನ್ನೂ ವಶಕ್ಕೆ ಪಡೆದಿದ್ದೇವೆ ಎಂದರು.

ಆರೋಪಿಗಳಿಂದ ಕೊಲೆಗೆ ಬಳಸಿದ್ದ ಸ್ವಿಫ್ಟ್ ಕಾರು, ಮೀನು ಸಾಗಾಟದ ಮಿನಿ ಟೆಂಪೋ ಮತ್ತು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.

Tags:    

Similar News