Sowjanya Case | ಸೌಜನ್ಯ ಪ್ರಕರಣದ ಸಾಕ್ಷಿದಾರರು ಸಾವನ್ನಪ್ಪಿದರೆ? ಮತ್ತೊಂದು ಸಮೀರ್ ವಿಡಿಯೋ ರಿಲೀಸ್
ಸಮೀರ್ ಎಂಡಿ ಅವರು ತನ್ನ ಧೂತ ಯುಟ್ಯೂಬ್ ಚಾನೆಲ್‌ನಲ್ಲಿ ಸೌಜನ್ಯ ಪಾರ್ಟ್ -2 ವಿಡಿಯೋ ಬಿಡುಗಡೆ ಮಾಡಿದ್ದು, ಈ ವಿಡಿಯೋದಲ್ಲಿ ಸೌಜನ್ಯ ಅತ್ಯಾಚಾರ ಪ್ರಕರಣದ ಸಾಕ್ಷಿ ನಾಶ ಹೇಗೆ ನಡೆಸಲಾಯಿತು ಎಂಬುವುದನ್ನು ವಿವರಿಸಿದ್ದಾರೆ.;
ಸೌಜನ್ಯ ಪ್ರಕರಣದ ಕುರಿತಂತೆ ಧೂತ ಸಮೀರ್ ಧೂತ ಮತ್ತೊಂದು ವಿಡಿಯೋ ರಿಲೀಸ್ ಮಾಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದಲ್ಲಿ ಹದಿನಾಲ್ಕು ವರ್ಷಗಳ ಹಿಂದೆ ನಡೆದ ಕುಮಾರಿ ಸೌಜನ್ಯ ಅವರ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಸಂಬಂಧ ಯುಟ್ಯೂಬರ್ ಎಂ.ಡಿ. ಸಮೀರ್ ಮಾಡಿದ್ದ ವಿಡಿಯೋವೊಂದು ರಾತ್ರಿ ಬೆಳಗಾಗುವುದಲ್ಲಿ ವೈರಲ್ ಆಗಿ ಮಿಲಿಯನ್ ಗಟ್ಟಲೆ ನೋಡುಗರನ್ನು ತಲುಪಿತ್ತು. ಈಗ ಎರಡನೇ ಕಂತಿನ ವೀಡಿಯೋ ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿದೆ.
ಸಮೀರ್ ಅವರ ಮೊದಲ ವೀಡಿಯೋ ವಿವಾದವನ್ನು ಸೃಷ್ಟಿಸಿ ಪರ ವಿರೋಧ ಚರ್ಚೆಗೂ ಕಾರಣವಾಗಿತ್ತು. ಸಮೀರ್ ವಿರುದ್ಧ ಎಫ್ ಐ ಆರ್ ಕೂಡ ದಾಖಲಾಗಿತ್ತು. ಆದರೆ ಈ ವಿವಾದಗಳ ನಡುವೆಯೇ ಸಮೀರ್ ʻಸೌಜನ್ಯ ಪಾರ್ಟ್ -2' ವಿಡಿಯೋ ರಿಲೀಸ್ ಮಾಡಿದ್ದಾರೆ.
ಸಮೀರ್ ಎಂಡಿ ಅವರು ತನ್ನ ಧೂತ ಯುಟ್ಯೂಬ್ ಚಾನೆಲ್‌ನಲ್ಲಿ ಸೌಜನ್ಯ ಪಾರ್ಟ್ -2 ವಿಡಿಯೋ ಬಿಡುಗಡೆ ಮಾಡಿದ್ದು, ಈ ವಿಡಿಯೋದಲ್ಲಿ ಸೌಜನ್ಯ ಅತ್ಯಾಚಾರ ಪ್ರಕರಣದ ಸಾಕ್ಷಿ ನಾಶ ಹೇಗೆ ನಡೆಸಲಾಯಿತು? ಯಾರೆಲ್ಲ ಈ ಕೇಸ್‌ಗೆ ಸಾಕ್ಷಿಯಾಗಿದ್ದರು? ಅವರೆಲ್ಲ ಏನಾದರು? ಎಂಬುದನ್ನು ವಿವರಿಸಿದ್ದಾರೆ ಎನ್ನಲಾಗಿದೆ.
ಅಕ್ಟೋಬರ್ 9, 2012 ಸೌಜನ್ಯ ಕಾಣೆಯಾದ ದಿನದಿಂದಲೇ ಊರಿನ ಸುಮಾರು 200 ರಿಂದ 300 ಮಂದಿ ಸೇರಿಕೊಂಡು ಸೌಜನ್ಯಳನ್ನು ಹುಡುಕುತ್ತಾರೆ. ಅಲ್ಲಿಂದ ಒಂದೊಂದು ಸಾಕ್ಷಿ ಹೇಗೆ ನಾಶ ಆಯ್ತು? ಅಂದು ಈ ಕೇಸ್ ತನಿಖೆ ಮಾಡುತ್ತಿದ್ದ ಪೊಲೀಸರು ಸಾಕ್ಷಿಗಳನ್ನು ಹೇಗೆ ನಾಶ ಮಾಡಿದರು? ಸಾಕ್ಷಿಗಳನ್ನು ಹೇಗೆ ಸೃಷ್ಟಿಸಿದ್ದರು? ಈ ಕೇಸ್ ಅಂದು ದಾರಿ ತಪ್ಪಿದ್ದು ಹೇಗೆ? ಈ ಪ್ರಕರಣದಲ್ಲಿ ಸಾಕ್ಷಿಯಾಗಿದ್ದವರು ಒಬ್ಬೊಬ್ಬರೇ ಹೇಗೆ ಸತ್ತರು? ಎನ್ನುವುದನ್ನು ಸಮೀರ್ ಎಂಡಿ ಎರಡನೇ ವಿಡಿಯೋದಲ್ಲಿ ವಿವರಿಸಿದ್ದಾರೆ ಎಂದು ಹೇಳಲಾಗಿದೆ.
ಸೌಜನ್ಯ ಪ್ರಕರಣದಲ್ಲಿ ಸಂತೋಷ್ ರಾವ್ ಅವರನ್ನು ಹಿಡಿದುಕೊಟ್ಟಿದ್ದು ರವಿ ಪೂಜಾರಿ ಎಂಬಾತ. ಆದರೆ ಸೌಜನ್ಯ ಪ್ರಕರಣ ಯಾವಾಗ ಸಿಬಿಐಗೆ ವರ್ಗಾವಣೆ ಆಗುತ್ತದೆಯೇ ಆಗ ರವಿ ಪೂಜಾರಿ ನೇಣು ಬಿಗಿದು ನಿಗೂಢ ಸಾವನ್ನಪ್ಪುತ್ತಾರೆ. ಆರೋಪಿಗಳು ಸೌಜನ್ಯ ಜೊತೆ ಫಾರ್ಮ್ ಹೌಸ್‌ನಲ್ಲಿ ಇರುವುದನ್ನು ಅಲ್ಲೇ ಕೆಲಸ ಮಾಡುತ್ತಿದ್ದ ವಾರಿಜಾ ಎಂಬುವವರು ನೋಡಿದ್ದರು. ಅವರ ಮೃತದೇಹ ಕೂಡ ಫಾರ್ಮ್ ಹೌಸ್‌ನ ಬಾವಿಯಲ್ಲಿ ಸಿಗುತ್ತದೆ. ಹಾಗೇ ಗೋಪಾಲ ಕೃಷ್ಣ ಸ್ಲೋ ಪಾಯಿಸನ್‌ನಿಂದ ಸತ್ತಿದ್ದು, ಸೌಜನ್ಯಳನ್ನು ಕಿಡಿಗೇಡಿಗಳಿಂದ ಬಿಡಿಸುವುದಕ್ಕೆ ಪ್ರಯತ್ನ ಪಟ್ಟಿದ್ದ ಪ್ರಶಾಂತ್ ಕೂಡ ನಿಗೂಢವಾಗಿ ಸಾವನ್ನಪ್ಪುತ್ತಾರೆ. ಸೌಜನ್ಯ ಅಪಹರಣದ ಕಂಡಿದ್ದ ದಿನೇಶ್ ಗೌಡ, ಹೇಳಿಕೆ ಕೊಟ್ಟಿದ್ದ ಹರೀಶ್ ಮಡಿವಾಳ ಕೂಡ ಅಪಘಾತದಲ್ಲಿ ಸಾವನ್ನಪ್ಪಿ ಸಾಕ್ಷಿಗಳು ಹೇಗೆ ನಾಶವಾದವು, ಪ್ರಕರಣ ಹೇಗೆ ಮುಚ್ಚಿಹೋಯಿತು ಎಂಬುದರ ಬಗ್ಗೆ ಸಮೀರ್ ಎಂಡಿ ತಮ್ಮ ವಿಡಿಯೋದಲ್ಲಿ ತಿಳಿಸಿದ್ದಾರೆ. ಈ ವಿಡಿಯೋ ಕೂಡ ಮೊದಲ ವಿಡಿಯೋದಂತೆ ಅಧಿಕ ವೀಕ್ಷಣೆ ಕಾಣುತ್ತಿವೆ.
ವಿಡಿಯೋ ಮೂಲಕ ಮತ್ತೆ ಮುನ್ನಲೆಗೆ ಬಂದಿದ್ದ ಪ್ರಕರಣ
ಸೌಜನ್ಯಳ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಧೂತ: ಸಮೀರ್ ಎಂಡಿ ಎಂಬ ಯೂಟ್ಯೂಬ್ ಚಾನೆಲ್‌ನಲ್ಲಿ ವೀಡಿಯೊ ಮಾಡಿದ್ದರು. ಇದು 39 ನಿಮಿಷ 8 ಸೆಕೆಂಡುಗಳ ವಿಡಿಯೋ. ಈ ವೀಡಿಯೊ ಮೊದಲ ನಾಲ್ಕು ದಿನಗಳಲ್ಲಿ ಹೆಚ್ಚಿನ ಸಂಖ್ಯೆಯ ವೀಕ್ಷಣೆಗಳನ್ನು ಪಡೆದುಕೊಂಡಿತ್ತು. ಮಿಲಿಯನ್‌ಗಟ್ಟಲೆ ವೀಕ್ಷಣೆಗಳನ್ನು ಪಡೆದುಕೊಂಡಿತ್ತು. ಈ ವೀಡಿಯೊವನ್ನು ಈ ಚಾನೆಲ್ ಮಾತ್ರವಲ್ಲ ಇತರ ಚಾನೆಲ್‌ಗಳಲ್ಲಿಯೂ ಮರುಪೋಸ್ಟ್ ಮಾಡಲಾಗಿದ್ದು, ಅಲ್ಲಿ ಇದನ್ನು ಲಕ್ಷಾಂತರ ಬಾರಿ ವೀಕ್ಷಿಸಲಾಗಿದೆ. ಇದಲ್ಲದೆ, ಇನ್‌ಸ್ಟಾಗ್ರಾಮ್, ಫೇಸ್‌ಬುಕ್, ಎಕ್ಸ್ ಮುಂತಾದ ಸಾಮಾಜಿಕ ಮಾದ್ಯಮಗಳಲ್ಲಿ ಈ ವೀಡಿಯೊದ ಕುರಿತು ಬಿಸಿ ಚರ್ಚೆಗಳು ನಡೆಯುತ್ತಿತ್ತು. ಅನೇಕ ಈ ಬಗ್ಗೆ ಪರ ವಿರೋಧಗಳ ಬಗ್ಗೆ ಮಾತನಾಡುತ್ತಾ 14 ವರ್ಷಗಳ ಹಿಂದಿನ ಪ್ರಕರಣವು ಮತ್ತೆ ಸುದ್ದಿಯಲ್ಲಿದೆ. ಇದೀಗ ಮತ್ತೆ ಎರಡನೇ ವಿಡಿಯೋ ಮತ್ತಷ್ಟು ಸುದ್ದಿ ಮಾಡುತ್ತಿದೆ.
ಏನಿದು ಸೌಜನ್ಯ ಪ್ರಕರಣ ?
17 ವರ್ಷದ ಯುವತಿ ಸೌಜನ್ಯ ಅಕ್ಟೋಬರ್ 9, 2012 ರಂದು ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟದ ಬಳಿ ಬಸ್ಸಿನಿಂದ ಇಳಿದು ಮನೆಗೆ ನಡೆದುಕೊಂಡು ಹೋಗುತ್ತಿರುವಾಗ ನಾಪತ್ತೆಯಾಗಿದ್ದಳು. ಈಕೆ ಉಜಿರೆಯ ಎಸ್‌ಡಿಎಂ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದಳು. ಆಕೆಗಾಗಿ ಎಷ್ಟೇ ಹುಡುಕಾಟ ನಡೆಸಿದರೂ ಆಕೆ ಪತ್ತೆಯಾಗಲಿಲ್ಲ. ಆದರೆ ಮರುದಿನ ಅಲ್ಲೇ ಪಕ್ಕದ ಪೊದೆಯಲ್ಲಿ ಆಕೆಯ ಶವ ಅರೆನಗ್ನ ರೀತಿಯಲ್ಲಿ ಪತ್ತೆಯಾಗಿತ್ತು. ಸೌಜನ್ಯಳನ್ನು ಅಪಹರಿಸಿ, ಅತ್ಯಾಚಾರ ಮಾಡಿ, ನಂತರ ಕೊಲೆ ಮಾಡಿ ದುಷ್ಕರ್ಮಿಗಳು ಪೊದೆಯಲ್ಲಿ ಎಸೆದು ಹೋಗಿದ್ದರು. ಈ ಪ್ರಕರಣದಲ್ಲಿ ಪೊಲೀಸರು ಸಂತೋಷ್ ರಾವ್ ಎಂಬಾತನನ್ನು ಬಂಧಿಸಿದ್ದರು. ಜೂನ್ 16, 2023 ರಂದು, ಬೆಂಗಳೂರಿನ ವಿಶೇಷ 50 ನೇ ಹೆಚ್ಚುವರಿ ನಗರ ಮತ್ತು ಸೆಷನ್ಸ್ ನ್ಯಾಯಾಧೀಶರು ಸಂತೋಷ್ ರಾವ್ ಅವರನ್ನು ಖುಲಾಸೆಗೊಳಿಸಿದರು. ಆದರೂ ಸೌಜನ್ಯ ಅತ್ಯಾಚಾರ ಪ್ರಕರಣ ಇನ್ನೂ ಬಗೆಹರಿದಿಲ್ಲ. ಈ ಪ್ರಕರಣದಲ್ಲಿ ಯಾರ ಕೈವಾಡ ಇದೆ ಎಂಬುವುದು ಇಂದಿಗೂ ಯಕ್ಷ ಪ್ರಶ್ನೆಯಾಗಿ ಉಳಿದಿದೆ.