ದೇವೇಗೌಡರ ಕುಟುಂಬಕ್ಕೆ ಮತ್ತೊಂದು ಆಘಾತ: ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಪುತ್ರ ಸೂರಜ್‌ ರೇವಣ್ಣ ಅರೆಸ್ಟ್

ಈ ಹಿಂದೆ ಲೈಂಗಿಕ ಹಗರಣದ ಆರೋಪದಲ್ಲಿ ರೇವಣ್ಣ ಪುತ್ರ ಪ್ರಜ್ವಲ್‌, ಲೈಂಗಿಕ ಹಗರಣದ ಸಂತ್ರಸ್ತೆಯ ಅಪಹರಣ ಪ್ರಕರಣದಲ್ಲಿ ಎಚ್‌.ಡಿ. ರೇವಣ್ಣ ಮತ್ತು ಪತ್ನಿ ಭವಾನಿ ರೇವಣ್ಣ ಅವರ ವಿರುದ್ಧ ಪ್ರಕರಣಗಳು ದಾಖಲಾಗಿವೆ. ಪ್ರಜ್ವಲ್‌ ಬಂಧನವಾಗಿದ್ದರೆ, ರೇವಣ್ಣ ಬಂಧನ ಬಳಿಕ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಭವಾನಿ ರೇವಣ್ಣ ನಿರೀಕ್ಷಣಾ ಜಾಮೀನು ಪಡೆದು ಸದ್ಯಕ್ಕೆ ಬಂಧನ ತಪ್ಪಿಸಿಕೊಂಡಿದ್ದಾರೆ.;

Update: 2024-06-23 05:09 GMT

ಶಾಸಕ ಹೆಚ್‌ಡಿ ರೇವಣ್ಣ ಕುಟುಂಬಕ್ಕೆ ಮತ್ತೊಂದು ಆಘಾತ ಎದುರಾಗಿದ್ದು, ಪ್ರಜ್ವಲ್‌ ರೇವಣ್ಣ ಸಹೋದರ, ಜೆಡಿಎಸ್‌ನ ವಿಧಾನ ಪರಿಷತ್ ಸದಸ್ಯ ಸೂರಜ್‌ ರೇವಣ್ಣ ಅವರನ್ನು ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಪೊಲೀಸರು ಬಂಧಿಸಿದ್ದಾರೆ.

ಶನಿವಾರ ರಾತ್ರಿ ಸೂರಜ್‌ ರೇವಣ್ಣ ಅವರು ತಮ್ಮ ವಿರುದ್ಧ ದಾಖಲಾಗಿದ್ದ ಪ್ರಕರಣದ ವಿಚಾರವಾಗಿ ಹೊಳೆ ನರಸೀಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ವಿಚಾರಣೆಗೆ ಹಾಜರಾಗಿದ್ದರು. ಪ್ರಕರಣದ ಸಂಬಂಧ ಸೂರಜ್‌ ರೇವಣ್ಣ ಅವರನ್ನು ಪೊಲೀಸರು ತೀವ್ರ ವಿಚಾರಣೆಗೆ ಒಳ ಪಡಿಸಿದರು. ಶನಿವಾರ ತಡರಾತ್ರಿ 1:30ರ ವರೆಗೂ ವಿಚಾರಣೆ ನಡೆಯಿತು. ಇಂದು (ಭಾನುವಾರ) ಬೆಳಿಗ್ಗೆ 4 ಗಂಟೆಗೆ ಸೂರಜ್‌ನನ್ನು ತನಿಖಾಧಿಕಾರಿಗಳು ಬಂಧಿಸಿದ್ದಾರೆ.

ಸಂತ್ರಸ್ತ ನೀಡಿದ್ದ ದೂರು ಆಧರಿಸಿ ಹೊಳೆನರಸೀಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 377 (ಅಸ್ವಾಭಾವಿಕ ಅಪರಾಧ), 342 (ತಪ್ಪಾದ ಬಂಧನಕ್ಕೆ ಶಿಕ್ಷೆ ) ಹಾಗೂ 506 (ಬೆದರಿಕೆ) ಅಡಿಯಲ್ಲಿ ಕೇಸ್‌ ದಾಖಲಾಗಿತ್ತು. ಡಿಜಿಪಿ ಕಚೇರಿಯಲ್ಲಿ ದೂರು ನೀಡಿದ್ದ ಸಂತ್ರಸ್ತ ಹಾಸನ ಎಸ್‌ಪಿಗೂ ದೂರಿನ ಪ್ರತಿಯನ್ನು ಇ-ಮೇಲ್ ಮಾಡಿದ್ದರು. ಮೇಲ್ ಆಧರಿಸಿ ಸಂತ್ರಸ್ತನನ್ನು ಕರೆಸಿ ಮಾಹಿತಿ ಪಡೆದ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದರು.

ಶನಿವಾರ ರಾತ್ರಿ ತನ್ನ ವಿರುದ್ಧ ಅಸಹಜ ಲೈಂಗಿಕ ದೌರ್ಜನ್ಯ ಆರೋಪ ಹೊರಿಸಿದ್ದ ಸಂತ್ರನ ವಿರುದ್ಧ ಪ್ರತಿದೂರು ನೀಡಲು ಸಂಜೆ 6 ಗಂಟೆ ವೇಳೆಗೆ ಹಾಸನದ ಸೆನ್‌ ಪೊಲೀಸ್‌ ಠಾಣೆಗೆ ತೆರಳಿದ್ದರು. ಅಲ್ಲಿಯೇ ಅವರನ್ನು ವಶಕ್ಕೆ ಪಡೆದ ಪೊಲೀಸರು ರಾತ್ರಿ ಸುಮಾರು 11:30ರ ವರೆಗೂ ವಿಚಾರಣೆ ನಡೆಸಿದ್ದರು. ಬಳಿಕ ಸೂರಜ್‌ ಜೊತೆಗೆ ನಿಗೂಢ ಸ್ಥಳಕ್ಕೆ ತೆರಳಿದ್ದ ಪೊಲೀಸರು ತಡರಾತ್ರಿ 1:30ರ ವರೆಗೂ ವಿಚಾರಣೆ ಮುಂದುವರಿಸಿದ್ದರು. ಪ್ರಕರಣದ ತನಿಖಾಧಿಕಾರಿ ಆಗಿರುವ ಸಕಲೇಶಪುರ ಡಿವೈಎಸ್‌ಪಿ ಪ್ರಮೋದ್‌ ಕುಮಾರ್‌ ಅವರು ಸೂರಜ್‌ ರೇವಣ್ಣ ಅವರನ್ನ ತೀವ್ರ ವಿಚಾರಣೆಗೆ ಒಳಪಡಿಸಿದ್ದರು.

ಸಂತ್ರಸ್ತನ ದೂರಿನಲ್ಲಿ ಏನಿದೆ?

ʻʻಸೂರಜ್ ರೇವಣ್ಣ ನನಗೆ ಚುನಾವಣೆ ಸಂದರ್ಭದಲ್ಲಿ ಪರಿಚಯವಾಗಿದ್ದರು. ನಾನು ಅವರ ತಮ್ಮ ಪ್ರಜ್ವಲ್ ರೇವಣ್ಣ ಪರ ಕೆಲಸ ಮಾಡಿದ್ದೇನೆ. ಆ ಸಂದರ್ಭದಲ್ಲಿ ನನ್ನ ನಂಬರನ್ನು ಸೂರಜ್ ತೆಗೆದುಕೊಂಡಿದ್ದರು. ಜೂ.14 ರಂದು ಸೂರಜ್ ನನಗೆ ಮೆಸೇಜ್ ಮಾಡಿದ್ದರು. ಮೆಸೇಜ್‍ನಲ್ಲಿ ನನ್ನ ಬಗ್ಗೆ ಎಲ್ಲಾ ಮಾಹಿತಿ ಪಡೆದಿದ್ದರು. ನಂತರ ಜೂ.16 ರಂದು ಹೊಳೆನರಸೀಪುರ ತಾಲೂಕಿನ, ಗನ್ನೀಕಡ ತೋಟಕ್ಕೆ ಸಂಜೆ ಬರಲು ಹೇಳಿದ್ದರು. ನಾನು ಹೋದ ಸಂದರ್ಭ ಮನೆಯಲ್ಲಿ ಒಬ್ಬರೇ ಇದ್ದರು. ನನಗೆ ಇಷ್ಟವಿಲ್ಲದಿದ್ದರೂ ಲೈಂಗಿಕ ಕಿರುಕುಳ ನೀಡಿದ್ದಾರೆ. ಆ ಸಂದರ್ಭ ನನಗೆ ಪುರುಷರನ್ನು ಕಂಡರೆ ಆಸಕ್ತಿ ಮಹಿಳೆಯರನ್ನು ಕಂಡರೆ ಆಸಕ್ತಿ ಇಲ್ಲ ಎಂದು ಹೇಳಿ ನನ್ನ ಮೇಲೆ ದೌರ್ಜನ್ಯ ಎಸಗಿದ್ದಾರೆʼʼ ಎಂದು ದೂರಿನಲ್ಲಿ ತಿಳಿಸಿರುವುದಾಗಿ ತಿಳಿದು ಬಂದಿದೆ.

Tags:    

Similar News