ಮುನಿರತ್ನ ಪ್ರಕರಣ | ಬಿಜೆಪಿ ಶಾಸಕನಿಗೆ ಮತ್ತೊಂದು ಸಂಕಷ್ಟ
2020 ಸೆಪ್ಟೆಂಬರ್ನಿಂದ 2022 ರ ಜುಲೈ 19ರ ಅವಧಿಯಲ್ಲಿ ನಡೆದ ಕಾಮಗಾರಿಗಳಲ್ಲಿ 500 ಕೋಟಿ ರೂಪಾಯಿಗೂ ಅಧಿಕ ಅವ್ಯವಹಾರ ಶಂಕೆ ವ್ಯಕ್ತವಾಗಿದ್ದು, ಈ ಹಿನ್ನೆಲೆಯಲ್ಲಿ ಪಾಲಿಕೆ ಕಂದಾಯ ವಿಭಾಗದ ವಿಶೇಷ ಆಯುಕ್ತರ ನೇತೃತ್ವದಲ್ಲಿ ತನಿಖೆಗೆ ಆದೇಶ ನೀಡಲಾಗಿದೆ.;
ಅತ್ಯಾಚಾರ ಆರೋಪದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಬಿಜೆಪಿ ಶಾಸಕ ಮುನಿರತ್ನಗೆ ಮತ್ತೊಂದು ಸಂಕಷ್ಟ ಎದುರಾಗಿದೆ.
ಆರ್ಆರ್ ನಗರ ಕ್ಷೇತ್ರದಲ್ಲಿ 2020 ರಿಂದ 2022ರ ವರೆಗೆ ನಡೆದ ಕಾಮಗಾರಿಗಳ ತನಿಖೆಗೆ ಪಾಲಿಕೆ ಆದೇಶ ಹೊರಡಿಸಿದೆ. 2020 ಸೆಪ್ಟೆಂಬರ್ನಿಂದ 2022 ರ ಜುಲೈ 19ರ ಅವಧಿಯಲ್ಲಿ ನಡೆದ ಕಾಮಗಾರಿಗಳಲ್ಲಿ 500 ಕೋಟಿ ರೂಪಾಯಿಗೂ ಅಧಿಕ ಅವ್ಯವಹಾರ ಶಂಕೆ ವ್ಯಕ್ತವಾಗಿದ್ದು, ಈ ಹಿನ್ನೆಲೆಯಲ್ಲಿ ಪಾಲಿಕೆ ಕಂದಾಯ ವಿಭಾಗದ ವಿಶೇಷ ಆಯುಕ್ತ ನೇತೃತ್ವದಲ್ಲಿ ತನಿಖೆಗೆ ಆದೇಶ ನೀಡಲಾಗಿದೆ.
ಕಾಮಗಾರಿ ನಡೆಸದೇ ಈ ಅವಧಿಯಲ್ಲಿ ಬಿಲ್ ಮಾಡಿಸಿಕೊಂಡಿರುವ ಆರೋಪ ಕೇಳಿಬಂದಿದೆ. ಇದೀಗ ಬಿಬಿಎಂಪಿ ಕಂದಾಯ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್ ನೇತೃತ್ವದಲ್ಲಿ ತನಿಖೆಗೆ ಸಮಿತಿ ರಚಿಸಿದೆ. ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸೆ.23 ರಂದೇ ತನಿಖೆಗೆ ಆದೇಶ ಹೊರಡಿಸಿದ್ದರು. ಅದರ ಆಧಾರದಲ್ಲಿ ಸಮಿತಿ ರಚನೆ ಮಾಡಲಾಗಿದೆ. ತನಿಖಾ ಸಮಿತಿಯಲ್ಲಿ ಯೋಜನಾ ವಿಶೇಷ, ಹಣಕಾಸು ವಿಶೇಷ ಆಯುಕ್ತರು, ಕ್ವಾಲಿಟಿ ಚೆಕ್ ಚೀಫ್ ಇಂಜಿನಿಯರ್ ಹಾಗೂ ಟಿವಿಸಿಸಿ ಚೀಫ್ ಇಂಜಿನಿಯರ್ ಇದ್ದಾರೆ.
ಗುತ್ತಿಗೆದಾರನಿಗೆ ಜೀವ ಬೆದರಿಕೆ ಹಾಕಿದ ಮತ್ತು ಜಾತಿ ನಿಂದನೆ ಆರೋಪದಲ್ಲಿ ಮುನಿರತ್ನ ಮೊದಲು ಜೈಲು ಪಾಲಾಗಿದ್ದರು. ನಂತರ ಜಾಮೀನಿನ ಮೇಲೆ ಬಿಡುಗಡೆಯಾಗುತ್ತಿದ್ದಂತೆಯೇ, ಕಗ್ಗಲಿಪುರ ಪೊಲೀಸ್ ಠಾಣೆಯಲ್ಲಿ ದಾಖಲಾದ ಅತ್ಯಾಚಾರ ಪ್ರಕರಣದಲ್ಲಿ ಮತ್ತೆ ಬಂಧನಕ್ಕೊಳಗಾಗಿದ್ದರು. ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದ್ದರಿಂದ ಸದ್ಯ ಅವರನ್ನು ಪರಪ್ಪನ ಅಗ್ರಹಾರ ಜೈಲಿನಲ್ಲಿ ಇರಿಸಲಾಗಿದೆ.