ಲೈಂಗಿಕ ದೌರ್ಜನ್ಯ | ಆರೋಪಿ ಡಿವೈಎಸ್ಪಿ ರಾಮಚಂದ್ರಪ್ಪ ವಿರುದ್ಧ ಮತ್ತೊಂದು ಪ್ರಕರಣ
ಡಿವೈಎಸ್ ಪಿ ರಾಮಚಂದ್ರಪ್ಪ ವಿರುದ್ಧ ಮತ್ತೊಬ್ಬ ಸಂತ್ರಸ್ತ ಮಹಿಳೆ ಮಧುಗಿರಿ ಪೋಲಿಸ್ ಠಾಣೆಯಲ್ಲಿ ಲೈಂಗಿಕ ಕಿರುಕುಳ ಹಾಗೂ ಜಾತಿ ನಿಂದನೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.;
ದೂರು ನೀಡಲು ಬಂದಿದ್ದ ಮಹಿಳೆಯ ಜೊತೆ ಅಸಭ್ಯವಾಗಿ ವರ್ತಿಸಿದ್ದ ಮಧುಗಿರಿ ಡಿವೈಎಸ್ಪಿ ರಾಮಚಂದ್ರಪ್ಪ ವಿರುದ್ಧ ಮತ್ತೊಂದು ದೂರು ದಾಖಲಾಗಿದೆ.
ಡಿವೈಎಸ್ ಪಿ ರಾಮಚಂದ್ರಪ್ಪ ಈಗಾಗಲೇ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಇದೀಗ ಡಿವೈಎಸ್ ಪಿ ರಾಮಚಂದ್ರಪ್ಪ ವಿರುದ್ಧ ಮತ್ತೊಬ್ಬ ಸಂತ್ರಸ್ತ ಮಹಿಳೆ ಮಧುಗಿರಿ ಪೋಲಿಸ್ ಠಾಣೆಯಲ್ಲಿ ಲೈಂಗಿಕ ಕಿರುಕುಳ ಹಾಗೂ ಜಾತಿ ನಿಂದನೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ಕೊರಟಗೆರೆ ತಾಲ್ಲೂಕಿನ ಪರಿಶಿಷ್ಟ ಪಂಗಡದ ಮಹಿಳೆಯೊಬ್ಬರು ಈ ಸಂಬಂಧ ಬುಧವಾರ ಮಧುಗಿರಿ ಪೊಲೀಸ್ ಠಾಣೆಯಲ್ಲಿ ರಾಮಚಂದ್ರಪ್ಪ ವಿರುದ್ಧ ಲೈಂಗಿಕ ದೌರ್ಜನ್ಯ ದೂರು ನೀಡಿದ್ದಾರೆ.
ʼನಿವೇಶನಕ್ಕಾಗಿ ಹಣ ಪಡೆದ ವ್ಯಕ್ತಿಯೊಬ್ಬ ನಿವೇಶನ ನೀಡದೆ, ಹಣವನ್ನೂ ಮರಳಿಸದೆ ಮೋಸ ಮಾಡಿದ್ದಾನೆ. ಆತನ ವಿರುದ್ಧ ಸೂಕ್ತ ಕ್ರಮ ಜರುಗಿಸಲು ಪೊಲೀಸರಿಗೆ ನಿರ್ದೇಶನ ನೀಡುವಂತೆ ಕೋರಿ ಮಹಿಳೆ ರಾಜ್ಯ ಮಹಿಳಾ ಆಯೋಗದ ಮೊರೆ ಹೋಗಿದ್ದರು. ಈ ಸಂಬಂಧ ವಿಚಾರಣೆ ನಡೆಸುವಂತೆ ಮಹಿಳಾ ಆಯೋಗವು ತುಮಕೂರು ಜಿಲ್ಲಾ ಪೊಲೀಸ್ ಕಚೇರಿಗೆ ಪತ್ರ ಬರೆದಿತ್ತು. ಈ ಪ್ರಕರಣದ ವಿಚಾರಣೆ ನೆಪದಲ್ಲಿ ನನ್ನನ್ನು ಕಚೇರಿಗೆ ಕರೆಸಿಕೊಂಡ ಡಿವೈಎಸ್‌ಪಿ ರಾಮಚಂದ್ರಪ್ಪ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ' ಎಂದು ಮಹಿಳೆ ದೂರು ನೀಡಿದ್ದಾರೆ.
ಡಿವೈಎಸ್ಪಿ ವಿರುದ್ಧ ದಾಖಲಾಗಿದ್ದ ಮೊದಲ ದೂರು
ಜಮೀನು ವಿವಾದ ಬಗೆಹರಿಸಿಕೊಡುವಂತೆ ಕೋರಿ ಪಾವಗಡ ತಾಲೂಕಿನ ಮಹಿಳೆಯೊಬ್ಬರು ಡಿವೈಎಸ್ಪಿ ಕಚೇರಿಗೆ ದೂರು ನೀಡಲು ಬಂದಿದ್ದರು. ಈ ವೇಳೆ ದೂರುದಾರ ಮಹಿಳೆಯನ್ನು ಪುಸಲಾಯಿಸಿ ತಮ್ಮ ಕಚೇರಿಯಲ್ಲೇ ಲೈಂಗಿಕ ದೌರ್ಜನ್ಯ ಎಸಗಿದ್ದರು. ಲೈಂಗಿಕ ದೌರ್ಜನ್ಯ ಎಸಗಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಡಿವೈಎಸ್ಪಿ ರಾಮಚಂದ್ರಪ್ಪ ನಾಪತ್ತೆಯಾಗಿದ್ದರು.
ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ ಅವರು ಡಿವೈಎಸ್ಪಿಯನ್ನು ಅಮಾನತು ಮಾಡಿ ಆದೇಶಿಸಿದ್ದರು. ಇದಾದ ಬಳಿಕ ಮಧುಗಿರಿ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತೆಯಿಂದ ದೂರು ಪಡೆದು ಪ್ರಕರಣ ದಾಖಲಿಸಲಾಗಿತ್ತು. ಶುಕ್ರವಾರ ರಾತ್ರಿ ಆರೋಪಿ ಡಿವೈಎಸ್ಪಿ ರಾಮಚಂದ್ರಪ್ಪ ಅವರನ್ನು ಬಂಧಿಸಿದ್ದ ಪೊಲೀಸರು, ಮಧುಗಿರಿ ಜೆಎಂಎಫ್ ಸಿ ನ್ಯಾಯಾಧೀಶರ ಎದುರು ಹಾಜರುಪಡಿಸಿದರು. ಡಿವೈಎಸ್‌ಪಿ ರಾಮಚಂದ್ರಪ್ಪಗೆ ಒಟ್ಟು 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿದೆ.