ಬಿಜೆಪಿಯೊಂದಿಗೆ ಹೆಗಡೆ ಮುನಿಸು: ಪ್ರಯತ್ನ ಕೈ ಚೆಲ್ಲಿದ ಅಮಿತ್ ಶಾ; ಕಾಗೇರಿ ಕಂಗಾಲು
ಅನಂತ್ ಕುಮಾರ್ ಹೆಗಡೆ ಅವರು ಬಿಜೆಪಿಯ ಅಭ್ಯರ್ಥಿ ಪರ ಪ್ರಚಾರಕ್ಕೆ ಬಂದಿಲ್ಲ, ಅಮಿತ್ ಶಾ ಅವರ ಕರೆಯನ್ನೂ ಸ್ವೀಕರಿಸುತ್ತಿಲ್ಲ. ಈಗಾಗಲೇ ವಿಧಾನಸಭೆ ಚುನಾವಣೆಯಲ್ಲಿ ಸೋತಿರುವ ಕಾಗೇರಿ ಅವರು ಹೆಗಡೆ ನಡೆಯಿಂದ ಕಂಗಾಲಾಗಿದ್ದಾರೆ.;
ಶಿಸ್ತಿನ ಪಕ್ಷ ಎಂದು ಬಿಂಬಿಸಿಕೊಳ್ಳುತ್ತಿದ್ದ ಬಿಜೆಪಿಗೆ ಸದ್ಯ ಕರ್ನಾಟಕದ ತನ್ನದೇ ನಾಯಕರನ್ನು ನಿಯಂತ್ರಣಕ್ಕಿಟ್ಟುಕೊಳ್ಳಲಾಗುತ್ತಿಲ್ಲ. ಪ್ರಧಾನಿ ಮೋದಿ- ಅಮಿತ್ ಶಾ ಜೋಡಿ ಹಾಕಿದ ಗೆರೆಯನ್ನು ಯಾವೊಂದು ಬಿಜೆಪಿ ನಾಯಕರು ಮೀರುವುದಿಲ್ಲ ಎಂಬ ಮಾತನ್ನು ಕರ್ನಾಟಕದ ಇತ್ತೀಚಿನ ಬೆಳವಣಿಗೆಗಳು ಸುಳ್ಳು ಮಾಡುತ್ತಿವೆ. ರಾಜ್ಯ ನಾಯಕರಲ್ಲ, ದಿಲ್ಲಿ ನಾಯಕರು ಸ್ವತಃ ಪ್ರಯತ್ನ ಪಟ್ಟರೂ ಕೆಲವು ಬಿಜೆಪಿ ನಾಯಕರನ್ನು ಸಂಪರ್ಕಿಸಲು ಅವರಿಗೆ ಸಾಧ್ಯವಾಗುತ್ತಿಲ್ಲ. ಉತ್ತರ ಕನ್ನಡ ಸಂಸದ ಅನಂತ ಕುಮಾರ್ ಹೆಗಡೆ ಅವರು ಅಂತಹರವಲ್ಲಿ ಒಬ್ಬರು.
ಒಂದೆಡೆ, ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರು ಹೈಕಮಾಂಡಿಗೆ ಕ್ಯಾರೇ ಎನ್ನದೇ ಬಿಜೆಪಿಗೆ ಹಾನಿಯುಂಟಾಗುವ ಹೇಳಿಕೆಯನ್ನು ನೀಡುತ್ತಾ ಬರುತ್ತಿದ್ದರೆ, ಇನ್ನೊಂದೆಡೆ ಮಾಜಿ ಡಿಸಿಎಂ ಕೆಎಸ್ ಈಶ್ವರಪ್ಪ, ಎಂಪಿ ರೇಣುಕಾಚಾರ್ಯ ಮೊದಲಾದವರೂ ರಾಜ್ಯ ಬಿಜೆಪಿ ನಾಯಕತ್ವಕ್ಕೆ ಬೈದಾಡಿಕೊಂಡು ತಿರುಗಾಡುತ್ತಿದ್ದಾರೆ. ಇದೀಗ, ಸಂಸದ ಅನಂತಕುಮಾರ್ ಹೆಗಡೆ ಅವರೂ ಕೇಸರಿ ಪಕ್ಷ ಹಾಕಿರುವ ʼಲಕ್ಷ್ಮಣ ರೇಖೆʼಯೊಳಗೆ ನಿಲ್ಲುತ್ತಿಲ್ಲ. ಬಿಜೆಪಿ, ಮೂಲಗಳು ತಿಳಿಸಿರುವ ಪ್ರಕಾರ ಅಮಿತ್ ಶಾ ಅವರ ಕರೆಯನ್ನೂ ಸ್ವೀಕರಿಸದೆ ಹೆಗಡೆ ʼಅಡಗಿʼಕೊಂಡಿದ್ದಾರೆ.
ಮಾತನಾಡಿದ್ದರೆ ವಿವಾದ ಸೃಷ್ಟಿಸುತ್ತಿದ್ದ ಅನಂತ ಕುಮಾರ್ ಹೆಗಡೆ ಬಿಜೆಪಿ ಟಿಕೆಟ್ ಕೈ ತಪ್ಪಿದಂದಿನಿಂದ ಮೌನ ಪಾಲಿಸಿಕೊಂಡು ಬಂದಿದ್ದು, ಬಿಜೆಪಿ ಹೈಕಮಾಂಡಿನ ನಾಯಕರೊಂದಿಗೂ ತಮ್ಮ ʼಮೌನವೃತʼವನ್ನು ಮುಂದುವರೆಸಿದ್ದಾರೆ ಎಂಬ ಮಾಹಿತಿ ʼದಿ ಫೆಡೆರಲ್ ಕರ್ನಾಟಕʼಕ್ಕೆ ಲಭ್ಯವಾಗಿದೆ.
ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಆರು ಬಾರಿ ಬಿಜೆಪಿ ಸಂಸದನಾಗಿರುವ ಹಿರಿಯ ನಾಯಕ ಹೆಗಡೆ, 2019 ರ ಚುನಾವಣೆಯಲ್ಲಿ ಗೆದ್ದ ಬಳಿಕ ತಮ್ಮ ಅನಾರೋಗ್ಯದ ಕಾರಣ ಸಾರ್ವಜನಿಕ ಬದುಕಿನಿಂದ ಹಿಂದೆ ಸರಿದಿದ್ದರು. ಇನ್ನೇನು ಹೆಗಡೆ ಸಾಮಾಜಿಕ-ರಾಜಕೀಯ ಬದುಕು ಮುಕ್ತಾಯವಾಯಿತು ಅಂದುಕೊಳ್ಳುತ್ತಿರುವಾಗಲೇ ಚುನಾವಣಾ ಸಮೀಪ ಬರುತ್ತಿದ್ದಂತೆ ಫಿಯೋನಿಕ್ಸ್ ಪಕ್ಷಿಯಂತೆ ರೆಕ್ಕೆ ಬಡಿದು ಮತ್ತೆ ಎದ್ದು ಬಂದಿದ್ದರು. ಹಿಂದುತ್ವ ಫೈರ್ ಬ್ರಾಂಡ್ ಆಗಿ, ಸಂವಿಧಾನ ಬದಲಾಯಿಸುವ ಹೇಳಿಕೆ ನೀಡಿ ಈ ಬಾರಿ ಮತ್ತೊಮ್ಮೆ ಬಿಜೆಪಿ ಟಿಕೆಟ್ ಪಡೆದು ಗೆಲ್ಲುವ ಹುಮ್ಮಸ್ಸಿನಲ್ಲಿದ್ದ ಹೆಗಡೆಗೆ ಕೊನೆ ಘಳಿಗೆಯಲ್ಲಿ ಹೈಕಮಾಂಡ್ ಶಾಕ್ ನೀಡಿತ್ತು. ಏಳನೇ ಬಾರಿ ಸಂಸದರಾಗುವ ಕನಸು ಕಂಡಿದ್ದ ಹೆಗಡೆಯ ರೆಕ್ಕೆ-ಪುಕ್ಕಗಳನ್ನು ಕಿತ್ತು, ವಿಶ್ವೇಶ್ವರ ಹೆಗಡೆ ಕಾಗೇರಿ ಕೈಗೆ ಹೈಕಮಾಂಡ್ ಟಿಕೆಟ್ ನೀಡಿತ್ತು.
ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸುವಂತೆ ತಮ್ಮ ಪಕ್ಷದ ಅಜೆಂಡಾವನ್ನು ಬಹಿರಂಗವಾಗಿ ಹೇಳುವ ಹೆಗಡೆ ಬಗ್ಗೆ ಸ್ಥಳೀಯ ಬಿಜೆಪಿ ನಾಯಕರಲ್ಲೂ, ಹೈಕಮಾಂಡ್ ನಾಯಕರಲ್ಲೂ ಸಮಾನ ಅಸಮಾಧಾನವಿದೆ. ಇದೇ ಅಸಮಾಧಾನ ಈ ಬಾರಿಯ ಬಿಜೆಪಿ ಟಿಕೆಟ್ ಹೆಗಡೆ ಕೈ ತಪ್ಪುವಂತೆ ಮಾಡಿದೆ. ಇದೀಗ, ಹೆಗಡೆ ಬಿಜೆಪಿ ವಿರುದ್ಧ ಅಸಮಾಧಾನ ತೋರಿಸುವ ಸಮಯ ಬಂದಿದ್ದು, ಪಕ್ಷದ ಅಭ್ಯರ್ಥಿ ಪರ ಪ್ರಚಾರಕ್ಕೂ ಹೋಗದೆ, ಹೈಕಮಾಂಡ್ ನಾಯಕರ ಕೈಗೂ ಸಿಗದೆ ಓಡಾಡುತ್ತಿದ್ದಾರೆ. ಟಿಕೆಟ್ ವಂಚಿತ ಅನಂತ್ ಕುಮಾರ್ ಅವರು ಇದುವರೆಗೂ ಬಹಿರಂಗವಾಗಿ ಕಾಣಿಸಿಕೊಳ್ಳದೆ, ಒಂದೇ ಒಂದು ಹೇಳಿಕೆಯನ್ನು ಕೂಡಾ ನೀಡದೆ ಮೌನವನ್ನು ಹೊದ್ದುಕೊಂಡಿರುವುದರಿಂದ ಈ ಬಾರಿಯ ಚುನಾವಣೆ ʼಹೆಗಡೆ ವಿವಾದಾತ್ಮಕ ಹೇಳಿಕೆ ಇಲ್ಲದ ಚುನಾವಣೆʼ ಎಂಬ ಹೆಗ್ಗಳಿಕೆ ಪಡೆಯುವ ಸಾಧ್ಯತೆಯೂ ಇದೆ.
ಉತ್ತರ ಕನ್ನಡ ಬಿಜೆಪಿ ಪಾಲಿಗೆ ಭದ್ರ ಕೋಟೆಯಾಗಿದ್ದರೂ, ರಾಜ್ಯ ರಾಜಕಾರಣದ ಇತ್ತೀಚಿನ ಬೆಳವಣಿಗೆ ಬಳಿಕ ಬಿಜೆಪಿಯ ಭದ್ರಕೋಟೆಗಳಲ್ಲಿಯೇ ಕಮಲ ಪಕ್ಷದ ಬೇರುಗಳು ಸಡಿಲವಾಗುತ್ತಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಬಿಜೆಪಿ ಭದ್ರಕೋಟೆಗಳಾಗಿ ಗುರುತಿಸಿಕೊಂಡಿದ್ದ ದಕ್ಷಿಣ ಕನ್ನಡ, ಶಿವಮೊಗ್ಗ, ಧಾರವಾಡ ಮೊದಲಾದ ಕ್ಷೇತ್ರಗಳಲ್ಲಿ ಬಿಜೆಪಿ ಪ್ರಯಾಸದಾಯಕ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಉತ್ತರ ಕನ್ನಡ ಕ್ಷೇತ್ರವೂ ಇದಕ್ಕೆ ಹೊರತಲ್ಲ. ಏನೇ ವಿವಾದಾಸ್ಪದ ವ್ಯಕ್ತಿಯಾದರೂ, ಆರು ಬಾರಿ ಸಂಸದನಾಗಿರುವ ಅನಂತಕುಮಾರ್ ಹೆಗಡೆ ಅವರನ್ನು ಸಂಪೂರ್ಣವಾಗಿ ಎದುರು ಹಾಕಿಕೊಂಡು ಬಿಜೆಪಿಯನ್ನು ಗೆಲ್ಲಿಸುವ ಶಕ್ತಿಯಂತೂ ಕಾಗೇರಿ ಬಳಿಯಿದ್ದಂತೆ ಕಾಣುತ್ತಿಲ್ಲ. ಹಾಗಾಗಿಯೇ, ಮುನಿಸಿಕೊಂಡಿರುವ ಹೆಗಡೆ ಮನೆಗೆ ಕಾಗೇರಿ ಹೋಗಿ ಬೆಂಬಲ ಪಡೆಯಲು ಪ್ರಯತ್ನಿಸಿದ್ದರು. ಆದರೆ, ಮನೆ ಸೆಕ್ಯುರಿಟಿ ಗಾರ್ಡ್ ಕಾಗೇರಿ ಅಲ್ಲ ಯಾರೇ ಬಂದರೂ ಮನೆ ಕಾಂಪೌಂಡ್ ಒಳಗೆ ಬಿಡಬಾರದೆಂದು ʼದಣಿʼ ತಿಳಿಸಿದ್ದಾರೆಂದು ಗೇಟಿನಿಂದಲೇ ಕಾಗೇರಿಯನ್ನು ಮರಳಿ ಕಳುಹಿಸಿದ್ದರು. ಉತ್ತರ ಕನ್ನಡ ಲೋಕಸಭಾ ಉಸ್ತುವಾರಿ ಹರತಾಳು ಹಾಲಪ್ಪ ಕೂಡಾ ಇಂತಹದ್ದೇ ಪರಿಸ್ಥಿತಿಯನ್ನು ಎದುರಿಸಿದ್ದು, ಹೆಗಡೆಯನ್ನು ಮನವೊಲಿಸುವಲ್ಲಿ ವಿಫಲರಾಗಿದ್ದಾರೆ.
ಹೆಗಡೆ ಮುನಿಸು ತಣಿಸಲು ಬಿಜೆಪಿ ಕರ್ನಾಟಕ ರಾಜ್ಯ ಉಸ್ತುವಾರಿ ರಾಧಾ ಮೋಹನ್ ದಾಸ್ ಸೇರಿದಂತೆ ರಾಜ್ಯ-ರಾಷ್ಟ್ರ ಮಟ್ಟದ ಕೇಸರಿ ನಾಯಕರು ಪ್ರಯತ್ನಿಸಿದ್ದಾರೆ. ಅಮಿತ್ ಶಾ ಅವರು ಮಧ್ಯಪ್ರವೇಶಿಸಿದರೆ ಭಿನ್ನಮತ ಶಮನಗೊಳ್ಳಬಹುದೆಂಬ ನಿರೀಕ್ಷೆಯಲ್ಲಿ ಬಿಜೆಪಿ ನಾಯಕರು ಇದ್ದರು. ಆದರೆ, ಅಮಿತ್ ಶಾ ಅವರೇ ಖುದ್ದು ಫೋನ್ ಮಾಡಿದರೂ, ಕರೆಯನ್ನೇ ಸ್ವೀಕರಿಸದೆ ಹೆಗಡೆ ತಮ್ಮ ನಿಲುವನ್ನು ಪರೋಕ್ಷವಾಗಿ ಸ್ಪಷ್ಟಪಡಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಅಮಿತ್ ಶಾ ಅವರ ಕರೆಯನ್ನೇ ಸ್ವೀಕರಿಸದಿರಲು ಧೈರ್ಯ ತೋರಿರುವ ಹೆಗಡೆ ಸಣ್ಣ-ಪುಟ್ಟ ನಾಯಕರಿಗೆ ಮಣೆ ಹಾಕುತ್ತಾರೆಯೇ ಎಂದು ಯೋಚಿಸಿ, ಹಲವು ನಾಯಕರು ಹೆಗಡೆ ಪ್ರಚಾರಕ್ಕೆ ಬರುವ ಆಸೆಯನ್ನೇ ಕೈ ಬಿಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಬಿಜೆಪಿ ರಾಷ್ಟ್ರೀಯ ನಾಯಕರ ಕರೆಯನ್ನೂ ಸ್ವಿಕರಿಸದೆ ಲೋಕಸಭಾ ಚುನಾವಣೆಯ ಪ್ರಕ್ರಿಯೆಯಿಂದ ಸಂಪೂರ್ಣವಾಗಿ ದೂರ ಉಳಿದಿರುವ ಅನಂತ್ ಕುಮಾರ್ ಹೆಗಡೆ, ಸದ್ಯ ತಮ್ಮ ಪುಸ್ತಕದ ಪ್ರಚಾರವನ್ನು ಮಾಡುತ್ತಾ ಉಳಿದೆಲ್ಲಾ ವಿಷಯಗಳಿಂದ ದೂರ ಸರಿದಿದ್ದಾರೆ. ತಮ್ಮ ಜೀವನದಲ್ಲಿ ಎದುರಿಸಿದ ಸಾಮಾಜಿಕ, ಧಾರ್ಮಿಕ ಮತ್ತು ರಾಜಕೀಯ ಹಾಗೂ ಆಧಾತ್ಮಿಕ ವಿಚಾರಗಳ ಕುರಿತಾದ ವಿಷಯಗಳನ್ನ ತಮ್ಮ ಕದಂಬ ಪುಸ್ತಕದಲ್ಲಿ ದಾಖಲಿಸಿದ್ದಾರೆ. ಸದ್ಯ, ಟಿಕೆಟ್ ತಪ್ಪಿದ ಬಳಿಕ ರಾಜಕೀಯ ವಿಚಾರಗಳಿಂದ ಸಂಪೂರ್ಣ ದೂರ ನಿಂತಿರುವ ಹೆಗಡೆ, ಬಿಜೆಪಿ ನಾಯಕರ ಯಾವ ತಂತ್ರಕ್ಕೂ ಬಗ್ಗುವ ಲಕ್ಷಣಗಳು ಕಾಣಿಸುತ್ತಿಲ್ಲ. ರಾಜ್ಯ ರಾಜಕಾರಣದಲ್ಲಿ ಸೂಕ್ತ ನಾಯಕತ್ವ ಇಲ್ಲದಿರುವ ಕೊರತೆಯ ನಡುವೆಯೇ, ಬಿಜೆಪಿಯ ರಾಷ್ಟ್ರೀಯ ನಾಯಕತ್ವವೂ ರಾಜ್ಯ ನಾಯಕರ ಮೇಲಿನ ಹಿಡಿತ ಕಳೆದುಕೊಳ್ಳುತ್ತಿರುವುದು ನಿಷ್ಠಾವಂತ ಬಿಜೆಪಿಗರ ಆತಂಕಕ್ಕೆ ಕಾರಣವಾಗಿದೆ.