ಭಾರತ- ಪಾಕ್ ಸಂಘರ್ಷಕ್ಕೆ ಅಮೆರಿಕದ ಮಧ್ಯಸ್ಥಿಕೆ; ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ವಿರೋಧ
ರಾಷ್ಟ್ರೀಯ ಭದ್ರತೆ, ರಾಷ್ಟ್ರ ರಕ್ಷಣೆ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ದೃಢ ಹೆಜ್ಜೆಗಳನ್ನು ಇಟ್ಟಿದ್ದು, ಭಾರತದ ಮೇಲೆ ದಾಳಿ ನಡೆಸಿದ ಪಾಕ್‌ಗೆ ನಮ್ಮ ಸೇನಾಪಡೆಗಳು ತಕ್ಕ ಪಾಠ ಕಲಿಸಿವೆ.;
ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ
ಭಾರತ ಹಾಗೂ ಪಾಕಿಸ್ತಾನ ನಡುವಿನ ಮಿಲಿಟರಿ ಸಂಘರ್ಷ ಅಮೆರಿಕದ ಮಧ್ಯಸ್ಥಿಕೆಯಲ್ಲಿ ಕೊನೆಗೊಂಡಿದೆ ಎಂಬ ವಾದಕ್ಕೆ ನನ್ನ ವಿರೋಧವಿದೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಬೆಂಗಳೂರಿನ ತಮ್ಮ ನಿವಾಸದ ಬಳಿ ಸೋಮವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಷ್ಟ್ರೀಯ ಭದ್ರತೆ, ರಾಷ್ಟ್ರ ರಕ್ಷಣೆ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರವು ದೃಢ ಹೆಜ್ಜೆಗಳನ್ನು ಇಟ್ಟಿದ್ದು, ಭಾರತದ ಮೇಲೆ ದಾಳಿ ನಡೆಸಿದ ರಾಷ್ಟ್ರಕ್ಕೆ ನಮ್ಮ ಸೇನಾಪಡೆಗಳು ತಕ್ಕ ಪಾಠ ಕಲಿಸಿವೆ ಎಂದರು.
ಕಾಶ್ಮೀರ ವಿವಾದ ಬಗೆಹರಿಸಲು ಮೂರನೇ ರಾಷ್ಟ್ರದ ಮಧ್ಯಸ್ಥಿಕೆಗೆ ಒಪ್ಪಿಲ್ಲ ಹಾಗೂ ಅದಕ್ಕೆ ಅವಕಾಶವನ್ನು ಕೊಟ್ಟಿಲ್ಲ ಎಂಬ ಮಾತನ್ನು ಪ್ರಧಾನಿ ನರೇಂದ್ರ ಮೋದಿಯವರು ಸ್ಪಷ್ಟವಾಗಿ ಹೇಳಿದ್ದಾರೆ. ರಾಷ್ಟ್ರದ ಹಿತಾಸಕ್ತಿ ವಿಷಯದಲ್ಲಿ ಮೋದಿ ಅವರು ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.
ಪಹಲ್ಗಾಮ್‌ನಲ್ಲಿ ಪಾಕಿಸ್ತಾನದ ಭಯೋತ್ಪಾದಕರು ಪ್ರವಾಸಿಗರ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಅದಕ್ಕೆ ಪ್ರತೀಕಾರವಾಗಿ ಭಾರತೀಯ ಸೇನಾಪಡೆಗಳು ʼಆಪರೇಷನ್ ಸಿಂದೂರ್ʼ ಮೂಲಕ ಪಾಕಿಸ್ತಾನದಲ್ಲಿರುವ ಭಯೋತ್ಪಾದಕ ಶಿಬಿರಗಳನ್ನು ನಾಶ ಮಾಡಿವೆ. ನೆರೆ ದೇಶದ ಸೇನೆಯು ಉಗ್ರ ಪೋಷಣೆ ಮಾಡುತ್ತಾ ಭಾರತದ ಮೇಲೆ ದಾಳಿ ನಡೆಸಿತ್ತು. ಅದಕ್ಕೆ ಭಾರತ ಪ್ರಬಲ ತಿರುಗೇಟು ನೀಡಿದೆ ಎಂದು ತಿಳಿಸಿದರು.
ಪ್ರಧಾನಿ ಮೋದಿ ಅವರ ದೃಢ ನಾಯಕತ್ವ ಹಾಗೂ ಭಾರತೀಯ ಸೇನಾಪಡೆಗಳ ಶಕ್ತಿಯ ಮುಂದೆ ಪಾಕಿಸ್ತಾನ ಮಂಡಿಯೂರಿದೆ. ಭಾರತ ಎಲ್ಲ ಕಡೆ ಮೇಲುಗೈ ಸಾಧಿಸಿದೆ. ಉಗ್ರರ ಚಟುವಟಿಕೆಗಳಿಗೆ ಇತಿಶ್ರೀ ಹಾಡುವ ದೃಷ್ಟಿಯಿಂದ ಸರ್ಕಾರ ಅನೇಕ ಕ್ರಮಗಳನ್ನು ಕೈಗೊಂಡಿದೆ ಎಂದರು.
ಉಗ್ರ ಪೋಷಕ ಪಾಕಿಸ್ತಾನವನ್ನು ಮಟ್ಟ ಹಾಕುವ ದೃಷ್ಟಿಯಿಂದ ಪೂರ್ಣ ಪ್ರಮಾಣದ ಯುದ್ದ ಆಗಲೇಬೇಕಿತ್ತು ಎಂಬ ನಿಲುವು ಒಂದು ಕಡೆ ಇದೆ. ಮತ್ತೊಂದು ಕಡೆ ರಷ್ಯಾ, ಉಕ್ರೇನ್ ಯುದ್ಧದಿಂದ ಯಾವ ಸ್ಥಿತಿ ಉಂಟಾಗಿದೆ ಎನ್ನುವ ವಾದವೂ ಇನ್ನೊಂದೆಡೆಯಿದೆ. ಈ ದೃಷ್ಠಿಯಲ್ಲಿ ಕೇಂದ್ರ ಸರ್ಕಾರ ಆಲೋಚನೆ ಮಾಡುತ್ತಿದೆ. ಈಗಲಾದರೂ ಪಾಕಿಸ್ತಾನ ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಸಂಪೂರ್ಣವಾಗಿ ನಾಶವಾಗಲಿದೆ ಎಂದು ಎಚ್ಚರಿಕೆ ಕೊಟ್ಟರು.
ಪ್ರಧಾನಿ ಮೋದಿ ನಿರ್ಧಾರಗಳನ್ನು ಬೆಂಬಲಿಸಬೇಕು
ಪ್ರಧಾನಿ ನರೇಂದ್ರ ಮೋದಿ ಅವರ ನಿರ್ಧಾರಗಳನ್ನು ಎಲ್ಲರೂ ಬೆಂಬಲಿಸಬೇಕು. ಪಹಲ್ಗಾಮ್ ದಾಳಿಯ ನಂತರ ಪ್ರಧಾನಿಗಳು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪ್ರಧಾನಿಗಳು ಹಾಗೂ ರಕ್ಷಣಾ ಸಚಿವರು ಅನೇಕ ಸಭೆಗಳನ್ನು ನಡೆಸಿದ್ದಾರೆ. ದೇಶದ ಹಿತದೃಷ್ಟಿಯಿಂದ ಅನೇಕ ದಿಟ್ಟ ಕ್ರಮಗಳನ್ನು ಕೈಗೊಳ್ಳಲಾಗಿದೆ. ಉಗ್ರರಿಗೆ ಶಿಕ್ಷೆ ಕೊಡಬೇಕು ಎಂಬ ದೃಷ್ಟಿಯಿಂದ ನಮ್ಮ ಸೈನಿಕರು ದೇಶಕ್ಕೆ ಗೌರವ ತರುವ ಕೆಲಸ ಮಾಡಿದ್ದಾರೆ. ಕೇವಲ ಎರಡೇ ದಿನಗಳಲ್ಲಿ ಪಾಕಿಸ್ತಾನ ಶರಣಾಗುವಂತೆ ಮಾಡಿ ಸೇನಾಪಡೆಗಳು ತಮ್ಮ ಪರಾಕ್ರಮ ಮೆರೆದಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.