ಅಂಬಾರಗೋಡ್ಲು-ಕಳಸವಳ್ಳಿ ಸೇತುವೆ ಲೋಕಾರ್ಪಣೆ: ಸಿಗಂದೂರು ದೇವಿಯ ದರ್ಶನ ಇನ್ನು ಸುಲಭ
ಸೇತುವೆಯ ಲೋಕಾರ್ಪಣೆಯ ಸ್ಮರಣೆಯ ಶಿಲಾನ್ಯಾಸ ಮಾಡಿದ ಸಚಿವ ನಿತಿನ್ ಗಡ್ಕರಿ ನಂತರ ಶರಾವತಿ ನದಿಗೆ ಬಾಗಿನ ಸಮರ್ಪಿಸಿದರು.;
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಅಂಬಾರಗೋಡ್ಲು-ಕಳಸವಳ್ಳಿ ನಡುವಿನ ಶರಾವತಿ ಹಿನ್ನೀರಿನಲ್ಲಿ ನಿರ್ಮಿಸಲಾದ ನೂತನ ತೂಗು ಸೇತುವೆಯನ್ನು ಕೇಂದ್ರದ ಹೆದ್ದಾರಿ ಹಾಗೂ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಇಂದು (ಸೋಮವಾರ) ಲೋಕಾರ್ಪಣೆ ಮಾಡಿದರು. ಈ ಸೇತುವೆ ನಿರ್ಮಾಣದಿಂದ ಮಲೆನಾಡಿನ ಪ್ರಮುಖ ಶ್ರದ್ಧಾ ಕೇಂದ್ರವಾದ ಸಿಗಂದೂರು ಚೌಡೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡುವುದು ಇನ್ನಷ್ಟು ಸುಲಭವಾಗಲಿದೆ.
ಸೇತುವೆಯ ಲೋಕಾರ್ಪಣೆಯ ಸ್ಮರಣೆಯ ಶಿಲಾನ್ಯಾಸ ಮಾಡಿದ ಸಚಿವ ನಿತಿನ್ ಗಡ್ಕರಿ ನಂತರ ಶರಾವತಿ ನದಿಗೆ ಬಾಗಿನ ಸಮರ್ಪಿಸಿದರು. ಶಿವಮೊಗ್ಗ ವಿಮಾನ ನಿಲ್ದಾಣದಿಂದ ಸಾಗರದ ಮಂಕಳೆಯ ಹೆಲಿಪ್ಯಾಡ್‌ಗೆ ಆಗಮಿಸಿದ ಸಚಿವರು, ಅಲ್ಲಿಂದ ರಸ್ತೆ ಮಾರ್ಗದಲ್ಲಿ ಸೇತುವೆ ಬಳಿಗೆ ತಲುಪಿದರು.
ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ, ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ, ಶಾಸಕರಾದ ಆರಗ ಜ್ಞಾನೇಂದ್ರ, ಎಸ್.ಎನ್.ಚನ್ನಬಸಪ್ಪ, ಡಿ.ಎಸ್.ಅರುಣ್, ಡಾ.ಧನಂಜಯ ಸರ್ಜಿ, ಮಾಜಿ ಸಚಿವರಾದ ಕಾಗೋಡು ತಿಮ್ಮಪ್ಪ, ಹರತಾಳು ಹಾಲಪ್ಪ, ಸಿಗಂದೂರು ಕ್ಷೇತ್ರದ ಧರ್ಮದರ್ಶಿ ಎಸ್. ರಾಮಪ್ಪ, ಹಾಗೂ ಡಾ. ರಾಜನಂದಿನಿ ಕಾಗೋಡು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ದಶಕಗಳ ಸಂಕಷ್ಟಕ್ಕೆ ಮುಕ್ತಿ
ಸೇತುವೆಯ ಲೋಕಾರ್ಪಣೆಗೂ ಮುನ್ನ ಸ್ಥಳೀಯರು ಸೇತುವೆಯ ಸುರಕ್ಷತೆಗಾಗಿ ಗಣ ಹೋಮ ಹಾಗೂ ವಿಶೇಷ ಪೂಜೆಗಳನ್ನು ನೆರವೇರಿಸಿದರು. ಸೇತುವೆಯನ್ನು ಮಾವಿನ ತೋರಣ-ತಳಿರುಗಳಿಂದ ಅಲಂಕರಿಸಲಾಗಿದ್ದು, ತುಮರಿ, ಬ್ಯಾಕೋಡು, ಸಿಗಂದೂರು, ಕಳಸವಳ್ಳಿ ಭಾಗದ ದ್ವೀಪದ ನಿವಾಸಿಗಳು ನೂರಾರು ಸಂಖ್ಯೆಯಲ್ಲಿ ಛತ್ರಿಗಳನ್ನು ಹಿಡಿದು, ರೇನ್ ಕೋಟ್, ಜರ್ಕಿನ್‌ಗಳನ್ನು ಧರಿಸಿ ಆಗಮಿಸಿ ಲೋಕಾರ್ಪಣೆಯ ಕ್ಷಣವನ್ನು ಕಣ್ತುಂಬಿಕೊಂಡರು. ದಶಕಗಳ ತಮ್ಮ ಸಂಕಷ್ಟಕ್ಕೆ ಪರಿಹಾರ ದೊರೆತಿದ್ದನ್ನು ಕಂಡು ಅವರು ಪುಳಕಗೊಂಡರು. ಸೇತುವೆಯ ಎರಡೂ ಬದಿಯಲ್ಲಿ ಓಡಾಡಿ ಸಂತಸ ವ್ಯಕ್ತಪಡಿಸಿದರು.
ಸೇತುವೆಯ ಹಾದಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ಸಚಿವರಾದ ನಿತಿನ್ ಗಡ್ಕರಿ, ಪ್ರಲ್ಹಾದ ಜೋಶಿ, ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ, ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಅವರ ಭಾವಚಿತ್ರವಿರುವ ಬ್ಯಾನರ್‌ಗಳು ರಾರಾಜಿಸಿದವು.
ಸೇತುವೆಯ ವಿಶೇಷತೆಗಳು ಮತ್ತು ಸಂಪರ್ಕ ಸಾಧನ
ಸಾಗರ-ಮರಕುಟಿಕ ನಡುವಿನ ರಾಷ್ಟ್ರೀಯ ಹೆದ್ದಾರಿ 369ಇ ಹಾದಿಯಲ್ಲಿ ಬರುವ ಈ ಸೇತುವೆ ಲಿಂಗನಮಕ್ಕಿ ಅಣೆಕಟ್ಟೆಯ ಶರಾವತಿ ಹಿನ್ನೀರಿನ ವ್ಯಾಪ್ತಿಯಲ್ಲಿದೆ. 2.44 ಕಿ.ಮೀ ವಿಸ್ತೀರ್ಣ ಮತ್ತು 16 ಮೀಟರ್ ಅಗಲ ಹೊಂದಿರುವ ಈ ಸೇತುವೆಯನ್ನು 473 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಇದು ಸಾಗರ ತಾಲ್ಲೂಕಿನ ಕರೂರು-ಬಾರಂಗಿಯ ಹೋಬಳಿಗಳ ವ್ಯಾಪ್ತಿಯ ಗ್ರಾಮಗಳು ಮತ್ತು ಮಲೆನಾಡಿನ ಪ್ರಸಿದ್ಧ ಶ್ರದ್ಧಾಕೇಂದ್ರವಾದ ಸಿಗಂದೂರು ಚೌಡೇಶ್ವರಿ ದೇವಸ್ಥಾನಕ್ಕೆ ಪ್ರಮುಖ ಸಂಪರ್ಕ ಮಾರ್ಗವಾಗಿ ಕಾರ್ಯನಿರ್ವಹಿಸಲಿದೆ.
ಕಾರ್ಯಕ್ರಮದಿಂದ ದೂರ ಉಳಿದ ಕಾಂಗ್ರೆಸ್ ನಾಯಕರು
ಸೇತುವೆ ಲೋಕಾರ್ಪಣೆ ಸಮಾರಂಭದಲ್ಲಿ ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ, ಶಿವಮೊಗ್ಗ ಜಿಲ್ಲಾ ಉಸ್ತುವಾರಿಯೂ ಆದ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ, ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಸೇರಿದಂತೆ ಪ್ರಮುಖ ಕಾಂಗ್ರೆಸ್ ನಾಯಕರು ಗೈರುಹಾಜರಾಗಿದ್ದರು.