ಮುಂದಿನ ಮುಖ್ಯಮಂತ್ರಿ ಶಾಸಕರಿಗೆ ಅನುದಾನ ನೀಡುತ್ತಾರೋ? ಶಾಸಕ ಸುನಿಲ್ ಕುಮಾರ್ ವ್ಯಂಗ್ಯ
ಕಾಂಗ್ರೆಸ್ ಶಾಸಕರು ಅನುದಾನ ಬಂದಿಲ್ಲವೆಂದರೆ ಪಕ್ಷದಿಂದ ಶಾಸಕರಿಗೆ ನೋಟಿಸ್ ನೀಡುತ್ತಾರೆ. ಮಾಧ್ಯಮಗಳು ಸರ್ಕಾರದ ವೈಫಲ್ಯ ತೋರಿಸಿದರೆ ಜಾಹಿರಾತು ನಿಲ್ಲಿಸುತ್ತಾರೆ" ಎಂದು ಶಾಸಕ ಸುನಿಲ್ ಕುಮಾರ್ ತಿಳಿಸಿದರು.;
ಶಾಸಕ ಸುನೀಲ್ ಕುಮಾರ್
ಶಾಸಕರ ಕ್ಷೇತ್ರಗಳಿಗೆ ಮುಖ್ಯಮಂತ್ರಿ ಅನುದಾನ ನೀಡುತ್ತಾರೋ ಅಥವಾ ನವೆಂಬರ್‌ನಲ್ಲಿ ಬರುವ ನೂತನ ಮುಖ್ಯಮಂತ್ರಿಗಳು ಅನುದಾನ ನೀಡುತ್ತಾರೋ ಎಂದು ಸದನದಲ್ಲಿ ವ್ಯಂಗ್ಯವಾಡುವ ಮೂಲಕ ಶಾಸಕ ಸುನಿಲ್ ಕುಮಾರ್ ಸರ್ಕಾರವನ್ನು ತಿವಿದಿದ್ದಾರೆ.
ಗುರುವಾರ ವಿಧಾನಸಭೆಯಲ್ಲಿ ನಿಯಮ 69ರಡಿಯಲ್ಲಿ ಅನುದಾನದ ಬಗ್ಗೆ ಮಾತನಾಡಿದ ಅವರು, ಇತ್ತೀಚೆಗೆ ʼಸು ಫ್ರಮ್ ಸೋʼ ಸಿನಿಮಾ ಪ್ರಸಿದ್ದಿಯಾಗಿದೆ. ಅದೇ ರೀತಿ ಈ ಸರ್ಕಾರ ʼಬಿ ಫ್ರಮ್ ಸಿʼ (ಬೋಗಸ್ ಕಾಂಗ್ರೆಸ್) ಆಗಿದೆ. ಯಾವುದಕ್ಕೆ ಆದ್ಯತೆ ಕೊಡಬೇಕೋ ಎಂದು ಅರ್ಥ ಮಾಡಿಕೊಳ್ಳದೇ ದೂರದೃಷ್ಟಿ ಯೋಜನೆಗಳಿಗೆ ಅನುದಾನ ಕೊಡದಿರುವ ಬಗ್ಗೆ ಸಿಎಜಿ ವರದಿಯಲ್ಲಿ ಸರ್ಕಾರದ ಆರ್ಥಿಕ ಪರಿಸ್ಥಿತಿ ಉಲ್ಲೇಖವಾಗಿದೆ ಎಂದರು.
"ಎರಡು ವರ್ಷಗಳ ಅವಧಿಯಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ. ರಾಜ್ಯ ಸರ್ಕಾರವನ್ನು ಇಲ್ಲಗಳ ಸರ್ಕಾರ ಎಂದು ಕರೆಯಬೇಕು. ಗ್ರಾಮೀಣ ರಸ್ತೆಗಳ ಪರಿಸ್ಥಿತಿ ಹೇಳಲು ಸಾಧ್ಯವಿಲ್ಲ. ರಸ್ತೆಯಲ್ಲಿಗುಂಡಿ ಹುಡುಕಬೇಕೋ ಅಥವಾ ಗುಂಡಿಯಲ್ಲಿ ರಸ್ತೆ ಹುಡುಕಬೇಕೋ ಗೊತ್ತಿಲ್ಲ. ಗ್ಯಾರಂಟಿಗಳಿಂದ ಎಲ್ಲಾ ಚಟುವಟಿಕೆಗಳು ಬಂದ್ ಆಗಿವೆ. ನಿಶ್ಚಿತ ಅನುದಾನ ಕೊಟ್ಟರೆ ಶಾಸಕರು ನಿಮ್ಮನ್ನು ಗೌರವಿಸುತ್ತಾರೆ. ಇಲ್ಲದಿದ್ದರೆ ಕ್ಷೇತ್ರಗಳಲ್ಲಿ ಶಾಸಕರನ್ನೂ ಗೌರವಿಸುವುದಿಲ್ಲ" ಎಂದು ತಿಳಿಸಿದರು.
"ಕಾಂಗ್ರೆಸ್ ಶಾಸಕರು ಅನುದಾನ ಬಂದಿಲ್ಲವೆಂದರೆ ಪಕ್ಷದಿಂದ ಶಾಸಕರಿಗೆ ನೋಟಿಸ್ ನೀಡುತ್ತಾರೆ. ಮಾಧ್ಯಮಗಳು ಸರ್ಕಾರದ ವೈಫಲ್ಯ ತೋರಿಸಿದರೆ ಜಾಹಿರಾತು ನಿಲ್ಲಿಸುತ್ತಾರೆ. ಟೀಕೆ ಮಾಡಿದರೆ ವಿಪಕ್ಷ ಗಳನ್ನು ಕಟ್ಟಿ ಹಾಕುವ ಕೆಲಸವಾಗುತ್ತದೆ. ಇಂದು ಸರ್ಕಾರದ ಬಗ್ಗೆ ಏನೂ ಮಾತಾಡದ ಪರಿಸ್ಥಿತಿ ಬಂದಿದೆ" ಎಂದರು.
ವಯನಾಡಿನಲ್ಲಿ ಭೂಕುಸಿತಕ್ಕೆ 10ಕೋಟಿ ರೂ. ಕೊಡುವ ಸರ್ಕಾರ, ರಾಜ್ಯದಲ್ಲಿ ಉಂಟಾದ ಪ್ರವಾಹಕ್ಕೆ ಏಕೆ ಮಿಡಿಯುತ್ತಿಲ್ಲ. ಈ ಸರ್ಕಾರದಲ್ಲಿ ಜನರು ಸುಖದಿಂದ ಇದ್ದಾರೆ ಅನ್ನೋ ಮಾತು ಕೇಳಿ ನನಗೆ ನಾಚಿಕೆಯಾಗುತ್ತಿದೆ. ಮೈಸೂರು ಮಹಾರಾಜರಿಗಿಂತ ಸಿಎಂ ಒಳ್ಳೆಯ ಕೆಲಸ ಮಾಡಿದ್ದಾರೆ ಎಂದು ಕೆಲವರು ಇತ್ತೀಚೆಗೆ ಹೇಳಿಕೆ ನೀಡಿದ್ದರು. ಆದರೆ ನಮಗೆ ಆ ರೀತಿ ಅನಿಸುತ್ತಿಲ್ಲ. ಜಾತಿ ಜನಗಣತಿಯನ್ನು ಕಸದ ಬುಟ್ಟಿಗೆ ಹಾಕಿ ಹಿಂದುಳಿದ ವರ್ಗಕ್ಕೆ ಅನ್ಯಾಯ ಮಾಡಿದ್ದಾರೆ ಎಂದು ಕಿಡಿ ಕಾರಿದರು.