ಲೈಂಗಿಕ ದೌರ್ಜನ್ಯ, ಜಾತಿ ನಿಂದನೆ ಆರೋಪ: ಜಿ. ದೇವರಾಜೇಗೌಡ ವಿಚಾರಣೆ
ಲೈಂಗಿಕ ದೌರ್ಜನ್ಯ ಹಾಗೂ ಜಾತಿನಿಂದನೆ ಆರೋಪಕ್ಕೆ ಸಂಬಂಧಿಸಿದಂತೆ ವಕೀಲ ಹಾಗೂ ಬಿಜೆಪಿ ಮುಖಂಡ ಜಿ. ದೇವರಾಜೇಗೌಡ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಹೊಳೆನರಸೀಪುರಕ್ಕೆ ಕರೆದುಕೊಂಡು ಬಂದಿದ್ದಾರೆ. ಹಲವು ಪ್ರಕರಣಗಳ ಬಗ್ಗೆ ಏಕಕಾಲಕ್ಕೆ ವಿಚಾರಣೆ ನಡೆಸಲಾಗುತ್ತಿದೆ.;
ಲೈಂಗಿಕ ದೌರ್ಜನ್ಯ ಹಾಗೂ ಜಾತಿನಿಂದನೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ವಕೀಲ ಹಾಗೂ ಬಿಜೆಪಿ ಮುಖಂಡ ಜಿ. ದೇವರಾಜೇ ಗೌಡ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಹೊಳೆನರಸೀಪುರಕ್ಕೆ ಕರೆದುಕೊಂಡು ಬಂದಿದ್ದಾರೆ. ಹಾಸನದ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಸೇರಿದ್ದು ಎನ್ನಲಾಗಿರುವ ಲೈಂಗಿಕ ದೌರ್ಜನ್ಯ ವಿಡಿಯೋಗಳನ್ನು ಜಿ.ದೇವರಾಜೇ ಗೌಡ ಸೋರಿಕೆ ಮಾಡಿದ್ದರು ಎನ್ನುವ ಆರೋಪ ಕೇಳಿಬಂದಿತ್ತು.
ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ಜಿ.ದೇವರಾಜೇಗೌಡ ಎಂಬವರನ್ನು ಹೊಳೆನರಸೀಪುರದ ಇನ್ಸ್‌ಪೆಕ್ಟರ್ ಕಚೇರಿಯಲ್ಲಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಮಹಿಳೆಯಿಂದ ದೂರು ದಾಖಲು
"ಜಮೀನು ಮಾರಾಟ ಮಾಡಿಕೊಡುವಂತೆ ದೇವರಾಜೇ ಗೌಡರಿಗೆ ಮನವಿ ಮಾಡಿದ್ದೆ, ಆಗ ದೇವರಾಜೇ ಗೌಡ ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ" ಎಂದು ಮಹಿಳೆಯೊಬ್ಬರು ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ದೇವರಾಜೇ ಗೌಡ ವಿರುದ್ಧ ದೂರು ನೀಡಿದ್ದರು. ಅಲ್ಲದೇ ಜಾತಿನಿಂದನೆ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಮತ್ತೊಂದು ದೂರು ಸಹ ದಾಖಲಾಗಿದೆ. ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಹಾಸನ ಜಿಲ್ಲಾಧಿಕಾರಿ ಸಿ.ಸತ್ಯಭಾಮ ಅವರು ಸಹ ಈಗಾಗಲೇ ದೂರು ದಾಖಲಿಸಿದ್ದಾರೆ. ದೇವರಾಜೇ ಗೌಡ ಮೇಲೆ ಹಲವು ಪ್ರಕರಣಗಳು ದಾಖಲಾಗಿದ್ದು, ಪೊಲೀಸರು ಎಲ್ಲ ಪ್ರಕರಣಗಳ ಬಗ್ಗೆ ತನಿಖೆ ನಡೆಸುತ್ತಿದ್ದು, ಬಂಧಿಸುವ ಸಾಧ್ಯತೆ ಇದೆ.
ದೇವರಾಜೇಗೌಡ ವಿಚಾರಣೆ: ಮುನ್ನೆಚ್ಚರಿಕೆ
ವಿವಿಧ ಪ್ರಕರಣದಲ್ಲಿ ಆರೋಪಿಯಾಗಿರುವ ದೇವರಾಜೇ ಗೌಡ ಅವರನ್ನು ಹೊಳೆನರಸೀಪುರ ಇನ್ಸ್ ಪೆಕ್ಟರ್ ಕಚೇರಿಯಲ್ಲಿ ವಿಚಾರಣೆಗೆ ಒಳಪಡಿಸಲಾಗಿದ್ದು, ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ. ವಿಚಾರಣೆ ನಡೆಯುತ್ತಿರುವ ಪ್ರದೇಶದಲ್ಲಿ ಜನ ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಿದ್ದು, ಪೊಲೀಸರು ಗುಂಪು ಚದುರಿಸುತ್ತಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಕೆಎಸ್ಆರ್‌ಪಿ ತುಕಡಿಯನ್ನು ನಿಯೋಜಿಸಲಾಗಿದೆ.
ವಿಚಾರಣೆ ನಡೆಸುತ್ತಿರುವ ಪೊಲೀಸ್ ತಂಡ
ದೇವರಾಜೇ ಗೌಡ ವಿಚಾರಣೆ ಪ್ರಾರಂಭವಾಗಿದ್ದು, ಎಸ್ಪಿ ಮೊಹಮ್ಮದ್ ಸುಜೀತಾ, ಎಎಸ್ಪಿ ವೆಂಕಟೇಶ್ ನಾಯ್ಡು, ಡಿವೈಎಸ್ಪಿ ಅಶೋಕ್ ಮತ್ತು ಸರ್ಕಲ್ ಇನ್ಸ್‌ಪೆಕ್ಟರ್ ಸುರೇಶ್ ಕುಮಾರ್ ಸೇರಿದಂತೆ ಹಿರಿಯ ಅಧಿಕಾರಿಗಳ ತಂಡ ಸ್ಥಳದಲ್ಲಿ ಹಾಜರಿದ್ದಾರೆ.
ದೇವರಾಜೇ ಗೌಡ ಯಾರು ?
ಜಿ. ದೇವರಾಜೇ ಗೌಡ ಹಾಸನದ ವಕೀಲ ಹಾಗೂ ಬಿಜೆಪಿ ಮುಖಂಡರಾಗಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಹೊಳೆನರಸೀಪುರ ಕ್ಷೇತ್ರದಲ್ಲಿ ಸ್ಪರ್ಧಿಸಿ ಸೋತಿದ್ದರು. ನನ್ನ ಬಳಿ 2900ಕ್ಕೂ ಹೆಚ್ಚು ವಿಡಿಯೋಗಳಿದ್ದು, ಅವುಗಳನ್ನು ಬಿಡುಗಡೆ ಮಾಡುವುದಕ್ಕೆ ಸಿದ್ಧನಿದ್ದೇನೆ ಎಂದು ಸಹ ಹೇಳಿದ್ದರು. ತಡೆಯಾಜ್ಞೆ ತೆರವು ಮಾಡಿದರೆ ಎಲ್ಇಡಿ ಪರದೆ ಹಾಕಿ ತೋರಿಸುವೆ ಎಂದು ಸಹ ಸವಾಲು ಹಾಕಿದ್ದರು.
ಬಿಜೆಪಿಗೆ ಪತ್ರ ಬರೆದು ಎಚ್ಚರಿಕೆ
ಕೆಲವು ದಿನಗಳ ಹಿಂದೆ ಜಿ. ದೇವರಾಜೇ ಗೌಡ ಅವರು ಬಿಜೆಪಿಯ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ರಹಸ್ಯ ಪತ್ರ ಬರೆದು ಜೆಡಿಎಸ್‌ನೊಂದಿಗೆ ಮೈತ್ರಿ ಮಾಡಿಕೊಳ್ಳುವುದು ಬೇಡ. ನನ್ನ ಬಳಿ ಲೈಂಗಿಕ ಹಗರಣದ ವಿಡಿಯೋಗಳು ಇವೆ. ಅದನ್ನು ಬಿಡುಗಡೆ ಮಾಡಿದರೆ ಮೈತ್ರಿ ಪಕ್ಷಕ್ಕೆ ಹಿನ್ನಡೆಯಾಗುತ್ತದೆ ಎಂದು ಎಚ್ಚರಿಸಿದ್ದರು. ಆದರೆ, ಈಚೆಗೆ ಪತ್ರಿಕಾಗೋಷ್ಠಿ ನಡೆಸಿದ್ದ ದೇವರಾಜೇ ಗೌಡ ಹಾಸನದ ಸಂಸದ ಪ್ರಜ್ವಲ್ ರೇವಣ್ಣಗೆ ಸೇರಿದ್ದು ಎನ್ನಲಾಗಿರುವ ವಿಡಿಯೋಗಳನ್ನು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರೇ ಸೋರಿಕೆ ಮಾಡಿದ್ದಾರೆ. ಅವರು ನನ್ನೊಂದಿಗೆ ಮಾತನಾಡಿದ್ದರು ಎಂದು ಆರೋಪಿಸಿದ್ದರು.