Weather Updates | ವಾಯು ಮಾಲಿನ್ಯ: ʼದೆಹಲಿʼಯಾಗುವತ್ತ ರಾಜಧಾನಿಯ ದಾಪುಗಾಲು!
ಚಳಿಯ ನಡುವೆ ಬೆಂಗಳೂರಿಗರಿಗೆ ವಾಯುಮಾಲಿನ್ಯದ ಭೀತಿ ಎದುರಾಗಿದೆ. ಬೆಂಗಳೂರಿನಲ್ಲಿ ಕೂಡ ದೆಹಲಿ ಮಾದರಿಯಲ್ಲಿ ವಾಯು ಗುಣಮಟ್ಟ ತೀವ್ರ ಕುಸಿತದ ಹಾದಿಯಲ್ಲಿದೆ;
ಈ ಬಾರಿಯ ಚಳಿಗಾಲದಲ್ಲಿ ರಾಜ್ಯ ರಾಜಧಾನಿ, ರಾಷ್ಟ್ರ ರಾಜಧಾನಿಯಾಗಲಿದೆಯೇ? ಹೌದು ಎನ್ನುತ್ತದೆ ಸಿಲಿಕಾನ್ ಸಿಟಿಯ ಚಳಿ ಮತ್ತು ಧೂಳು!
ಧೂಳು, ಹೊಗೆಯ ಕಾರಣಕ್ಕಾಗಿ ರಾಷ್ಟ್ರ ರಾಜಧಾನಿ ದೆಹಲಿ ಪ್ರತಿವರ್ಷ ಅಘೋಷಿತ ಕರ್ಫ್ಯೂ ಸ್ಥಿತಿಯನ್ನು ಎದುರಿಸುತ್ತಿದೆ. ಶಾಲೆ, ಕಚೇರಿಗಳಿಗೆ ರಜೆ ನೀಡುವ ಮಟ್ಟಿಗೆ ಅಲ್ಲಿನ ವಾಯು ಮಾಲಿನ್ಯ ದೆಹಲಿವಾಸಿಗಳನ್ನು ಕಾಡುತ್ತಿದೆ. ಇದೀಗ ಬೆಂಗಳೂರಿನಲ್ಲಿ ಕೂಡ ಅಂತಹ ದಿನಗಳು ಬರಬಹುದು ಎಂಬ ಆತಂಕ ಎದುರಾಗಿದೆ.
ಈ ಬಾರಿಯ ಚಳಿಗಾಲದ ಹಂಗಾಮು ಆರಂಭಕ್ಕೆ ಮುನ್ನವೇ ಉದ್ಯಾನನಗರಿಯಲ್ಲಿ ಚಳಿ ಜನರನ್ನು ಗಡಗಡ ನಡುಗಿಸತೊಡಗಿದೆ. ಈ ನಡುವೆ, ಚಳಿಯೊಂದಿಗೆ ಬೆಂಗಳೂರಿನಲ್ಲಿ ಧೂಳು ಮತ್ತು ಹೊಗೆಯ ಪ್ರಮಾಣ ಕೂಡ ಗಣನೀಯ ಏರಿಕೆ ಕಂಡಿದ್ದು, ಜನರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ.
ಆ ಹಿನ್ನೆಲೆಯಲ್ಲಿ ಬೆಂಗಳೂರಿನ ಅತಿಹೆಚ್ಚು ವಾಯಮಾಲಿನ್ಯವಿರುವ ರಸ್ತೆಗಳಲ್ಲಿ ಮಾಲಿನ್ಯ ತಡೆ ʼಆ್ಯಂಟಿ ಸ್ಮಾಗ್ ಗನ್' ಯಂತ್ರಗಳನ್ನು ಬೃಹತ್ ಬೆಂಗಳೂರು ಮಹಾನಗರಪಾಲಿಕೆ (ಬಿಬಿಎಂಪಿ) ಬಳಸಲಾರಂಭಿಸಿದೆ. ಧೂಳು ಹೆಚ್ಚಿರುವ ನಗರದ ಅತಿಹೆಚ್ಚು ನಿರ್ಮಾಣ ಚಟುವಟಿಕೆಗಳು ನಡೆಯುತ್ತಿರುವ ಪ್ರದೇಶಗಳಲ್ಲಿ ಈ ಯಂತ್ರಗಳನ್ನು ಬಳಸಲಾಗುತ್ತಿದೆ.
ಈ ಯಂತ್ರವುಳ್ಳ ವಾಹನ ನಿತ್ಯ ಸುಮಾರು 60 ಕಿ.ಮೀ ಸಂಚರಿಸುತ್ತಿದೆ. ದೆಹಲಿ ಪರಿಸ್ಥಿತಿ ಹಿನ್ನೆಲೆಯಲ್ಲಿ ನಗರದಲ್ಲಿ ನಗರದಲ್ಲಿ ಅಂತಹ ಪರಿಸ್ಥಿತಿ ಬಾರದಂತೆ ಮುನ್ನೆಚ್ಚರಿಕೆ ವಹಿಸಲಾಗುತ್ತಿದೆ' ಎಂದು ರಸ್ತೆ ಮೂಲಸೌಕರ್ಯದ ಮುಖ್ಯ ಎಂಜಿನಿಯರ್ ಬಿ.ಎಸ್. ಪ್ರಹ್ಲಾದ್ ಹೇಳಿದ್ದಾರೆ.
'ಕೋರಮಂಗಲ-100 ವ್ಯಾಲಿಯಲ್ಲಿ ಬಿಬಿಎಂಪಿ ವತಿಯಿಂದ ನಿರ್ಮಿಸಲಾಗಿರುವ 5 ಎಂಎಲ್‌ಡಿ ತ್ಯಾಜ್ಯ ನೀರು ಸಂಸ್ಕರಣ ಘಟಕದಿಂದ 'ಆ್ಯಂಟಿ ಸ್ಮಾಗ್ ಗನ್' ಯಂತ್ರಗಳಿಗೆ ನೀರನ್ನು ಬಳಸಲಾಗುತ್ತಿದೆ. ಒಟ್ಟು 8 'ಆ್ಯಂಟಿ ಸ್ಮಾಗ್ ಗನ್' ಯಂತ್ರಗಳನ್ನು ಬಳಸಲಾಗುತ್ತಿದ್ದು, ಪ್ರತಿಯೊಂದು ಯಂತ್ರವೂ 45 ಕಿ.ಮೀ.ಯಿಂದ 60 ಕಿ.ಮೀ ಸಂಚಾರ ಮಾಡುತ್ತದೆ. 6000 ಲೀಟರ್ ಪ್ರತಿ ಯಂತ್ರದ ನೀರಿನ ಸಂಗ್ರಹ ಸಾಮರ್ಥ್ಯ ಎಂದು ಹೇಳಿದರು.
ವಾಯುಮಾಲಿನ್ಯ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಮುಖ್ಯವಾಗಿ ಚಿಕ್ಕ ಮಕ್ಕಳಿಗೆ, ವಯಸ್ಸಾದವರಿಗೆ ಉಸಿರಾಟದ ತೊಂದರೆಯನ್ನು ಉಂಟು ಮಾಡುವ ಭೀತಿ ಕೂಡ ಇದೆ. ಶ್ವಾಸಕೋಶ ಹಾಗೂ ಉಸಿರಾಟ ತೊಂದರೆ, ಹೃದ್ರೋಗಿಗಳು, ಮಕ್ಕಳು ಮತ್ತು ಹಿರಿಯ ವಯಸ್ಕರು ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ವಾಯು ಮಾಲಿನ್ಯ ನಿಯಂತ್ರಣ ಮಂಡಳಿ ಸೂಚನೆ ಕೂಡ ನೀಡಿದೆ.
ಗಾಳಿಯ ಗುಣಮಟ್ಟ
ಬೆಂಗಳೂರಿನ ವಾಯು ಗುಣಮಟ್ಟದ ಕುರಿತ ಅಂಕಿ ಅಂಶಗಳ ಪ್ರಕಾರ, ಹೆಬ್ಬಾಳ AQI 98 ರಿಂದ 129ಗೆ ತಲುಪಿದೆ. ಜೆ.ಪಿ ನಗರ 5ನೇ ಬ್ಲಾಕ್ AQI 90 ರಿಂದ 122ಗೆ ತಲುಪಿದೆ. ಮೈಸೂರು ರಸ್ತೆಯ ಕವಿಕಾ AQI 70 ರಿಂದ 114ಗೆ ತಲುಪಿದೆ. ಸಿಲ್ಕ್ ಬೋರ್ಡ್ ನಲ್ಲಿ AQI ರಿಂದ 119ಗೆ ತಲುಪಿದೆ. ಪೀಣ್ಯ ಇಂಡಸ್ಟ್ರಿಯಲ್ ಏರಿಯಾ AQI 80 ರಿಂದ – 111ಗೆ ತಲುಪಿದೆ. ಮೈಲಸಂದ್ರ AQI 78 ರಿಂದ 122 ಗೆ ತಲುಪಿದೆ.
ವಿವಿಧ ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ
ಬಂಗಾಳದಲ್ಲಿ ವಾಯುಭಾರ ಕುಸಿತದ ಪರಿಣಾಮವಾಗಿ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣವಿದ್ದು, 20ಕ್ಕೂ ಅಧಿಕ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು, ವಿಜಯನಗರದಲ್ಲಿ ಮಳೆಯಾಗಲಿದೆ.