Invest Karnataka 2025 | ಸಾವಿನ ನಂತರವೂ ಮೊಮ್ಮಕ್ಕಳೊಡನೆ ಮಾತಾಡಬಹುದು..!

'ಮುಂದಿನ ದಿನಗಳಲ್ಲಿ ನಮ್ಮ ಸಾವಿನ ನಂತರವೂ ನಾವು ನಮ್ಮ ಮಕ್ಕಳು, ಮೊಮ್ಮಕ್ಕಳ ಜೊತೆ ಮಾತನಾಡುತ್ತಿರಬಹುದು' ಎಂದು ಗೂಗಲ್ ಎಕ್ಸ್​​ನ ಸೆಬಾಸ್ಟಿಯನ್ ಥ್ರನ್ ಭವಿಷ್ಯ ನುಡಿದಿದ್ದಾರೆ. ಹೆಚ್ಚಿನ ಮಾಹಿತಿ ಮುಂದಿದೆ..;

Update: 2025-02-13 13:11 GMT
ಇನ್ವೆಸ್ಟ್ ಕರ್ನಾಟಕ ಸಮಾವೇಶದಲ್ಲಿ ಎಐ ಗೋಷ್ಠಿಯಲ್ಲಿ ಗೂಗಲ್ ಎಕ್ಸ್​​ನ ಸೆಬಾಸ್ಟಿಯನ್ ಥ್ರನ್ ಚರ್ಚೆ ಮಾಡಿದರು

ಈಗೀಗ ಎಲ್ಲಿ ನೋಡಿದರೂ ಆರ್ಟಿಫಿಸಿಯಲ್ ಇಂಟಲಿಜೆನ್ಸ್​(ಎಐ)ನದ್ದೆ ಸದ್ದು. ಅದರಲ್ಲಿಯೂ ಕೈಗಾರಿಕಾ ಕ್ಷೆತ್ರದಲ್ಲಿ ಎಐ ಬಳಕೆ ಮುಂದಿನ ದಿನಗಳಲ್ಲಿ ಅತಿ ಹೆಚ್ಚಾಗುವ ಎಲ್ಲ ಸಾಧ್ಯತೆಗಳಿವೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಇನ್ವೆಸ್ಟ್ ಕರ್ನಾಟಕ-2025ನಲ್ಲಿಯೂ ಎಐ ಚರ್ಚೆಯ ಕೇಂದ್ರವಾಗಿದೆ.

‘ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ’ದಲ್ಲಿ ಗುರುವಾರ ಆಯೋಜಿಸಿದ್ದ ‘ಪ್ರವರ್ತಕ ಎಐ: ಅಮೋಘ ಕಲ್ಪನೆಯಿಂದ ನೈಜ ಪ್ರಭಾವದವರೆಗೆ’ ಗೋಷ್ಠಿ ಕೂಡ ಎಐನ ಹಲವು ಹೊಸ ಆಯಾಮಗಳ ಮೇಲೆ ಬೆಳಕು ಚೆಲ್ಲಿತು.

ಗೋಷ್ಠಿಯಲ್ಲಿ ಮಾತನಾಡಿದ ಗೂಗಲ್ ಎಕ್ಸ್ (Google X) ಸಂಸ್ಥೆಯ ಸ್ಥಾಪಕ ಸೆಬಾಸ್ಟಿಯನ್ ಥ್ರನ್, 'ಮುಂದಿನ ದಿನಗಳಲ್ಲಿ ನಮ್ಮ ಸಾವಿನ ನಂತರವೂ ನಾವು ನಮ್ಮ ಮಕ್ಕಳು, ಮೊಮ್ಮಕ್ಕಳ ಜೊತೆ ಮಾತನಾಡುತ್ತಿರಬಹುದು. ಅಂತಹ ಸಾಧ್ಯತೆಯನ್ನು ಎಐ ಹೊತ್ತು ತರಲಿದೆ' ಎಂದು ಭವಿಷ್ಯ ನುಡಿದರು.

ಊಹಿಸಲೂ ಸಾಧ್ಯವಾಗುತ್ತಿಲ್ಲ

“ಎಐ ಪ್ರಗತಿಯನ್ನು ಊಹಿಸಲೂ ಸಾಧ್ಯವಾಗುತ್ತಿಲ್ಲ. ಮೂರು ವರ್ಷಕ್ಕೂ ಮೊದಲು ಚಾಟ್‌ ಜಿಪಿಟಿಯನ್ನು ಯಾರೂ ಕಲ್ಪಿಸಿಕೊಂಡಿರಲಿಲ್ಲ. ಹಾಗೆಯೇ ಮುಂದಿನ ಮೂರು ವರ್ಷಗಳಲ್ಲಿ ಎಐ ಸ್ವರೂಪ ಹೇಗಿರುತ್ತದೆ ಎಂದು ಈಗ ಯಾರೂ ಹೇಳಲು ಸಾಧ್ಯವಿಲ್ಲ. ಸ್ವಯಂಚಾಲಿತ ಕಾರುಗಳು ಎಷ್ಟು ಸ್ವತಂತ್ರವಾಗಿವೆ ಎಂದರೆ ಸ್ಯಾನ್ ಫ್ರಾನ್ಸಿಸ್ಕೊದಲ್ಲಿ ನಮ್ಮ ಸಂಪೂರ್ಣ ಸ್ವಯಂಚಾಲಿತ ‘ವೇಮೋ’ ಕಾರು ಯಾರ ಮೇಲ್ವಿಚಾರಣೆಯೂ ಇಲ್ಲದೆ ಜನರನ್ನು ಓಡಾಡಿಸುತ್ತಿದೆ. ಇದು ಮುಂದಿನ ದಿನಗಳಲ್ಲಿ ಭಾರತಕ್ಕೂ ಬರಲಿದೆ,” ಎಂದರು.

ಜನರಲ್ಲಿನ ಭಯ ದೂರಾಗಿದೆ

'ಎಐ'ನ ಆರಂಭಿಕ ದಿನಗಳಲ್ಲಿ ಇದರ ಬಗ್ಗೆ ಜನರಲ್ಲಿ ಯಾವ ಅಭಿಪ್ರಾಯವಿತ್ತು? ಎಂಬ ಪ್ರಶ್ನೆಗೆ ಉತ್ತರಿಸಿದ ಸೆಬಾಸ್ಟಿಯನ್ ಥ್ರನ್, 'ಆರಂಭದಲ್ಲಿ ಎಐ ಕುರಿತು ಜನರಲ್ಲಿ ತುಂಬಾ ಭಯವಿತ್ತು. ಈ ತಂತ್ರಜ್ಞಾನ ಇಡೀ ಮನುಷ್ಯ ಕುಲವನ್ನು ನಾಶ ಮಾಡಿಯೇ ಬಿಡುತ್ತದೆ ಎಂಬ ಮಾತುಗಳು ಸಾಮಾನ್ಯವಾಗಿದ್ದವು. ಆದರೆ ಆ ಪರಿಸ್ಥಿತಿ ಈಗಿಲ್ಲ. ಜನರಲ್ಲಿ ಆತಂಕ ಹೋಗಿದೆ. ಎಐ ತಂತ್ರಜ್ಞಾನವನ್ನು ಜನರು ಪ್ರೀತಿಯಿಂದ ಅಪ್ಪಿಕೊಂಡಿದ್ದಾರೆ. ವ್ಯಾಪಕವಾಗಿ ಅದನ್ನು ಬಳಸುತ್ತಿದ್ದಾರೆ. ಈ ತಂತ್ರಜ್ಞಾನವನ್ನು ಆರಂಭದಲ್ಲಿ ಬರವಣಿಗೆಯ ಮುಂದಿನ ಪದ ಅಥವಾ ವಾಕ್ಯಗಳನ್ನು ಊಹಿಸಲು ಬಳಸಲಾಗುತ್ತಿತ್ತು. ಅದೀಗ ಯಾವುದೇ ವಿಚಾರದ ಬಗ್ಗೆ ಪುಟಗಟ್ಟಲೇ ಸ್ವತಂತ್ರವಾಗಿ ಬರೆಯಬಲ್ಲದಾಗಿದೆ. ಇಷ್ಟು ಅಗಾಧ ಬೆಳವಣಿಗೆಯನ್ನು ಯಾರೂ ಊಹಿಸಿರಲಿಲ್ಲ. ಹೀಗಾಗಿ ಎಐ ತಂತ್ರಜ್ಞಾನ ಅನೂಹ್ಯವಾದುದು' ಎಂದು  ಅಭಿಪ್ರಾಯಪಟ್ಟರು.

ಗೂಗಲ್ ಕೂಡ ವಿಫಲವಾಗಿದೆ

ʼಗೋಷ್ಠಿಯಲ್ಲಿ ಗೂಗಲ್‌ನಲ್ಲಿ ನೀವು ಎಐ ವೈಪಲ್ಯ ನೋಡಿಲ್ಲವೇ?’ ಎಂಬ ಪ್ರಶ್ನೆಗೆ ಉತ್ತರಿಸಿದ ಥ್ರನ್, 'ವೈಫಲ್ಯ ಎನ್ನುವುದು ಎಲ್ಲಾ ಸಂಶೋಧನೆಗಳ ಮೂಲ. ವಿಫಲವಾಗದ ಹೊರತು ಸಫಲತೆ ಸಾಧ್ಯವಿಲ್ಲ. ಗೂಗಲ್‌ನಂತಹ ದೈತ್ಯ ಕಂಪನಿಯೂ ಹಲವು ವೈಫಲ್ಯಗಳನ್ನು ಕಂಡಿದೆ. ಗೂಗಲ್‌ ಗ್ಲ್ಯಾಸ್‌ ಎಂಬ ಆಗ್‌ಮೆಂಟೆಡ್‌ ರಿಯಾಲಿಟಿ ಸಾಧನ ಮೊಬೈಲ್‌ಗಳನ್ನೇ ಮರೆಸುತ್ತದೆ ಎಂದು ಗೂಗಲ್ ಭಾವಿಸಿತ್ತು. ಆದರೆ ಅದು ಶೋಚನೀಯವಾಗಿ ವಿಫಲವಾಯಿತು. ಉದ್ಯಮಿಗಳು ರಿಸ್ಕ್‌ಗಳಿಗೆ, ವೈಫಲ್ಯಗಳಿಗೆ ಹೆದರಬಾರದು. ಅವುಗಳೇ ಮುಂದಿನ ಸಾಧನೆಗೆ ಪ್ರೇರಣೆ' ಎಂದು ನವೋದ್ಯಮಿಗಳಲ್ಲಿ ಆತ್ಮವಿಶ್ವಾಸ ತುಂಬಿದರು.

'ಮಹತ್ತರ ಸಂಶೋಧನೆಗಳು ದೊಡ್ಡ ತಂಡದಲ್ಲಿ ಸಂಭವಿಸುವುದಿಲ್ಲ. ಬಹುತೇಕ ಕ್ರಾಂತಿಕಾರಿ ಸಂಶೋಧನೆಗಳು ಆವಿಷ್ಕಾರಗೊಳ್ಳುವುದು ಸಣ್ಣ ತಂಡದಲ್ಲಿ. ತಂಡ ಸಣ್ಣದು, ಹೆಚ್ಚಿನ ಹಣವಿಲ್ಲ ಎಂಬ ಅಂಜಿಕೆ ತೊರೆದು ಮುನ್ನುಗ್ಗಿದರೆ ಮಾತ್ರ ಯಶಸ್ಸು ಸಾಧ್ಯ. ಇಂದಿನ ದಿನಗಳಲ್ಲಿ ಇಬ್ಬರೇ ಇದ್ದರೂ ಸಾಕು ಕಂಪನಿಯನ್ನು ಜಾಗತಿಕ ಮಟ್ಟಕ್ಕೆ ಬೆಳೆಸಬಹುದು. ಎಐ ಮತ್ತಿತರ ತಂತ್ರಜ್ಞಾನಗಳ ನೆರವಿನಿಂದ ಇದು ಸಾಧ್ಯವಾಗಿದೆ' ಎಂದು ವಿವರಿಸಿದರು.


ಸಂಶೋಧನೆಯ ಕತ್ತು ಹಿಸುಕುವಂತಿರಬಾರದು

ಕಾನೂನು ನಿಯಂತ್ರಣ ಎಐ ಬೆಳವಣಿಗೆಗೆ ಅನಾನುಕೂಲವೇ ಎಂದು ನಿರೂಪಕರು ಕೇಳಿದ ಪ್ರಶ್ನೆಗೆ ಉತ್ತರಿಸಿ, 'ನಿಯಂತ್ರಣ ಇರಬೇಕು. ಆದರೆ ಅದು ಸಂಶೋಧನೆಯ ಕತ್ತು ಹಿಸುಕುವಂತಿರಬಾರದು. ಅರಳುವ ಮುಂಚೆಯೇ ಚಿವುಟುವುದು ಸೂಕ್ತವಲ್ಲ. ದುರ್ಬಳಕೆಯಾದಾಗ ಸೂಕ್ತ ನಿಯಂತ್ರಣ ಹೇರುವುದು ಸೂಕ್ತ. ಚೀನ ಮತ್ತು ಯೂರೊಪಿಯನ್‌ ಯೂನಿಯನ್‌ಗಳು ಎಐ ಸಂಶೋಧನೆ ಮೇಲೆ ಇಂಥದೇ ನಿಯಂತ್ರಣ ಹೇರುತ್ತಿವೆ. ಆದರೆ ಭಾರತ ಹಾಗಲ್ಲ. ದುರ್ಬಳಕೆಯಾಗುತ್ತಿದೆ ಎಂದಾಗ ಮಾತ್ರ ಇಲ್ಲಿನ ರಾಜಕಾರಣಿಗಳು ಮಧ್ಯಪ್ರವೇಶಿಸುತ್ತಾರೆ. ಭಾರತದ ಸಿಇಒಗಳು ತಂತ್ರಜ್ಞಾನ ಪ್ರೇಮಿಗಳು, ಬುದ್ಧಿವಂತರು. ಅದಕ್ಕೇ ಸತ್ಯ ನಾದೆಲ್ಲ ಅವರಿಗೆ ಗೂಗಲ್‌ನಂತಹ ದೈತ್ಯ ಸಂಸ್ಥೆಯನ್ನು ಮುನ್ನಡೆಸಲು ಸಾಧ್ಯವಾಗಿದೆ' ಎಂದು ಭಾರತವನ್ನು ಪ್ರಶಂಸಿದರು.

ಹೊಸ ಉದ್ಯೋಗಗಳಿಗೆ ಸನ್ನದ್ಧರಾಗಿ

ಉದ್ಯೋಗ ಕ್ಷೇತ್ರದಲ್ಲಿ ಎಐ ಕುರಿತು ಒಂದು ರೀತಿಯಲ್ಲಿ ಆತಂಕ ಇದೆಯಲ್ಲಾ ಎಂಬ ಪ್ರಶ್ನೆಗೆ, 'ಅದು ಸಹಜವೇ. ಆದರೆ ವಾಸ್ತವದಲ್ಲಿ ಎಐ, ಉದ್ಯೋಗಿಗಳ ಜೊತೆಯೇ ಸಾಗುತ್ತದೆ. ಹಾಗೆಂದು ಉದ್ಯೋಗ ನಷ್ಟವಾಗುವುದಿಲ್ಲ ಎಂದಲ್ಲ. ಈಗಿರುವ ಸುಮಾರು 60% ಉದ್ಯೋಗಗಳು ಮುಂದಿನ ದಿನಗಳಲ್ಲಿ ಇಲ್ಲವಾಗುತ್ತವೆ. ಆದರೆ ಅದೇ ವೇಳೆಗೆ ಅದಕ್ಕಿಂತ ಹೆಚ್ಚಿನ ಹೊಸ ಉದ್ಯೋಗಗಳು ಸೃಷ್ಟಿಯಾಗುತ್ತವೆ. ಅದಕ್ಕೆ ಯುವ ಜನತೆ ಸಜ್ಜಾಗಬೇಕು' ಎಂದು ಥ್ರನ್ ಸಲಹೆ ನೀಡಿದರು.

ಮೀಟಿಂಗ್‌ಗೆ ನಮ್ಮ ಡಿಜಿಟಲ್‌ ಟ್ವಿನ್ ಕಳಿಸಬಹುದು

'ಮುಂದಿನ ದಿನಗಳಲ್ಲಿ ಎಐ ಭಾರಿ ಪಲ್ಲಟ ತರುವುದು ಗ್ಯಾರಂಟಿ. ಸಾರಿಗೆ, ವೈದ್ಯಕೀಯ ಕ್ಷೇತ್ರದಲ್ಲಿ ಹಾಗೂ ವ್ಯಕ್ತಿಗತ ಸೇವೆಗಳಲ್ಲಿ ಇದರ ಬಳಕೆ ಜಾಸ್ತಿಯಾಗಲಿದೆ. ಮುಂದಿನ ದಿನಗಳಲ್ಲಿ ನಮ್ಮ ಸಾವಿನ ನಂತರವೂ ನಾವು ನಮ್ಮ ಮಕ್ಕಳು, ಮೊಮ್ಮಕ್ಕಳ ಜೊತೆ ಮಾತನಾಡುತ್ತಿರಬಹುದು. ಡಿಜಿಟಲ್‌ ಟ್ವಿನ್‌ ಮೂಲಕ ನಾವು ಬೇರೆ ಕೆಲಸದಲ್ಲಿದ್ದೂ ಮೀಟಿಂಗ್‌ನಲ್ಲಿ ಭಾಗವಹಿಸಬಹುದು. ಇನ್ನೂ ಅನಂತ ಸಾಧ್ಯತೆಗಳನ್ನು ಎಐ ತೆರೆಯಲಿದೆ' ಎಂದು ಭವಿಷ್ಯ ನುಡಿದರು.

‘ದಿ ಎಕನಾಮಿಸ್ಟ್’ ಮಾಧ್ಯಮದ ಇನ್ಫೋಗ್ರಾಫಿಕ್ಸ್‌ ವಿಭಾಗದ ಸಂಪಾದಕಿ ಮಿಚೆಲ್ ಹೆನ್ನೆಸ್ಸಿ ಸೆಬಾಸ್ಟಿಯನ್ ಗೋಷ್ಠಿಯನ್ನು ನಿರ್ವಹಿಸಿದರು.

Tags:    

Similar News