ವೆನಿಸ್‌ ನಿಂದ ಜಾಫ್ನಾದತ್ತ ಗಿರೀಶ ಕಾಸರವಳ್ಳಿ ಪರ್ಯಟನೆ

ವೆನಿಸ್‌ ನಲ್ಲಿ ತಮ್ಮ ಚಿತ್ರ ʻಘಟಶ್ರಾದ್ಧʼ ದ ಪ್ರೀಮಿಯರ್‌ ಪ್ರದರ್ಶನದಲ್ಲಿ ಭಾಗವಹಿಸಿರುವ ಗಿರೀಶ್‌ ಕಾಸರವಳ್ಳಿ ಅವರು ಈಗ ಶ್ರೀಲಂಕಾದ ಜಾಫ್ನಾ ತಲುಪಿದ್ದಾರೆ. ಜಾಫ್ನಾದಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ ಕಾಸರವಳ್ಳಿ ಅವರ ನಾಲ್ಕು ಚಿತ್ರಗಳು ಪ್ರದರ್ಶನಗೊಳ್ಳುತ್ತಿವೆ. ಜೊತೆಯಲ್ಲಿ ಕಾಸರವಳ್ಳಿ ಅವರನ್ನು ಅವರ ಜೀವಮಾನದ ಸಾಧನೆಗಾಗಿ ಸನ್ಮಾನಿಸಲಾಗುತ್ತಿದೆ.;

Update: 2024-09-11 01:00 GMT
ಘಟಶ್ರಾದ್ಧ
Click the Play button to listen to article

ಬಿಡುಗಡೆಯಾದ ಸುಮಾರು 47 ವರ್ಷಗಳ ನಂತರ ಕನ್ನಡದ ಸೃಜನಶೀಲ ಚಿತ್ರ ನಿರ್ದೇಶಕ ಗಿರೀಶ್‌ ಕಾಸರವಳ್ಳಿ ಅವರ ಚೊಚ್ಚಲ ಪೂರ್ಣಪ್ರಮಾಣದ ಕಥಾ ಚಲನಚಿತ್ರ ʼಘಟಶ್ರಾದ್ಧʼ ಮತ್ತೆ ವಿಶ್ವದ ಚಿತ್ರರಂಗದ ಮುನ್ನೆಲೆಗೆ ಬಂದು ಜಗತ್ತಿನಾದ್ಯಂತ ಕಲಾತ್ಮಕ ಚಿತ್ರಗಳ ಆರಾಧಕರನ್ನು ತಮ್ಮತ್ತ ಸೆಳೆಯುತ್ತಿದೆ.

1977 ರಲ್ಲಿ ತೆರೆಕಂಡ ‘ಘಟಶ್ರಾದ್ಧ’ ಸಿನಿಮಾ ವಿಶ್ವದ ಪ್ರತಿಷ್ಠಿತ ಚಿತ್ರೋತ್ಸವಗಳಲ್ಲಿ ಅಗ್ರಸ್ಥಾನ ಪಡೆದ ವೆನಿಸ್‌ ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ಈಗ ಪ್ರದರ್ಶನ ಕಂಡಿದೆ. ವೆನಿಸ್‌ ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡ ಮೊದಲ ಕನ್ನಡ ಚಿತ್ರವೆಂಬ ಹೆಗ್ಗಳಿಕೆಗೂ ‘ಘಟಶ್ರಾದ್ಧ’ ಪಾತ್ರವಾಗಿದೆ. 81 ನೇ ವೆನಿಸ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಸೆಪ್ಟೆಂಬರ್ 3 ಮತ್ತು 4 ರಂದು ವೆನಿಸ್ ಕ್ಲಾಸಿಕ್ಸ್ ವಿಭಾಗದಲ್ಲಿ ಈ ಚಿತ್ರ ಪ್ರದರ್ಶನಗೊಂಡಿದೆ. ಈ ಮನ್ನಣೆಯು ಒಂಭತ್ತು ದಶಕಗಳಷ್ಟು ಇತಿಹಾಸ ಹೊಂದಿರುವ ಕನ್ನಡ ಚಿತ್ರರಂಗಕ್ಕೆ ಐತಿಹಾಸಿಕ ಕ್ಷಣವಾಗಿದೆ. 

ತಮ್ಮ 26 ನೇ ವಯಸ್ಸಿನಲ್ಲಿ ಗಿರೀಶ್ ಕಾಸರವಳ್ಳಿ ನಿರ್ದೇಶಿಸಿದ ಈ ಚಿತ್ರವು ತನ್ನ ದಿಟ್ಟ ದೃಶ್ಯ ಶೈಲಿ ಮತ್ತು ಮನಮೋಹಕ ಕಥೆ ಹೇಳುವ ಮೂಲಕ ಕ್ರಾಂತಿಕಾರಿ ಸಿನಿಮಾವಾಗಿತ್ತು, ಕನ್ನಡ ಚಿತ್ರರಂಗದಲ್ಲಿ ಹೊಸ ಮಾನದಂಡಗಳನ್ನು ಸೃಷ್ಟಿಸಿತು. ಘಟಶ್ರಾದ್ಧವು ಸತ್ಯಜಿತ್ ರೇ, ಮೃಣಾಲ್ ಸೇನ್ ಮತ್ತು ಶ್ಯಾಮ್ ಬೆನಗಲ್ ಅವರಂತಹ ಚಲನಚಿತ್ರ ನಿರ್ಮಾಪಕರ ಮೇರುಕೃತಿಗಳ ಜೊತೆಗೆ ಸ್ಪರ್ಧಯೊಡ್ಡಿತು, ಜೊತೆಗೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಸ್ವರ್ಣ ಪದಕ ಗೆದ್ದುಕೊಂಡಿತು. ಭಾರತೀಯ ಚಿತ್ರರಂಗದ ಶತಮಾನೋತ್ಸವದ ಸಂದರ್ಭದಲ್ಲಿ ಈ ಸಿನಿಮಾವನ್ನು ಟಾಪ್ 20 ಭಾರತೀಯ ಅತ್ಯುತ್ತಮ ಚಿತ್ರಗಳಲ್ಲಿ ಒಂದೆಂದು ಪರಿಗಣಿಸಲಾಯಿತು.

ತಾವು ಕೇವಲ 26 ವರ್ಷದವರಾಗಿದ್ದಾಗ, ಗಿರೀಶ್‌ ಕಾಸರವಳ್ಳಿ ನಿರ್ದೇಶಿಸಿ ಚಿತ್ರವಿದು. ತನ್ನ ದಿಟ್ಟ ದೃಶ್ಯಶೈಲಿಯಲ್ಲಿ ಕಥೆಯನ್ನು ಹೇಳುವ ಘಟಶ್ರಾದ್ಧ 1977ರಲ್ಲಿಒಂದು ರೀತಿಯಲ್ಲಿ ಕನ್ನಡ ಚಿತ್ರರಂಗಕ್ಕೆ ಬದಲಾವಣೆಯ ದಿಕ್ಕನ್ನೇ ತೋರಿಸಿತೆಂದರೂ ತಪ್ಪಾಗಲಾರದು. ಆಗ ʻಘಟಶ್ರಾದ್ಧʼ ಸತ್ಯಜಿತ್‌‌ ರೇ, ಮೃಣಾಲ್‌ ಸೇನ್‌ ಹಾಗೂ ಶ್ಯಾಮ್‌ ಬೆನೆಗಲ್‌ ಅವರ ಅದ್ಭುತವೆನ್ನುವಂಥ ಕಲಾತ್ಮಕ ಚಿತ್ರಗಳೊಂದಿಗೆ ಸ್ಪರ್ಧಿಸಿ, ರಾಷ್ಟ್ರಪ್ರಶಸ್ತಿಯ ಸ್ವರ್ಣಕಮಲವನ್ನು ತನ್ನದಾಗಿಸಿಕೊಂಡಿದ್ದು, ಈಗ ಇತಿಹಾಸ.

ಇಲ್ಲಿ ಮತ್ತೊಂದು ಸಂಗತಿಯನ್ನು ಹೇಳಲೇಬೇಕು. ಭಾರತೀಯ ಚಿತ್ರರಂಗದ ಶತಮಾನೋತ್ಸವದ ಸಂದರ್ಭದಲ್ಲಿ ಈ ಚಿತ್ರವನ್ನು ಭಾರತದ 20 ಅತಿಮುಖ್ಯ ಚಿತ್ರಗಳ ಸಾಲಿನಲ್ಲಿ ಒಂದೆಂದು ಪರಿಗಣಿಸಲಾಗಿದ್ದು, ಕನ್ನಡ ಚಿತ್ರರಂಗಕ್ಕೆ ಸಂದ ಗೌರವ. ಇಂಥ ಚಿತ್ರವೊಂದನ್ನು ನಿರ್ದೇಶಿಸಿದ ದಿಗ್ದರ್ಶಕ ನಮ್ಮ ಗಿರೀಶ್‌ ಕಾಸರವಳ್ಳಿ ಎನ್ನುವುದು ಹೆಮ್ಮೆಯ ಸಂಗತಿ. ಯು. ಆರ್‌ ಅನಂತಮೂರ್ತಿಯವರ ಕಥೆಯನ್ನು ಆಧರಿಸಿದ ಈ ಚಿತ್ರಕ್ಕೆ ಛಾಯಾಗ್ರಹಣ ಮಾಡಿದವರು, ಕನ್ನಡದ ಹೊಸ ಅಲೆಯ ಕಾಲದಿಂದಲೂ ದಂತ ಕತೆಯಾಗಿದ್ದ ಎಸ್.‌ ರಾಮಚಂದ್ರ. ಸಂಗೀತ ನೀಡಿದವರು, ರಂಗಭೂಮಿ-ಸಿನಿಮಾದ ದೈತ್ಯ ಪ್ರತಿಭೆ, ಬಿ.ವಿ. ಕಾರಂತ. ಕಲಾನಿರ್ದೇಶನ ನೀನಾಸಂ ನ ಕೆ.ವಿ. ಸುಬ್ಬಣ್ಣನವರದು. ಈ ಚಿತ್ರವನ್ನು ನಿರ್ಮಾಣ ಮಾಡಿದವರು ಇತ್ತೀಚೆಗೆ ನಮ್ಮನ್ನು ಅಗಲಿದ ಸದಾನಂದ ಸುವರ್ಣ- ಎಂಬ ಸಹೃದಯ ಮನಸ್ಸು.

 ʻಘಟಶ್ರಾದ್ಧʼ ಚಿತ್ರವನ್ನು ನೋಡಿ ಚಕಿತರಾದ ಹಾಲಿವುಡ್‌ ಚಿತ್ರರಂಗದ ಖ್ಯಾತ ನಿರ್ದೇಶಕರಾದ ಮಾರ್ಟಿನ್‌ ಸ್ಕಾರ್ಸೆಸ್ಸಿ ಹಾಗೂ ಜಾರ್ಜ್‌ ಲ್ಯೂಕಾಶ್‌ ಇಬ್ಬರೂ, ಕಾಲನ ದಾಳಿಗೆ ಸಿಕ್ಕು ತಾಂತ್ರಿಕವಾಗಿ ಸವೆದಿದ್ದ ಈ ಚಿತ್ರವನ್ನು ಮತ್ತೆ ಜೀವಂತಗೋಳಿಸಲು ನಿರ್ಧರಿಸಿದರು. ಈ ಕ್ರಿಯೆಯಲ್ಲಿ ಅವರಿಗೆ ಜೊತೆಯಾದವರು, 'ಸೆಲ್ಯೂಲಾಯ್ದ್ ಮ್ಯಾನ್' ಚಿತ್ರಕ್ಕಾಗಿ ರಾಷ್ಟ್ರ ಪ್ರಶಸ್ತಿ ಪಡೆದ ಭಾರತೀಯ ಚಿತ್ರ ನಿರ್ದೇಶಕ ಶಿವೇಂದ್ರ ಸಿಂಗ್ ದುಂಗಾರ್‌ಪುರ್. ಅವರ ಫಿಲಂ ಹೆರಿಟೇಜ್‌ ಫೌಂಡೇಷನ್‌ ಇಡೀ ಪುನರ್ ನವೀಕರಣದ ಜವಾಬ್ದಾರಿ ಹೊತ್ತುಕೊಂಡಿತು. ಇಟಲಿಯ ʼಲ ಇಮಾಜಿನ್‌ ರಿಟ್ರೋವತʼ ಸಂಸ್ಕರಣ ಘಟಕದಲ್ಲಿ ʻಘಟಶ್ರಾದ್ಧʼ ಚಿತ್ರದ ಮರು ಸೃಷ್ಟಿಯ ಕಾರ್ಯ ಆರಂಭವಾಯಿತು. ಮತ್ತು ಇತ್ತೀಚೆಗೆ ಪೂರ್ಣಗೊಂಡು 81 ನೇ ವೆನಿಸ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಸೆಪ್ಟೆಂಬರ್ 3 ಮತ್ತು 4 ರಂದು ವೆನಿಸ್ ಕ್ಲಾಸಿಕ್ಸ್ ವಿಭಾಗದಲ್ಲಿ ಪ್ರದರ್ಶನಗೊಂಡಿತು.

ಸದ್ಯಕ್ಕೆ ಈ ಚಿತ್ರ ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮ ಮತ್ತು ಪುಣೆಯಲ್ಲಿರುವ ನ್ಯಾಷನಲ್‌ ಫಿಲಂ ಆರ್ಖೈವ್‌ ಆಫ್‌ ಇಂಡಿಯಾದಲ್ಲಿ ಘಟಶ್ರಾದ್ಧದ ಮೂಲ ಕ್ಯಾಮರಾ ನೆಗೆಟಿವ್‌ ಅನ್ನು ಸಂಸ್ಕರಿಸಿ ಇರಿಸಲಾಗಿದೆ.

“ನಾನು ಎಫ್‌ಟಿಐಐ (ಫಿಲ್ಮ್ ಅಂಡ್ ಟೆಕ್ನಾಲಜಿ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ) ನಿಂದ ಹೊರಬಂದಾಗ ನಾನು ಈ ಚಿತ್ರ ಮಾಡಿದೆ. ನನ್ನ ವಯಸ್ಸು ಕೇವಲ 25. ನಾನು ಸಂಸ್ಕಾರ ಮತ್ತಿತರ ಚಿತ್ರಗಳಿಗೆ ಸರಿಸಮಾನವಾದ ಏನನ್ನಾದರೂ ಮಾಡಬೇಕೆಂದು ಬಯಸಿದ್ದೆ. ಆ ಕಾಲದ ನನ್ನ ತೀವ್ರ ಕ್ಷಣಗಳ ಪರಿಣಾಮ ಘಟಶ್ರಾದ್ಧʼ. ಕೇವಲ ಶಕ್ತ ಕಥೆಯಿಂದಷ್ಟೇ ಒಳ್ಳೆಯ ಸಿನಿಮಾ ನಿರ್ದೇಶಿಸಲು ಸಾಧ್ಯವಿಲ್ಲ. ಅದಕ್ಕೆ ದೃಶ್ಯ ಮಾಧ್ಯಮದ ಮೇಲಿನ ಶಕ್ತ ಹಿಡಿತದ ಅವಶ್ಯಕತೆಯೂ ಇದೆ. ಜಗತ್ತಿನಾದ್ಯಂತ ದೃಶ್ಯ ಮಾಧ್ಯಮವನ್ನು ಶಕ್ತವಾಗಿ ಬಳಸಿಕೊಳ್ಳುತ್ತಿದ್ದ ಕಾಲದಲ್ಲಿ ಹುಟ್ಟಿದ್ದು ʻಘಟಶ್ರಾದ್ಧʼ ಚಿತ್ರ” ಎನ್ನುತ್ತಾರೆ ಗಿರೀಶ್.‌

“ಅಷ್ಟೇ ಅಲ್ಲ, ಕೆಲವು ಸೃಜನಾತ್ಮಕ ಚಿತ್ರಗಳು ತಮ್ಮ ಕಲಾತ್ಮಕತೆಯಿಂದ, ನಿರ್ದೇಶಕನಿಗೆ ದೃಶ್ಯ ಮಾಧಮ‍್ಯಮದ ಮೇಲಿನ ಖಚಿತ ಹಿಡಿತದಿಂದಾಗಿ ಬಹುಕಾಲ ಸಿನಿಮಾ ಜಗತ್ತಿನಲ್ಲಿ ಚರ್ಚೆಗೊಳಗಾಗುತ್ತಲೇ ಇರುತ್ತದೆ. ಈ ರೀತಿ ರೂಪಗೊಂಡ ಯಾವುದೇ ಚಿತ್ರ ತನ್ನ ಮೌಲ್ಯವನ್ನು ಕಳೆದುಕೊಳ್ಳುವುದಿಲ್ಲ. ಬದಲಿಗೆ ಬದಲಾಗುತ್ತಿರುವ ಜಗತ್ತಿನೊಂದಿಗೆ ತನ್ನ ಮೌಲ್ಯವನ್ನು ವರ್ಧಿಸಿಕೊಳ್ಳುತ್ತಲೇ ನಡೆದಿರುತ್ತದೆ. ಚಲನ ಚಿತ್ರದ ವಿದ್ಯಾರ್ಥಿಗಳು ಹಾಗೂ ಚಿತ್ರ ವಿವರ್ಶಕರು, ಪಂಡಿತರು ಮತ್ತು ಚಲನಚಿತ್ರವನ್ನು ಹೃದಯದಿಂದ ಪ್ರೀತಿಸುವವರು, ಈ ಚಿತ್ರವನ್ನು ಮತ್ತೆ ಮತ್ತೆ ನೋಡಿ, ಮತ್ತೆ ಮತ್ತೆ ಚರ್ಚಿಸುತ್ತಲೇ ಇರುತ್ತಾರೆ. ಅದು ಚಿತ್ರದ ಚಿತ್ರಕ ಶಕ್ತಿ ಮತ್ತು ನಿರ್ದೇಶಕ ಕಲಾತ್ಮಕತೆಗೆ ನಿದರ್ಶನ” ಎನ್ನುತ್ತಾರೆ ಗಿರೀಶ್‌ ಕಾಸರವಳ್ಳಿ.

ವೆನಿಸ್‌ ಪ್ರವಾಸದ ಗಿರೀಶ್‌ ಕಾಸರವಳ್ಳಿ, ಈಗ ಶ್ರೀಲಂಕಾದ ಜಾಫ್ನಾದತ್ತ ತನ್ನ ಪ್ರಯಾಣವನ್ನು ಬೆಳೆಸಿದ್ದಾರೆ. ಜಾಫ್ನಾದಲ್ಲಿ ಆರಂಭವಾದ ಜಾಫ್ನಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅವರ ನಾಲ್ಕು ಚಿತ್ರಗಳ ಪ್ರದರ್ಶನ ಕಾಣುತ್ತಿದೆ. ಇದೇ ಸಂದರ್ಭದಲ್ಲಿ ಗಿರೀಶ್‌ ಕಾಸರವಳ್ಳಿಯವರ ಜೀವಮಾನದ ಸಾಧನೆಗಾಗಿ ಪ್ರಶಸ್ತಿ ನೀಡಲಾಗುತ್ತಿದೆ. “ಕಳೆದ ಐದು ದಶಕಗಳಿಂದ ತಾವು ನಂಬಿದ ದೃಶ್ಯ ಮಾಧ್ಯಮದ ಮೌಲ್ಯಗಳನ್ನು ಯಾವುದೇ ರೀತಿಯಲ್ಲಿಯೂ ತ್ಯಾಗ ಮಾಡದೆ, ತಮ್ಮ ನಿಲುವಿಗೆ ಬದ್ಧರಾಗಿ ಸೃಜನಶೀಲ, ಗಂಭೀರ, ಅರ್ಥಗರ್ಭಿತ ಚಿತ್ರಗಳನ್ನು ಕನ್ನಡ ಚಿತ್ರರಂಗಕ್ಕೆ ನೀಡಿಕೊಂಡೇ ಬಂದಿರುವ ಗಿರೀಶ್‌ ಕಾಸರವಳ್ಳಿ ಅವರ ಜೀವಮಾನದ ಚಿತ್ರಯಾನದ ಸಾಧನೆಯನ್ನು ಗಮನದಲ್ಲಿಟ್ಟುಕೊಂಡು ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ"-ಎಂದು ಚಿತ್ರೋತ್ಸವದ ಸಂಘಟನಾ ಸಮಿತಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಜಾಫ್ನಾಗೆ ಭೇಟಿ ನೀಡುತ್ತಿರುವ ಗಿರೀಶ್‌ ಜಾಫ್ನಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗಾಗಿ ಸಿನಿಮಾ ತರಗತಿಯನ್ನು ನಡೆಸಿಕೊಡಲಿದ್ದಾರೆ.

Tags:    

Similar News