Greater Mysore- Part 1: ಗ್ರೇಟರ್ ಬೆಂಗಳೂರು ಬಳಿಕ ಮೈಸೂರು ಆಗಲಿದೆ ʼಗ್ರೇಟರ್ʼ
ಹಾಲಿ ಇರುವ ಮೈಸೂರು ಮಹಾ ನಗರಪಾಲಿಕೆಯನ್ನು ʼಬೃಹತ್ ಮೈಸೂರು ಮಹಾ ನಗರಪಾಲಿಕೆ'ಯನ್ನಾಗಿ ಮೇಲ್ದರ್ಜೆಗೇರಿಸುವ ಚರ್ಚೆ 2008ರಲ್ಲಿಯೇ ಪ್ರಾರಂಭವಾಗಿತ್ತು.;
ಮಹಾನಗರಪಾಲಿಕೆಯಾಗಿದ್ದ ಬೆಂಗಳೂರು ಬೃಹತ್ ಬೆಂಗಳೂರು ಮಹಾನಗರಪಾಲಿಕೆಯಾಯಿತು. ಈಗ ಬೃಹತ್ ಬೆಂಗಳೂರು ಪ್ರಾಧಿಕಾರ ರಚನೆಯಾಗಿ, ಅದರಡಿ ಮೂರು ಮಹಾನಗರಪಾಲಿಕೆಗಳಾಗಿ ಬೆಂಗಳೂರು ರೂಪುಗೊಳ್ಳಲಿದೆ.
ಬೆಂಗಳೂರಿನಿಂದ ಸುಮಾರು ೧೪೦ ಕಿ.ಮೀ.ದಲ್ಲಿರುವ ಮೈಸೂರು ಈಗ ಅದೇ ದಾರಿ ಹಿಡಿಯುತ್ತಿದೆ. ಬೃಹದಾಕಾರವಾಗಿ ಬೆಳೆಯುತ್ತಿರುವ ಬೆಂಗಳೂರು ಹಾಗೂ ಮೈಸೂರು ನಗರಗಳು, ಮುಂಬಯಿ-ಪುಣೆ ಮಾದರಿಯಲ್ಲಿ ಬೆಳೆಯುತ್ತಿದೆಯೇ ಎಂಬ ಪ್ರಶ್ನೆಗೆ ಕಾರಣವಾಗಿದೆ.
ಹಾಲಿ ಇರುವ ಮೈಸೂರು ಮಹಾ ನಗರಪಾಲಿಕೆ ((Mysore City Corporation - MCÇ)ಯನ್ನು ʼಬೃಹತ್ ಮೈಸೂರು ಮಹಾ ನಗರಪಾಲಿಕೆ (Bruhat Mysore Mahanagara Palike - BMMP) ʼಯನ್ನಾಗಿ ಮೇಲ್ದರ್ಜೆಗೇರಿಸುವ ಚರ್ಚೆ 2008ರಲ್ಲಿಯೇ ಪ್ರಾರಂಭವಾಯಿತು. ಬಿಜೆಪಿ ಸರ್ಕಾರ ಇದ್ದ ವೇಳೆಯಲ್ಲಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಎಸ್.ಎ. ರಾಮದಾಸ್ ಅವರು ಈ ಸಂಬಂಧ ಪ್ರಸ್ತಾವನೆ ತೆರೆದಿಟ್ಟರು. ಇದಾದ ಬಳಿಕ ಸರ್ಕಾರಗಳು ಬದಲಾದ ಕಾರಣ ನಿಲುವುಗಳೂ ಬದಲಾದವು. ಆದರೆ ಮೈಸೂರು-ಕೊಡಗು ಸಂಸದರಾಗಿದ್ದ ಪ್ರತಾಪ್ ಸಿಂಹ ಮತ್ತು ಶಾಸಕ ಜಿ.ಟಿ.ದೇವೇಗೌಡರು ಈ ವಿಚಾರವಾಗಿ ಪಟ್ಟು ಬಿಡದೇ ನಿರಂತರ ಪ್ರಯತ್ನ ಮಾಡುತ್ತಲೇ ಬಂದಿದ್ದಾರೆ. ಇದರ ಫಲವಾಗಿಯೇ ನಗರಾಭಿವೃದ್ಧಿ ಇಲಾಖೆ, ರಾಜ್ಯ ಸರ್ಕಾರದ ಮಟ್ಟದಲ್ಲಿ ಉನ್ನತ ಮಟ್ಟದ ಸಭೆಗಳು ಆಗಿವೆ.
ಸಿಎಂ ಅಧಿಕೃತ ಸಭೆ ರದ್ದಾದ ಬಳಿಕ ಇನ್ನಷ್ಟು ಗೊಂದಲ
ಕಳೆದ ಮಾರ್ಚ್ ತಿಂಗಳಿನಲ್ಲಿ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರು ವಿಧಾನಸೌಧದಲ್ಲಿ ಉನ್ನತ ಅಧಿಕಾರಿಗಳ ಸಭೆ ನಡೆಸಿ ಬೃಹತ್ ಮೈಸೂರು ಮಹಾನಗರ ಪಾಲಿಕೆ ರಚನೆ ಸಂಬಂಧ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಿದ್ದರು. ಇದಾದ ಬಳಿಕ ಮೈಸೂರಿನ ನಾಯಕರು, ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳ ಪಾಲಿಕೆ ಮಾಜಿ ಸದಸ್ಯರಿಂದ ಪರ ವಿರೋಧ ಚರ್ಚೆಗಳು ಆರಂಭಗೊಂಡವು. ಇದರ ನಡುವಲ್ಲೇ ಏ.26 ರಂದು ಮೈಸೂರಿನಲ್ಲಿ ಈ ಸಂಬಂಧ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆಯಬೇಕಿದ್ದ ಅಧಿಕೃತ ಸಭೆ ರದ್ದಾಯಿತು. ಸಭೆಯ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರಿಂದಾಗಿ ರದ್ದಾದ ಬಳಿಕ ಸಾಕಷ್ಟು ಚರ್ಚೆಯೂ ಹುಟ್ಟುಕೊಂಡಿದೆ.
ಅನುದಾನ ಕೊರತೆ?
ಸ್ವತಃ ಸಿಎಂ ಸಿದ್ದರಾಮಯ್ಯ ಅವರಿಗೆ ಬೃಹತ್ ಮೈಸೂರು ಮಹಾನಗರ ಪಾಲಿಕೆ ರಚನೆ ಮಾಡಲು ಆಸಕ್ತಿ ಇದೆ ಎನ್ನಲಾಗುತ್ತಿದೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಅನುದಾನದ ಕೊರತೆ, ಆತುರಕ್ಕೆ ಬಿದ್ದು ನಿರ್ಧಾರ ಕೈಗೊಂಡರೆ ಮುಂದಿನ ದಿನಗಳಲ್ಲಿ ಆಗುವ ಪರಿಣಾಮದ ಬಗ್ಗೆಯೂ ಅವರು ಆಲೋಚನೆ ಮಾಡಿದಂತಿದೆ. ಇದೇ ಕಾರಣದಿಂದ ಕಾದುನೋಡುವ ತಂತ್ರಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ.
ವಿಸ್ತರಣೆಯ ಕೂಗು ಹೆಚ್ಚುತ್ತಿರುವುದೇಕೆ..?
ಬಿಬಿಎಂಪಿ ಮಾದರಿಯಲ್ಲಿಯೇ ಮೈಸೂರು ಮಹಾನಗರ ಪಾಲಿಕೆಯನ್ನು ಮೇಲ್ದರ್ಜೆಗೇರಿಸುವುದರಿಂದ ನಗರ ಪ್ರದೇಶದ ಸುತ್ತಮುತ್ತಲ ಗ್ರಾಮಗಳು, ಖಾಸಗಿ ಲೇಔಟ್ಗಳಿಗೆ ಅನುಕೂಲ ಆಗಲಿದೆ, ಜೊತೆಗೆ ರಿಯಲ್ ಎಸ್ಟೇಟ್ ಬೆಳವಣಿಗೆಯ ವೇಗವೂ ಹೆಚ್ಚಾಗಲಿದೆ. ಮೂಲ ಸೌಕರ್ಯಗಳ ಕೊರತೆಯೂ ನೀಗಲಿದೆ ಎನ್ನುವ ಕಾರಣದಿಂದ ಜನಪ್ರತಿನಿಧಿಗಳ ಜೊತೆಗೆ ಸಾರ್ವಜನಿಕ ವಲಯದಿಂದಲೂ ಈ ನಿಟ್ಟಿನಲ್ಲಿ ಕೂಗು ಹೆಚ್ಚಾಗಿದೆ.
ನಗರ ಪ್ರದೇಶ ಮತ್ತು ಗ್ರಾಮೀಣ ಭಾಗದಲ್ಲಿ ಹರಡಿಕೊಂಡಿರುವ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರಕ್ಕೆ ಇದರಿಂದ ಹೆಚ್ಚಿನ ಅನುಕೂಲ ಆಗುವುದರಿಂದ ಸಹಜವಾಗಿಯೇ ಶಾಸಕ ಜಿ.ಟಿ.ದೇವೇಗೌಡರಿಗೆ ಈ ಬಗ್ಗೆ ವಿಶೇಷ ಆಸಕ್ತಿ ಇರುವುದು. ಇದರ ಜೊತೆಗೆ ನರಸಿಂಹರಾಜ ವಿಧಾನಸಭಾ ಕ್ಷೇತ್ರದ ಜನತೆಗೂ ಅನುಕೂಲ ಆಗಲಿದೆ. ನಂಜನಗೂಡು ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ಕೆಲ ಹಳ್ಳಿಗಳೂ ನಗರದೊಳಕ್ಕೆ ಸೇರಿಕೊಳ್ಳಲಿವೆ. ಇದಕ್ಕೂ ಹೆಚ್ಚಾಗಿ ಮೈಸೂರಿನ ರಿಂಗ್ ರಸ್ತೆ ಹೊರಗೆ ನಿರ್ಮಾಣವಾಗಿರುವ ಖಾಸಗಿ ಲೇಔಟ್ ಮಾಲೀಕರ ಒತ್ತಡ, ಹಿತಾಸಕ್ತಿಯೂ ಸೇರಿಕೊಂಡಿರುವುದು ಬೇಡಿಕೆಯ ಬಲ ಹೆಚ್ಚಿಸಿದೆ. ಇದರ ಜೊತೆಗೆ ಕರ್ನಾಟಕ ಮುನ್ಸಿಪಲ್ ಕಾರ್ಪೊರೇಷನ್ ಕಾಯ್ದೆ 1976 ರ ಪ್ರಕಾರ, ಮೈಸೂರು ಮಹಾನಗರ ಪಾಲಿಕೆಯ ಗಡಿಯನ್ನು ಅಕ್ಟೋಬರ್ 18, 1995 ರಂದು ನಿಗದಿಪಡಿಸಲಾಗಿತ್ತು. ಗಡಿಯನ್ನು ರಚಿಸಿ 25 ವರ್ಷಗಳ ನಂತರವೂ ಅದರ ಮಿತಿಗಳನ್ನು ಪರಿಷ್ಕರಿಸಲಾಗಿಲ್ಲ. ನಗರವು ವೇಗವಾಗಿ ಬೆಳೆಯುತ್ತಿರುವ ಕಾರಣ ಈಗಲೇ ವಿಸ್ತರಣೆಯ ನಿರ್ಧಾರ ತೆಗೆದುಕೊಂಡರೆ ಸುಸ್ಥಿರ ಅಭಿವೃದ್ಧಿ ಸಾಧ್ಯವಾಗುತ್ತದೆ ಎನ್ನುವ ಕಾರಣವೂ ಕೇಳಿಬರುತ್ತಿದೆ.
ಎಷ್ಟಿರಲಿದೆ ಗ್ರೇಟರ್ ಮೈಸೂರು ವ್ಯಾಪ್ತಿ..?
65 ವಾರ್ಡ್‌ಗಳನ್ನು ಒಳಗೊಂಡಿರುವ ಮೈಸೂರು ಮಹಾನಗರ ಪಾಲಿಕೆ ಪ್ರಸ್ತುತ ವರ್ತುಲ ರಸ್ತೆಯ ಒಳಗೆ 128 ಚದರ ಕಿ.ಮೀ. ವ್ಯಾಪ್ತಿ ಹೊಂದಿದೆ. ಇದೀಗ ವರ್ತುಲ ರಸ್ತೆಯ ಹೊರಗಿನ 41 ಹಳ್ಳಿಗಳನ್ನು ಸೇರಿಸಿ ಗ್ರೇಟರ್ ಮೈಸೂರು ಪ್ರಸ್ತಾವನೆ ಸಲ್ಲಿಕೆಯಾಗಿದೆ. ಇದರಿಂದ ನಗರದ ಗಡಿಯನ್ನು ಸುತ್ತುವರೆದಿರುವ ಹಳ್ಳಿಗಳ ಜೊತೆಗೆ, ಎಲ್ಲಾ ಮುಡಾ ಮತ್ತು ಖಾಸಗಿ ಬಡಾವಣೆಗಳನ್ನು ಸೇರಿಸಿಕೊಂಡು ಗ್ರೇಟರ್ ಮೈಸೂರು ರಚನೆಯಾಗಲಿದೆ. ಅಲ್ಲಿಗೆ ಇದರ ವ್ಯಾಪ್ತಿಯು 288 ಚದರ ಕಿ.ಮೀ.ಗೆ ವಿಸ್ತಾರಗೊಳ್ಳಲಿದೆ.
ಯಾವೆಲ್ಲಾ ಪ್ರದೇಶಗಳು ಗ್ರೇಟರ್ ಮೈಸೂರು ವ್ಯಾಪ್ತಿಗೆ?
ಬೃಹತ್ ಮೈಸೂರು ಮಹಾನಗರ ಪಾಲಿಕೆ ರಚನೆ ಸಂಬಂಧ ಸಲ್ಲಿಕೆಯಾಗಿರುವ ಪ್ರಸ್ತಾವನೆಯಲ್ಲಿ ವರ್ತುಲ ರಸ್ತೆಯ ಒಳಗಿನ ಮತ್ತು ಹೊರಗಿನ ಗ್ರಾಮಗಳು ಸೇರಿವೆ. ಅವುಗಳೆಂದರೆ…
ಹಿನಕಲ್ (755 ಹೆಕ್ಟೇರ್), ಹೂಟಗಳ್ಳಿ (344), ಕೇರ್ಗಳ್ಳಿ (817.69), ಶ್ಯಾದನಹಳ್ಳಿ (353.50), ಬೋಗಾದಿ (785), ಮರಟಿಕ್ಯಾತನಹಳ್ಳಿ (384.38), ಬಂಡಿಪಾಳ್ಯ (250.77), ಯಾಂದಳ್ಳಿ (336.61), ಲಲಿತಾದ್ರಿಪುರ (413.24), ಹಂಚ್ಯಾ (961.08), ರಮ್ಮನಹಳ್ಳಿ (576.53), ಮೇಟಗಳ್ಳಿ (330.36), ಶ್ರೀರಾಂಪುರ (586.63), ಬೆಲವತ್ತ (630.00), ಆಲನಹಳ್ಳಿ (405.00), ನಾಡನಹಳ್ಳಿ (254.05), ದಟ್ಟಗಳ್ಳಿ (509.00), ಹೆಬ್ಬಾಳ (1224.69), ಚಾಮುಂಡಿ ಬೆಟ್ಟ (573.27), ಲಿಂಗಾಂಬುದಿ ಪಾಳ್ಯ (337.48), ಕೆಸರೆ (998.14), ಮದಗಳ್ಳಿ (334.72), ಕೂರ್ಗಳ್ಳಿ (688.92), ಸರ್ಕಾರಿ ಉತ್ತನಹಳ್ಳಿ (581.61), ಬೆಳವಾಡಿ (719.15), ಸಾತಗಳ್ಳಿ (967.53), ಮಂಡಕಳ್ಳಿ (835.34), ಹೊಸಹುಂಡಿ (213.43), ಚಿಕ್ಕಹಳ್ಳಿ (268.03), ಚೋರನಹಳ್ಳಿ (226.11), ಬಸವನಹಳ್ಳಿ (441.39), ಗುಡುಮಾದನಹಳ್ಳಿ (179.71), ಹಾಲಾಲು (223.17), ಗೋಹಳ್ಳಿ (148.71), ಯಡಹಳ್ಳಿ (297.70), ಚೌಡಹಳ್ಳಿ (263.14), ಭುಗತಗಳ್ಳಿ (403.39), ಗೊರೂರು (364.55), ಕೊಪ್ಪಲೂರು (176.44), ಮೈಸೂರು ಗ್ರಾಮಾಂತರ (58.81), ಕುರುಬಾರಹಳ್ಳಿ (640.08) ಗಳು ಗ್ರೇಟರ್ ಮೈಸೂರಿಗೆ ಸೇರಿಕೊಳ್ಳಲಿವೆ. ಈಗ ಇರುವ 10 ಲಕ್ಷ ಜನಸಂಖ್ಯೆ 18 ಲಕ್ಷಕ್ಕೆ ಹೆಚ್ಚಾಗುವ ಅಂದಾಜಿದೆ.
ಬೃಹತ್ ಮೈಸೂರಿಗೆ ಯಾವ, ಪ.ಪಂ, ಗ್ರಾ.ಪಂ.ಗಳು ವಿಲೀನ
ಈಗಾಗಲೇ ಮೈಸೂರು ಸುತ್ತಲ ಗ್ರಾಮಗಳನ್ನು ನಗರಸಭೆ, ಪಟ್ಟಣಪಂಚಾಯಿತಿಗಳನ್ನಾಗಿ ವಿಂಗಡಿಸಲಾಗಿದೆ. ಹೂಟಗಳ್ಳಿ ನಗರಸಭೆ ಹೂಟಗಳ್ಳಿ, ಕೂರ್ಗಳ್ಳಿ, ಹಿನಕಲ್ ಮತ್ತು ಬೆಳವಾಡಿ ಗ್ರಾಮ ಪಂಚಾಯಿತಿಗಳನ್ನು ಹೆಬ್ಬಾಳ ಕೈಗಾರಿಕಾ ಪ್ರದೇಶ ಮತ್ತು ಇತರ ಸಣ್ಣ ಪ್ರದೇಶಗಳನ್ನು ಒಳಗೊಂಡಿದೆ.
ಬೋಗಾದಿ ಪಟ್ಟಣ ಪಂಚಾಯಿತಿ
ಗ್ರಾಮ ಪಂಚಾಯಿತಿ ಕೇಂದ್ರವಾಗಿದ್ದ ಬೋಗಾದಿ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿದ್ದು, ಮರಟಿಕ್ಯಾತನಹಳ್ಳಿ, ದಾಸನಕೊಪ್ಪಲು, ಜಟ್ಟಿಹುಂಡಿ ಬೀರಿಹುಂಡಿ, ಕೇರ್ಗಳ್ಳಿ, ಬಸವನಹಳ್ಳಿ, ಮದಗಳ್ಳಿ ಹಾಗೂ ಕೆ.ಹೆಮ್ಮನಹಳ್ಳಿ ಗ್ರಾಮಗಳನ್ನು ಒಳಗೊಂಡಿದೆ.
ಶ್ರೀರಾಂಪುರ ಪಟ್ಟಣ ಪಂಚಾಯಿತಿ
ಶ್ರೀರಾಂಪುರ ಪಟ್ಟಣ ಪಂಚಾಯಿತಿಯು ಶ್ರೀರಾಂಪುರ ಜಿ.ಪಂ ವ್ಯಾಪ್ತಿಗೆ ಬರುವ ಶ್ರೀರಾಂಪುರ, ಲಿಂಗಾಂಬುಧಿಪಾಳ್ಯ, ಗುರುರು, ಕೊಪ್ಪಲೂರು ಮತ್ತು ಕಳಲವಾಡಿ ಗ್ರಾಮಗಳನ್ನು ಒಳಗೊಂಡಿದೆ.
ರಾಮನಹಳ್ಳಿ ಪಟ್ಟಣ ಪಂಚಾಯಿತಿ
ರಮ್ಮನಹಳ್ಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯು ರಮ್ಮನಹಳ್ಳಿ ಗ್ರಾ.ಪಂ., ಆಲನಹಳ್ಳಿ ಗ್ರಾ.ಪಂ.ನ ನಾಡನಹಳ್ಳಿ ಮತ್ತು ಆಲನಹಳ್ಳಿ (ರಿಂಗ್ ರಸ್ತೆಯ ಹೊರಗೆ), ಹಂಚ್ಯಾ ಜಿ.ಪಂ.ಯ ಹಂಚ್ಯಾ ಮತ್ತು ಸಾತಗಳ್ಳಿ ಗ್ರಾಮಗಳನ್ನು ಒಳಗೊಂಡಿದೆ.
ಕಡಕೋಳ ಪಟ್ಟಣ ಪಂಚಾಯಿತಿ
ಕಡಕೋಳ ಪಟ್ಟಣ ಪಂಚಾಯಿತಿಯು ಕಡಕೋಳ ಗ್ರಾ.ಪಂ ವ್ಯಾಪ್ತಿಗೆ ಬರುವ ಕಡಕೋಳ ಮತ್ತು ಮಂಡಕಳ್ಳಿ ಗ್ರಾಮಗಳನ್ನು ಒಳಗೊಂಡಿದ್ದರೆ, ಹೊಸಹುಂಡಿ ಜಿ.ಪಂ.ವ್ಯಾಪ್ತಿಗೆ ಬರುವ ಬಂಡಿಪಾಳ್ಯ, ಗುಡುಮಾದನಹಳ್ಳಿ, ಎಸ್.ಉತ್ತನಹಳ್ಳಿ ಮತ್ತು ಹೊಸಹುಂಡಿ ಗ್ರಾಮಗಳು; ದೇವಲಾಪುರ ಜಿ.ಪಂ ವ್ಯಾಪ್ತಿಗೆ ಬರುವ ಮರಸೆ ಮತ್ತು ಮದರಗಳ್ಳಿ ಗ್ರಾಮಗಳು; ಕೆ.ಎಂ.ಹುಂಡಿ, ಕೆ.ಎನ್.ಹುಂಡಿ, ಗೆಜ್ಜಗಳ್ಳಿ ಮತ್ತು ಏಳಿಗೆಹುಂಡಿ ಗ್ರಾಮಗಳನ್ನು ಒಳಗು ಮಾಡಿಕೊಂಡಿದೆ. ಇದೀಗ ಬೃಹತ್ ಮೈಸೂರು ಮಹಾನಗರ ಪಾಲಿಕೆ ರಚನೆಯಾದರೆ ಈ ಎಲ್ಲಾ ವ್ಯಾಪ್ತಿಗಳ ಗ್ರಾಮಗಳು, ಪಟ್ಟಣ ಪಂಚಾಯಿತಿ, ನಗರ ಸಭೆ ಪಾಲಿಕೆ ವ್ಯಾಪ್ತಿಗೆ ಬರಲಿವೆ.
ಮುಂಬೈ ನಂತರ ಮಹಾರಾಷ್ಟ್ರದಲ್ಲಿ ಪುಣೆ ಬೆಳೆದ ರೀತಿಯಲ್ಲಿ ಕರ್ನಾಟಕದಲ್ಲಿ ಬೆಂಗಳೂರಿನ ನಂತರ ಮೈಸೂರು ಬೆಳವಣಿಗೆಯಾಗುತ್ತಿದೆ. ಆದರೆ ದೂರ ದೃಷ್ಟಿಯನ್ನು ಗಮನದಲ್ಲಿ ಇಟ್ಟುಕೊಂಡು ವ್ಯವಸ್ಥಿತವಾಗಿ ನಗರವನ್ನು ಕಟ್ಟಬೇಕು, ಮೂಲ ಸೌಕರ್ಯಗಳು ಎಲ್ಲರಿಗೂ ತಲುಪಬೇಕು ಎನ್ನುವ ನಿಟ್ಟಿನಲ್ಲಿ ಗ್ರೇಟರ್ ಮೈಸೂರು ಬೇಡಿಕೆ ಎದ್ದಿರುವುದು ಸಹಜ. ಆರೋಗ್ಯ, ಪ್ರವಾಸೋದ್ಯಮ, ಶಿಕ್ಷಣ, ಕಲೆ, ಸಂಸ್ಕೃತಿಗೆ ಹೆಸರಾದ ಮೈಸೂರಿನಲ್ಲಿ ಮುಂದಿನ ದಿನಗಳಲ್ಲಿ ಬರಲಿರುವ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ, ಫಿಲ್ಮ್ ಸಿಟಿ, ಬೃಹತ್ ಯೋಜನೆಗಳಿಗೆ ಸಹಕಾರಿಯಾಗುವ ನಿಟ್ಟಿನಲ್ಲಿ ನಗರವನ್ನು ಕಟ್ಟಬೇಕಿದೆ ಎನ್ನುವ ದೃಷ್ಟಿಯಿಂದ ಗ್ರೇಟರ್ ಮೈಸೂರು ಪ್ರಸ್ತಾವನೆಗೆ ಜೀವ ತುಂಬಬೇಕಿದೆ.
(ಮುಂದಿನ ಭಾಗದಲ್ಲಿ ಪ್ರಕಟವಾಗಲಿದೆ: "ಮೈಸೂರಿಗೆ ಹೊಸ ಮೈಲುಗಲ್ಲಾಗಲಿದೆಯೇ ಗ್ರೇಟರ್ ಮೈಸೂರು ಮಂತ್ರ..")