ಆಡಳಿತ ಮಂಡಳಿ ಅವಧಿ ಅಂತ್ಯ | ರಾಜ್ಯ ಸರ್ಕಾರಿ ನೌಕರರ ಸಂಘಕ್ಕೆ ಆಡಳಿತಾಧಿಕಾರಿ ನೇಮಿಸಿ ಆದೇಶ
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಪ್ರಧಾನ ವ್ಯವಸ್ಥಾಪಕ (ಕೆಎಎಸ್ ಆಯ್ಕೆ ಶ್ರೇಣಿ) ಸಿ.ಎನ್. ಮಂಜುನಾಥ್ ಅವರನ್ನು ಆಡಳಿತಾಧಿಕಾರಿಯಾಗಿ ನೇಮಿಸಲಾಗಿದೆ.;
ರಾಜ್ಯ ಸರ್ಕಾರಿ ನೌಕರರ ಸಂಘಕ್ಕೆ ಆಡಳಿತಾಧಿಕಾರಿಯನ್ನು ನೇಮಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಪ್ರಧಾನ ವ್ಯವಸ್ಥಾಪಕ (ಕೆಎಎಸ್ ಆಯ್ಕೆ ಶ್ರೇಣಿ) ಸಿ.ಎನ್. ಮಂಜುನಾಥ್ ಅವರನ್ನು ಆಡಳಿತಾಧಿಕಾರಿಯಾಗಿ ನೇಮಿಸಲಾಗಿದೆ.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷರಾದ ಬಿ.ಪಿ. ಮಂಜೇಗೌಡ, ರಾಜ್ಯ ಪರಿಷತ್ ಸದಸ್ಯರಾದ ಬಿ. ಗಂಗಾಧರ್ ಮತ್ತು ಎನ್.ಪಿ.ಎಸ್. ನೌಕರರ ಸಂಘದ ರಾಜ್ಯಾಧ್ಯಕ್ಷ ಶಾಂತರಾಮ್ ಮುಕ್ತ, ಪಾರದರ್ಶಕ ಹಾಗೂ ನ್ಯಾಯ ಸಮ್ಮತ ಚುನಾವಣೆ ನಡೆಸುವ ಸಲುವಾಗಿ ಆಡಳಿತಾಧಿಕಾರಿಯನ್ನು ನೇಮಿಸುವಂತೆ ಕೋರಿ ಸರ್ಕಾರಕ್ಕೆ ಪತ್ರ ಬರೆದಿದ್ದರು.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘವು ಬೃಹತ್ ಸಂಘವಾಗಿದ್ದು ಸಂಘದ ಆಡಳಿತ ಮಂಡಳಿಯ ಅವಧಿ ಮುಗಿದಿರುವುದರಿಂದ ಸಂಘದ ಸದಸ್ಯರ ಹಾಗೂ ಸಾರ್ವಜನಿಕ ಹಿತ ದೃಷ್ಟಿಯಿಂದ ಸಂಘದ ಹೊಸ ಆಡಳಿತ ಮಂಡಳಿ ರಚನೆಯಾಗುವವರೆಗೆ ಆಡಳಿತಾಧಿಕಾರಿ ನೇಮಿಸಲು ತೀರ್ಮಾನಿಸಿ ಸರ್ಕಾರ ಆದೇಶ ಹೊರಡಿಸಿದೆ.
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ಕರ್ನಾಟಕ ಸಂಘಗಳ ನೋಂದಣಿ ಕಾಯ್ದೆ 1960ರ ಕಲಂ 27 ಎ ರನ್ವಯ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಕಬ್ಬನ್ ಉದ್ಯಾನವನ, ಬೆಂಗಳೂರು-1 ಈ ಸಂಘಕ್ಕೆ ಸಿ.ಎನ್. ಮಂಜುನಾಥ್ ಕೆ.ಎ.ಎಸ್. (ಆಯ್ಕೆ ಶ್ರೇಣಿ) ಪ್ರಧಾನ ವ್ಯವಸ್ಥಾಪಕರು, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಇವರನ್ನು ಆದೇಶ ಹೊರಡಿಸಿದ ದಿನಾಂಕದಿಂದ ಹೊಸ ಆಡಳಿತ ಮಂಡಳಿ ರಚನೆಯಾಗುವವರೆಗೆ ಆಡಳಿತಾಧಿಕಾರಿಯಾಗಿ ನೇಮಿಸಿ ಆದೇಶಿಸಲಾಗಿದೆ.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘವು ಬೆಂಗಳೂರಿನಲ್ಲಿ ಕೇಂದ್ರ ಕಚೇರಿ ಹೊಂದಿದ್ದು ರಾಜ್ಯದ ಎಲ್ಲಾ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಶಾಖೆಗಳನ್ನು ಹೊಂದಿದೆ. ಕರ್ನಾಟಕ ರಾಜ್ಯದ ಸರ್ಕಾರಿ ನೌಕರರ ಬೃಹತ್ ಸಂಘಟನೆಯಾಗಿರುವ ಈ ಸಂಘದ ಹಾಲಿ ಆಡಳಿತ ಮಂಡಳಿಯ ಅವಧಿ ಮುಗಿದು ಎರಡು ತಿಂಗಳುಗಳು ಕಳೆದರೂ ನೂತನ ಆಡಳಿತ ಮಂಡಳಿಗೆ ಚುನಾವಣೆಗಳು ನಡೆದಿಲ್ಲ. ಮತದಾರರ ಪಟ್ಟಿಗಳು ಅಂತಿಮಗೊಂಡಿಲ್ಲ. ಮುಕ್ತ. ಪಾರದರ್ಶಕ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಸುವ ಸಲುವಾಗಿ ಆಡಳಿತಾಧಿಕಾರಿಯನ್ನು ನೇಮಕ ಮಾಡಲಾಗಿದೆ.
ಚುನಾವಣೆ ನಡೆಸಲು ಚುನಾವಣಾಧಿಕಾರಿ ನೇಮಿಸಲಾಗಿದೆ. ಈಗಾಗಲೇ ಚುನಾವಣಾ ಪ್ರಕ್ರಿಯೆಗಳೂ ಆರಂಭವಾಗಿವೆ. ಹಾಗಾಗಿ, ಆಡಳಿತಾಧಿಕಾರಿ ನೇಮಿಸಲಾಗಿದ್ದು, ಚುನಾವಣಾ ಫಲಿತಾಂಶ ಪ್ರಕಟವಾಗಿ ಹೊಸ ಆಡಳಿತ ಮಂಡಳಿ ನೇಮಕವಾಗುವವರೆಗೂ ಮುಂದುವರಿಯಲಿದ್ದಾರೆ ಎಂದು ಆದೇಶದಲ್ಲಿ ವಿವರಿಸಲಾಗಿದೆ. ಸರ್ಕಾರಿ ನೌಕರರ ಸಂಘದ ಚುನಾವಣಾ ಪ್ರಕ್ರಿಯೆ ಸೆ. 17ರಿಂದ ಆರಂಭವಾಗಿದ್ದು, ತಾಲ್ಲೂಕು ಶಾಖೆಯಿಂದ ಆರಂಭಗೊಂಡು ರಾಜ್ಯ ಸಂಘದ ಅಧ್ಯಕ್ಷರು, ಪದಾಧಿಕಾರಿಗಳವರೆಗಿನ ಚುನಾವಣೆ ಡಿ. 27ರವರೆಗೆ ವಿವಿಧ ಹಂತದಲ್ಲಿ ನಡೆಯಲಿದೆ. ಚುನಾವಣಾಧಿಕಾರಿಯಾಗಿ ಎ. ಹನುಮನರಸಯ್ಯ ಕಾರ್ಯನಿರ್ವಹಿಸುತ್ತಿದ್ದಾರೆ.