ಲೇಡಿಸ್ ಪಿಜಿಯಲ್ಲಿ 'ಮಾಸ್ಕ್ ಮ್ಯಾನ್'ನಿಂದ ಯುವತಿಗೆ ಲೈಂಗಿಕ ಕಿರುಕುಳ; ಹಣ ದೋಚಿ ಪರಾರಿ
ವ್ಯಕ್ತಿಯು ರೂಮಿನ ಎಲ್ಲಾ ಬಾಗಿಲುಗಳನ್ನು ಮುಚ್ಚಿ ಯುವತಿ ಬಳಿ ಹೋಗಿ ಕೈ ಕಾಲು ಸವರಿದ್ದಾನೆ ಎಂದು ಯುವತಿ ಆರೋಪಿಸಿದ್ದಾಳೆ.;
ಸುದ್ದಗುಂಟೆಪಾಳ್ಯದ ಲೇಡೀಸ್ ಪಿಜಿಯೊಂದರಲ್ಲಿ ಯುವತಿಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿರುವ ಆಘಾತಕಾರಿ ಘಟನೆ ಶುಕ್ರವಾರ ನಡೆದಿದ್ದು, ಈ ಸಂಬಂಧ ಸುದ್ದಗುಂಟೆಪಾಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಶುಕ್ರವಾರ ಮುಂಜಾನೆ ಸುಮಾರು 3 ಗಂಟೆಗೆ, ಮುಖಕ್ಕೆ ಮಾಸ್ಕ್ ಧರಿಸಿದ ಅಪರಿಚಿತ ವ್ಯಕ್ತಿಯೊಬ್ಬ ಪಿಜಿಯೊಳಗೆ ಪ್ರವೇಶಿಸಿ ಯುವತಿ ಮಲಗಿದ್ದ ಕೋಣೆಗೆ ನುಗ್ಗಿದ್ದಾನೆ. ಆರಂಭದಲ್ಲಿ, ತನ್ನ ರೂಮ್‌ಮೇಟ್ ಇರಬಹುದೆಂದು ಭಾವಿಸಿದ ಯುವತಿ ನಿದ್ರೆಯಲ್ಲೇ ಇದ್ದಳು. ಆದರೆ, ಆರೋಪಿ ಕೋಣೆಯ ಬಾಗಿಲುಗಳನ್ನು ಮುಚ್ಚಿ, ಯುವತಿಯ ಬಳಿ ಬಂದು ಆಕೆಯ ಕೈ-ಕಾಲುಗಳನ್ನು ಸವರಿ ಲೈಂಗಿಕವಾಗಿ ಅನುಚಿತವಾಗಿ ವರ್ತಿಸಿದ್ದಾನೆ.
ತಕ್ಷಣ ಎಚ್ಚೆತ್ತ ಯುವತಿ, ತೀವ್ರವಾಗಿ ಪ್ರತಿರೋಧಿಸಿ ಕಿರುಚಾಡಿದ್ದಾಳೆ. ಆದರೂ, ಆರೋಪಿ ತನ್ನ ಕೃತ್ಯವನ್ನು ಮುಂದುವರಿಸಿ, ಹಲ್ಲೆ ನಡೆಸಿ, ಆಕೆಯ ಕಪಾಟಿನಲ್ಲಿದ್ದ 2,500 ರೂಪಾಯಿ ನಗದು ದೋಚಿಕೊಂಡು ಸ್ಥಳದಿಂದ ಪರಾರಿಯಾಗಿದ್ದಾನೆ. ಸಂತ್ರಸ್ತೆಯ ದೂರಿನ ಅನ್ವಯ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಪಿಜಿಯ ಸಿಸಿ ಕ್ಯಾಮರಾದಲ್ಲಿ ಆರೋಪಿಯ ಕೃತ್ಯ ಸೆರೆಯಾಗಿದ್ದು, ದೃಶ್ಯಾವಳಿಗಳ ಆಧಾರದ ಮೇಲೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಆದಾಗ್ಯೂ, ಘಟನೆ ನಡೆದು ಎರಡು ದಿನವಾದರೂ ಆರೋಪಿ ಇನ್ನೂ ಪತ್ತೆಯಾಗಿಲ್ಲ.
ಹಿಂದೆಯೂ ನಡೆದಿದ್ದವು ಘಟನೆಗಳು
ಬೆಂಗಳೂರಿನ ಪಿಜಿಗಳಲ್ಲಿ ಇಂತಹ ಘಟನೆಗಳು ಹೆಚ್ಚಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಆಗಸ್ಟ್ 11ರಂದು ಬೆಸ್ಕಾಂ ಅಧಿಕಾರಿಯೊಬ್ಬರು ತಮ್ಮ ಪಿಜಿ ಕೋಣೆಯಲ್ಲಿದ್ದಾಗ, ಆಗಂತುಕನೊಬ್ಬ ಚಾಕು ತೋರಿಸಿ ಬೆದರಿಸಿ, ಲೈಂಗಿಕ ದೌರ್ಜನ್ಯ ಎಸಗಿದ್ದ. ಆಕೆ ಕಿರುಚಿಕೊಂಡಾಗ, ಎರಡು ಮೊಬೈಲ್ ಫೋನ್‌ಗಳನ್ನು ಕಸಿದುಕೊಂಡು ಪರಾರಿಯಾಗಿದ್ದ.
ಇಲ್ಲಿನ ಪಿಜಿ ಮಾಲೀಕ ಅಶ್ರಫ್ ಎಂಬಾತನೇ, ತನ್ನ ಪಿಜಿಯಲ್ಲಿದ್ದ ವಿದ್ಯಾರ್ಥಿನಿಯೊಬ್ಬರನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದ. ಈ ಪ್ರಕರಣದಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಲಾಗಿದೆ.