MLA Munirathna : ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ

MLA Munirathna : ಒಟ್ಟು 3 ಸಾವಿರ ಪುಟಗಳ ಚಾರ್ಜ್​ಶೀಟ್​​ನಲ್ಲಿ ಮುನಿರತ್ನ, ಸುಧಾಕರ್, ಇನ್ಸ್​ಪೆಕ್ಟರ್ ಐಯ್ಯಣ್ಣ ರೆಡ್ಡಿ, ಲೋಹಿತ್ ಗೌಡ, ಶ್ರೀನಿವಾಸ್, ಕಿರಣ್ ಕುಮಾರ್, ಮಂಜುನಾಥ್ ಹೆಸರುಗಳನ್ನು ಉಲ್ಲೇಖಿಸಲಾಗಿದೆ.;

Update: 2025-04-28 09:06 GMT

ಶಾಸಕ ಮುನಿರತ್ನ 

ಆರ್​ಆರ್ ನಗರ ಶಾಸಕ ಮುನಿರತ್ನ ಮೇಲಿನ ಅತ್ಯಾಚಾರ ಆರೋಪ ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳು, ಶಾಸಕ ಮುನಿರತ್ನ ಸೇರಿ 7 ಆರೋಪಿಗಳ ವಿರುದ್ಧ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಿದ್ದಾರೆ.

ಒಟ್ಟು 3 ಸಾವಿರ ಪುಟಗಳ ಚಾರ್ಜ್​ಶೀಟ್​​ನಲ್ಲಿ ಮುನಿರತ್ನ, ಸುಧಾಕರ್, ಇನ್​ಸ್ಪೆಕ್ಟರ್​ ಐಯ್ಯಣ್ಣ ರೆಡ್ಡಿ, ಲೋಹಿತ್ ಗೌಡ, ಶ್ರೀನಿವಾಸ್, ಕಿರಣ್ ಕುಮಾರ್, ಮಂಜುನಾಥ್ ಹೆಸರುಗಳನ್ನು ಉಲ್ಲೇಖಿಸಲಾಗಿದೆ. 

ಆರೋಪಿಗಳು ಪಿಐಗಳು, ಎಸಿಪಿಗಳ ಅಶ್ಲೀಲ ಫೋಟೋ, ವಿಡಿಯೋ ಮಾಡಿರುವುದು ಚಾರ್ಜ್​ಶೀಟ್​ನಿಂದ ಬಯಲಾಗಿದೆ. ತಮ್ಮ ಪರ ಕೆಲಸ ಮಾಡುವಂತೆ ಮಾಡಲು ಬ್ಲ್ಯಾಕ್​ಮೇಲ್ ಮಾಡಿದ ಬಗ್ಗೆಯೂ ಚಾರ್ಜ್​ಶೀಟ್​​ನಲ್ಲಿ ಉಲ್ಲೇಖಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ನಾಯಕರ ಅಶ್ಲೀಲ ಫೋಟೋ ತೋರಿಸುವಂತೆ ಹೇಳಿರುವುದನ್ನೂ ಉಲ್ಲೇಖಿಸಲಾಗಿದೆ. ಎಚ್​ಐವಿ ಸೋಂಕಿತ ಸಂತ್ರಸ್ತೆ, ನೊಂದ ಮಹಿಳೆಯಿಂದ ಸಿಐಡಿ ಅಧಿಕಾರಿಗಳು ಹೇಳಿಕೆಗಳನ್ನು ಪಡೆದಿದ್ದರು. ಜತೆಗೆ ಸಾಕ್ಷ್ಯಗಳ ಹೇಳಿಕೆಯನ್ನೂ ಪಡೆಯಲಾಗಿತ್ತು. ಶಾಸಕ ಮುನಿರತ್ನ ಅವರನ್ನೂ ಸಿಐಡಿ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದರು. ವಿಚಾರಣೆ ವೇಳೆ ಬರೋಬ್ಬರಿ 63 ಪ್ರಶ್ನೆಗಳನ್ನು ಮುನಿರತ್ನ ಮುಂದಿಡಲಾಗಿತ್ತು.

ಶಾಸಕ ಮುನಿರತ್ನ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು 40 ವರ್ಷದ ಮಹಿಳೆಯೊಬ್ಬರು ಕಳೆದ ಸೆಪ್ಟೆಂಬರ್‌ನಲ್ಲಿ ಆರೋಪಿಸಿದ್ದರು. ಮುನಿರತ್ನ ತನ್ನ ವಿರೋಧಿಗಳನ್ನು ಹಣಿಯಲು ಎಚ್‌ಐವಿ ಸೋಂಕಿತ ಮಹಿಳೆಯರನ್ನು ಬಳಸಿಕೊಂಡು ಹನಿಟ್ರ್ಯಾಪ್ ಮಾಡುತ್ತಿದ್ದರು ಎಂದು ಹೇಳಿದ್ದರು. ಮುನಿರತ್ನ ವಿರುದ್ಧ ಐಪಿಸಿ ಕಲಂ 354(ಎ),354(ಸಿ), 376(2)(ಎನ್),308, 270,120ಬಿ,119,504,506,201,511, ರೆ/ವಿ 34 ಐಪಿಸಿ, ಕಲಂ 66ಇ, ಮಾಹಿತಿ ತಂತ್ರಜ್ಞಾನ ಕಾಯ್ದೆ ಅಡಿ ಕೇಸ್ ದಾಖಲಾಗಿತ್ತು.

Tags:    

Similar News