ʼಸಂಜೀವಿನಿ ಬೆಳಕುʼ ಅಭಿಯಾನದಡಿ ಮಂಡ್ಯದಲ್ಲಿ 86 ಮಂದಿ ಜೀತ ಮುಕ್ತ
ಜಿಲ್ಲೆಯಲ್ಲಿ ಒಟ್ಟು 86 ಜೀತದಾಳುಗಳಿದ್ದು, ಅವರಲ್ಲಿ ನಾಲ್ವರು ಮಹಿಳೆಯರು, 82 ಪುರುಷರನ್ನು ವಿಮುಕ್ತರನ್ನಾಗಿ ಮಾಡಿ ಸಮಾಜದ ಮುಖ್ಯವಾಹಿನಿಗೆ ಕರೆತರಲಾಗಿದೆ ಎಂದು ಸಚಿವ ಚಲುವರಾಯಸ್ವಾಮಿ ತಿಳಿಸಿದ್ದಾರೆ.;
ಜೀತ ವಿಮುಕ್ತ ಕುಟುಂಬಗಳಿಗೆ ಸಚಿವ ಚಲುವರಾಯಸ್ವಾಮಿ ಹೊಲಿಗೆ ಯಂತ್ರ ವಿತರಿಸಿದರು.
ಜೀತ ಪದ್ಧತಿಯಂತಹ ಅನಿಷ್ಟವನ್ನು ಸಂಪೂರ್ಣವಾಗಿ ಹೋಗಲಾಡಿಸಲು ಸರ್ಕಾರ ಬದ್ಧವಾಗಿದ್ದು, ಜೀತ ವಿಮುಕ್ತರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಎಲ್ಲಾ ರೀತಿಯ ನೆರವು ನೀಡಲಾಗುವುದು ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದರು.
ಅವರು ಮದ್ದೂರಿನಲ್ಲಿ ಜೀತ ವಿಮುಕ್ತ ಕುಟುಂಬಗಳಿಗೆ ಗುರುತಿನ ಚೀಟಿ ವಿತರಣೆ ಹಾಗೂ ಆರೋಗ್ಯ ತಪಾಸಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. "ಕಾನೂನು ಬಾಹಿರವೆಂದು ತಿಳಿದಿದ್ದರೂ ಮುಗ್ಧ ಜನರು ಜೀತ ಪದ್ಧತಿಗೆ ಬಲಿಯಾಗುತ್ತಿರುವುದು ದುರದೃಷ್ಟಕರ. ಇಂತಹ ಕುಟುಂಬಗಳನ್ನು ಗುರುತಿಸಿ, ಅವರಿಗೆ ಸರ್ಕಾರದ ಯೋಜನೆಗಳನ್ನು ತಲುಪಿಸುವ ಮೂಲಕ ಘನತೆಯುತ ಜೀವನ ನಡೆಸಲು ಅವಕಾಶ ಕಲ್ಪಿಸುವುದು ನಮ್ಮ ಜವಾಬ್ದಾರಿ," ಎಂದರು.
ಮಂಡ್ಯ ಜಿಲ್ಲೆಯಲ್ಲಿ ಗುರುತಿಸಲಾಗಿರುವ 86 ಜನ ಜೀತ ವಿಮುಕ್ತರಿಗೆ (82 ಪುರುಷರು, 4 ಮಹಿಳೆಯರು) ಸರ್ಕಾರದ ವತಿಯಿಂದ 13 ವಿವಿಧ ಗುರುತಿನ ಚೀಟಿಗಳು ಹಾಗೂ ಅಗತ್ಯ ದಾಖಲೆಗಳನ್ನು ಒದಗಿಸಲಾಗುತ್ತಿದೆ. ಈ ಮೂಲಕ ಅವರು ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ಪಡೆದು, ಸ್ವಾವಲಂಬಿಗಳಾಗಲು ಅನುವು ಮಾಡಿಕೊಡಲಾಗುವುದು ಎಂದು ಸಚಿವರು ಭರವಸೆ ನೀಡಿದರು.
'ಸಂಜೀವಿನಿ ಬೆಳಕು' ಅಭಿಯಾನ
ಜಿಲ್ಲಾ ಪಂಚಾಯಿತಿ ವತಿಯಿಂದ 'ಸಂಜೀವಿನಿ ಬೆಳಕು' ಎಂಬ ವಿಶೇಷ ಅಭಿಯಾನದಡಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಬಗ್ಗೆ ಮಾತನಾಡಿದ ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್. ನಂದಿನಿ, "ಜೀತವಿಮುಕ್ತ ಕುಟುಂಬಗಳ ಮಹಿಳೆಯರನ್ನು ಎನ್‌ಆರ್‌ಎಲ್‌ಎಂ ಯೋಜನೆಯಡಿ ಸ್ವ-ಸಹಾಯ ಸಂಘಗಳಿಗೆ ಸೇರ್ಪಡೆಗೊಳಿಸಲಾಗುತ್ತಿದೆ. ಯುವಕ-ಯುವತಿಯರಿಗೆ 'ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆ'ಯಿಂದ ವೃತ್ತಿ ಕೌಶಲ್ಯ ತರಬೇತಿ ನೀಡಿ, ಸ್ವಾವಲಂಬಿ ಬದುಕಿಗೆ ದಾರಿ ಮಾಡಿಕೊಡಲಾಗುತ್ತಿದೆ," ಎಂದು ವಿವರಿಸಿದರು.
ವಿತರಿಸಲಾದ ಪ್ರಮುಖ ದಾಖಲೆಗಳು
ಈ ಅಭಿಯಾನದಡಿ ಜೀತ ವಿಮುಕ್ತರಿಗೆ ಆಧಾರ್ ಕಾರ್ಡ್, ಪಡಿತರ ಚೀಟಿ, ಚುನಾವಣಾ ಗುರುತಿನ ಚೀಟಿ, ಬ್ಯಾಂಕ್ ಉಳಿತಾಯ ಖಾತೆ, ಜಾತಿ ಮತ್ತು ಆದಾಯ ಪ್ರಮಾಣಪತ್ರ, ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್, ಇ-ಶ್ರಮ್ ಕಾರ್ಡ್, ಹಾಗೂ ಮನರೇಗಾ ಉದ್ಯೋಗ ಚೀಟಿ ಸೇರಿದಂತೆ 13 ಪ್ರಮುಖ ದಾಖಲೆಗಳನ್ನು ವಿತರಿಸಲಾಯಿತು. ಈ ದಾಖಲೆಗಳು ಜೀತ ವಿಮುಕ್ತರು ಸರ್ಕಾರದ ಸೌಲಭ್ಯಗಳನ್ನು ನೇರವಾಗಿ ಪಡೆಯಲು ಮತ್ತು ಸಮಾಜದಲ್ಲಿ ಇತರರಂತೆ ಸಮಾನವಾಗಿ ಬದುಕಲು ನೆರವಾಗಲಿವೆ.