ಮಳೆಹಾನಿ | 80,000 ಹೆಕ್ಟೇರ್ ಬೆಳೆ ನಾಶ; ವಾರದೊಳಗೆ ಪರಿಹಾರ: ಸಚಿವ ಕೃಷ್ಣ ಬೈರೇಗೌಡ ಭರವಸೆ
ಪ್ರಸಕ್ತ ಮುಂಗಾರು ಅವಧಿಯಲ್ಲಿ ರಾಜ್ಯಾದ್ಯಂತ ವ್ಯಾಪಕ ಮಳೆಯಾಗಿದ್ದು, ಒಟ್ಟಾರೆ 80,000 ಹೆಕ್ಟೇರ್ ಬೆಳೆ ನಾಶವಾಗಿದೆ. ಒಂದು ವಾರದೊಳಗಾಗಿ ರೈತರಿಗೆ ಬೆಳೆ ನಷ್ಟ ಪರಿಹಾರ ನೀಡಲಾಗುವುದು ಎಂದು ಸಚಿವ ಕೃಷ್ಣ ಬೈರೇಗೌಡ ಭರವಸೆ ನೀಡಿದ್ದಾರೆ.;
ಪ್ರಸಕ್ತ ಮುಂಗಾರು ಅವಧಿಯಲ್ಲಿ ರಾಜ್ಯಾದ್ಯಂತ ವ್ಯಾಪಕ ಮಳೆಯಾಗಿದ್ದು, ಒಟ್ಟಾರೆ 80,000 ಹೆಕ್ಟೇರ್ ಬೆಳೆ ನಾಶವಾಗಿದೆ. ಒಂದು ವಾರದೊಳಗಾಗಿ ರೈತರಿಗೆ ಬೆಳೆ ನಷ್ಟ ಪರಿಹಾರ ನೀಡಲಾಗುವುದು ಎಂದು ಸಚಿವ ಕೃಷ್ಣ ಬೈರೇಗೌಡ ಭರವಸೆ ನೀಡಿದ್ದಾರೆ.
ಸೋಮವಾರ ವಿಕಾಸಸೌಧದ ನಾಲ್ಕನೇ ಮಹಡಿಯ ಸಭಾಂಗಣದಲ್ಲಿ ಬೆಂಗಳೂರು ವಿಭಾಗದ ಕಂದಾಯ ಇಲಾಖೆ ಪ್ರಗತಿ ಪರಿಶೀಲನಾ ಸಭೆ ಏರ್ಪಡಿಸಲಾಗಿತ್ತು. ಸಭೆಯ ನಂತರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ʻʻರಾಜ್ಯಾದ್ಯಂತ ಕೃಷಿ ಬೆಳೆ 78,679 ಹೆಕ್ಟೇರ್ ಹಾನಿಯಾಗಿದ್ದರೆ, ತೋಟಗಾರಿಕಾ ಬೆಳೆ 2,294 ಹೆಕ್ಟೇರ್ ಪ್ರದೇಶ ಹಾನಿಯಾಗಿದೆ. ವಾರದೊಳಗೆ ಯಾವ ಯಾವ ಬೆಳೆಗಳು ಹಾನಿಯಾಗಿವೆ ಎಂಬ ಬಗ್ಗೆಯೂ ಖಚಿತ ಮಾಹಿತಿ ಸಿಗಲಿದೆ. ತದನಂತರ ರೈತರಿಗೆ ಪರಿಹಾರ ನೀಡುವ ಕಾರ್ಯಕ್ಕೂ ಚಾಲನೆ ನೀಡಲಾಗುವುದು. ಪ್ರಸ್ತುತ ರಾಜ್ಯ ಸರ್ಕಾರದ ಬಳಿ ಇರುವ ಸಂಪನ್ಮೂಲದಲ್ಲೇ ಪರಿಹಾರ ನೀಡಲಾಗುವುದು. ಇನ್ನೂ ಒಂದೂವರೆ ತಿಂಗಳ ಮಳೆ ಸಾಧ್ಯತೆ ಇರುವುದರಿಂದ ಮುಂದಿನ ದಿನಗಳಲ್ಲಿ ಮತ್ತಷ್ಟು ಬೆಳೆಹಾನಿಯಾಗುವ ಸಾಧ್ಯತೆ ಇದೆ. ಹೀಗಾಗಿ ಮುಂಗಾರಿನ ಸಂಪೂರ್ಣ ಅವಧಿ ಮುಗಿಯುವವರೆಗೆ ಕಾದು ತದನಂತರ ಪರಿಹಾರಕ್ಕಾಗಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದುʼʼ ಎಂದು ತಿಳಿಸಿದರು.
ʻʻಈ ವರ್ಷ ಬೆಳೆಹಾನಿ ಪ್ರಮಾಣವನ್ನು ನಿಯಂತ್ರಿಸಲಾಗಿದೆ. 2020ರಲ್ಲಿ 2.21ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಹಾನಿಯಾಗಿತ್ತು. 2021ರಲ್ಲಿ 2.12 ಲಕ್ಷ ಹೆಕ್ಟೇರ್ ಹಾಗೂ 2022 ರಲ್ಲಿ 1.53 ಹೆಕ್ಟೇರ್ ಬೆಳೆಹಾನಿಯಾಗಿತ್ತು. ಆದರೆ, ಕಳೆದ ವರ್ಷಗಳಿಗೆ ಹೋಲಿಕೆ ಮಾಡಿದರೆ, ಈ ವರ್ಷ 80,000 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಹಾನಿಯಾಗಿದೆ. ಇನ್ನೂ ಒಂದೂವರೆ ತಿಂಗಳು ಮುಂಗಾರು ಅವಧಿ ಇರುವ ಕಾರಣ ಬಹಳ ಎಚ್ಚರಿಕೆಯಿಂದ ಹಾಗೂ ಜವಾಬ್ದಾರಿಯಿಂದ ಈ ವಿಚಾರವನ್ನು ನಿರ್ವಹಣೆ ಮಾಡಲಾಗುವುದುʼʼ ಎಂದರು.
ಈವರೆಗೆ ನೀಡಿರುವ ಪರಿಹಾರ ಎಷ್ಟು?
ʻʻಪ್ರಸಕ್ತ ಸಾಲಿನ ಮಳೆಗಾಲದಲ್ಲಿ 1126 ಮನೆಗಳು ಸಂಪೂರ್ಣ ಕುಸಿದಿದ್ದರೆ, ಅನಧಿಕೃತವಾಗಿ ನಿರ್ಮಿಸಲಾಗಿರುವ 75 ಮನೆಗಳೂ ಕುಸಿದಿವೆ. ಇದಲ್ಲದೆ, 1176 ಮನೆಗಳು ತೀವ್ರ ಹಾನಿಗೆ ಒಳಗಾಗಿದ್ದರೆ, 2338 ಮನೆಗಳು ಭಾಗಶಃ ಹಾನಿಯಾಗಿವೆ. ಒಟ್ಟಾರೆ 8,000 ಮನೆಗಳು ಹಾನಿಗೆ ಒಳಗಾಗಿವೆ. ಅನಧಿಕೃತ ಮನೆಗಳ ಬಗ್ಗೆಯೂ ನಮ್ಮ ಸರ್ಕಾರ ಸಾಕಷ್ಟು ಉದಾರವಾಗಿಯೇ ನಡೆದುಕೊಳ್ಳುತ್ತಿದ್ದು, ಮನೆ ಹಾನಿಯಾದ ಎಲ್ಲರಿಗೂ ಈಗಾಗಲೇ ಪರಿಹಾರ ಒದಗಿಸಲಾಗಿದೆʼʼ ಎಂದರು.
ʻʻಮನೆ ಸಂಪೂರ್ಣ ಹಾನಿಯಾದರೆ 1,20,000 ರೂಪಾಯಿಯ ಜೊತೆಗೆ ಸರ್ಕಾರದಿಂದಲೇ ಒಂದು ಮನೆಯನ್ನೂ ನೀಡಲಾಗುತ್ತಿದೆ. ಈ ಕಾರ್ಯಗಳಿಗೆ ಈವರೆಗೆ ಒಟ್ಟು 9.21ಕೋಟಿ ರೂಪಾಯಿ ಪಾವತಿ ಮಾಡಲಾಗಿದೆ. ಮನೆಗೆ ನೀರು ನುಗ್ಗಿ ಸಣ್ಣಪುಟ್ಟ ಹಾನಿಯಾಗಿದ್ದರೆ ಅದನ್ನು ಸುಧಾರಿಸಲು 2800 ಮನೆಗಳಿಗೆ 70 ಲಕ್ಷ ಹಣ ಪರಿಹಾರ ನೀಡಲಾಗಿದೆ. ದಿನಬಳಕೆ ವಸ್ತುಗಳಿಗೂ 70 ಲಕ್ಷ ಪರಿಹಾರ ಸೇರಿ ಒಟ್ಟಾರೆ 1.40 ಕೋಟಿ ರೂ ಪರಿಹಾರ ನೀಡಲಾಗಿದೆ. ಅನಧಿಕೃತ ಮನೆಗಳಿಗೆ ಹಾನಿಯಾಗಿದ್ದರೆ ಅವರಿಗೂ 1 ಲಕ್ಷ ರೂಪಾಯಿವರೆಗೆ ಪರಿಹಾರ ನೀಡಲಾಗಿದೆ. ಮನೆ ಭಾಗಶಃ ಹಾನಿಯಾಗಿದ್ದರೆ ಎಸ್‌ಡಿಆರ್‌ಎಫ್ ನಿಯಮದ ಅಡಿಯಲ್ಲಿ ಕೇವಲ 2,500 ರೂಪಾಯಿ ಮಾತ್ರ ಪರಿಹಾರ ನೀಡಲು ಸಾಧ್ಯ. ಆದರೆ, ರಾಜ್ಯ ಸರ್ಕಾರದ ವತಿಯಿಂದ 50,000 ವರೆಗೆ ಪರಿಹಾರ ನೀಡಲಾಗಿದೆʼʼ ಎಂದು ತಿಳಿಸಿದರು.
ʻʻಇನ್ನೂ ರಾಜ್ಯಾದ್ಯಂತ ಹಸು-ದನ ಸೇರಿದಂತೆ 151ದೊಡ್ಡ ಜಾನುವಾರುಗಳು ಹಾಗೂ 137 ಚಿಕ್ಕ ಜಾನುವಾರುಗಳು ಮೃತಪಟ್ಟಿವೆ. ಇದಕ್ಕೂ ಸಹ 52.98 ಲಕ್ಷ ರೂಪಾಯಿ ಪರಿಹಾರ ಪಾವತಿಸಲಾಗಿದೆ. ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿ 667 ಕೋಟಿ ರೂಪಾಯಿ ಇದ್ದು, ಪರಿಹಾರ ಕಾರ್ಯಗಳಿಗೆ ಸಾಕಷ್ಟು ಹಣ ಇದೆ. ಅಗತ್ಯವಿದ್ದರೆ ಮತ್ತಷ್ಟು ಹಣ ನೀಡಲೂ ಸಹ ರಾಜ್ಯ ಸರ್ಕಾರ ಸಿದ್ದವಾಗಿದೆʼʼ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಮಾಹಿತಿ ನೀಡಿದರು.