ಕಚ್ಚೆ ಪಂಚೆ ಧರಿಸಿದ ರೈತನನ್ನು ಹೊರಗಿಟ್ಟ ಮಾಲ್‌: ಚಡ್ಡಿ ಧರಿಸಿ ಮುತ್ತಿಗೆ ಹಾಕಲು ರೈತರ ನಿರ್ಧಾರ

ರೈತರ ಅನ್ನ ತಿನ್ನುವ ಯಾರೇ ಆದರೂ ಇನ್ನು ಮುಂದೆ ಇಂಥ ನಡವಳಿಕೆ ತೋರಿಸಿದರೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಚ್ಚೆತ್ತುಕೊಳ್ಳಬೇಕು ಮುಖ್ಯಮಂತ್ರಿ ಸಿದ್ದರಾಮಯ್ಯ ಪಂಚೆಯಲ್ಲಿ ಬರುತ್ತಾರೆ ಅವರಿಗೂ ಪ್ರವೇಶ ನೀಡದೆ ನಿಲ್ಲಿಸುತ್ತಾರೆಯೇ ಎಂದು ರೈತರು ಪ್ರಶ್ನಿಸಿದ್ದಾರೆ.

Update: 2024-07-17 12:34 GMT
ಪಂಚೆ ಧರಿಸಿ ಬಂದ ರೈತನಿಗೆ ಮಾಲ್‌ಗೆ ಪ್ರವೇಶ ನಿರಾಕರಿಸಿದ ಘಟನೆ ನಡೆದಿದೆ.
Click the Play button to listen to article

ಉತ್ತರ ಕರ್ನಾಟಕದ ೭೦ರ  ರೈತ ಫಕೀರಪ್ಪ ಎಂಬ ರೈತ ಮಂಗಳವಾರ ಸಂಜೆ ಬೆಂಗಳೂರಿನ ಜಿಟಿ ಮಾಲ್‌ಗೆ ಸಾಂಪ್ರದಾಯಿಕ ಧೋತಿ ಮತ್ತು ಬಿಳಿ ಅಂಗಿ ಧರಿಸಿ ತಮ್ಮ ಮಗ ನಾಗರಾಜ್ ಜೊತೆಯಲ್ಲಿ ಸಿನಿಮಾ ನೋಡಲು ಹೋದ ವೇಳೆ ಮಾಲ್‌ನ ಸಿಬ್ಬಂದಿ ಪಂಚೆ ಧರಿಸಿ ಬಂದ ಕಾರಣಕ್ಕೆ ಅವರಿಗೆ ಪ್ರವೇಶ ನಿರಾಕರಿಸಿದ್ದಾರೆ. ಈ ಘಟನೆಗೆ ರೈತ ಸಂಘಟನೆಗಳೂ ಸೇರಿದಂತೆ ಹಲವೆಡೆಯಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ರೈತನ ಅನ್ನ ತಿನ್ನುವ ರೈತ ಬೆಳೆದ ಹಣ್ಣು ತರಕಾರಿ ಧಾನ್ಯಗಳನ್ನು ಬೆಳೆಯನ್ನು ಮಾರಾಟ ಮಾಡುವ ಈ ಮಾಲ್ ಮಾಲೀಕನ ವಿರುದ್ಧ ಪೊಲೀಸ್ ಇಲಾಖೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಿ.ಇಲ್ಲದಿದ್ದರೆ, ಸಾವಿರಾರು ರೈತರು ಬಾರ್‌ಕೋಲ್‌ಗಳೊಂದಿಗೆ ಚಡ್ಡಿಯಲ್ಲಿ ಮೆರವಣಿಗೆ ಮೂಲಕ ಮಾಲ್‌ಗೆ ಪ್ರವೇಶಿಸ ಬೇಕಾಗುತ್ತದೆ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಪತ್ರಿಕಾ ಹೇಳಿಕೆಯಲ್ಲಿ ಎಚ್ಚರಿಸಿದ್ದಾರೆ.

 ರೈತರ ಅನ್ನ ತಿನ್ನುವ ಯಾರೇ ಆದರೂ ಇನ್ನು ಮುಂದೆ ಇಂಥ ನಡವಳಿಕೆ ತೋರಿಸಿದರೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಚ್ಚೆತ್ತುಕೊಳ್ಳಬೇಕು ಮುಖ್ಯಮಂತ್ರಿ ಸಿದ್ದರಾಮಯ್ಯ ಪಂಚೆಯಲ್ಲಿ ಬರುತ್ತಾರೆ ಅವರಿಗೂ ಪ್ರವೇಶ ನೀಡದೆ ನಿಲ್ಲಿಸುತ್ತಾರೆಯೇ . ಇದು ರಾಜ್ಯದ ರೈತರಿಗೆ ಮಾಡಿದ ಅಪಮಾನ ಎಂದವರು ಹೇಳಿದ್ದಾರೆ.

ಇನ್ನು ಈ ಘಟನೆ ಸಂಬಂಧ ಕಂದಾಯ ಇಲಾಖೆ ಸಚಿವ ಕೃಷ್ಣಭೈರೇಗೌಡ ಪ್ರತಿಕ್ರಿಯೆ ನೀಡಿದ್ದು, ಮುಖ ನೋಡಿ, ಬಟ್ಟೆ ನೋಡಿ ಒಬ್ಬ ವ್ಯಕ್ತಿಯನ್ನು ಅಳೆಯಬಾರದು. ಇದೊಂದು ಬ್ರಿಟಿಷರ‌ ಮನಸ್ಥಿತಿ, ನಮ್ಮನ್ನು ಆಳಿದವರ ಮೈಂಡ್​ಸೆಟ್. ಜಿ.ಟಿ.ಮಾಲ್​ ಅಷ್ಟೇ ಅಲ್ಲ, ಬೇರೆ ಕಡೆಯೂ ಇಂತಹ ರೀತಿ ನಡೆದಿವೆ. ಅರಿವಿನ ಕೊರತೆ ಇದೆಯೋ, ದುರಹಂಕಾರದಿಂದ ಮಾಡುತ್ತಿದ್ದಾರೋ? ಜಿ.ಟಿ.ಮಾಲ್​ನವರು ಹಾಗೇ ನಡೆದುಕೊಂಡಿದ್ದು ತಪ್ಪು, ಖಂಡನೀಯ. ಮುಖ ನೋಡಿ ಗೌರವ ಕೊಡುವುದು ಖಂಡನೀಯ ಎಂದು ತಿಳಿಸಿದ್ದಾರೆ.

ಇನ್ನೂ ಬೆಂಗಳೂರಿನಲ್ಲಿ ಈ ರೀತಿಯ ಪ್ರಕರಣಗಳು ಹೊಸದೆನಲ್ಲ. ಈ ಹಿಂದೆಯೂ ರೈತರೊಬ್ಬರಿಗೆ ಮೆಟ್ರೋದಲ್ಲಿ ಪ್ರವೇಶ ನಿರ್ಬಂಧ ಮಾಡಿದ್ದಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಇದೀಗ ಮಾಲ್ ನಲ್ಲಿ ಪ್ರವೇಶ ನಿರಾಕರಿಸಿದಕ್ಕೆ ಸಾರ್ವಜನಿಕರು ಭಾರೀ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. 

ಘಟನೆ ವಿವರ:

ರೈತನನ್ನು ಅರ್ಧ ಗಂಟೆಗೂ ಹೆಚ್ಚು ಕಾಲ ಮಾಲ್ ಮುಂದೆ ಕೂರಿಸಿದ್ದರು. ಇದರಿಂದ ತೀವ್ರ ಅವಮಾನಕ್ಕೊಳಗಾದ ಫಕೀರಪ್ಪನವರ ಪುತ್ರ ನಾಗರಾಜ್ ಮಾಲ್​ನವರಿಗೆ ಒಳಗೆ ಬಿಡುವಂತೆ ಕೇಳಿಕೊಂಡಿದ್ದಾರೆ. ಆದರೆ ಮಾಲ್​ನವರು ನಿರಾಕರಿಸಿದ್ದಾರೆ.  ಪಂಚೆ ಹಾಕಿರೋ ಕಾರಣ ರೈತನಿಗೆ ಒಳಗಡೆ ಹೋಗೋದಕ್ಕೆ ಅವಕಾಶ ನೀಡಿಲ್ಲ. ನೀವು ಪ್ಯಾಂಟ್ ಹಾಕಿದ್ದೀರಿ ಒಳಗಡೆ ಹೋಗಬಹುದು ಅಂತ ಮಗನಿಗೆ ಹೇಳಿದ್ದಾರೆ. ಆದರೆ ಅಪ್ಪನಿಗೆ ಪ್ರವೇಶ ನಿರಾಕರಿಸಿದ್ದಾರೆ. ಈ ಬಗ್ಗೆ ನಾಗರಾಜ್ ವಿಡಿಯೋ ಮಾಡಿ ತಮ್ಮ ನೋವು ತೊಡಿಕೊಂಡಿದ್ದಾರೆ. ಈ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ನಾಗರಾಜ್, ಮಲ್ಟಿಪ್ಲೆಕ್ಸ್ ನಲ್ಲಿ ತಂದೆಯೊಂದಿಗೆ ಸಿನಿಮಾ ನೋಡುವ ಬಯಕೆ ಇತ್ತು. ಆದರೆ ನಿರಾಸೆಯಾಗಿದೆ ಎಂದು ನೋವು ತೋಡಿಕೊಂಡಿದ್ದರು.

ನನ್ನ ಸಂಸ್ಕೃತಿ ಯಾಕೆ ಬಿಡಬೇಕು? ಫಕೀರಪ್ಪ ಪ್ರಶ್ನೆ 

ಔಪಚಾರಿಕ ಶಿಕ್ಷಣ ಪಡೆಯದ ಫಕೀರಪ್ಪ ಕೂಡ ಈ ವಿಚಾರವಾಗಿ ಮಾತನಾಡಿ, ಹಳ್ಳಿಯ ಜನರು ನಮ್ಮ ಧೋತಿ ಬಿಟ್ಟು ಪ್ಯಾಂಟ್ ಧರಿಸಿ ಸಿನಿಮಾ ನೋಡಲು ಬರುವುದು ಹೇಗೆ? “ನನ್ನ ಐವರು ಮಕ್ಕಳಿಗೆ ಶಿಕ್ಷಣ ಕೊಡಿಸಿದ್ದೇನೆ. ಅವರು ಈಗ ಉತ್ತಮ ಸ್ಥಾನದಲ್ಲಿದ್ದಾರೆ. ಆದರೆ ನಾನು ನನ್ನ ಸಂಸ್ಕೃತಿ ಮತ್ತು  ಬಟ್ಟೆಬರೆ ಶೈಲಿಯನ್ನು ಬಿಟ್ಟುಕೊಡಲು ಸಾಧ್ಯವಿಲ್ಲ. ಮಾಲ್‌ಗೆ ಹೋಗಲು ಪ್ಯಾಂಟ್ ಧರಿಸಲು ಪ್ರಾರಂಭಿಸಬೇಕೇ?. ದುಃಖಕರವೆಂದರೆ, ನಮ್ಮ ರಾಜ್ಯದಲ್ಲಿ ನಮ್ಮ ಡ್ರೆಸ್ಸಿಂಗ್ ಶೈಲಿ ಮತ್ತು ಸಂಸ್ಕೃತಿಯ ಬಗ್ಗೆ ಜನರು ಕೀಳರಿಮೆ ಹೊಂದಿದ್ದಾರೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಅವಮಾನ ಮಾಡಿದವರಿಂದಲೇ ಸನ್ಮಾನ

 ಮಾಲ್‌ನ ಈ ನಡೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಕನ್ನಡಪರ ಹೋರಾಟಗಾರರು ಮಾಲ್ ಮುಂದೆ ಪ್ರತಿಭಟನೆ ನಡೆಸಿದ್ದರು. ಅವಮಾನ ಮಾಡಿದ್ದ ಮಾಲ್​​ನಿಂದಲೇ ಸನ್ಮಾನ ಮಾಡಿ ಕ್ಷಮೆಯಾಚಿಸಿದ್ದಾರೆ. ಮಾಲ್​ ಇನ್​​ಚಾರ್ಜ್ ಸುರೇಶ್​​​ ಅವರು ಫಕೀರಪ್ಪಗೆ ಕ್ಷಮೆಯಾಚಿಸಿದ್ದಾರೆ. ರೈತ ಫಕೀರಪ್ಪ ಪಂಚೆ ಧರಿಸಿ ಮಾಲ್​ಗೆ ಪ್ರವೇಶ ಮಾಡಿದ್ದಾರೆ. ಮಾಲ್​ ಸಿಬ್ಬಂದಿ ತಾವು ಮಾಡಿದ ಎಡವಟ್ಟನ್ನು ಸರಿ ಮಾಡಿಕೊಂಡಿದ್ದು ಪಂಚೆಯಲ್ಲೇ ಬಂದ ರೈತ ಫಕೀರಪ್ಪನಿಗೆ ಮಾಲ್ ಒಳಗೆ ಸನ್ಮಾನ ಮಾಡಿ ಕ್ಷಮೆ ಕೇಳಿದೆ.

Tags:    

Similar News