ಸೂಟ್‌ಕೇಸ್‌ನಲ್ಲಿ ಶವ ಪತ್ತೆ ಪ್ರಕರಣ; ಬಿಹಾರದಲ್ಲಿ 7 ಮಂದಿ ಆರೋಪಿಗಳ ಬಂಧನ

ಚಂದಾಪುರದಲ್ಲಿ 17 ವರ್ಷದ ಯುವತಿಯನ್ನು ಹತ್ಯೆ ಮಾಡಿ ಮೃತದೇಹವನ್ನು ಸೂಟ್‌ ಕೇಸ್‌ನಲ್ಲಿ ತುಂಬಿಟ್ಟಿದ್ದ ಪ್ರಕರಣ ಬೇಧಿಸಿರುವ ಪೊಲೀಸರು ಬಿಹಾರದಲ್ಲಿ ಏಳು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.;

Update: 2025-06-07 12:06 GMT

ಬೆಂಗಳೂರಿನಲ್ಲಿ ಸೂಟ್‌ಕೇಸ್‌ನಲ್ಲಿ ಮೃತದೇಹ ಪತ್ತೆ

ಬೆಂಗಳೂರು ಹೊರವಲಯದ ಆನೇಕಲ್‌ ತಾಲೂಕಿನ ಚಂದಾಪುರದಲ್ಲಿ 17 ವರ್ಷದ ಯುವತಿಯ ಶವ ಸೂಟ್‌ಕೇಸ್‌ನಲ್ಲಿ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಬಿಹಾರದಲ್ಲಿ ಏಳು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. 

ಮೇ 21 ರಂದು ಚಂದಾಪುರದ ರೈಲ್ವೆ ಸೇತುವೆ ಬಳಿ ಬಿದ್ದಿದ್ದ ಸೂಟ್‌ಕೇಸ್‌ನಲ್ಲಿ 17 ವರ್ಷದ ಯುವತಿಯ ಮೃತದೇಹ ಪತ್ತೆಯಾಗಿತ್ತು. ಕೊಲೆಯಾದ ಯುವತಿಯನ್ನು ರೀಮಾ ಎಂದು ಗುರುತಿಸಲಾಗಿತ್ತು. ಪ್ರಕರಣದ ತನಿಖೆ ಆರಂಭಿಸಿದ ಸೂರ್ಯನಗರ ಪೊಲೀಸರು, ಬಿಹಾರ ಮೂಲದವರೇ ಆದ 7 ಮಂದಿ ಆರೋಪಿಗಳನ್ನು ಬಂಧಿಸಿ ಬೆಂಗಳೂರಿಗೆ ಕರೆ ತರುತ್ತಿದ್ದಾರೆ. ಬಂಧಿತರೆಲ್ಲರೂ ಬಿಹಾರದ ನವಾಡ ಜಿಲ್ಲೆಯವರು ಎಂದು ಪೊಲೀಸ್‌ ಇಲಾಖೆ ಮೂಲಗಳು ತಿಳಿಸಿವೆ.

ಬಂಧಿತರಲ್ಲಿ ಮೂವರನ್ನು ಆಶಿಕ್ ಕುಮಾರ್, ಮುಖೇಶ್ ಮತ್ತು ರಾಜಾರಾಮ್ ಮೋಹನ್ ಎಂದು ಗುರುತಿಸಲಾಗಿದೆ. ಉಳಿದ ನಾಲ್ವರು ಹೆಸರು ವಿಳಾಸ ತಿಳಿದು ಬಂದಿಲ್ಲ. ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದಾಗ ಯುವತಿಯನ್ನು ಬೇರೆಡೆ ಕೊಲೆ ಮಾಡಿ ನಂತರ ಶವವನ್ನು ಸೂಟ್‌ಕೇಸ್‌ನಲ್ಲಿ ತುಂಬಿ ರೈಲು ಹಳಿಗಳ ಮೇಲೆ ಎಸೆದಿದ್ದಾಗಿ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನು ಸೂರ್ಯನಗರ ಪೊಲೀಸ್‌ ಠಾಣೆಯಲ್ಲಿ ರೀಮಾ ನಾಪತ್ತೆ ಬಗ್ಗೆ ದೂರು ದಾಖಲಾಗಿತ್ತು. ಪೊಲೀಸರು ಸಂತ್ರಸ್ತೆಗಾಗಿ ತೀವ್ರ ಶೋಧ ನಡೆಸಿದ್ದರು.

ಘಟನೆಗೆ ಸಂಬಂಧಿಸಿ ತನಿಖೆ ಪ್ರಾರಂಭಿಸಿದ್ದೇವೆ. ಇಂತಹ ಪ್ರಕರಣಗಳು ಸಾಮಾನ್ಯವಾಗಿ ರೈಲ್ವೆ ಪೊಲೀಸರ ವ್ಯಾಪ್ತಿಗೆ ಬರಲಿವೆ. ಆದರೆ, ಘಟನೆ ನಮ್ಮ ವ್ಯಾಪ್ತಿಯಲ್ಲಿ ನಡೆದಿರುವುದರಿಂದ ತನಿಖೆ ಕೈಗೊಂಡಿದ್ದೇವೆ. ಸೂಟ್‌ಕೇಸ್‌ನಲ್ಲಿ ಶವ ಮಾತ್ರ ಇತ್ತು. ಯಾವುದೇ ಗುರುತಿನ ಚೀಟಿ ಅಥವಾ ವೈಯಕ್ತಿಕ ವಸ್ತುಗಳು ಪತ್ತೆಯಾಗಿರಲಿಲ್ಲ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಿ.ಕೆ.ಬಾಬಾ ತಿಳಿಸಿದ್ದಾರೆ. 

Tags:    

Similar News