ಮಾರ್ಚ್‌ 25 ರಿಂದ 5, 8, 9ನೇ ತರಗತಿ ಬೋರ್ಡ್ ಪರೀಕ್ಷೆ; ಮತ್ತೆ ಗೊಂದಲ!

ಆರ್ ಟಿಇ ವಿದ್ಯಾರ್ಥಿಗಳು ಮತ್ತು ಪೋಷಕರ ಸಂಘದ ಪರ ಸುಪ್ರೀಂಕೋರ್ಟ್ ವಕೀಲ A. ವೇಲನ್‌ ಅವರು, ಈ ಸಂಬಂಧ ರಾಜ್ಯ ಶಾಲಾ ಶಿಕ್ಷಣ ಇಲಾಖೆಗೆ ಪತ್ರ ಬರೆದಿದ್ದು, ಹೈಕೋರ್ಟ್ ಆದೇಶದ ವಿರುದ್ಧ ಸುಪ್ರೀಂ ಮೊರೆಹೋಗುವುದಾಗಿ ತಿಳಿಸಿದ್ದಾರೆ. ಹಾಗಾಗಿ, ಮಾರ್ಚ್ 31ರವರೆಗೆ ಪರೀಕ್ಷೆಗಳನ್ನು ನಡೆಸಬಾರದು ಎಂದೂ ಅವರು ಮನವಿ ಮಾಡಿದ್ದಾರೆ

Update: 2024-03-22 18:38 GMT

ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ಅನುಮತಿ ನೀಡಿರುವ ಬೆನ್ನಲ್ಲೇ ಪರೀಕ್ಷಾ ದಿನಾಂಕ ಪ್ರಕಟವಾಗಿದೆ. ಆದರೆ,  ಸುಪ್ರೀಂ ಕೋರ್ಟ್ ಮೊರೆ ಹೋಗುವುದಾಗಿ ಪೋಷಕರ ಸಂಘ ಹೇಳಿದ್ದು, ಮಾ. 31 ರವರೆಗೆ ಪರೀಕ್ಷೆಗಳನ್ನು ನಡೆಸದಂತೆ ಶಿಕ್ಷಣ ಇಲಾಖೆಗೆ ಮನವಿ ಮಾಡಿದೆ.  ಇದರಿಂದಾಗಿ, ಪರೀಕ್ಷೆಯ ಗೊಂದಲಗಳು ಮತ್ತೆ ಮುಂದುವರಿದಿದ್ದು, ಮಕ್ಕಳು, ಪೋಷಕರಲ್ಲಿ ಆತಂಕ ಮತ್ತೆ ಮನೆ ಮಾಡಿದೆ.   ಪರೀಕ್ಷೆ ಆರಂಭಕ್ಕೆ ಎರಡೇ ದಿನಗಳು ಬಾಕಿಯಿದ್ದು, ಮುಂದೇನು ಎಂಬ ಪ್ರಶ್ನೆ ಮನೆಮಾಡಿದೆ. 

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಪರೀಕ್ಷಾ ದಿನಾಂಕಗಳನ್ನು ಪ್ರಕಟಿಸಿದ್ದು, ಮಾರ್ಚ್‌ 25, 26, 27, 28 ರಂದು 5ನೇ, 8ನೇ ಹಾಗೂ 9 ನೇ ತರಗತಿಗಳಿಗೆ ಪರೀಕ್ಷೆಗಳನ್ನು ನಿಗದಿಗೊಳಿಸಿದೆ.


 


ಆರ್ ಟಿಇ ವಿದ್ಯಾರ್ಥಿಗಳು ಮತ್ತು ಪೋಷಕರ ಸಂಘದ ಪರ ಸುಪ್ರೀಂಕೋರ್ಟ್ ವಕೀಲ A. ವೇಲನ್‌ ಅವರು, ಈ ಸಂಬಂಧ ರಾಜ್ಯ ಶಾಲಾ ಶಿಕ್ಷಣ ಇಲಾಖೆಗೆ ಪತ್ರ ಬರೆದಿದ್ದು, ಹೈಕೋರ್ಟ್ ಆದೇಶದ ವಿರುದ್ಧ ಸುಪ್ರೀಂ ಮೊರೆಹೋಗುವುದಾಗಿ ತಿಳಿಸಿದ್ದಾರೆ. ಹಾಗಾಗಿ, ಮಾರ್ಚ್ 31ರವರೆಗೆ ಪರೀಕ್ಷೆಗಳನ್ನು ನಡೆಸಬಾರದು ಎಂದೂ ಅವರು ಮನವಿ ಮಾಡಿದ್ದಾರೆ.

ರಾಜ್ಯ ಪಠ್ಯಕ್ರಮ ಅನುಸರಿಸುತ್ತಿರುವ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಿಕ್ಷಣ ಸಂಸ್ಥೆಗಳಲ್ಲಿ 5, 8, 9 ಮತ್ತು 11ನೇ ತರಗತಿಗಳಿಗೆ ಬೋರ್ಡ್ ಮಟ್ಟದ ಮೌಲ್ಯಾಂಕನ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅನುಮತಿ ನೀಡಿ ಇಂದು (ಮಾ. 22) ತೀರ್ಪು ನೀಡಿತ್ತು. ಆ ಮೂಲಕ ಬೋರ್ಡ್‌ ಪರೀಕ್ಷೆಗಳ ಕುರಿತು ತಲೆದೋರಿದ್ದ ಗೊಂದಲ ನಿವಾರಿಸಲಾಗಿತ್ತು.

ಬೋರ್ಡ್ ಪರೀಕ್ಷೆ ನಡೆಸಲು ರಾಜ್ಯ ಸರ್ಕಾರ ಈ ಹಿಂದೆ ಹೊರಡಿಸಿದ್ದ ಎರಡು ಸುತ್ತೋಲೆಗಳನ್ನು ರದ್ದುಪಡಿಸಿದ್ದ ಹೈಕೋರ್ಟ್ ಏಕ ಸದಸ್ಯ ಪೀಠದ ತೀರ್ಪನ್ನು ರದ್ದುಪಡಿಸಿರುವ ವಿಭಾಗೀಯ ಪೀಠ ಬೋರ್ಡ್‌ ಪರೀಕ್ಷೆ ನಡೆಸಲು ಅನುಮತಿ ನೀಡಿತ್ತು.

ಮಾರ್ಚ್‌  ೨೫ರಿಂದ  ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಗಳು ಪ್ರಾರಂಭವಾಗುತ್ತಿದ್ದು, ಎಸ್‌ಎಸ್‌ಎಲ್‌ಸಿ  ಪರೀಕ್ಷೆಗಳಿರುವ ಮಾ. ೨೫ (ಸೋಮವಾರ) ಮತ್ತು ಮಾ. ೨೭ (ಬುಧವಾರ) ಮಧ್ಯಾಹ್ನದ  ಅವಧಿಯಲ್ಲಿ  ಹಾಗೂ ಎಸ್‌ಎಸ್‌ಎಲ್‌ಸಿ  ಪರೀಕ್ಷೆಗಳು  ಇಲ್ಲದಿರುವ  ಮಾ. ೨೬  (ಮಂಗಳವಾರ)  ಮತ್ತು ಮಾ.೨೮ (ಗುರುವಾರ) ಬೆಳಗಿನ  ಅವಧಿಯಲ್ಲಿ  ೫, ೮ ಮತ್ತು ೯ನೇ ತರಗತಿಯ ಮೌಲ್ಯಾಂಕನ ವನ್ನು  ನಡೆಸಲಾಗುತ್ತಿದೆ ಎಂದು ಪ್ರಕಟಣೆ ತಿಳಿಸಿದೆ. 

Similar News