ಮಂಡ್ಯ ಸಾಹಿತ್ಯ ಸಮ್ಮೇಳನ | ಸಮ್ಮೇಳನದ ಕೊನೆ ದಿನ ಪೊಲೀಸ್ ಬ್ಯಾಂಡ್: ದಿನೇಶ್ ಗೂಳಿಗೌಡ
87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಮೂರನೇ ದಿನ (ಡಿ.22ರ ಭಾನುವಾರ ಸಂಜೆ) ರಾಜ್ಯ ಪೊಲೀಸ್ ಇಲಾಖೆ ವತಿಯಿಂದ ವಾದ್ಯಮೇಳ ನಡೆಯಲಿದೆ.;
ದಸರಾದಲ್ಲಿ ಮಾತ್ರ ನುಡಿಸುವ ಪೊಲೀಸ್ ಬ್ಯಾಂಡ್ ಇದೇ ಪ್ರಪ್ರಥಮವಾಗಿ ಸಾಹಿತ್ಯ ಸಮ್ಮೇಳನದಲ್ಲಿ ಸಂಗೀತದ ರಸಧಾರೆ ಹರಿಸಲಿದೆ ಎಂದು ಶಾಸಕರು ಹಾಗೂ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಾಂಸ್ಕೃತಿಕ ಸಮನ್ವಯ ಸಮಿತಿ ಅಧ್ಯಕ್ಷರಾದ ದಿನೇಶ್ ಗೂಳಿಗೌಡ ಅವರು ಹೇಳಿದರು.
ವೇದಿಕೆ ಸಿದ್ಧತೆ ಕುರಿತು ಪರಿಶೀಲನೆ ನಡೆಸಿದ ನಂತರ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಅವರು, ಸಾಕಷ್ಟು ಹೊಸತನಗಳಿಗೆ ಸಾಕ್ಷಿಯಾಗುತ್ತಿರುವ ಮಂಡ್ಯದಲ್ಲಿ ನಡೆಯುತ್ತಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಮೂರನೇ ದಿನ (ಡಿ.22ರ ಭಾನುವಾರ ಸಂಜೆ) ರಾಜ್ಯ ಪೊಲೀಸ್ ಇಲಾಖೆ ವತಿಯಿಂದ ವಾದ್ಯಮೇಳ ನಡೆಯಲಿದೆ ಎಂದರು.
ಡಿ.22ರಂದು ಗೋಷ್ಠಿಗಳು ಮುಕ್ತಾಯದ ನಂತರ ಸಂಜೆ ನಡೆಯಲಿರುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪೊಲೀಸ್ ಬ್ಯಾಂಡ್ ನಿಂದ 45 ನಿಮಿಷಗಳ ಕಾಲ ಹತ್ತಕ್ಕೂ ಹೆಚ್ಚು ಹಾಡುಗಳಿಗೆ ವಾದ್ಯವೃಂದದವರು ಸಂಗೀತ ಪ್ರಸ್ತುತಿಪಡಿಸಲಿದ್ದಾರೆ ಎಂದು ಹೇಳಿದರು.
ದಾಸರ ಕೀರ್ತನೆಗಳು, ಭಕ್ತಿ ಗೀತೆಗಳು, ಕನ್ನಡದ ಗೀತೆಗಳು ಸೇರಿದಂತೆ ಹತ್ತಕ್ಕೂ ಹೆಚ್ಚು ಗೀತೆಗಳನ್ನು ನುಡಿಸಲಿದ್ದಾರೆ. ಪೊಲೀಸ್ ಬ್ಯಾಂಡ್ ಕೇವಲ ದಸರಾದಲ್ಲಿ ಮಾತ್ರ ನುಡಿಸಲಾಗುತ್ತದೆ. ದಸರಾಗೆ ಎಲ್ಲರೂ ಹೋಗಿ ಪೊಲೀಸ್ ವಾದ್ಯ ಕೇಳಲು ಸಾಧ್ಯವಾಗುವುದಿಲ್ಲ. ಹೀಗಾಗಿ ಸಾಹಿತ್ಯ ಸಮ್ಮೇಳನದಲ್ಲಿ ಪೊಲೀಸ್ ವಾದ್ಯಮೇಳ ನಡೆಸಲಾಗುತ್ತಿದೆ ಎಂದರು.