ಸಂಸದರ ಕಾರ್ಯಕ್ರಮಕ್ಕೆ ಅಡ್ಡಿ; 41 ಕರವೇ ಕಾರ್ಯಕರ್ತರಿಗೆ 14 ದಿನ ನ್ಯಾಯಾಂಗ ಬಂಧನ
ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ ಅವರ ಬಣದ ಕಾರ್ಯಕರ್ತರು ಬೆಂಗಳೂರಿನ ತಾಜ್ ವೆಸ್ಟೆಂಡ್ ಹೋಟೆಲ್‌ಗೆ ನುಗ್ಗಿ ಪ್ರತಿಭಟನೆ ನಡೆಸಿದ್ದರು.
ಕರವೇ
ಬೆಂಗಳೂರು ನಗರದ ತಾಜ್ ವೆಸ್ಟೆಂಡ್ ಹೋಟೆಲ್‌ಗೆ ಅಕ್ರಮ ಪ್ರವೇಶ ಹಾಗೂ ಸಂಸದರ ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದ ಆರೋಪದ ಮೇರೆಗೆ 41 ಮಂದಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದು, ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಘಟನೆಯನ್ನು ಕರವೇ ಅಧ್ಯಕ್ಷ ನಾರಾಯಣಗೌಡ ಅವರು ಖಂಡಿಸಿದ್ದು, ರಾಜಕಾರಣಿಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ತಾಜ್ ವೆಸ್ಟೆಂಡ್ ಹೋಟೆಲ್‌ನಲ್ಲಿ ಕೇಂದ್ರ ಸಂಸದೀಯ ರಾಜಭಾಷಾ ಸಮಿತಿಯು ಮೂರು ದಿನಗಳ ಕಾರ್ಯಕ್ರಮ ನಡೆಸಿತ್ತು. ಇದನ್ನು ಹಿಂದಿ ಹೇರಿಕೆಯ ಪ್ರಯತ್ನ ಎಂದು ಆರೋಪಿಸಿ ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ ಕಾರ್ಯಕರ್ತರು ಹೋಟೆಲ್‌ಗೆ ನುಗ್ಗಿ ಪ್ರತಿಭಟನೆ ನಡೆಸಿದ್ದರು. ಈ ವೇಳೆ 13 ಮಹಿಳೆಯರು ಸೇರಿ 41 ಮಂದಿಯನ್ನು ಪೊಲೀಸರು ಬಂಧಿಸಿದ್ದರು. ಬಂಧಿತರನ್ನು ಗುರುವಾರ 14ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಪ್ರಕರಣ ಕುರಿತಂತೆ ಪ್ರತಿಕ್ರಿಯಿಸಿರುವ ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ ಅವರು, ʻʻಭಾಷೆ ಮತ್ತು ನಾಡಿಗಾಗಿ ಹೋರಾಡಿ ಜೈಲಿಗೆ ಹೋದವರ ಬಗ್ಗೆ ಕುಟುಂಬಗಳು ಹೆದರಬೇಕಿಲ್ಲ. ರಾಜಕಾರಣಿಗಳು ಭ್ರಷ್ಟಾಚಾರ ಮಾಡಿ ಸುಖವಾಗಿ ಬದುಕುತ್ತಿದ್ದಾರೆ. ಹಿಂದಿ ಹೇರಿಕೆ ಕಾರ್ಯಕ್ರಮದಲ್ಲಿ 6 ಮಂದಿ ಸಂಸದರು ಭಾಗವಹಿಸಿದ್ದರು. ವಿಷಯ ತಿಳಿದ ತಕ್ಷಣವೇ ನಮ್ಮ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಆದರೆ, ಹಲ್ಲೆ ಮತ್ತು ಆಸ್ತಿ ಪಾಸ್ತಿ ನಾಶ ಮಾಡಿದರೆಂಬ ಸುಳ್ಳು ಆರೋಪ ಮಾಡಿ ಕಾರ್ಯಕರ್ತರನ್ನು ಬಂಧಿಸಲಾಗಿದೆ. ಈ ವಿಚಾರದಲ್ಲಿ ಮುಖ್ಯಮಂತ್ರಿಗಳು ಮೌನ ವಹಿಸಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸರ್ಕಾರ ಹಲವು ರಾಜ್ಯಗಳಲ್ಲಿ ಹಿಂದಿಯನ್ನು ಬಲವಂತವಾಗಿ ಹೇರುತ್ತಿದೆ. ಕೋಲ್ಕತ್ತಾದಲ್ಲಿ ಇದಕ್ಕೆ ವಿರೋಧವಾಗಿ ದೊಡ್ಡ ಮೆರವಣಿಗೆ ನಡೆಯಿತು. ನಮ್ಮ ವೇದಿಕೆ ಕಳೆದ 26 ವರ್ಷಗಳಿಂದ ಈ ಹೋರಾಟ ಮಾಡುತ್ತಿದೆ. ಈಗಲೂ ಒಳಸಂಚುಗಳ ಮೂಲಕ ಹಿಂದಿ ಹೇರಿಕೆಗೆ ಮುಂದಾಗಿದ್ದಾರೆ. ದಕ್ಷಿಣ ರಾಜ್ಯಗಳ ಮೇಲೆ ಹಿಂದಿ ಹೇರಿಕೆ ಯಾಕೆ? ನಮ್ಮ ತೆರಿಗೆ ಹಣವನ್ನು ಹಿಂದಿ ಭಾಷೆ ಬೆಳೆಸಲು ಬಳಸುವುದು ನ್ಯಾಯವೇ? ಕನ್ನಡಿಗರ, ತಮಿಳಿಗರ, ತೆಲುಗಿಗರ ಪಾತ್ರ ಏನು ಎಂಬ ಪ್ರಶ್ನೆಗಳು ನಮಗೆ ಎದ್ದಿವೆ ಎಂದು ಅವರು ತಿಳಿಸಿದರು.
ಸಾಮಾಜಿಕ ಜಾಲತಾಣದಲ್ಲೂ ಆಕ್ರೋಶ
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲೂ ಆಕ್ರೋಶ ವ್ಯಕ್ತಪಡಿಸಿರುವ ನಾರಾಯಣಗೌಡ ಅವರು, ಕೇಂದ್ರ ಸರ್ಕಾರದ ಸಂಸದೀಯ ರಾಜಭಾಷಾ ಸಮಿತಿ ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ಹೋಟೆಲ್ ನಲ್ಲಿ ಮೂರು ದಿನಗಳಿಂದ ಕನ್ನಡಿಗರೂ ಸೇರಿದಂತೆ ಹಿಂದಿಯೇತರ ರಾಜ್ಯಗಳ ಜನರ ಮೇಲೆ ಹಿಂದಿ ಹೇರಿಕೆ ಮಾಡುವ ಸಂಬಂಧ ಕಾರ್ಯಕ್ರಮ ನಡೆಸಿದೆ. ನಮ್ಮ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.
ಘಟನೆ ನಡೆದ ನಂತರ ಇಡೀ ಪ್ರಕರಣವನ್ನು ತಿರುಚುವ ಯತ್ನಗಳು ನಡೆಯುತ್ತಿವೆ. ಈ ಕಾರ್ಯಕ್ರಮ ಹಿಂದಿ ಹೇರಿಕೆಯ ಕಾರ್ಯಕ್ರಮ ಅಲ್ಲ, ಅದು ಹಿಂದಿ ಭಾಷೆಗೆ ಸಂಬಂಧಿಸಿದ್ದೇ ಅಲ್ಲ ಎಂದು ತಿರುಚಲಾಗುತ್ತಿದೆ. ಕೇಂದ್ರ ಸರ್ಕಾರದ ರಾಜಭಾಷಾ ಸಮಿತಿ ಇರುವುದೇ ಹಿಂದಿ ಪ್ರಚಾರಕ್ಕೆ ಮತ್ತು ಹಿಂದಿಯನ್ನು ಹಿಂದಿಯೇತರ ರಾಜ್ಯಗಳ ಮೇಲೆ ಹೇರುವುದಕ್ಕೆ. ಹಿಂದಿ ಸಾಮ್ರಾಜ್ಯಶಾಹಿಯನ್ನು ಸ್ಥಾಪಿಸುವ ಸಲುವಾಗಿ ರಾಜಭಾಷಾ ಸಮಿತಿ ಕೆಲಸ ಮಾಡುತ್ತಿದೆ. ಯಾರಿಗಾದರೂ ಅನುಮಾನವಿದ್ದರೆ ರಾಜಭಾಷಾ ಸಮಿತಿ ಇದುವರೆಗೆ ಏನು ಕೆಲಸ ಮಾಡಿದೆ ಎಂಬುದನ್ನು ಗಮನಿಸಬಹುದು ಎಂದು ಹೇಳಿದ್ದಾರೆ.
ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪೊಲೀಸ್ ಕೇಸಿಗೆ, ಜೈಲಿಗೆ ಬೆದರುವುದಿಲ್ಲ. ಆದರೆ ನಮ್ಮ ಮುಖಂಡರ ಮೇಲೆ ಇಲ್ಲಸಲ್ಲದ ಕೇಸುಗಳನ್ನು ಹಾಕಿ, ಸಂಬಂಧಪಡದ ಸೆಕ್ಷನ್ ಗಳನ್ನು ಹೇರಿದರೆ ನಾವು ಸುಮ್ಮನಿರುವುದಿಲ್ಲ. ರಾಜ್ಯದ ಎಲ್ಲ ಭಾಗಗಳಿಂದ ನಮ್ಮ ಕಾರ್ಯಕರ್ತರು ಲಕ್ಷಾಂತರ ಸಂಖ್ಯೆಯಲ್ಲಿ ಬೆಂಗಳೂರಿಗೆ ಮುತ್ತಿಗೆ ಹಾಕಬೇಕಾಗುತ್ತದೆ. ಪೊಲೀಸ್ ಇಲಾಖೆ, ರಾಜ್ಯ ಸರ್ಕಾರ ಏನಾದರೂ ನಮ್ಮ ಮೇಲೆ ದಬ್ಬಾಳಿಕೆ ನಡೆಸಲು ಹೊರಟರೆ ಅದರ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಲು ಬಯಸುತ್ತೇನೆ ಎಂದು ಹೇಳಿದ್ದಾರೆ. ರಾಜಭಾಷಾ ಸಮಿತಿ ಕಾರ್ಯಕ್ರಮವನ್ನು ಪಂಚತಾರಾ ಹೋಟೆಲ್ ನಲ್ಲಿ ಕದ್ದುಮುಚ್ಚಿ ನಡೆಸಲಾಗುತ್ತಿತ್ತು. ಪೊಲೀಸರಿಗಾಗಲೇ, ಮಾಧ್ಯಮದವರಿಗಾಗಲೇ ಯಾವುದೇ ಮಾಹಿತಿ ನೀಡಲಾಗಿರಲಿಲ್ಲ. ನಮ್ಮ ಪ್ರತಿಭಟನೆಗೆ ಸಂಬಂಧಿಸಿದಂತೆ ಹೈಗ್ರೌಂಡ್ಸ್ ಠಾಣೆ ಇನ್‌ಸ್ಪೆಕ್ಟರ್ ಅವರನ್ನು ಅಮಾನತು ಮಾಡಿರುವ ಮಾಹಿತಿ ಇದೆ. ಕೂಡಲೇ ಸರ್ಕಾರ ಅಧಿಕಾರಿಯ ಅಮಾನತು ಆದೇಶ ಹಿಂದಕ್ಕೆ ಪಡೆಯಬೇಕು ಎಂದು ಆಗ್ರಹಿಸಿದ್ದಾರೆ.
ಕರ್ನಾಟಕದಲ್ಲಿ ಹಿಂದಿ ಹೇರಿಕೆಗೆ ನಾವು ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ. ನಾವು ನಮ್ಮ ಪ್ರಾಣ ಒತ್ತೆಯಿಟ್ಟಾದರೂ ಈ ಕುತಂತ್ರವನ್ನು ಬಗ್ಗುಬಡಿಯುತ್ತೇವೆ. ಇದರಲ್ಲಿ ಯಾವುದೇ ರಾಜಿ ಇಲ್ಲ. ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಇದನ್ನು ಅರ್ಥ ಮಾಡಿಕೊಂಡು ಹಿಂದಿ ಹೇರಿಕೆಯನ್ನು ನಿಲ್ಲಿಸಬೇಕು, ಇದು ನನ್ನ ಆಗ್ರಹ. ದೇಶದ ಐಕ್ಯತೆಗೆ ಧಕ್ಕೆ ತರುತ್ತಿರುವ ರಾಜಭಾಷಾ ಸಮಿತಿಯನ್ನು ರದ್ದುಪಡಿಸಬೇಕು. ಅದರ ಅಗತ್ಯ ದೇಶಕ್ಕೆ ಇಲ್ಲ ಎಂದು ತಿಳಿಸಿದ್ದಾರೆ.