RCB Social Media | ಆರ್‌ಸಿಬಿ ಹಿಂದಿ ಪುಟಕ್ಕೆ ಕನ್ನಡಿಗರ ವಿರೋಧ; ಕರವೇ ನಾರಾಯಣ ಗೌಡ ಆಕ್ರೋಶ
x
ನಾರಾಯಣಗೌಡ

RCB Social Media | ಆರ್‌ಸಿಬಿ ಹಿಂದಿ ಪುಟಕ್ಕೆ ಕನ್ನಡಿಗರ ವಿರೋಧ; ಕರವೇ ನಾರಾಯಣ ಗೌಡ ಆಕ್ರೋಶ

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಫ್ರಾಂಚೈಸಿ ಸಾಮಾಜಿಕ ಜಾಲತಾಣದಲ್ಲಿ ಹಿಂದಿ ಪುಟವನ್ನು ಆರಂಭಿಸಿದ್ದಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ ಎ ನಾರಾಯಣ ಗೌಡ ಆಕ್ರೋಶ ವ್ಯಕ್ಯಪಡಿಸಿದ್ದಾರೆ.


Click the Play button to hear this message in audio format

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಫ್ರಾಂಚೈಸಿ ಸಾಮಾಜಿಕ ಜಾಲತಾಣದಲ್ಲಿ ಹಿಂದಿ ಪುಟವನ್ನು ಆರಂಭಿಸಿದ್ದಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ ಎ ನಾರಾಯಣಗೌಡ ಆಕ್ರೋಶ ವ್ಯಕ್ಯಪಡಿಸಿದ್ದು, ಕನ್ನಡಿಗರ ಮೇಲೆ ಹಿಂದಿ ಗುಲಾಮಗಿರಿಯನ್ನು ಹೇರುವುದು ಅವರ ಉದ್ದೇಶವಾಗಿದ್ದರೆ ಕರ್ನಾಟಕ ಬಿಟ್ಟು ತೊಲಗಲಿ. ನಿಮ್ಮ ಅವಶ್ಯಕತೆ ನಮಗಿಲ್ಲ ಎಂದು ಕಿಡಿಕಾರಿದ್ದಾರೆ.

ಕನ್ನಡಪರ ಮುಖಂಡರು, ಸಂಘಟನೆಗಳು ಕೂಡ ಆರ್‌ಸಿಬಿಯ ಈ ಹಿಂದಿ ಮೋಹದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿವೆ.

ಕನ್ನಡಿಗರಿಗೆ ಅವಮಾನ

ಈ ಬಗ್ಗೆ ಟ್ವೀಟ್‌ ಮಾಡಿರುವ ಟಿ.ಎ.ನಾರಾಯಣ ಗೌಡ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಕ್ರಿಕೆಟ್ ಫ್ರಾಂಚೈಸಿ ಸಾಮಾಜಿಕ ಜಾಲತಾಣಗಳಲ್ಲಿ ಹಿಂದಿಯಲ್ಲಿ ಜಾಲತಾಣ ಪುಟವನ್ನು ತೆರೆದಿದೆ. ಇದು ಯಾವ ಕಾರಣಕ್ಕೆ ಎಂದು ಅವರು ಸ್ಪಷ್ಟಪಡಿಸಬೇಕು. ಕನ್ನಡಿಗರ ಮೇಲೆ ಹಿಂದಿ ಗುಲಾಮಗಿರಿಯನ್ನು ಹೇರುವುದು ಅವರ ಉದ್ದೇಶವಾಗಿದ್ದರೆ ಕರ್ನಾಟಕ ಬಿಟ್ಟು ತೊಲಗಲಿ ಎಂದು ಕಿಡಿ ಕಾರಿದ್ದಾರೆ.

ನಿಮ್ಮ ಅವಶ್ಯಕತೆ ನಮಗಿಲ್ಲ. ಆರ್‌ಸಿಬಿಯನ್ನು ಕನ್ನಡಿಗರು ಮೊದಲಿನಿಂದಲೂ ಬೆಂಬಲಿಸಿಕೊಂಡು ಬಂದಿದ್ದಾರೆ. ಆರ್‌ಸಿಬಿಗೆ ಇರುವಷ್ಟು ಅಭಿಮಾನಿಗಳು ಇನ್ಯಾವ ತಂಡಕ್ಕೂ ಇಲ್ಲ. ಹೀಗಾಗಿಯೇ ಅದರ ಆದಾಯ ವರ್ಷವರ್ಷಕ್ಕೂ ಹೆಚ್ಚುತ್ತಲೇ ಇದ್ದು, ಒಮ್ಮೆಯೂ ಕಪ್ ಗೆಲ್ಲದಿದ್ದರೂ ಮೂರನೇ ಶ್ರೀಮಂತ ತಂಡವಾಗಿದೆ. ಇದಕ್ಕೆ ಕಾರಣ ಕನ್ನಡಿಗರು ಎಂಬುದನ್ನು ಅದು ಮರೆತಿದೆ. ಆರ್‌ಸಿಬಿ ಹಿಂದಿಯಲ್ಲಿ ಪುಟವನ್ನು ತೆರೆಯುವ ಮೂಲಕ ಕನ್ನಡಿಗರನ್ನು ಅಪಮಾನಿಸುತ್ತಿದೆ. ತಂಡದಲ್ಲಿ ಇತರ ರಾಜ್ಯಗಳ ಆಟಗಾರರಿದ್ದಾರೆ ಎಂಬ ಕಾರಣಕ್ಕೆ, ಹೊರರಾಜ್ಯಗಳಲ್ಲೂ ಅಭಿಮಾನಿಗಳಿದ್ದಾರೆ ಎಂಬ ಕಾರಣಕ್ಕೆ ಹಿಂದಿಯಲ್ಲಿ ಪುಟ ತೆರೆದಿರುವುದಾದರೆ, ದೇಶದ ಎಲ್ಲ ಭಾಷೆಗಳಲ್ಲೂ ಪುಟ ತೆರೆಯಬೇಕಿತ್ತು. ಹಿಂದಿಯಲ್ಲಿ ಮಾತ್ರ ಯಾಕೆ ತೆರೆದರು? ಎಂದು ನಾರಾಯಣಗೌಡ ಪ್ರಶ್ನಿಸಿದ್ದಾರೆ.

ಕನ್ನಡಿಗರ ನಿರ್ಲಕ್ಷ

ಆರ್‌ಸಿಬಿ ಫ್ರಾಂಚೈಸಿ ನಡೆಸುತ್ತಿರುವವರಿಗೆ ಹಿಂದಿಯೇ ಅತಿಪ್ರಿಯವಾಗಿದ್ದರೆ ಹಿಂದಿ ರಾಜ್ಯಗಳಿಗೆ ವಲಸೆ ಹೋಗಲಿ, ಬೆಂಗಳೂರು ಎಂಬ ಹೆಸರನ್ನು ಕೈಬಿಡಲಿ. ಕನ್ನಡಿಗರ ಆದರ, ಆತಿಥ್ಯ, ಅಭಿಮಾನವನ್ನು ಗಳಿಸಿ ಕನ್ನಡಿಗರ ಬೆನ್ನಿಗೆ ಚೂರಿ ಇರಿಯುವ ಕೆಲಸವನ್ನೇಕೆ ಮಾಡುತ್ತಿದ್ದಾರೆ? ಈ ಬಾರಿಯ ಹರಾಜು ಪ್ರಕ್ರಿಯೆಯಲ್ಲಿ ಆರ್‌ಸಿಬಿ ಐದಾರು ಕನ್ನಡಿಗರನ್ನು ಖರೀದಿಸುವ ನಿರೀಕ್ಷೆ ಅಭಿಮಾನಿಗಳಿಗಿತ್ತು. ಕನ್ನಡಿಗ ಕೆ.ಎಲ್.ರಾಹುಲ್ ಅವರನ್ನು ಖರೀದಿಸಿ ನಾಯಕನನ್ನಾಗಿಸುವ ಅವಕಾಶವೂ ಆರ್‌ಸಿಬಿಗೆ ಇತ್ತು. ಆದರೆ ಹಿತ್ತಲ ಗಿಡ ಮದ್ದಲ್ಲ ಎಂಬಂತೆ ಅವಕಾಶಗಳನ್ನು ಕೈಚೆಲ್ಲಲಾಯಿತು. ಕರ್ನಾಟಕ ಪರವಾಗಿ ಆಡುತ್ತಿರುವ ಹಲವಾರು ಪ್ರತಿಭಾವಂತ ಆಟಗಾರರನ್ನು ಆರ್‌ಸಿಬಿ ಮೊದಲಿನಿಂದಲೂ ನಿರ್ಲಕ್ಷಿಸುತ್ತ ಬಂದಿದೆ ಎಂದು ಹೇಳಿದ್ದಾರೆ.

ಈ ಬಾರಿಯೂ ಅದೇ ಆಗಿದೆ. ದೇವದತ್ತ ಪಡಿಕ್ಕಲ್, ಮನೋಜ್ ಬಾಂಡಗೆ ಹೊರತುಪಡಿಸಿ ಯಾವ ಕನ್ನಡಿಗರನ್ನೂ ಖರೀದಿಸುವ ಮನಸು ಮಾಡಲಿಲ್ಲ. 25 ಆಟಗಾರರ ಪೈಕಿ 22 ಆಟಗಾರರನ್ನು ಖರೀದಿ ಮಾಡಲಾಗಿದೆ. ಬಾಕಿ ಉಳಿದಿರುವ ಇನ್ನು ಮೂರು ಸ್ಥಾನಗಳಿಗಾದರೂ ಕನ್ನಡಿಗ ಆಟಗಾರರನ್ನೇ ಖರೀದಿಸಬೇಕು. ಸಾಮಾಜಿಕ ಜಾಲತಾಣಗಳಿಂದ ಈ ಕೂಡಲೇ ಹಿಂದಿ ಪುಟಗಳನ್ನು ಅಳಿಸಿಹಾಕಬೇಕು. ಇಲ್ಲವಾದಲ್ಲಿ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಅವರು ಎಚ್ಚರಿಸಿದ್ದಾರೆ.

ಕನ್ನಡಿಗರ ಪ್ರೀತಿ, ಅಭಿಮಾನಗಳಿಂದ ಆರ್ ಸಿಬಿ ಬೆಳೆದಿದೆ. ಆದರೆ ಅದು ಮಾಡಿರುವ ವಿಶ್ವಾಸಘಾತಕತನವನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಅದು ತನ್ನ ತಪ್ಪುಗಳನ್ನು ಈ ಕೂಡಲೇ ತಿದ್ದಿಕೊಳ್ಳದಿದ್ದರೆ ಕರ್ನಾಟಕ ರಕ್ಷಣಾ ವೇದಿಕೆಯಿಂದ ತೀವ್ರ ಸ್ವರೂಪದ ಪ್ರತಿಭಟನೆ ಎದುರಿಸಬೇಕಾಗುತ್ತದೆ. ಮುಂದಿನ ಪರಿಣಾಮಗಳಿಗೆ ನಾವು ಹೊಣೆಯಲ್ಲ ಎಂದು ಎಚ್ಚರಿಸುತ್ತಿದ್ದೇನೆ ಎಂದು ಸರಣಿ ಎಕ್ಸ್‌ ಪೋಸ್ಟ್‌ಗಳನ್ನು ಮಾಡಿದ್ದಾರೆ.

ಇತ್ತೀಚೆಗೆ ಭಾನುವಾರ, ಸೋಮವಾರ ನಡೆದ ಐಪಿಎಲ್‌ ಹಾರಾಜು ಪ್ರಕ್ರಿಯೆಯಲ್ಲಿ ಆರ್ ಸಿಬಿ ಫ್ರಾಂಚೈಸಿ ಕನ್ನಡಿಗರಾದ ಕೆಎಲ್ ರಾಹುಲ್, ಪ್ರಸಿದ್ಧ ಕೃಷ್ಣ, ಶ್ರೇಯಸ್ ಗೋಪಾಲ್, ಅಭಿನವ್ ಮನೋಹರ್, ಮಾಯಾಂಕ್ ಅಗರ್ವಾಲ್ ಹೀಗೆ ಸಾಲು ಸಾಲು ಕನ್ನಡಿಗ ಆಟಗಾರರನ್ನು ನಿರ್ಲಕ್ಷಿದ್ದು, ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗಿತ್ತು. ಇದರ ಬೆನ್ನಲ್ಲೇ ಈಗಾಗಲೇ ಇಂಗ್ಲಿಷ್ ಮತ್ತು ಕನ್ನಡಗಳಲ್ಲಿ ಎಕ್ಸ್ ಖಾತೆ ಹೊಂದಿರುವ ಆರ್ ಸಿಬಿಯು ಭಾನುವಾರ ಹೊಸದಾಗಿ ಹಿಂದಿ ಭಾಷೆಯ ಪುಟ ತೆರೆದಿದ್ದು ಇದು ಕನ್ನಡಿಗರ ಮೇಲೆ ಹಿಂದಿ ಹೇರಿಕೆ ಎಂಬ ಅಭಿಪ್ರಾಯ ಕೇಳಿ ಬಂದಿದೆ. ಕನ್ನಡ ಪರ ಸಂಘಟನೆಗಳು ಇದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿವೆ.

Read More
Next Story