ಬೆಂಗಳೂರಿನ ಆರ್.ಆರ್. ನಗರ ಪ್ರದೇಶವೊಂದರಲ್ಲೇ ಇವೆ 38,000 ಬೀದಿ ನಾಯಿಗಳು!

ಆರ್‌.ಆರ್‌.ನಗರ ವಲಯದಲ್ಲಿ 38053 ಬೀದಿ ನಾಯಿಗಳಿವೆ. ಈ ಪೈಕಿ ಕಳೆದ ವರ್ಷ 11493 ಮತ್ತು ಈ ವರ್ಷ ಈವರೆಗೆ 2224 ಬೀದಿ ನಾಯಿಗಳನ್ನು ಶಸ್ತ್ರ ಚಿಕಿತ್ಸೆಗೊಳಪಡಿಸಲಾಗಿದೆ ಎಂದು ಬಿಬಿಎಂಪಿ ಹೇಳಿದೆ;

Update: 2025-09-01 15:05 GMT

ರಾಜಧಾನಿಯ ಪ್ರತಿಷ್ಠಿತ ರಾಜರಾಜೇಶ್ವರಿ ನಗರ ವಲಯದಲ್ಲಿ ಬರೋಬ್ಬರಿ 38,053 ಬೀದಿ ನಾಯಿಗಳಿವೆ ಎಂಬ ಆತಂಕಕಾರಿ ಮಾಹಿತಿಯನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಬಹಿರಂಗಪಡಿಸಿದೆ. ಈ ಹಿನ್ನೆಲೆಯಲ್ಲಿ, ನಗರದಲ್ಲಿನ ಬೀದಿ ನಾಯಿಗಳ ಹಾವಳಿ ಮತ್ತು ಘನತ್ಯಾಜ್ಯ ವಿಲೇವಾರಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಲೋಕಾಯುಕ್ತ ನ್ಯಾ. ಬಿ.ಎಸ್. ಪಾಟೀಲ್ ಅವರು ಅಖಾಡಕ್ಕಿಳಿದಿದ್ದು, ಬಿಬಿಎಂಪಿ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳಿಗೆ ಕಠಿಣ ಸೂಚನೆಗಳನ್ನು ನೀಡಿದ್ದಾರೆ.

ಬೀದಿ ನಾಯಿಗಳ ನಿಯಂತ್ರಣಕ್ಕೆ ಲೋಕಾಯುಕ್ತರ ತಾಕೀತು

ಲೋಕಾಯುಕ್ತರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ, ಬಿಬಿಎಂಪಿ ಪಶುಸಂಗೋಪನೆ ಇಲಾಖೆಯ ಅಧಿಕಾರಿಗಳು ಆರ್.ಆರ್. ನಗರ ವಲಯದ ಶ್ವಾನಗಳ ಕುರಿತು ಮಾಹಿತಿ ನೀಡಿದರು. "ವಲಯದಲ್ಲಿರುವ 38,053 ಬೀದಿ ನಾಯಿಗಳ ಪೈಕಿ, ಕಳೆದ ವರ್ಷ 11,493 ಮತ್ತು ಈ ವರ್ಷ 2,224 ನಾಯಿಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಇದುವರೆಗೂ ಒಟ್ಟು 60% ನಾಯಿಗಳಿಗೆ ಚಿಕಿತ್ಸೆ ನೀಡಲಾಗಿದ್ದು, ಉಳಿದ 40% ನಾಯಿಗಳಿಗೂ ಆದ್ಯತೆಯ ಮೇರೆಗೆ ಶಸ್ತ್ರಚಿಕಿತ್ಸೆ ನಡೆಸಲಾಗುವುದು" ಎಂದು ಅಧಿಕಾರಿಗಳು ವಿವರಿಸಿದರು.

ಅಧಿಕಾರಿಗಳ ಮಾಹಿತಿಯನ್ನು ಆಲಿಸಿದ ಲೋಕಾಯುಕ್ತ ನ್ಯಾ. ಪಾಟೀಲ್, "ತ್ವರಿತವಾಗಿ ಮತ್ತು ಸಾಧ್ಯವಾದಷ್ಟು ಬೇಗ ಎಲ್ಲಾ ಬೀದಿ ನಾಯಿಗಳಿಗೆ ಶಸ್ತ್ರಚಿಕಿತ್ಸೆ ಪೂರ್ಣಗೊಳಿಸಬೇಕು. ನಾಯಿಗಳನ್ನು ಹಿಡಿಯಲು ಬೇಕಾದ ಬೋನು ಮತ್ತು ಪಂಜರಗಳನ್ನು ತಕ್ಷಣವೇ ಪಡೆದುಕೊಳ್ಳಿ. ಅವುಗಳ ಮೇಲೆ ನಿಗಾ ವಹಿಸಲು ಪ್ರತ್ಯೇಕ ವೀಕ್ಷಣಾ ಕೇಂದ್ರಗಳನ್ನು ಸ್ಥಾಪಿಸಿ" ಎಂದು ಖಡಕ್ ಸೂಚನೆ ನೀಡಿದರು.

ಕಸದ ಬ್ಲಾಕ್‌ಸ್ಪಾಟ್‌ಗಳಿಗೆ ಮುಕ್ತಿ, 10 ಲಕ್ಷ ರೂಪಾಯಿ ದಂಡ

ಘನತ್ಯಾಜ್ಯ ವಿಲೇವಾರಿ ವಿಚಾರದಲ್ಲಿಯೂ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗಿದೆ. ಯಶವಂತಪುರ ರೈಲ್ವೆ ಟ್ರ್ಯಾಕ್‌ನ ಬಳಿ ಕಾಂಪೌಂಡ್ ನಿರ್ಮಿಸಿ, ತ್ಯಾಜ್ಯ ಎಸೆಯುವುದನ್ನು ಸಂಪೂರ್ಣವಾಗಿ ತಡೆಯಲಾಗಿದೆ. ಲೋಕಾಯುಕ್ತರ ಸೂಚನೆಯ ಮೇರೆಗೆ, ಗುರುತಿಸಲಾಗಿದ್ದ 70 ಖಾಲಿ ನಿವೇಶನಗಳಲ್ಲಿದ್ದ ತ್ಯಾಜ್ಯ ಮತ್ತು ಕಟ್ಟಡದ ಅವಶೇಷಗಳನ್ನು ತೆರವುಗೊಳಿಸಲಾಗಿದೆ. ಒಟ್ಟು 150 ಬ್ಲಾಕ್‌ಸ್ಪಾಟ್‌ಗಳ ಪೈಕಿ 43 ಅನ್ನು ಈಗಾಗಲೇ ಸ್ವಚ್ಛಗೊಳಿಸಲಾಗಿದೆ.

ಅಲ್ಲದೆ, ಆರ್.ಆರ್. ನಗರ ವ್ಯಾಪ್ತಿಯಲ್ಲಿ ಎಲ್ಲೆಂದರಲ್ಲಿ ಕಸ ಬಿಸಾಡುತ್ತಿದ್ದ ಸಾರ್ವಜನಿಕರನ್ನು ಗುರುತಿಸಿ, ಅವರಿಂದ ₹10 ಲಕ್ಷ ದಂಡ ವಸೂಲಿ ಮಾಡಲಾಗಿದೆ. ವಲಯದಲ್ಲಿನ ಎಲ್ಲಾ ಬ್ಲಾಕ್‌ಸ್ಪಾಟ್‌ಗಳನ್ನು ಶಾಶ್ವತವಾಗಿ ತೆರವುಗೊಳಿಸಲಾಗುವುದು ಎಂದು ಅಧಿಕಾರಿಗಳು ಲೋಕಾಯುಕ್ತರಿಗೆ ಭರವಸೆ ನೀಡಿದರು.

Tags:    

Similar News