Namma Metro| ಮೆಟ್ರೋ ಪ್ರಯಾಣದಲ್ಲಿ ನಿಯಮ ಉಲ್ಲಂಘಿಸಿದ 27 ಸಾವಿರ ಪ್ರಯಾಣಿಕರು
ನಮ್ಮ ಮೆಟ್ರೋ ಭದ್ರತಾ ದಳವು 2024ರ ಸೆಪ್ಟೆಂಬರ್‌ನಿಂದ 2025ರ ಮಾರ್ಚ್‌ವರೆಗಿನ ಅವಧಿಯಲ್ಲಿ ಸಂಚಾರ ದಟ್ಟಣೆ ಇಲ್ಲದ ವೇಳೆಯಲ್ಲಿ ವಾಡಿಕೆಯ ಭದ್ರತಾ ತಪಾಸಣೆ ನಡೆಸಿದೆ. ಈ ವೇಳೆ ಪ್ರಯಾಣಿಕರಿಂದ ವಿವಿಧ ರೀತಿಯಲ್ಲಿ ನಿಯಮ ಉಲ್ಲಂಘನೆಯಾಗಿರುವ ಹಲವಾರು ಪ್ರಕರಣಗಳನ್ನು ದಾಖಲಿಸಿಕೊಂಡಿದೆ.;
ಜನರ ಜೀವನಾಡಿ ಎನಿಸಿಕೊಂಡುವ ʻನಮ್ಮ ಮೆಟ್ರೋʼ ಸುಖಕರ ಪ್ರಯಾಣಕ್ಕೆ ಹೆಸರುವಾಸಿಯಾಗಿದೆ. ಆದರೆ ಪ್ರಯಾಣಿಕರು ಹಲವು ನಿಯಮಗಳ ಅನುಸಾರವಾಗಿ ಪ್ರಯಾಣ ಮಾಡಬೇಕು. ಒಂದು ವೇಳೆ ನಿಯಮ ಉಲ್ಲಂಘಿಸಿದರೆ ʼದಂಡʼ ಕಟ್ಟಿಟ್ಟ ಬುತ್ತಿ.
ಇದಕ್ಕೆ ಸಾಕ್ಷಿ ಇಲ್ಲಿದೆ. ಆರು ತಿಂಗಳಲ್ಲಿ ಬರೋಬ್ಬರಿ 27,000ಕ್ಕೂ ಹೆಚ್ಚು ಮೆಟ್ರೋ ನಿಯಮ ಉಲ್ಲಂಘನೆ ಪ್ರಕರಣಗಳನ್ನು ದಾಖಲಿಸಿಕೊಂಡಿದೆ.
ʼನಮ್ಮ ಮೆಟ್ರೋʼ ಭದ್ರತಾ ದಳವು 2024ರ ಸೆಪ್ಟೆಂಬರ್‌ನಿಂದ 2025ರ ಮಾರ್ಚ್‌ವರೆಗಿನ ಅವಧಿಯಲ್ಲಿ ಸಂಚಾರ ದಟ್ಟಣೆ ಇಲ್ಲದ ವೇಳೆಯಲ್ಲಿ ವಾಡಿಕೆಯ ಭದ್ರತಾ ತಪಾಸಣೆ ನಡೆಸಿದೆ. ಈ ವೇಳೆ ಪ್ರಯಾಣಿಕರಿಂದ ವಿವಿಧ ರೀತಿಯಲ್ಲಿ ನಿಯಮ ಉಲ್ಲಂಘನೆಯಾಗಿರುವ ಹಲವಾರು ಪ್ರಕರಣಗಳನ್ನು ದಾಖಲಿಸಿಕೊಂಡಿದೆ. CCTV ಕ್ಯಾಮೆರಾ ಮೇಲ್ವಿಚಾರಣೆ, ಸಹಪ್ರಯಾಣಿಕರ ದೂರಿನ ಪರಿಶೀಲನೆ, ಮತ್ತು ಭದ್ರತಾ ಸಿಬ್ಬಂದಿಯ ನಿಯಂತ್ರಣ ಕಾರ್ಯಾಚರಣೆಗಳ ಮೂಲಕ ನಿಯಮ ಉಲ್ಲಂಘನೆ ಪ್ರಕರಣಗಳನ್ನು ದಾಖಲಿಸಿದೆ.
ಪ್ರಕಟನೆಯಲ್ಲಿ ಏನಿದೆ?
ಈ ಬಗ್ಗೆ ಮಾಧ್ಯಮ ಪ್ರಕಟಣೆಯನ್ನು ಹೊರಡಿಸಿರುವ ನಮ್ಮ ಮೆಟ್ರೋ, "ಇದುವರೆಗೆ ಒಟ್ಟು 27,000ಕ್ಕೂ ಹೆಚ್ಚು ಘಟನೆಗಳು ದಾಖಲಾಗಿದ್ದು, ಇದರಲ್ಲಿ ಪ್ರಮುಖವಾಗಿ ಮೊಬೈಲ್‌ನಲ್ಲಿ ಜೋರಾಗಿ ಹಾಡು ಕೇಳುವುದು (11,922), ವಿಶೇಷ ಚೇತನರಿಗೆ, ಹಿರಿಯರಿಗೆ ಆದ್ಯತೆಯ ಆಸನಗಳನ್ನು ನೀಡದಿರುವುದು (14,162), ರೈಲಿನಲ್ಲಿ ಆಹಾರ ಸೇವನೆ (554) ಹಾಗೂ ದೊಡ್ಡ ಲಗೇಜ್ ಸಾಗಣೆ (474) ಪ್ರಕರಣಗಳು ದಾಖಲಾಗಿವೆ. ಇವೆಲ್ಲವೂ ಪ್ರಯಾಣಿಕರಿಗೆ ತೊಂದರೆ ಉಂಟುಮಾಡುವ ವರ್ತನೆಗೆ ಸೇರಿವೆ," ಎಂದು ತಿಳಿಸಿದೆ. ಈ ಬಗ್ಗೆ ಪ್ರಯಾಣಿಕರಿಗೆ ಕಠಿಣ ಎಚ್ಚರಿಕೆಯನ್ನೂ ನೀಡಲಾಗಿದೆ.
ಮೆಟ್ರೋ ನಿಗಮದ ವಿನಂತಿ
ಮೆಟ್ರೋ ವ್ಯವಸ್ಥೆಯ ಸರಾಗ ಕಾರ್ಯಾಚರಣೆ ಹಾಗೂ ಪ್ರಯಾಣಿಕರಿಗೆ ಉತ್ತಮ ಅನುಭವ ಒದಗಿಸಲು ಸಾರ್ವಜನಿಕರು ಮೆಟ್ರೋ ಮಾರ್ಗಸೂಚಿಗಳನ್ನು ಅನುಸರಿಸಬೇಕು. ಇಂಥಹ ನಿಯಮ ಉಲ್ಲಂಘನೆಯ ಪ್ರಕರಣಗಳು ಮುಂದುವರಿದರೆ ಭವಿಷ್ಯದಲ್ಲಿ ದಂಡ ವಿಧಿಸಲಾಗುವುದು ಎಂದು ʻನಮ್ಮ ಮೆಟ್ರೋʼ ದ ಭದ್ರತಾ ದಳ ಎಚ್ಚರಿಕೆ ನೀಡಿದೆ.
ಪ್ರಯಾಣಿಕರ ಸುರಕ್ಷತೆ ಹಾಗೂ ಅನುಕೂಲತೆಗಳನ್ನು ಕಾಪಾಡಲು CCTV ಕ್ಯಾಮೆರಾಗಳ ನಿಗಾ ನಿರಂತರವಾಗಿ ನಡೆಯುತ್ತಿದೆ. ಇದಲ್ಲದೇ, ಮೆಟ್ರೋ ಭದ್ರತಾ ತಂಡವು ಪ್ರತಿದಿನವೂ ಪರಿಶೀಲನೆ ನಡೆಸಿ, ನಿಯಮ ಉಲ್ಲಂಘನೆಯ ಬಗ್ಗೆ ವರದಿ ಮಾಡುತ್ತಿದೆ. ಪ್ರಸ್ತುತ, ಈ ನಿಯಮ ಉಲ್ಲಂಘನೆಗೈದವರಿಗೆ ಕೇವಲ ಎಚ್ಚರಿಕೆ ನೀಡಲಾಗುತ್ತಿದೆ, ಆದರೆ ಮುಂದಿನ ಹಂತದಲ್ಲಿ ದಂಡ ವಿಧಿಸುವ ಎಚ್ಚರಿಕೆಯನ್ನು ನಮ್ಮ ಮೆಟ್ರೋ ನೀಡಿದೆ.