ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ 13000 ಕೋಟಿ ರೂ. ಅನುದಾನ : ಸಿಎಂ ಸಿದ್ದರಾಮಯ್ಯ
ಕಲಬುರಗಿಯಲ್ಲಿ ಆರೋಗ್ಯ ಆವಿಷ್ಕಾರ ಯೋಜನೆಯಡಿಯಲ್ಲಿ 440.63 ಕೋಟಿ ರೂ. ಮೊತ್ತದ ಕಾಮಗಾರಿಗಳನ್ನು ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ;
ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳ ಅಭಿವೃದ್ಧಿಗೆ ಮೂರು ವರ್ಷದಲ್ಲಿ 13000 ಕೋಟಿ ರೂಪಾಯಿ ಅನುದಾನವನ್ನು ನೀಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಕಲಬುರಗಿಯಲ್ಲಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಆಯೋಜಿಸಿರುವ ಆರೋಗ್ಯ ಆವಿಷ್ಕಾರ ಯೋಜನೆಯ ಅಡಿಯಲ್ಲಿ 440.63 ಕೋಟಿ ರೂ. ಮೊತ್ತದ ಕಾಮಗಾರಿಗಳನ್ನು ಉದ್ಘಾಟಿಸಿ, ಬಂಜಾರ ಭವನವನ್ನು ಲೋಕಾರ್ಪಣೆಗೊಳಿಸಿದರು. ಬಳಿಕ ಮಾತನಾಡಿ, ವರ್ಷಕ್ಕೆ 5000 ಕೋಟಿ ರೂ. ಕೆಕೆಆರ್ಡಿಬಿಗೆ ನೀಡುವುದಾಗಿ ಚುನಾವಣೆ ವೇಳೆ ಅಶ್ವಾಸನೆ ನೀಡಲಾಗಿತ್ತು. ಅದರಂತೆ ಇಲ್ಲಿಯವರೆಗೂ 13000 ಕೋಟಿ ರೂ. ನೀಡಲಾಗಿದೆ. ಈವರೆವಿಗೂ 5300 ಕೋಟಿ ರೂ. ಖರ್ಚಾಗಿದ್ದು ಕಾಮಗಾರಿ ಜನರಿಗೆ ತಲುಪಿದೆ ಎಂದು ಹೇಳಿದರು.
ಕೆಕೆಆರ್ಡಿಬಿಗೆ ಕೊಡುವ ಈ ಅನುದಾನದ ಹೊರತಾಗಿ ಸರ್ಕಾರ ಇಲಾಖಾವಾರು ಕಾರ್ಯಕ್ರಮಗಳಿಗಾಗಿ ಅನುದಾನ ನೀಡುತ್ತಲೇ ಇದೆ. ನಂಜುಂಡಪ್ಪ ಅವರ ವರದಿಯ ಆಶಯಗಳನ್ನು ಸರ್ಕಾರ ಈಡೇರಿಸುತ್ತಿದೆ. ಆರೋಗ್ಯ, ಶಿಕ್ಷಣ, ಉದ್ಯೋಗದಲ್ಲಿ ಕಲ್ಯಾಣ ಕರ್ನಾಟಕ ಪ್ರಗತಿ ಸಾಧಿಸುವ ಜೊತೆಗೆ ಮೂಲಭೂತ ಸೌಕರ್ಯಗಳ ಈಡೇರಿಕೆಗೆ ಹಣ ವಿನಿಯೋಗ ಮಾಡಲು ಸೂಚನೆ ನೀಡಿದ್ದೇನೆ. ಇದರ ಪ್ರಕಾರ ಅಕ್ಷರ ಆವಿಷ್ಕಾರ ನಡೆದು 440.63 ಕೋಟಿ ವೆಚ್ಚದ ಆರೋಗ್ಯ ಆವಿಷ್ಕಾರ ಕಾರ್ಯಕ್ರಮ ಉದ್ಘಾಟಿಸಲಾಗಿದೆ. ಕೊಲ್ಲೂರು ಮಲ್ಲಪ್ಪ ಅವರ ಸ್ಮಾರಕಕ್ಕೆ ಉಚಿತವಾಗಿ ಸ್ಥಳ ನೀಡಲಾಗಿದೆ. ಮಲ್ಲಪ್ಪ ಅವರು ಕಲ್ಯಾಣ ಕರ್ನಾಟಕದ ಗಾಂಧಿ ಎಂದು ಕರೆಸಿಕೊಂಡಿದ್ದವರು. ಸ್ವಾತಂತ್ರ್ಯ ಹೋರಾಟಗಾರರಾದ ಇವರ ಸ್ಮಾರಕ ತಕ್ಷಣ ಆಗಬೇಕು ಎಂದು ಸೂಚಿಸಿದರು.
42 ಆಸ್ಪತ್ರೆಗಳನ್ನು ಮೇಲ್ದರ್ಜೆಗೆ ಹೆಚ್ಚಳ ಮಾಡುವುದು, ಹೊಸ ಆಸ್ಪತ್ರೆಗಳ ನಿರ್ಮಾಣವಾಗುತ್ತಿದೆ. ಈ ಭಾಗದ ಆರೋಗ್ಯ ಸವಲತ್ತು ವಿಸ್ತರಿಸಲು ಒಟ್ಟು 847 ಕೋಟಿ ರೂ. ನೀಡಲು ಸರ್ಕಾರ ಯೋಜನೆ ರೂಪಿಸಿದೆ. ರಾಜ್ಯದಲ್ಲಿ ಅಭಿವೃದ್ಧಿಗೆ ಹಣ ಇಲ್ಲ ಎನ್ನುವ ಬಿಜೆಪಿ ಪರಿವಾರದ ಎಲ್ಲಾ ಸುಳ್ಳುಗಳಿಗೆ ಜನರೇ ಉತ್ತರ ನೀಡುತ್ತಿದ್ದಾರೆ. ಏಕೆಂದರೆ ನಾವು ಅಭಿವೃದ್ಧಿಗೆ ಕೊಟ್ಟಿರುವ ಹಣ ರಾಜ್ಯದ ಜನರ ಮನೆ ಬಾಗಿಲಿಗೆ ತಲುಪಿದೆ ಎಂದು ಬಿಜೆಪಿ ವಿರುದ್ಧ ಟೀಕಾಪ್ರಹಾರ ನಡೆಸಿದರು.
ಬೆಲೆ ಏರಿಕೆಗೆ ಮೋದಿ ಸರ್ಕಾರ ಕಾರಣ:
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಬೆಲೆ ಏರಿಕೆಗೆ ಕಾರಣವಾಗಿದೆ. ನರೇಂದ್ರ ಮೋದಿ ಬರುವ ಮೊದಲು ಚಿನ್ನ, ಪೆಟ್ರೋಲ್, ಡೀಸೆಲ್, ಔಷಧ, ರಸಗೊಬ್ಬರ, ಅಡುಗೆ ಎಣ್ಣೆ, ಅಡುಗೆ ಅನಿಲದ ಬೆಲೆ ಎಷ್ಟಿತ್ತು ? ಬಿಜೆಪಿ ನೇತೃತ್ವದ ಸರ್ಕಾರ ಬಂದ ಬಳಿಕ ಎಷ್ಟು ಏರಿಕೆಯಾಗಿದೆ ಎಂಬುದನ್ನು ಜನತೆ ಗಮನಿಸಬೇಕು. ಬೆಲೆ ಏರಿಕೆಯ ಸೃಷ್ಟಿಕರ್ತ ಪ್ರಧಾನಿ ನರೇಂದ್ರ ಮೋದಿ ಅವರಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಸುಳ್ಳೇ ಬಿಜೆಪಿಯ ಮನೆ ದೇವರು. ಬಿಜೆಪಿಗೆ ಅಧಿಕಾರ ಇದ್ದಾಗಲೂ ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಮಾಡಲಿಲ್ಲ. ಬಿಜೆಪಿ 371ಜೆ ಗೆ ವಿರುದ್ಧ ಇತ್ತು. ಉಪ ಪ್ರಧಾನಿಯಾಗಿದ್ದ ಎಲ್.ಕೆ.ಅಡ್ವಾಣಿ 371ಜೆ ಜಾರಿ ಮಾಡುವುದಿಲ್ಲ ಎಂದು ಪತ್ರ ಬರೆದಿದ್ದರು. ಕೊನೆಗೆ ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮಾಜಿ ಮುಖ್ಯಮಂತ್ರಿ ಧರಂಸಿಂಗ್ ಹೋರಾಟಕ್ಕೆ ಮಾನ್ಯತೆ ನೀಡಿ 371ಜೆ ಜಾರಿ ಮಾಡಿದರು ಎಂದರು.
ಜಿಎಸ್ ಟಿ ಸಂಗ್ರಹದಲ್ಲಿ ರಾಜ್ಯ ಎರಡನೇ ಸ್ಥಾನದಲ್ಲಿರುವುದು ಆರ್ಥಿಕವಾಗಿ ರಾಜ್ಯ ಪ್ರಗತಿ ಪಥದಲ್ಲಿರುವುದಕ್ಕೆ ಸಾಕ್ಷಿ. ಕಲ್ಯಾಣ ಕರ್ನಾಟಕದ ಭಾಗದಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೂ ಕ್ರಮ ಕೈಗೊಳ್ಳಲಾಗುತ್ತಿದೆ ಇದೇ ವೇಳೆ ಹೇಳಿದರು.
ಕಾಂಗ್ರೆಸ್ ಸರ್ಕಾರ ಅಭಿವೃದ್ಧಿ ಪಥದಲ್ಲಿ, ಅಭಿವೃದ್ಧಿ ರಥ: ಡಿ.ಕೆ.ಶಿವಕುಮಾರ್
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ, ಕಾಂಗ್ರೆಸ್ ಸರ್ಕಾರದ ಸಚಿವರು, ಶಾಸಕರು ಹಾಗೂ ಸಂಸದರು ಸೇರಿ ಎಲ್ಲಾ ರಂಗದಲ್ಲಿಯೂ ಕಲ್ಯಾಣ ಕರ್ನಾಟಕವನ್ನು ಅಭಿವೃದ್ಧಿಯ ಪಥದಲ್ಲಿ ಮುನ್ನಡೆಸುವುದರ ಜೊತೆಗೆ ಅಭಿವೃದ್ಧಿಯ ರಥ ಎಳೆಯುತ್ತಿದ್ದಾರೆ. ಅಧಿಕಾರ ನಶ್ವರ, ಸಾಧನೆಗಳು ಅಜರಾಮರ. ಆದರೆ ಮತದಾರರೇ ಈಶ್ವರ ಎಂದು ಹೇಳಿದರು.
ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿ ಮೂಲಕ ಹೊಸ ಸಂದೇಶ ರವಾನಿಸಲಾಗಿದೆ. ಶಿಕ್ಷಣ, ಆರೋಗ್ಯ, ರಸ್ತೆ, ಗ್ರಾಮೀಣಾಭಿವೃದ್ಧಿ, ಉದ್ಯೋಗ ಸೇರಿ ಎಲ್ಲಾ ರಂಗದಲ್ಲೂ ಅಭಿವೃದ್ಧಿ ಮಾಡಲಾಗುತ್ತಿದೆ. ಆರೋಗ್ಯ ಕ್ಷೇತ್ರದಲ್ಲಿ 416 ಕೋಟಿ ರೂ. ವೆಚ್ಚದ ವಿವಿಧ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗಿದೆ. ರಾಜ್ಯದ ಆರೋಗ್ಯ ಕ್ಷೇತ್ರದಲ್ಲಿ ಬೆಂಗಳೂರು ನಂತರ ಕಲ್ಯಾಣ ಕರ್ನಾಟಕ ಎರಡನೇ ಸ್ಥಾನವನ್ನು ಅಲಂಕರಿಸುವಂತೆ ಮಾಡಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೇಂದ್ರದ ಕಾರ್ಮಿಕ ಸಚಿವರಾಗಿದ್ದಾಗ ಈ ಭಾಗದ ಜನರ ಆರೋಗ್ಯ ಸುಧಾರಣೆಗೆ ಅತಿ ದೊಡ್ಡ ಇಎಸ್ ಐ ಆಸ್ಪತ್ರೆ ನಿರ್ಮಿಸಿ ಹೊಸ ಇತಿಹಾಸ ಬರೆದಿದ್ದಾರೆ ಎಂದು ತಿಳಿಸಿದರು.
ಕೇವಲ ಗ್ಯಾರಂಟಿ ಬಗ್ಗೆ ಮಾತನಾಡುವುದಿಲ್ಲ. ಎಲ್ಲಾ ರಂಗಗಳಲ್ಲಿ ಸಾಧಿಸಿರುವ ಪ್ರಗತಿ ಬಗ್ಗೆ ಮಾತನಾಡುತ್ತೇವೆ. ವಿರೋಧ ಪಕ್ಷಗಳು ಏನೇ ಟೀಕೆ ಮಾಡಿದರೂ, ಭಾವನೆಗಿಂತ ಜನರ ಬದುಕು ಸುಧಾರಿಸಲು ರಾಜಕಾರಣ ಮಾಡುತ್ತೇವೆ. ಬೆಲೆ ಏರಿಕೆಯಿಂದ ತತ್ತರಿಸುತ್ತಿದ್ದ ಜನರನ್ನು ರಕ್ಷಿಸಲು ಗೃಹಲಕ್ಷ್ಮಿ, ಗೃಹಜ್ಯೋತಿ, ಅನ್ನಭಾಗ್ಯ, ಶಕ್ತಿ, ಯುವನಿಧಿ ಯೋಜನೆಗಳನ್ನು ನೀಡಿದ್ದೇವೆ ಎಂದರು.
ಯುಪಿಎ ಸರ್ಕಾರದ ಅವಧಿಯಲ್ಲಿ ಉದ್ಯೋಗ ಖಾತರಿ, ಶೈಕ್ಷಣಿಕ ಹಕ್ಕು, ಅರಣ್ಯ ಭೂಮಿ ಹಕ್ಕು ಕಾಯ್ದೆ, ಆಹಾರ ಭದ್ರತೆ ಸೇರಿದಂತೆ ಅನೇಕ ಕ್ರಾಂತಿಕಾರಕ ಕಾನೂನು ತಂದಿದ್ದಾರೆ. ಇಂದಿರಾ ಗಾಂಧಿ 50 ವರ್ಷಗಳ ಹಿಂದೆ ಅಂಗನವಾಡಿಗಳನ್ನು ಆರಂಭಿಸಿ ಮಕ್ಕಳಿಗೆ ಆರೋಗ್ಯ ಹಾಗೂ ಶಿಕ್ಷಣ ನೀಡಲು ಮುಂದಾದರು. ಅವರ ಈ ಕೆಲಸವನ್ನು ಇಡೀ ವಿಶ್ವ ಶ್ಲಾಘಿಸಿತು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗೆಲ್ಲಾ ಸರ್ವರಿಗೂ ಸಮಬಾಳು, ಸಮಪಾಲು ತತ್ವದ ಮೇಲೆ ಕಾರ್ಯಕ್ರಮ ರೂಪಿಸಿಕೊಂಡು ಬಂದಿದೆ ಎಂದು ಹೇಳಿದರು.