ಯಡಿಯೂರಪ್ಪ ವಿರುದ್ಧ ಪೋಕ್ಸೋ ಪ್ರಕರಣ| ಸಿಬಿಐಗೆ ವಹಿಸಲು ಸಂತ್ರಸ್ತೆ ಹೈಕೋರ್ಟ್ಗೆ ಮನವಿ
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಅಪ್ರಾಪ್ತ ವಯಸ್ಸಿನ ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದರೆನ್ನಲಾದ ಪ್ರಕರಣದ ತನಿಖೆಯನ್ನು ಪ್ರಾಮಾಣಿಕ ನಿವೃತ್ತ ನ್ಯಾಯಾಧೀಶರ ನಿಗಾದಲ್ಲಿ ಸಿಬಿಐಗೆ ವಹಿಸಬೇಕೆಂದು ಸಂತ್ರಸ್ತೆಯ ತಾಯಿ ಹೈಕೋರ್ಟ್ ಮುಖ್ಯ ನ್ಯಾಯಾಧೀಶರಿಗೆ ಮನವಿ ಮಾಡಿದ್ದಾರೆ.
ಸಿಐಡಿ ಪೊಲೀಸರು ತನಿಖೆ ನಡೆಸುತ್ತಿದ್ದು, ಪೋಕ್ಸೋ (POCSO) ಕಾನೂನನ್ನು ಉಲ್ಲಂಘಿಸುತ್ತಿದ್ದಾರೆ. ಆರೋಪಿ ಯಡಿಯೂರಪ್ಪ ಅವರು ಪ್ರಭಾವಿ ವ್ಯಕ್ತಿಯಾಗಿರುವುದರಿಂದ ಸಿಐಡಿ ಪೊಲೀಸರು ಅವರನ್ನು ರಕ್ಷಣೆ ಮಾಡುತ್ತಿದ್ದು, ಇದುವರೆಗೂ ಆರೋಪಿಯನ್ನು ಬಂಧಿಸಿಲ್ಲ ಎಂದು ಪತ್ರದಲ್ಲಿ ಬರೆಯಲಾಗಿದೆ.
ಈ ನಡುವೆ ಸಿಐಡಿ ಪೊಲೀಸರು, ತಮ್ಮ ಹಿಂದಿನ ಪ್ರಕರಣಗಳಿಗೆ ಸಂಬಂಧಿಸಿದಂತೆ ಸಾಕ್ಷ್ಯಾಧಾರಗಳನ್ನು ನಾಶಪಡಿಸಿರುವುದಾಗಿ ಹೇಳಿರುವ ಆಕೆ ಈ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಕೋರಿದ್ದಾರೆ.
ಹಿನ್ನೆಲೆ
ಬೆಂಗಳೂರಿನ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಮಾ.14 ತಡ ರಾತ್ರಿ ಮಹಿಳೆಯೊಬ್ಬರು ನೀಡಿದ ದೂಡಿನ ಮೇಲೆ ಯಡಿಯೂರಪ್ಪ ಅವರ ವಿರುದ್ಧ ಪ್ರಕರಣ ದಾಖಲಿಸಿ, ಎಫ್ ಐಆರ್ ಮಾಡಲಾಗಿತ್ತು.
ವಂಚನೆ ಪ್ರಕರಣ ಒಂದಕ್ಕೆ ಸಂಬಂಧಿಸಿದಂತೆ ಮಹಿಳೆಯೊಬ್ಬರು ತಮ್ಮ ಅಪ್ರಾಪ್ತ ವಯಸ್ಸಿನ ಮಗಳೊಂದಿಗೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ಸಹಾಯ ಪಡೆಯಲು ಫೆಬ್ರವರಿ 2 ರಂದು ಅವರನ್ನು ಭೇಟಿ ಮಾಡಿದ್ದಾಗ, ತನ್ನ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಘಟನೆ ನಡೆದಿದೆ ಎಂದು ಎಫ್ ಐಆರ್ ನಲ್ಲಿ ಹೇಳಲಾಗಿದೆ.
ದೂರಿನ ಹಿನ್ನೆಲೆಯಲ್ಲಿ ಅಪ್ರಾಪ್ತ ಹೆಣ್ಣು ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಸದಾಶಿವನಗರ ಪೊಲೀಸರು ಬಿಎಸ್ ಯಡಿಯೂರಪ್ಪ (81) ವಿರುದ್ಧ ಮಕ್ಕಳ ಮೇಲಿನ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ 2012 (POCSO) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪೋಕ್ಸೊ ಕಾಯ್ದೆಯ ಸೆಕ್ಷನ್ 8 ಮತ್ತು ಐಪಿಸಿ ಸೆಕ್ಷನ್ 354 ಎ ಅಡಿ ಪ್ರಕರಣ ದಾಖಲಿಸಲಾಗಿದೆ.