ಎಚ್-1ಬಿ ವೀಸಾ ಶುಲ್ಕ ಒಂದು ಬಾರಿಗೆ, ಹೊಸ ಅರ್ಜಿಗಳಿಗೆ ಮಾತ್ರ: ಟ್ರಂಪ್ ಆಡಳಿತ ಸ್ಪಷ್ಟನೆ
ಹೊಸ ಶುಲ್ಕ ಆದೇಶವು ಪ್ರಸ್ತುತ ವೀಸಾ ಹೊಂದಿರುವವರಿಗೆ ಅನ್ವಯಿಸುವುದಿಲ್ಲ. ಹೊಸದಾಗಿ ವೀಸಾ ಪಡೆಯಲು ಇಚ್ಛಿಸುವವರು ಮಾತ್ರ ಒಂದು ಬಾರಿಗೆ ಈ ಶುಲ್ಕವನ್ನು ಪಾವತಿಸಬೇಕಾಗುತ್ತದೆ.
ಎಚ್-1ಬಿ
ಎಚ್-1ಬಿ ವೀಸಾ ಪಡೆಯಲು ಅಮೆರಿಕ ಸರ್ಕಾರವು 100,000 ಡಾಲರ್ (ಸರಿ ಸುಮಾರು 88 ಲಕ್ಷ ರೂ.) ಶುಲ್ಕವನ್ನು ವಿಧಿಸಿದೆ. ಆದರೆ ಈ ವಿಚಾರದಲ್ಲಿ ಗೊಂದಲವಿದ್ದ ಕಾರಣ ಟ್ರಂಪ್ ಸರ್ಕಾರ ಇದೀಗ ಸ್ಪಷ್ಟನೆ ನೀಡಿದೆ. ಈ ಹೊಸ ಶುಲ್ಕ ಆದೇಶವು ಪ್ರಸ್ತುತ ವೀಸಾ ಹೊಂದಿರುವವರಿಗೆ ಅನ್ವಯಿಸುವುದಿಲ್ಲ. ಹೊಸದಾಗಿ ವೀಸಾ ಪಡೆಯಲು ಇಚ್ಛಿಸುವವರು ಮಾತ್ರ ಒಂದು ಬಾರಿಗೆ ಈ ಶುಲ್ಕವನ್ನು ಪಾವತಿಸಬೇಕಾಗುತ್ತದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಈ ಸ್ಪಷ್ಟೀಕರಣವು ಭಾರತ ಸೇರಿದಂತೆ ಅಮೆರಿಕದಲ್ಲಿ ಕೆಲಸ ಮಾಡುತ್ತಿರುವ ಸಾವಿರಾರು ಮಂದಿ ವಿದೇಶಿಗರಿಗೆ ಭಾರೀ ನಿರಾಳತೆಯನ್ನು ನೀಡಿದೆ. ಟ್ರಂಪ್ ಅವರ ಹೊಸ ಆದೇಶವು ಎಚ್-1ಬಿ ವೀಸಾಗೆ ಸಲ್ಲಿಸುವ ಹೊಸ, ಸಂಭಾವ್ಯ ಅರ್ಜಿಗಳಿಗೆ ಮಾತ್ರ ಅನ್ವಯಿಸುತ್ತದೆ ಎಂದು ಅಮೆರಿಕಾ ಸರ್ಕಾರವು ತನ್ನ ಸೆ.20ರ ಹೇಳಿಕೆಯಲ್ಲಿ ತಿಳಿಸಿದೆ.
ಈ ಆದೇಶವು ಸೆ.21ರಿಂದ ಜಾರಿಗೆ ಬರಲಿದ್ದು, ಇದಕ್ಕೂ ಮೊದಲು ಸಲ್ಲಿಸಲಾದ ಅರ್ಜಿಗಳ ಮೇಲೆ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ. ಅಲ್ಲದೆ ಪ್ರಸ್ತುತ ಅಮೆರಿಕದಿಂದ ಹೊರಗೆ ಇದ್ದು, ವೀಸಾ ಹೊಂದಿರುವವರು ಮತ್ತೆ ದೇಶಕ್ಕೆ ಮರುಪ್ರವೇಶ ಪಡೆಯಲು ಶುಲ್ಕವನ್ನು ಪಾವತಿಸಬೇಕಾಗಿಲ್ಲ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.
ಅಮೆರಿಕ ಮೊದಲು
ಶ್ವೇತಭವನದ ವಕ್ತಾರ ಟೇಲರ್ ರೋಜರ್ಸ್ ಅವರು ಪಿಟಿಐ ಸುದ್ದಿ ಸಂಸ್ಥೆಗೆ ಸಂದರ್ಶನ ನೀಡಿದ್ದು, ಅಧ್ಯಕ್ಷ ಟ್ರಂಪ್ ಅಮೆರಿಕದ ಕಾರ್ಮಿಕರಿಗೆ ಮೊದಲ ಸ್ಥಾನ ನೀಡುವುದಾಗಿ ಭರವಸೆ ನೀಡಿದ್ದರು. ಅದರಂತೆ ಆದೇಶ ಹೊರಡಿಸಿದ್ದಾರೆ. ಇದು ನಮ್ಮ ದೇಶಕ್ಕೆ ನಿಜವಾಗಿಯೂ ಹೆಚ್ಚಿನ ಕೌಶಲ್ಯ ಹೊಂದಿರುವ ಕಾರ್ಮಿಕರನ್ನು ಕರೆತರಲು ಹಾಗೂ ವ್ಯವಸ್ಥೆಯ ದುರುಪಯೋಗದಿಂದ ತುಳಿತಕ್ಕೊಳಗಾದ ಅಮೆರಿಕನ್ನರನ್ನು ಮೇಲೆತ್ತಲು ಸಹಾಯವಾಗಲಿದೆ ಎಂದ್ದಿದಾರೆ.
ಶ್ವೇತಭವನದ ಮತ್ತೊಬ್ಬ ಅಧಿಕಾರಿ ಮಾತನಾಡಿ, ವೀಸಾಗೆ ವಿಧಿಸಲಾಗುವ 88 ಲಕ್ಷ ರೂ. ಒಂದು ಬಾರಿಯ ಶುಲ್ಕವಾಗಿದ್ದು, ಇದು ಹೊಸ ಅರ್ಜಿಗಳಿಗೆ ಮಾತ್ರ ಅನ್ವಯಿಸುತ್ತದೆ. ವೀಸಾ ನವೀಕರಣ ಮಾಡಿಸಬೇಕಾದರೆ ಅಥವಾ ಪ್ರಸ್ತುತ ವೀಸಾ ಹೊಂದಿರುವವರಿಗೆ ಇದು ಅನ್ವಯಿಸುವುದಿಲ್ಲ. ಇದು ಮುಂಬರುವ ಲಾಟರಿ ಚಕ್ರಗಳಿಗೆ ಅನ್ವಯಿಸುತ್ತದೆಯಾದರೂ 2025ರ ಲಾಟರಿ ವಿಜೇತರಿಗೂ ಅನ್ವಯಿಸುವುದಿಲ್ಲ ಎಂದಿದ್ದಾರೆ.
ಇನ್ನೂ ಸಲ್ಲಿಸಬೇಕಿರುವ ಅರ್ಜಿಗಳಿಗೆ ಮಾತ್ರ ಅನ್ವಯ
ಅಧ್ಯಕ್ಷ ಟ್ರಂಪ್ ಶುಕ್ರವಾರ ಹೊರಡಿಸಿದ್ದ "ಕೆಲವು ವಲಸೆರಹಿತ ಕಾರ್ಮಿಕರ ಪ್ರವೇಶದ ಮೇಲಿನ ನಿರ್ಬಂಧ" ಎಂಬ ಘೋಷಣೆಯು ಇನ್ನೂ ಸಲ್ಲಿಸದ ಅರ್ಜಿಗಳಿಗೆ ಮಾತ್ರ ಅನ್ವಯಿಸುತ್ತದೆ ಎಂದು ಯುಎಸ್ಸಿಐಎಸ್ ನಿರ್ದೇಶಕ ಜೋಸೆಫ್ ಎಡ್ಲೋ ಜ್ಞಾಪಕ ಪತ್ರದಲ್ಲಿ ತಿಳಿಸಿದ್ದಾರೆ.
ಜ್ಞಾಪನಾ ಪಾತ್ರದಲ್ಲಿ ಏನಿದೆ?
"ಘೋಷಣೆ ಜಾರಿಗೆ ಬರುವ ದಿನಾಂಕಕ್ಕಿಂತ ಮೊದಲು ಸಲ್ಲಿಸಲಾದ ಅರ್ಜಿಗಳ ಫಲಾನುಭವಿಗಳು, ಪ್ರಸ್ತುತ ಅನುಮೋದಿತ ಅರ್ಜಿಗಳನ್ನು ಹೊಂದಿರುವ ಫಲಾನುಭವಿಗಳು ಅಥವಾ ಮಾನ್ಯ ಮಾಡಲಾದ ಎಚ್-1ಬಿ ವಲಸೆರಹಿತ ವೀಸಾಗಳನ್ನು ಹೊಂದಿರುವ ವ್ಯಕ್ತಿಗಳಿಗೆ ಈ ಘೋಷಣೆ ಅನ್ವಯಿಸುವುದಿಲ್ಲ."
"ಯುನೈಟೆಡ್ ಸ್ಟೇಟ್ಸ್ ಪೌರತ್ವ ಮತ್ತು ವಲಸೆ ಸೇವೆಗಳ ಇಲಾಖೆಯ ಎಲ್ಲಾ ಅಧಿಕಾರಿಗಳು ತಮ್ಮ ನಿರ್ಧಾರ ಈ ಮಾರ್ಗದರ್ಶನಕ್ಕೆ ಅನುಗುಣವಾಗಿ ಇರುವುದೇ ಎಂದು ಖಚಿತಪಡಿಸಿಕೊಳ್ಳಬೇಕು. ಈ ಘೋಷಣೆಯು ಪ್ರಸ್ತುತ ವೀಸಾ ಹೊಂದಿರುವವರು ಅಮೆರಿಕಗೆ ಅಥವಾ ಇಲ್ಲಿಂದ ಪ್ರಯಾಣಿಸುವುದರ ಮೇಲೆ ಪರಿಣಾಮ ಬೀರಲ್ಲ" ಎಂದು ತಿಳಿಸಲಾಗಿದೆ.
ಒಂದು ಬಾರಿಯ ಶುಲ್ಕ
ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕ್ಯಾರೋಲಿನ್ ಲೀವಿಟ್ "X" ನಲ್ಲಿ ಟ್ವೀಟ್ ಮಾಡಿದ್ದು, ಸ್ಪಷ್ಟವಾಗಿ ಹೇಳಬೇಕೆಂದರೆ 100,000 ಡಾಲರ್ ಎಂಬುದು ವಾರ್ಷಿಕ ಶುಲ್ಕವಲ್ಲ, ಬದಲಾಗಿ ಒಂದು ಅರ್ಜಿಗೆ ಮಾತ್ರ ಅನ್ವಯಿಸುವಂತೆ, ಒಂದು ಬಾರಿಗೆ ಮಾತ್ರ ವಿಧಿಸಲಾಗಿರುವ ಶುಲ್ಕ ಎಂದು ಸ್ಪಷ್ಟಪಡಿಸಿದ್ದಾರೆ.
ಮುಂದುವರಿದು, ಈಗಾಗಲೇ ಎಚ್-1ಬಿ ವೀಸಾಗಳನ್ನು ಹೊಂದಿ ದೇಶದ ಹೊರಗೆ ಇರುವವರು ಮತ್ತೆ ಪ್ರವೇಶಿಸಲು ಈ ಶುಲ್ಕವನ್ನು ಪಾವತಿಸಬೇಕಿಲ್ಲ. ಎಚ್-1ಬಿ ವೀಸಾ ಹೊಂದಿರುವವರು ಸಾಮಾನ್ಯವಾಗಿ ದೇಶವನ್ನು ಬಿಟ್ಟು ಮತ್ತೆ ಪ್ರವೇಶಿಸಬಹುದು. ಅವರ ಪ್ರಯಾಣದ ಮೇಲೆ ಹೊಸ ಆದೇಶವು ಯಾವುದೇ ರೀತಿಯ ಅಡ್ಡಪರಿಣಾಮ ಬೀರುವುದಿಲ್ಲ. ಈ ಘೋಷಣೆಯು ಹೊಸ ವೀಸಾಗಳಿಗೆ ಮಾತ್ರ ಅನ್ವಯಿಸುತ್ತದೆ, ನವೀಕರಣಗಳಿಗೆ ಅಲ್ಲ. ಇದು ಪ್ರಸ್ತುತ ವೀಸಾ ಹೊಂದಿರುವವರಿಗೂ ಅನ್ವಯಿಸುವುದಿಲ್ಲ ಎಂದು ಲೀವಿಟ್ ಬರೆದುಕೊಂಡಿದ್ದಾರೆ.
ಅರ್ಹರಿಗೆ ಮಾತ್ರ ಅವಕಾಶ
ಈ ಬೃಹತ್ ಹೆಜ್ಜೆಯ ಹಿಂದಿನ ಕಾರಣವನ್ನು ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್ ವಿವರಿಸಿದ್ದು, ಸರ್ಕಾರಕ್ಕೆ 88 ಲಕ್ಷ ರೂ. ಪಾವತಿಸುವಷ್ಟು ಮೌಲ್ಯವುಳ್ಳವನಾಗಿದ್ದಾನೆಯೇ ಎಂದು ಕಂಪನಿ ತನ್ನನ್ನು ತಾನು ಪರಾಮರ್ಶೆ ಮಾಡಿಕೊಳ್ಳಬ್ವೆಕಾಗುತ್ತದೆ. ಆ ಬಳಿಕ ಅವರನ್ನೇ ನೇಮಿಸಿಕೊಳ್ಳಬೇಕೋ ಅಥವಾ ಅಮೆರಿಕನ್ನರನ್ನ ನೇಮಿಸಿಕೊಳ್ಳಬೇಕೋ ಎಂದು ಕಂಪನಿಯೇ ನಿರ್ಧರಿಸಬೇಕಾಗುತ್ತದೆ. ಆ ವ್ಯಕ್ತಿಯು ಕಂಪನಿ ಮತ್ತು ಅಮೆರಿಕಕ್ಕೆ ತುಂಬಾ ಮೌಲ್ಯಯುತ ಎಂದಾದರೆ ಕಂಪನಿಯು ವೀಸಾ ಶುಲ್ಕವನ್ನು ಪಾವತಿಸಲಿದೆ. ಇಲ್ಲವಾದಲ್ಲಿ ಆತನನ್ನು ಕೈಬಿಟ್ಟು, ಅಮೆರಿಕ ಪ್ರಜೆಯನ್ನೇ ನೇಮಿಸಿಕೊಳ್ಳಲಿದೆ ಎಂದಿದ್ದಾರೆ.
ಈಗಾಗಲೇ ವಲಸೆ ಹೋಗಿರುವವರಿಗೆ ನೆಮ್ಮದಿ
ಟ್ರಂಪ್ ಘೋಷಣೆಗೆ ಸಹಿ ಹಾಕಿದ ನಂತರ ಅಮೆರಿಕದಲ್ಲಿ ಎಚ್-1ಬಿ ವೀಸಾ ಪಡೆದ ಭಾರತೀಯ ವೃತ್ತಿಪರರಲ್ಲಿ ಆತಂಕ ಮೂಡಿತ್ತು. ಆದರೆ ಅನೇಕರು ತಮ್ಮ ತಾಯ್ನಾಡಿಗೆ ವಿಮಾನಗಳನ್ನು ಹತ್ತಲು ಯೋಚಿಸುತ್ತಿರುವಾಗ ಕೊನೆಯ ಕ್ಷಣದಲ್ಲಿ ಸ್ಪಷ್ಟೀಕರಣ ಸಿಕ್ಕಿದ್ದು, ಅನೇಕರು ತಮ್ಮ ಪ್ರಯಾಣ ಯೋಜನೆಗಳನ್ನು ಸ್ಥಗಿತಗೊಳಿಸಿದ್ದಾರೆ. ಈಗಾಗಲೇ ಭಾರತದಲ್ಲಿದ್ದ ಹಲವರು ಅಮೆರಿಕಗೆ ಮತ್ತೆ ಹಿಂತಿರುಗಲು ಹರಸಾಹಸ ಪಡುತ್ತಿದ್ದರು. ಎಚ್-1ಬಿ ವೀಸಾ ಹೊಂದಿರುವ ಕೆಲವರು ರಜೆ ಮೇಲೆ ಬಂದು ಅಮೆರಿಕದಿಂದ ಹೊರಗಿದ್ದಾರೆ. ಇಂಥವರಿಗೆ, ವ್ಯಾಪಾರ ಅಥವಾ ರಜೆಯ ಮೇಲೆ ಅಮೆರಿಕದಿಂದ ಹೊರಗಿರುವ ಎಚ್-1ಬಿ ವೀಸಾ ಹೊಂದಿರುವವರು ಸೆ.21ರ ಮಧ್ಯರಾತ್ರಿ ಒಳಗೆ ಅಮೆರಿಕಾಗೆ ಹಿಂದಿರುಗಿ. ಇಲ್ಲವಾದಲ್ಲಿ ಸಿಲುಕಿಕೊಳ್ಳುತ್ತೀರಿ ಎಂಬ ಸಂದೇಶವನ್ನೂ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ರವಾನಿಸಿದ್ದವು ಎನ್ನಲಾಗಿದೆ.
ಕೊನೆಯ ಬಾರಿ ಇದ್ದ ಶುಲ್ಕ ಕೇವಲ 215 ಡಾಲರ್
ಎಚ್-1ಬಿ ವಲಸೆರಹಿತ ವೀಸಾ ಆಗಿದ್ದು, ಇದು ಅಮೆರಿಕದ ಕಂಪನಿಗಳು ಸೈದ್ಧಾಂತಿಕ ಅಥವಾ ತಾಂತ್ರಿಕ ಪರಿಣತಿಯ ಅಗತ್ಯವಿರುವ ವಿಶೇಷ ಉದ್ಯೋಗಗಳನ್ನು ನೇಮಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ. ಭಾರತ ಮತ್ತು ಚೀನಾದಂತಹ ದೇಶಗಳಿಂದ ಪ್ರತೀ ವರ್ಷ ಸಾವಿರಾರು ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ತಂತ್ರಜ್ಞಾನ ಕಂಪನಿಗಳು ಇದನ್ನು ಅವಲಂಬಿಸಿವೆ.
ಅಮೆರಿಕ ಪ್ರತೀ ವರ್ಷ ಗರಿಷ್ಠ 65,000ದಷ್ಟು ಎಚ್-1ಬಿ ವೀಸಾಗಳನ್ನು ವಿತರಿಸುತ್ತಿತ್ತು. ಈ ಪೈಕಿ ಅಮೆರಿಕದಲ್ಲಿ ಸ್ನಾತಕೋತ್ತರ ಮತ್ತು ಉನ್ನತ ಪದವಿಗಳನ್ನು ಪಡೆಯುವವರಿಗಾಗಿ 20,000 ವೀಸಾಗಳನ್ನು ಮೀಸಲಿರಿಸುತ್ತಿತ್ತು.
2027ರಲ್ಲಿ ವೀಸಾ ಪಡೆಯಲು ಮುಂದಿನ ವರ್ಷದ ಮಾರ್ಚ್‌ನಲ್ಲಿ ನೋಂದಣಿ ಪ್ರಕ್ರಿಯೆಗೆ ಅವಕಾಶ ನೀಡುವ ನಿರೀಕ್ಷೆಯಿದೆ. ಪ್ರತೀ ಅಭ್ಯರ್ಥಿಯ ಪರವಾಗಿ ಕಂಪನಿಗಳು ಸಲ್ಲಿಸುತ್ತಿದ್ದ ವೀಸಾದ ಶುಲ್ಕವು ಹೊಸ ಆದೇಶ ಜಾರಿಯಾಗುವ ಮುನ್ನ ಕೇವಲ 215 ಡಾಲರ್ ಅಂದರೆ 18,939 ರೂಪಾಯಿ ಮಾತ್ರವೇ ಇತ್ತು.