Tahawwur Rana: 26/11ರ ಮುಂಬೈ ದಾಳಿ: ಉಗ್ರ ರಾಣಾ ಗಡೀಪಾರು ಮಾಡಲು ಅಮೆರಿಕ ಒಪ್ಪಿಗೆ
Tahawwur Rana: ಪ್ರಕರಣದಲ್ಲಿ ತನ್ನ ಶಿಕ್ಷೆಯ ವಿರುದ್ಧ ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಯನ್ನು ಅಮೆರಿಕ ನ್ಯಾಯಾಲಯವು ವಜಾಗೊಳಿಸಿತ್ತು. ಭಾರತಕ್ಕೆ ಹಸ್ತಾಂತರಿಸದಿರಲು ರಾಣಾ ಮಾಡಿದ್ದ ಕೊನೇ ಮನವಿಯನ್ನುಅಮೆರಿಕದ ಕೋರ್ಟ್ ತಿರಸ್ಕರಿಸಿದೆ.;
26/11 ಮುಂಬೈ ದಾಳಿಯಲ್ಲಿ ರೂವಾರಿಗಳಿಗೆ ಶಿಕ್ಷೆ ಕೊಡಿಸುವ ವಿಚಾರದಲ್ಲಿ ಭಾರತಕ್ಕೆ ದೊಡ್ಡ ಗೆಲುವು ಸಿಕ್ಕಿದೆ. ಅಮೆರಿಕದಲ್ಲಿ ತಲೆಮರೆಸಿಕೊಂಡಿದ್ದ ದಾಳಿಯ ಸಂಚುಕೋರ ಕೆನಡಾ ಮೂಲದ ತಹವೂರ್ ರಾಣಾನನ್ನು ಭಾರತಕ್ಕೆ ಹಸ್ತಾಂತರಿಸಲು ಅಮೆರಿಕದ ಸುಪ್ರೀಂ ಕೋರ್ಟ್ ಶುಕ್ರವಾರ ಸಮ್ಮತಿಸಿದೆ. ಇದು ʼಭಾರತಕ್ಕೆ ದೊಡ್ಡ ಗೆಲುವು ಎಂದು 26/11 ಪ್ರಕರಣದ ಪ್ರಾಸಿಕ್ಯೂಟರ್ ಮತ್ತು ಹಿರಿಯ ವಕೀಲ ಉಜ್ವಲ್ ನಿಕಮ್ ಬಣ್ಣಿಸಿದ್ದಾರೆ.
"ಇದು ಭಾರತಕ್ಕೆ ದೊಡ್ಡ ಗೆಲುವು. ಅಮೆರಿಕದ ನ್ಯಾಯಾಲಯ ಉಗ್ರ ರಾಣಾನ ವಾದಗಳು ಮತ್ತು ಮನವಿಗಳನ್ನು ಸ್ವೀಕರಿಸಲಿಲ್ಲ. ಟ್ರಂಪ್ ಸರ್ಕಾರ ಅವರನ್ನು ತಕ್ಷಣ ಗಡಿಪಾರು ಮಾಡಲಿದೆ ಎಂಬುದು ನನಗೆ ಸಂತೋಷದ ಸಂಗತಿ" ಎಂದು ನಿಕಮ್ ಸಿಎನ್ಎನ್-ನ್ಯೂಸ್ 18ಗೆ ತಿಳಿಸಿದರು.
2008ರ ಮುಂಬೈ ಭಯೋತ್ಪಾದಕ ದಾಳಿ ಪ್ರಕರಣದಲ್ಲಿ ಬೇಕಾಗಿದ್ದ ಪಾಕಿಸ್ತಾನ ಮೂಲದ ಕೆನಡಾ ಪ್ರಜೆ ರಾಣಾನನ್ನು ಹಸ್ತಾಂತರಿಸಲು ಭಾರತ ಕೋರಿತ್ತು. ಆದರೆ ಈ ಪ್ರಕರಣದಲ್ಲಿ ತನ್ನ ಶಿಕ್ಷೆಯನ್ನು ವಜಾ ಮಾಡುವಂತೆ ರಾಣಾ ಸುಪ್ರೀಂ ಕೋರ್ಟ್‌ಗೆ ಮರುಪರಿಶೀಲನಾ ಅರ್ಜಿ ಸಲ್ಲಿಸಿದ್ದ. ಅಮೆರಿಕ ನ್ಯಾಯಾಲಯವು ಅದನ್ನೀಗ ವಜಾಗೊಳಿಸಿದೆ. ಹೀಗಾಗಿ ರಾಣಾನ ಪಾಲಿಗಿದ್ದ ಕೊನೇ ಅವಕಾಶವೂ ಮುಗಿದಿದೆ.
ಇದಕ್ಕೂ ಮೊದಲು ರಾಣಾ ಸ್ಯಾನ್ ಫ್ರಾನ್ಸಿಸ್ಕೋದ ನಾರ್ತ್ ಸರ್ಕೀಟ್, ಯುಎಸ್ ಕೋರ್ಟ್ ಆಫ್ ಅಪೀಲ್ಸ್ ಸೇರಿದಂತೆ ಹಲವಾರು ನ್ಯಾಯಾಲಯಗಳಲ್ಲಿ ಕಾನೂನು ಹೋರಾಟ ಮಾಡಿ ಸೋತಿದ್ದಾನೆ. ಕೊನೆಗೆ ನವೆಂಬರ್13ರಂದು ಯುಎಸ್ ಸುಪ್ರೀಂ ಕೋರ್ಟ್‌ನಲ್ಲಿ ʼರಿಟ್ ಆಫ್ ಸೆರ್ಟಿಯೋರಾರಿʼ ಅರ್ಜಿ ಸಲ್ಲಿಸಿದ್ದ. ಆದರೆ ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದ ಮರುದಿನ ಜನವರಿ 21ರಂದು ಅರ್ಜಿಯನ್ನು ತಿರಸ್ಕರಿಸಲಾಗಿದೆ.
64 ವರ್ಷದ ರಾಣಾ ಅವರನ್ನು ಪ್ರಸ್ತುತ ಲಾಸ್ ಏಂಜಲೀಸ್‌ನ ಮೆಟ್ರೋಪಾಲಿಟನ್ ಸರೆಯಲ್ಲಿ ಇರಿಸಲಾಗಿದೆ. ಅಲ್ಲಿಂದಲೇ ಆತ ಅಮೆರಿಕ ಸರ್ಕಾರವು ಭಾರತದ ಅರ್ಜಿಯನ್ನು ತಿರಸ್ಕರಿಸಬೇಕು ಎಂದು ವಾದಿಸುತ್ತಿದ್ದ.
ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದ ಅಮೆರಿಕ ಸಾಲಿಸಿಟರ್ ಜನರಲ್
ಅಮೆರಿಕದ ಸಾಲಿಸಿಟರ್ ಜನರಲ್ ಎಲಿಜಬೆತ್ ಬಿ ಪ್ರೆಲೋಗರ್ ಅವರು ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಂಡಿಸಿದ್ದರು. ರಾಣಾನನ್ನು ಹಸ್ತಾಂತರಿಸಲು ಭಾರತ ಕೋರಿದ ಎಲ್ಲಾ ಅಂಶಗಳು ಅಮೆರಿಕದ ತನಿಖಾ ವ್ಯಾಪ್ತಿಯಲ್ಲಿ ಇಲ್ಲ. ಆತನ ಮೇಲೆ ಪೋರ್ಜರಿ ಪ್ರಕರಣಗಳಿವೆ. ವಲಸೆ ಕಾನೂನು ಕೇಂದ್ರದ ಕಚೇರಿ ತೆರೆಯಲು ಅರ್ಜಿ ಸಲ್ಲಿಸುವಾಗ ರಾಣಾ, ಭಾರತೀಯ ರಿಸರ್ವ್ ಬ್ಯಾಂಕ್‌ಗೆ ಸುಳ್ಳು ಮಾಹಿತಿ ಸಲ್ಲಿಸಿದ್ದ ಎಂಬುವ ಅಂಶವನ್ನು ಕೋರ್ಟ್ ಗಮನಕ್ಕೆ ತಂದಿದ್ದರು.
2008ರ ಭೀಕರ ದಾಳಿ
10 ಪಾಕಿಸ್ತಾನಿ ಭಯೋತ್ಪಾದಕರು ಮುಂಬೈನ ಪ್ರಮುಖ ಸ್ಥಳಗಳ ಮೇಲೆ 60 ಗಂಟೆಗಳ ಕಾಲ ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ಅಮೆರಿಕದ ನಾಲ್ವರು ಸೇರಿದಂತೆ 166 ಜನರು ಮೃತಪಟ್ಟಿದ್ದರು. 2008ರ ಮುಂಬೈ ಭಯೋತ್ಪಾದಕ ದಾಳಿಯ ರೂವಾರಿ ಪಾಕಿಸ್ತಾನಿ-ಅಮೆರಿಕನ್ ಡೇವಿಡ್ ಕೋಲ್ಮನ್ ಹೆಡ್ಲಿಯೊಂದಿಗೆ ರಾಣಾ ಸಂಪರ್ಕ ಹೊಂದಿದ್ದಾನೆ.