ಇಸ್ರೇಲ್‌ನಂತೆ ಸೌದಿ ಅರೇಬಿಯಾಕ್ಕೂ ಎಫ್- 35 ಯುದ್ಧ ವಿಮಾನ: ಟ್ರಂಪ್ ಘೋಷಣೆ
ಈ ಮಾರಾಟವು ಅಂತಿಮಗೊಂಡರೆ, ಮಧ್ಯಪ್ರಾಚ್ಯದಲ್ಲಿ ಎಫ್- 35 ಯುದ್ಧ ವಿಮಾನಗಳನ್ನು ಹೊಂದಿರುವ ಏಕೈಕ ದೇಶ ಎಂಬ ಇಸ್ರೇಲ್‌ನ ಸ್ಥಾನಮಾನ ಕೊನೆಗೊಳ್ಳಲಿದ್ದು, ಈ ಪ್ರದೇಶದ ಮಿಲಿಟರಿ ಸಮತೋಲನವನ್ನು ಬದಲಾಯಿಸಲಿದೆ.
ಸೌದಿ ಅರೇಬಿಯಾಕ್ಕೆ ಎಫ್- 35 ಯುದ್ಧ ವಿಮಾನಗಳನ್ನು ಮಾರಾಟ ಮಾಡುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾಹಿತಿ ನೀಡಿದ್ದು, ಇವುಗಳು ಇಸ್ರೇಲ್‌ಗೆ ಪೂರೈಸಿದ ವಿಮಾನಗಳಿಗೆ "ಹೆಚ್ಚು ಕಡಿಮೆ ಹೋಲುತ್ತವೆ" ಎಂದು ಹೇಳಿದ್ದಾರೆ. ಸೌದಿ ಅರೇಬಿಯಾವು 48 ಜೆಟ್‌ಗಳಿಗಾಗಿ ಅಧಿಕೃತವಾಗಿ ಮನವಿ ಮಾಡಿರುವುದಾಗಿ ಅವರು ಹೇಳಿದ್ದಾರೆ.
ಸೌದಿ ಯುವರಾಜ ಮೊಹಮ್ಮದ್ ಬಿನ್ ಸಲ್ಮಾನ್ ಅವರ ಶ್ವೇತಭವನದ ಭೇಟಿಯ ಸಂದರ್ಭದಲ್ಲಿ, ಓವಲ್ ಕಚೇರಿಯಲ್ಲಿ ಟ್ರಂಪ್ ಈ ಹೇಳಿಕೆ ನೀಡಿದ್ದಾರೆ. ಇಸ್ರೇಲ್‌ನ ಮಿಲಿಟರಿ ಪ್ರಾಬಲ್ಯವನ್ನು ಕಾಯ್ದುಕೊಳ್ಳುತ್ತಲೇ, ಸೌದಿಗೆ ಅದೇ ಮಾದರಿಯ ಐದನೇ ತಲೆಮಾರಿನ ವಿಮಾನವನ್ನು ಹೇಗೆ ಒದಗಿಸುತ್ತೀರಿ ಎಂದು ಕೇಳಿದಾಗ, ಎರಡೂ ದೇಶಗಳು ಅಮೆರಿಕದ ಆಪ್ತ ಮಿತ್ರರಾಷ್ಟ್ರಗಳಾಗಿವೆ ಎಂದು ಟ್ರಂಪ್ ಉತ್ತರಿಸಿದರು. "ನನ್ನ ಪ್ರಕಾರ, ಎರಡೂ ದೇಶಗಳು ಅತ್ಯುತ್ತಮ ದರ್ಜೆಯ ವಿಮಾನಗಳನ್ನು ಪಡೆಯುವ ಮಟ್ಟದಲ್ಲಿವೆ. ನಾವು ಒಪ್ಪಂದ ಮಾಡಿಕೊಳ್ಳಲಿದ್ದೇವೆ. ಅವರು ಎಫ್- 35 ಗಳನ್ನು ಖರೀದಿಸಲಿದ್ದಾರೆ" ಎಂದು ಟ್ರಂಪ್ ಹೇಳಿದರು.
ಈ ಮಾರಾಟವು ಅಂತಿಮಗೊಂಡರೆ, ಮಧ್ಯಪ್ರಾಚ್ಯದಲ್ಲಿ ಎಫ್- 35 ಯುದ್ಧ ವಿಮಾನಗಳನ್ನು ಹೊಂದಿರುವ ಏಕೈಕ ದೇಶ ಎಂಬ ಇಸ್ರೇಲ್‌ನ ಸ್ಥಾನಮಾನ ಕೊನೆಗೊಳ್ಳಲಿದ್ದು, ಈ ಪ್ರದೇಶದ ಮಿಲಿಟರಿ ಸಮತೋಲನವನ್ನು ಬದಲಾಯಿಸಲಿದೆ. ಈ ಮಾರಾಟವನ್ನು ಸೌದಿ ಅರೇಬಿಯಾ ಮತ್ತು ಇಸ್ರೇಲ್ ನಡುವಿನ ಸಂಬಂಧವನ್ನು ಸಮಾನಗೊಳಿಸಲು ಬಳಸಲಾಗುತ್ತದೆಯೇ ಎಂಬ ಪ್ರಶ್ನೆಗೆ ಟ್ರಂಪ್ ನೇರ ಉತ್ತರ ನೀಡಲಿಲ್ಲ. ಇಸ್ರೇಲ್‌ಗೆ ಈ ಒಪ್ಪಂದದ ಬಗ್ಗೆ ತಿಳಿದಿದೆ" ಎಂದಷ್ಟೇ ಹೇಳಿದರು.
ಏಳು ವರ್ಷಗಳಿಗಿಂತ ಹೆಚ್ಚು ಅವಧಿಯ ನಂತರ ಶ್ವೇತಭವನಕ್ಕೆ ಭೇಟಿ ನೀಡಿದ ಸೌದಿ ಯುವರಾಜನನ್ನು ಸೌತ್ ಲಾನ್‌ನಲ್ಲಿ ಮಿಲಿಟರಿ ಗೌರವ, ಫಿರಂಗಿ ಸೆಲ್ಯೂಟ್ ಮತ್ತು ಯುದ್ಧ ವಿಮಾನಗಳ ಹಾರಾಟದೊಂದಿಗೆ ಅದ್ಧೂರಿಯಾಗಿ ಸ್ವಾಗತಿಸಲಾಯಿತು.
ಹೂಡಿಕೆ ಬದ್ಧತೆ 1 ಟ್ರಿಲಿಯನ್ ಡಾಲರ್‌ಗೆ ಏರಿಕೆ
ಸಭೆಯ ಸಮಯದಲ್ಲಿ, ಯುವರಾಜ ಮೊಹಮ್ಮದ್ ಬಿನ್ ಸಲ್ಮಾನ್ ಅವರು, ಅಮೆರಿಕದಲ್ಲಿ ಸೌದಿ ಅರೇಬಿಯಾದ ಯೋಜಿತ ಹೂಡಿಕೆ ಬದ್ಧತೆಯನ್ನು 600 ಬಿಲಿಯನ್ ಡಾಲರ್‌ನಿಂದ 1 ಟ್ರಿಲಿಯನ್ ಡಾಲರ್‌ಗೆ ಹೆಚ್ಚಿಸಲಾಗುವುದು ಎಂದು ಟ್ರಂಪ್‌ಗೆ ತಿಳಿಸಿದರು. ಈ ಘೋಷಣೆಯನ್ನು ಸ್ವಾಗತಿಸಿದ ಟ್ರಂಪ್, "ಒಳ್ಳೆಯದು, ನನಗೆ ಇದು ತುಂಬಾ ಇಷ್ಟವಾಯಿತು" ಎಂದು ಪ್ರತಿಕ್ರಿಯಿಸಿದರು. ತೈಲ ಬೆಲೆ ಕಡಿಮೆಯಾಗಿರುವಾಗ ಇಷ್ಟು ದೊಡ್ಡ ಬದ್ಧತೆಗಳನ್ನು ಉಳಿಸಿಕೊಳ್ಳಲು ಸಾಧ್ಯವೇ ಎಂದು ಕೇಳಿದಾಗ, ಸೆಮಿಕಂಡಕ್ಟರ್ ಉತ್ಪಾದನೆಗೆ ಸಂಬಂಧಿಸಿದ ಒಪ್ಪಂದಗಳು ಸೌದಿ ಅರೇಬಿಯಾದ ವಿಶಾಲ ಅಭಿವೃದ್ಧಿ ಯೋಜನೆಗಳಿಗೆ ಅನುಗುಣವಾಗಿವೆ ಎಂದು ಯುವರಾಜರು ಸೂಚಿಸಿದರು.