US Polls : ಅಮೆರಿಕ ಚುನಾವಣೆಯಲ್ಲಿ ʼಗರ್ಭಪಾತವೂʼ ಪ್ರಮುಖ ವಿಷಯ; ಭಾರತೀಯ ಮಹಿಳೆಯರೇ ನಿರ್ಣಾಯಕರು
ಭಾರತೀಯ-ಅಮೆರಿಕನ್ ಮಹಿಳೆಯರು ಸಂತಾನೋತ್ಪತ್ತಿ ಹಕ್ಕುಗಳನ್ನು ಪ್ರತಿಪಾದಿಸುವ ಅಭ್ಯರ್ಥಿಗಳನ್ನು ಬೆಂಬಲಿಸುವತ್ತ ಬಲವಾದ ಒಲವು ತೋರಿಸಿದರೆ, ಕಿರಿಯ ವಯಸ್ಸಿನ ಪುರುಷರು ಟ್ರಂಪ್ ಕಡೆಗೆ ಹೆಚ್ಚಿನ ಬೆಂಬಲ ವ್ಯಕ್ತಪಡಿಸಿದ್ದಾರೆ.;
ಜಿದ್ದಾಜಿದ್ದಿನ ಅಮೆರಿಕ ಚುನಾವಣೆಯುಲ್ಲಿ ವಲಸೆ, ಯುದ್ಧ, ವಿದೇಶಿ ವ್ಯಾಪಾರ ಸೇರಿದಂತೆ ನಾನಾ ವಿಚಾರಗಳು ನಿರ್ಣಾಯಕ ಎನಿಸಿಕೊಳ್ಳುತ್ತಿವೆ. ಈ ನಡುವೆ ಆ ದೇಶದಲ್ಲಿರುವ ʼಗರ್ಭಪಾತದ ಹಕ್ಕಿನ ಕಾನೂನುʼ ಕೂಡ ನಿರ್ಣಾಯಕ ಎಂದು ಎನಿಸಿಕೊಳ್ಳುತ್ತಿರುವ ಅಂಶವೊಂದು ಸಮೀಕ್ಷೆಯಿಂದ ಬಹಿರಂಗಗೊಂಡಿದೆ. ಪ್ರಮುಖವಾಗಿ ಭಾರತೀಯ ಮೂಲದ ಅಮೆರಿಕರನ್ನು ಈ ವಿಚಾರದಲ್ಲಿಹೆಚ್ಚಿನ ಕಾಳಜಿ ಹೊಂದಿದ್ದಾರೆ. ಅದರಲ್ಲೂ ಭಾರತೀಯ ಪುರುಷರು ಹಾಗೂ ಮಹಿಳೆಯರ ಮತಗಳು ಈ ವಿಚಾರದಲ್ಲಿ ಮನೆಯಲ್ಲಿಯೇ ʼವಿಭಜನೆಗೊಂಡಿವೆʼ ಎಂಬುದಾಗಿ ಸಮೀಕ್ಷೆ ಹೇಳಿದೆ.
ಯುನೈಟೆಡ್ ಸ್ಟೇಟ್ಸ್‌ನಲ್ಲಿ ಎರಡನೇ ಅತಿದೊಡ್ಡ ವಲಸಿಗರ ಗುಂಪು ಎನಿಸಿಕೊಂಡಿರುವ ಭಾರತೀಯ ಸಮುದಾಯವು ಸಂತಾನ ಹಕ್ಕುಗಳನ್ನು ಪ್ರತಿಪಾದಿಸುವ ಅಭ್ಯರ್ಥಿಗಳನ್ನು ಬೆಂಬಲಿಸುವ ವಿಚಾರದಲ್ಲಿ ಇಬ್ಭಾಗವಾಗಿದ್ದಾರೆ. ಯಾಕೆಂದರೆ ಗರ್ಭಪಾತದ ವಿಷಯ ಮಹಿಳೆಯ ಹಕ್ಕು ಎಂದು ಪ್ರತಿಪಾದಿಸುವ ಡೆಮಾಕ್ರಟಿಕ್ ಪಕ್ಷ ಹಾಗೂ ಗರ್ಭಪಾತ ಸಾಂವಿಧಾನಿಕ ಹಕ್ಕು ಅಲ್ಲ ಎಂಬ ವಿಚಾರದ ಬಗ್ಗೆ ಸಮ್ಮತಿ ಹೊಂದಿರುವ ರಿಪಬ್ಲಿಕ್ ಪಕ್ಷದ ನಡುವೆ ಮತಗಳು ವಿಭಜನೆಗೊಳ್ಳುತ್ತಿವೆ ಎನ್ನಲಾಗಿದೆ.
ಭಾರತೀಯ ಮಹಿಳೆಯರು ಗರ್ಭಪಾತದ ಆಯ್ಕೆಯನ್ನು ಮಹಿಳೆಯರಿಗೆ ನೀಡುವ ಇಚ್ಛೆ ವ್ಯಕ್ತಪಡಿಸಿರುವ ಕಮಲಾ ಹ್ಯಾರಿಸ್‌ಗೆ ಮತ ಹಾಕಲು ಮುಂದಾಗಿದ್ದರೆ, ಪುರುಷರ ಒಲವು ಸ್ವಲ್ಪ ಮಟ್ಟಿಗೆ ಟ್ರಂಪ್ ಕಡೆಗೆ ಇದೆ ಎನ್ನಲಾಗಿದೆ. ಸೆಪ್ಟೆಂಬರ್ 18 ಮತ್ತು ಅಕ್ಟೋಬರ್ 15ರ ನಡುವೆ ʼಇಂಡಿಯನ್ ಅಮೆರಿಕನ್ ಅಟಿಟ್ಯೂಡ್ ಸರ್ವೇʼ (ಐಎಎಎಸ್) ನಡೆಸಿದ ಆನ್‌ಲೈನ್ ಸಮೀಕ್ಷೆ ಪ್ರಕಾರ ಭಾರತೀಯ ಸಮುದಾಯದಲ್ಲಿಯೇ ಪುರುಷರು ಹಾಗೂ ಮಹಿಳೆಯರು ಈ ಒಂದು ವಿಚಾರದಲ್ಲಿ ವಿಭಿನ್ನ ಆಸಕ್ತಿ ಪ್ರದರ್ಶಿಸಿದ್ದಾರೆ.
ಗರ್ಭಪಾತದ ನಿಯಮ
ಅಮೆರಿಕದಲ್ಲಿ 2022ರಲ್ಲಿ ಗರ್ಭಪಾತದ ಬಗ್ಗೆ ಅಲ್ಲಿನ ಸರ್ವೋಚ್ಛ ಕೋರ್ಟ್ ಆದೇಶವೊಂದನ್ನು ಹೊರಡಿಸಿತ್ತು. ಅದರ ಪ್ರಕಾರ ಮಹಿಳೆಯರಿಗೆ ಗರ್ಭಪಾತದ ಹಕ್ಕನ್ನು ನಿರಾಕರಿಸಲಾಗಿದೆ. ಆದರೆ, ಡೆಮಾಕ್ರಟಿಕ್ ಪಕ್ಷ ಆಡಳಿತವಿರುವ ಕೆಲವು ಪ್ರಾಂತ್ಯಗಳಲ್ಲಿ ಈ ನಿಯಮವನ್ನು ಹಾಗೆಯೇ ಇಡಲಾಗಿದೆ. ಆ ಪಕ್ಷದ ನಾಯಕರು ಮಹಿಳೆಯರ ಹಕ್ಕುಗಳನ್ನು ಪ್ರತಿಪಾದಿಸುತ್ತಿದ್ದಾರೆ. ಹೀಗಾಗಿ ಮಹಿಳೆಯರು ಡೆಮಾಕ್ರಟಿಕ್ ಅಭ್ಯರ್ಥಿಯಾಗಿರುವ ಹ್ಯಾರಿಸ್ ಕಡೆಗೆ ಒಲವು ತೋರುತ್ತಿದ್ದಾರೆ ಎಂಬುದು ಸಮೀಕ್ಷೆಯ ಸಾರ.
ಮತದಾನದ ಆದ್ಯತೆಗಳಲ್ಲಿ ಲಿಂಗ ಭೇದ
ಸಮೀಕ್ಷೆಯ ಪ್ರಕಾರ, ಅಮೆರಿಕದಲ್ಲಿರುವ ಶೇಕಡಾ 67 ರಷ್ಟು ಭಾರತೀಯ ಮಹಿಳೆಯರು ಕಮಲಾ ಹ್ಯಾರಿಸ್‌ಗೆ ಮತ ಚಲಾಯಿಸಲು ಬಯಸಿದ್ದಾರೆ. ಶೇಕಡಾ 53ರಷ್ಟು ಪುರುಷರು ಮಾತ್ರ ಹ್ಯಾರಿಸ್‌ಗೆ ಮತ ಚಲಾಯಿಸಲು ಮುಂದಾಗಿದ್ದಾರೆ.
ವಯಸ್ಸಿನಿಂದ ಅಂತರದಿಂದ ನೋಡಿದಾಗಲೂ ಮತ ವಿಭಜನೆ ಸ್ಪಷ್ಟವಾಗಿದೆ. ೪೦ ವರ್ಷಕ್ಕಿಂತ ಮೇಲ್ಪಟ್ಟವರಲ್ಲಿ, ಶೇಕಡಾ 70ಕ್ಕಿಂತ ಹೆಚ್ಚು ಮಹಿಳೆಯರು ಮತ್ತು ಶೇಕಡಾ 60ರಷ್ಟು ಪುರುಷರು ಕಮಲಾ ಹ್ಯಾರಿಸ್‌ಗೆ ಮತ ಚಲಾಯಿಸಲು ಮುಂದಾಗಿದ್ದಾರೆ.
ನ್ಯೂಜೆರ್ಸಿ ಪ್ರದೇಶದಲ್ಲಿ ವಾಸಿಸುವ ಭಾರತೀಯ ಅಮೆರಿಕನ್ ಸಾಕ್ಷ್ಯಚಿತ್ರ ನಿರ್ಮಾಪಕಿ ಮೀತಾ ದಮಾನಿ ಈ ಬಗ್ಗೆ ಸ್ಪಷ್ಟ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದು ಭಾರತೀಯ ಅಮೆರಿಕನ್ ಸಮುದಾಯದ ಪುರುಷರು ಮತ್ತು ಮಹಿಳೆಯರು ಇಬ್ಬರಿಗೂ ನಿರ್ಣಾಯಕ ವಿಷಯ. ಮಗು ಆರೋಗ್ಯಕರವಾಗಿ ಜನಿಸಿದರೆ ಮಾತ್ರ ಎಲ್ಲವೂ ಉತ್ತಮವಾಗಿರುತ್ತದೆ. ಇಲ್ಲದಿದ್ದರೆ ಒಳಿತಾಗುವುದಿಲ್ಲ. ಹೀಗಾಗಿ ಗರ್ಭಪಾತ ಮಾಡಬೇಕೊ ಮಾಡಬೇಡವೋ ಎಂಬುದು ಮಹಿಳೆಯರ ನಿರ್ಣಯವಾಗಿರುತ್ತದೆ. ಇದು ಸ್ವಾತಂತ್ರ್ಯ ಮತ್ತು ಆಯ್ಕೆಯ ವಿಷಯ" ಎಂದು ಅವರು ಹೇಳಿದ್ದಾರೆ.
ಮಾರ್ಕೆಟಿಂಗ್ ವೃತ್ತಿಪರರಾಗಿರುವ ಪ್ರಿಯಾ, ನ್ಯೂಜೆರ್ಸಿ ಪ್ರದೇಶದಲ್ಲಿನ ಭಾರತೀಯ ಅಮೆರಿಕನ್ ವಲಸೆಗಾರರ ಧ್ವನಿಯಾಗಿದ್ದಾರೆ. ಇದು ಸಮಸ್ಯೆ ಅಥವಾ ಚುನಾವಣೆ ವಿಷಯ ಆಗಬಾರದಿತ್ತು ಎಂದು ಅವರು ಹೇಳಿದ್ದಾರೆ.
ಗರ್ಭಪಾತದ ಹಕ್ಕುಗಳು ವಿಚಾರ ಮಹಿಳೆಯರಿಗೆ ಸಮಸ್ಯೆಯಾಗುತ್ತವೆ ಎಂದು ಯಾರೂ ಅಂದುಕೊಂಡಿರಲಿಲ್ಲ. ನನ್ನ ದೇಹವಾಗಿದ್ದರೆ ಅದು ನನ್ನ ಆಯ್ಕೆಯಾಗಿರಬೇಕು. ಮಹಿಳಾ ಮತದಾರರಾಗಿ ನಮ್ಮ ಹಕ್ಕುಗಳನ್ನು ಉಳಿಸಿಕೊಳ್ಳಲು ಬಯಸುವ ಪಕ್ಷವನ್ನು ಬೆಂಬಲಿಸಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ.
ಗರ್ಭಪಾತ ಸಾಂವಿಧಾನಿಕ ಹಕ್ಕು ಅಲ್ಲ
2022 ರಲ್ಲಿ ಅಲ್ಲಿನ ಸುಪ್ರೀಂ ಕೋರ್ಟ್ 1973ರ ರೋ ವರ್ಸಸ್ ವೇಡ್ ನಿರ್ಧಾರವನ್ನು ರದ್ದುಗೊಳಿಸಿತ್ತು . ಈ ತೀರ್ಪು ಗರ್ಭಪಾತದ ಸಾಂವಿಧಾನಿಕ ಹಕ್ಕನ್ನು ಅಂತ್ಯಗೊಳಿಸಿತ್ತು, ಗರ್ಭಪಾತವನ್ನು ನಿಷೇಧಿಸಲು ಅಥವಾ ನಿರ್ಬಂಧಿಸಲು ರಾಜ್ಯಗಳಿಗೆ ಅವಕಾಶ ನೀಡಿತ್ತು, ಅಲ್ಲಿಂದ ಬಳಿಕ ವಿವಿಧ ರಾಜ್ಯಗಳಲ್ಲಿ ನಿರ್ಬಂಧಿತ ಗರ್ಭಪಾತ ಕಾನೂನುಗಳು ಇವೆ.
ಸಂತಾನೋತ್ಪತ್ತಿ ಹಕ್ಕುಗಳ ಮೇಲಿನ ಮಿತಿಯು ಅಮೆರಿಕದ ಮಹಿಳೆಯರಲ್ಲಿ ಪ್ರಮುಖ ವಿಷಯವಾಗಿದೆ. ಬಹುಪಾಲು ಸಾರ್ವಜನಿಕರು ಈ ನಿರ್ಧಾರವನ್ನು ಒಪ್ಪಿಲ್ಲ. ಅನೇಕ ಡೆಮಾಕ್ರಟಿಕ್ ನೇತೃತ್ವದ ರಾಜ್ಯಗಳು ಗರ್ಭಪಾತದ ಹಕ್ಕುಗಳನ್ನು ರಕ್ಷಿಸಲು ಕ್ರಮ ಕೈಗೊಂಡಿವೆ.
ಅಮೆರಿಕದಿಂದ ಕಾರ್ಪೊರೇಟ್ ವ್ಯವಸ್ಥೆಯಿಂದ ಮಹಿಳೆಯರಿಗೆ ಬೆಂಬಲ
ಭಾರತೀಯ ಅಮೆರಿಕನ್ ಸಮುದಾಯದೊಂದಿಗೆ ಕೆಲಸ ಮಾಡುತ್ತಿರುವ ವಲಸೆ ವಕೀಲೆ ಸೋನಾಲ್ ಶರ್ಮಾ ಅವರ ಪ್ರಕಾರ ಗರ್ಭಪಾತ ಚುನಾವಣೆಯ ಏಕೈಕ ವಿಷಯವಲ್ಲ. "ಇದು ಸಂಕೀರ್ಣ ವಿಷಯ. ಗರ್ಭಪಾತವು ತುಂಬಾ ಸೂಕ್ಷ್ಮವಾಗಿದ್ದರೂ, ಸಮೀಕ್ಷೆಗಳು 50-50 ರಷ್ಟು ಫಲಿತಾಂಶ ಕೊಟ್ಟಿವೆ. ಆದಾಗ್ಯೂ ಹೆಚ್ಚು ಕಟ್ಟುನಿಟ್ಟಾದ ಗರ್ಭಪಾತ ಕಾನೂನುಗಳನ್ನು ತರಲು ಪ್ರಯತ್ನಿಸಿದ ರಾಜ್ಯಗಳಲ್ಲಿ ಆ ಪಕ್ಷಗಳನ್ನು ತಿರಸ್ಕರಿಸಲಾಗಿದೆ ಎಂದು ಹೇಳಿದ್ದಾರೆ.
ಯುವಕರಿಗೆ ಟ್ರಂಪ್ ಯಾಕೆ ಬೇಕು?
ಭಾರತ ಮೂಲದ ಪುರುಷರಿಗೆ ಟ್ರಂಪ್ ಹೆಚ್ಚು ಇಷ್ಟ. ಕಮಲಾ ಹ್ಯಾರಿಸ್ ಬಗ್ಗೆ ಹೆಚ್ಚು ಅನುಮಾನ ಹೊಂದಿದ್ದಾರೆ ಎಂದು ಕಾರ್ನೆಗೀ ಎಂಡೋಮೆಂಟ್ ಫಾರ್ ಇಂಟರ್‌ನ್ಯಾಷನಲ್ ಪೀಸ್ ವರದಿ ಮಾಡಿದೆ. ಕಮಲಾ ಅವರ ಭಾರತೀಯ ಬೇರುಗಳ ಬಗ್ಗೆ ಹೆಮ್ಮೆ ಇದೆ. ಆದರೆ ಭಾರತ-ಯುಎಸ್ ಸಂಬಂಧಗಳ ಬಗ್ಗೆ ಬದ್ಧತೆಯ ಕೊರತೆಯು ಅವರಿಗೆ ಇಷ್ಟವಿಲ್ಲ. ಹೀಗಾಗಿ ಅವರು ಟ್ರಂಪ್ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ್ದಾರೆ. ಟ್ರಂಪ್ ಮತ್ತು ಮೋದಿಯ ಒಡನಾಟವೇ ಅದಕ್ಕೆ ಕಾರಣ.
ಅಭಿಯಾನದ ಕೇಂದ್ರ ಬಿಂದು
ಭಾರತೀಯ ಅಮೆರಿಕನ್ ಮಹಿಳೆಯರಿಗೆ ಗರ್ಭಪಾತದ ಹಕ್ಕುಗಳ ಪ್ರಾಮುಖ್ಯ ಎಂಬುದನ್ನು ರಾಜಕೀಯ ವಿಶ್ಲೇಷಕರು ಗಮನಿಸಿದ್ದಾರೆ. ಹ್ಯಾರಿಸ್ ಗರ್ಭಪಾತದ ಹಕ್ಕುಗಳನ್ನು ತಮ್ಮ ಪ್ರಚಾರ ಕಾರ್ಯತಂತ್ರದ ಭಾಗವನ್ನಾಗಿಸಿಕೊಂಡಿದ್ದಾರೆ. ಸಂತಾನೋತ್ಪತ್ತಿ ಹಕ್ಕುಗಳ ಪ್ರತಿಪಾದಕರ ಗುಂಪುಗಳು ಭಾರತೀಯ ಅಮೆರಿಕನ್ ಮತದಾರರನ್ನು ಸೆಳೆಯುತ್ತಿವೆ.
ಅಮೆರಿಕದಲ್ಲಿ ಇಂದು 5.2 ದಶಲಕ್ಷಕ್ಕೂ ಹೆಚ್ಚು ಭಾರತೀಯ ಮೂಲದ ಜನರಿದ್ದಾರೆ. ಇದು ಯುನೈಟೆಡ್ ಸ್ಟೇಟ್ಸ್‌ನಲ್ಲಿ ಎರಡನೇ ಅತಿದೊಡ್ಡ ವಲಸಿಗ ಗುಂಪು. ಪ್ರಮುಖ ರಾಜಕೀಯ ಪರಿವರ್ತಕ ಸಮುದಾಯವಾಗಿ ಹೊರಹೊಮ್ಮಿದೆ. ಹೀಗಾಗಿ ಗರ್ಭಪಾತದ ಹಕ್ಕಿನ ವಿಚಾರದಲ್ಲಿ ಭಾರತೀಯ ಮಹಿಳೆಯರು ಹೆಚ್ಚಿನ ಒಲವು ಹೊಂದಿದ್ದಾರೆ.