ಎಚ್-1ಬಿ ವೀಸಾ ಶುಲ್ಕದಿಂದ ವೈದ್ಯರಿಗೆ ವಿನಾಯಿತಿ ನೀಡಲಿದೆ ಅಮೆರಿಕ: ವರದಿ
ವೈದ್ಯ ಸಮುದಾಯಕ್ಕೆ ಮಾತ್ರ ಎಚ್-1ಬಿ ವೀಸಾ ಪಡೆಯಲು ವಿಧಿಸಲಾಗಿರುವ $100,000(88 ಲಕ್ಷ ರೂ.) ಶುಲ್ಕದಲ್ಲಿ ಅಮೆರಿಕ ಸರ್ಕಾರ ವಿನಾಯಿತಿ ನೀಡಲಿದೆ.
ವೈದ್ಯರು
ಅಮೆರಿಕದಲ್ಲಿ ಕೆಲಸ ಮಾಡಲು ಉತ್ಸುಕರಾಗಿರುವ ವಿದೇಶಿ ವೃತ್ತಿಪರರ ಪೈಕಿ ವೈದ್ಯ ಸಮುದಾಯಕ್ಕೆ ಮಾತ್ರ ಎಚ್-1ಬಿ ವೀಸಾ ಪಡೆಯಲು ವಿಧಿಸಲಾಗಿರುವ $100,000(88 ಲಕ್ಷ ರೂ.) ಶುಲ್ಕದಲ್ಲಿ ಸರ್ಕಾರ ವಿನಾಯಿತಿ ನೀಡಲಿದೆ ಎಂದು ಶ್ವೇತಭವನವು ಸುಳಿವು ನೀಡಿದೆ.
ಬ್ಲೂಮ್‌ಬರ್ಗ್ ನ್ಯೂಸ್‌ಗೆ ಸಂದರ್ಶನ ನೀಡಿರುವ ಶ್ವೇತಭವನದ ವಕ್ತಾರ ಟೇಲರ್ ರೋಜರ್ಸ್, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹಿ ಮಾಡಿದ ಘೋಷಣೆಯಲ್ಲಿ ಸಂಭಾವ್ಯ ವೈದ್ಯರಿಗೆ ವಿನಾಯಿತಿ ನೀಡಲಾಗಿದೆ. ಅಂತಿಮವಾಗಿ, ಟ್ರಂಪ್ ಆಡಳಿತವು ಘೋಷಣೆಯಲ್ಲಿರುವ ಭಾಷೆಯನ್ನೇ ಪಾಲಿಸುತ್ತದೆ ಎಂದಿದ್ದಾರೆ.
ಕಳೆದ ವಾರ ಘೋಷಿಸಲಾದ ಆದೇಶದಲ್ಲಿ, ರಾಷ್ಟ್ರೀಯ ಹಿತಾಸಕ್ತಿ ದೃಷ್ಟಿಯಿಂದ ವೈಯಕ್ತಿಕತೆ ಆಧಾರದ ಮೇಲೆ ಕೆಲವು ಕಾರ್ಮಿಕರನ್ನು ನೇಮಿಸಿಕೊಳ್ಳುವುದು ಅಥವಾ ನಿರ್ದಿಷ್ಟ ಕಂಪನಿ/ಉದ್ಯಮಕ್ಕೆ ಆ ಕೆಲಸ ಅಗತ್ಯವೆಂದು ಅಮೆರಿಕದ ಗೃಹ ಭದ್ರತಾ ಕಾರ್ಯದರ್ಶಿಗಳು ನಿರ್ಧರಿಸಿದಲ್ಲಿ ಎಚ್-1ಬಿ ವೀಸಾ ಮೇಲೆ ಹೊಸದಾಗಿ ಹೇರಲಾದ ಶುಲ್ಕವನ್ನು ಮನ್ನಾ ಮಾಡಬಹುದು ಎಂಬುದನ್ನು ಉಲ್ಲೇಖಿಸಲಾಗಿದೆ.
ಅಮೆರಿಕಕ್ಕೆ ಪ್ರವೇಶಿಸುವ ವೈದ್ಯಕೀಯ ವಿದ್ಯಾರ್ಥಿಗಳು ಅಥವಾ ವೃತ್ತಿಪರರು $215( 19079 ರೂಪಾಯಿ) ವೀಸಾ ಶುಲ್ಕ ಹಾಗೂ ಇತರ ಕೆಲವು ಸಂಸ್ಕರಣಾ ಶುಲ್ಕಗಳನ್ನು ಪಾವತಿಸಬೇಕಾಗಿತ್ತು.
ವೈದ್ಯಕೀಯ ವಿಭಾಗದವರ ಮೇಲೆ ವಿಶೇಷ ಒಲವು
ಸರ್ಕಾರ ತೆಗೆದುಕೊಂಡಿರುವ ನಿರ್ಧಾರದಿಂದ ಅಮೆರಿಕದ ಗ್ರಾಮೀಣ ಪ್ರದೇಶಗಳಲ್ಲಿ ವೈದ್ಯರ ಕೊರತೆ ಉಂಟಾಗಲಿದೆ. ಈಗಾಗಲೇ, ದೂರದ ಪ್ರದೇಶಗಳಲ್ಲಿ ಸಾಕಷ್ಟು ವೈದ್ಯರ ಕೊರತೆ ಇದೆ. ತರಬೇತಿ ಪಡೆದ ಅಮೆರಿಕ ವೈದ್ಯರನ್ನು ಆಕರ್ಷಿಸಲು ಸಾಧ್ಯವೇ ಆಗುತ್ತಿಲ್ಲ. ಹಾಗಾಗಿ ಆಸ್ಪತ್ರೆಗಳು ವಿದೇಶಿ ವೈದ್ಯರನ್ನು ಈ ಪ್ರದೇಶಗಳಲ್ಲಿ ಕೆಲಸ ಮಾಡುವಂತೆ ನೇಮಿಸಿಕೊಳ್ಳಲು ಎಚ್-1ಬಿ ವೀಸಾದ ನೂತನ ಕಾರ್ಯಕ್ರಮ ಅಡ್ಡಿಪಡಿಸುತ್ತದೆ ಎಂದು ಅಮೆರಿಕದ ಕೆಲವು ಬಹುದೊಡ್ಡ ವೈದ್ಯಕೀಯ ಸಂಸ್ಥೆಗಳು ಕಳವಳ ವ್ಯಕ್ತಪಡಿಸಿದ್ದವು. ಆ ನಂತರ ಶ್ವೇತಭವನದಿಂದ ಈ ಸ್ಪಷ್ಟೀಕರಣ ಬಂದಿದೆ.
ಈ ಕುರಿತು ಅಮೆರಿಕನ್ ಮೆಡಿಕಲ್ ಅಸೋಸಿಯೇಷನ್ (AMA) ಅಧ್ಯಕ್ಷ, ಮಿಚಿಗನ್ ಮೂಲದ ತಲೆ ಮತ್ತು ಕುತ್ತಿಗೆ ಶಸ್ತ್ರಚಿಕಿತ್ಸಕ ಬಾಬಿ ಮುಕ್ಕಮಲಾ ಮಾತನಾಡಿದ್ದು, ಗ್ರಾಮೀಣ ಮತ್ತು ಸೌಲಭ್ಯ ವಂಚಿತ ಪ್ರದೇಶಗಳಲ್ಲಿರುವ ರೋಗಿಗಳು ತರಬೇತಿ ಪಡೆದ ವೈದ್ಯರನ್ನೇ ಹೆಚ್ಚಾಗಿ ಅವಲಂಬಿಸಿರುತ್ತಾರೆ. ಅಂತಾರಾಷ್ಟ್ರೀಯ ಮಟ್ಟದ ಪದವೀಧರರು ನಮ್ಮ ವೈದ್ಯ ಕಾರ್ಯಪಡೆಯ ನಿರ್ಣಾಯಕ ಭಾಗವಾಗಿದ್ದು, ಸರ್ಕಾರದ ಹೊಸ ನಿರ್ಧಾರದಿಂದ ಈ ಪೈಪ್‌ಲೈನ್ ಸ್ಥಗಿತಗೊಳ್ಳಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ವೈದ್ಯರಿಗೆ ವಿನಾಯಿತಿ ಅಗತ್ಯ
ಆರೋಗ್ಯದ ಬಗ್ಗೆ ಸಂಶೋಧನೆ ನಡೆಸುವ ಸಂಸ್ಥೆ ಕೆಎಫ್‌ಎಫ್ ಸಂಗ್ರಹಿಸಿದ ದತ್ತಾಂಶದ ಪ್ರಕಾರ, ಪ್ರಾಥಮಿಕ ಆರೋಗ್ಯಾಧಿಕಾರಿಗಳ ಕೊರತೆ ಇರುವ ಗ್ರಾಮೀಣ ಪ್ರದೇಶಗಳಲ್ಲಿ 76 ಮಿಲಿಯನ್‌ಗೂ ಹೆಚ್ಚು ಅಮೆರಿಕನ್ನರು ವಾಸಿಸುತ್ತಿದ್ದಾರೆ. ಅಲ್ಲದೆ, ಕ್ಲೀವ್‌ಲ್ಯಾಂಡ್ ಕ್ಲಿನಿಕ್, ಸೇಂಟ್ ಜೂಡ್ ಚಿಲ್ಡ್ರನ್ಸ್ ರಿಸರ್ಚ್ ಹಾಸ್ಪಿಟಲ್ ಮತ್ತು ಮೇಯೊ ಕ್ಲಿನಿಕ್‌ನಂತಹ ಪ್ರಮುಖ ವೈದ್ಯಕೀಯ ಸಂಸ್ಥೆಗಳು ಎಚ್-1ಬಿ ವೀಸಾಗಳ ಪ್ರಮುಖ ಪ್ರಾಯೋಜಕ ಸಂಸ್ಥೆಗಳಾಗಿವೆ. ಹಾಗಾಗಿ ಈ ವೈದ್ಯಕೀಯ ಸಂಸ್ಥೆಗಳಿಗೆ ಹೊಸ ಎಚ್-1ಬಿ ವೀಸಾ ಶುಲ್ಕವು ಹೆಚ್ಚುವರಿ ಹೊರೆಯಾಗಿ ಪರಿಣಮಿಸಿದೆ.
ಕಳೆದ ಸೆ.19ರಂದು ಹೊಸ ವೀಸಾ ನೀತಿ ಘೋಷಣೆ ಆದಾಗಿನಿಂದ ಎಚ್-1ಬಿ ವೀಸಾ ಪಡೆಯುವವರಲ್ಲಿ ಭೀತಿಯ ಅಲೆ ಸೃಷ್ಟಿಯಾಗಿತ್ತು. ಈ ನಡುವೆ ಸ್ಪಷ್ಟನೆ ನೀಡಿರುವ ಟ್ರಂಪ್ ಸರ್ಕಾರ, ಹೊಸ ಶುಲ್ಕ ನೀತಿಯು ಸೆ.21ರಿಂದ ಅಸ್ತಿತ್ವಕ್ಕೆ ಬಂದಿದ್ದು, ಈ ಹೊಸ ನಿಯಮ ಈಗಾಗಲೇ ವೀಸಾ ಹೊಂದಿರುವವರಿಗೆ ಅನ್ವಯಿಸುವುದಿಲ್ಲ. ಬದಲಾಗಿ ಹೊಸದಾಗಿ ಅರ್ಜಿ ಸಲ್ಲಿಸುವವರಿಗೆ ಮಾತ್ರವೇ ಅನ್ವಯಿಸುತ್ತದೆ. ಇದು ವಾರ್ಷಿಕ ಶುಲ್ಕವಲ್ಲ, ಒಂದು ಬಾರಿಯ ಶುಲ್ಕ ಮಾತ್ರ ಆಗಿರಲಿದೆ ಎಂದು ಸ್ಪಷ್ಟಪಡಿಸಿದೆ.