Ukraine peace dialogue| ದೋವಲ್- ಸೆರ್ಗೆಯ್ ಶೋಯಿಗು‌ ಮಾತುಕತೆ

ನವದೆಹಲಿ ಎರಡೂ ರಾಷ್ಟ್ರಗಳೊಂದಿಗೆ ಉತ್ತಮ ಸಂಬಂಧ ಹೊಂದಿರುವುದರಿಂದ, ಶಾಂತಿ ಮಾತುಕತೆಗೆ ಮುಂದಾಗಬೇಕು ಎಂಬ ಒತ್ತಾಯ ಬಂದಿದೆ. ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರು ಝೆಲೆನ್ಸ್ಕಿ ಅವರೊಂದಿಗೆ ಮಾತುಕತೆ ನಡೆಸಿದ ನಂತರ, ಈ ಸಂಘರ್ಷಕ್ಕೆ ಪರಿಹಾರ ಕಂಡುಕೊಳ್ಳಲು ಭಾರತ ಮತ್ತು ಚೀನಾ ನೆರವಾಗಬೇಕು ಎಂದು ಹೇಳಿದರು.

Update: 2024-09-12 09:42 GMT

ಬ್ರಿಕ್ಸ್ (ಬ್ರೆಜಿಲ್-ರಷ್ಯಾ-ಭಾರತ-ಚೀನಾ-ದಕ್ಷಿಣ ಆಫ್ರಿಕಾ) ರಾಷ್ಟ್ರಗಳ ಭದ್ರತಾ ಸಲಹೆಗಾರರ ಸಮಾವೇಶದಲ್ಲಿ ಪಾಲ್ಗೊಳ್ಳಲು ರಷ್ಯಾಕ್ಕೆ ಆಗಮಿಸಿರುವ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ಸೇಂಟ್ ಪೀಟರ್ಸ್‌ಬರ್ಗ್‌ನಲ್ಲಿ ರಷ್ಯಾದ ಎನ್‌ಎಸ್‌ಎ ಸೆರ್ಗೆಯ್ ಶೋಯಿಗು ಅವರೊಂದಿಗೆ ಬುಧವಾರ (ಸೆಪ್ಟೆಂಬರ್ 11) ಮಾತುಕತೆ ನಡೆಸಿದರು.

ಉಕ್ರೇನ್‌ನೊಂದಿಗಿನ ಎರಡೂವರೆ ವರ್ಷಗಳ ಯುದ್ಧವನ್ನು ಕೊನೆಗೊಳಿಸಲು ಪ್ರಧಾನಿ ನರೇಂದ್ರ ಮೋದಿ ಅವರ ಶಾಂತಿ ಪ್ರಸ್ತಾವವನ್ನು ದೋವಲ್, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಹಂಚಿಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ. 

ದೋವಲ್ ಮತ್ತು ಶೋಯಿಗು ಪರಸ್ಪರ ಹಿತಾಸಕ್ತಿಗೆ ಸಂಬಂಧಿಸಿದ ಪ್ರಮುಖ ವಿಷಯ ಕುರಿತು ಚರ್ಚಿಸಿದರು. ಆಗಸ್ಟ್ 23 ರಂದು ಕೈವ್‌ನಲ್ಲಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್‌ಕಿ ಅವರೊಂದಿಗೆ ಮೋದಿ ಅವರು ನಡೆಸಿದ ಮಾತುಕತೆ ಚರ್ಚೆಯಲ್ಲಿ ಉಲ್ಲೇಖವಾಗಿದೆ ಎಂದು ತಿಳಿದುಬಂದಿದೆ.

ರಷ್ಯಾ, ಉಕ್ರೇನ್ ಜೊತೆ ಮೋದಿ ನಂಟು: ದೋವಲ್ ಮತ್ತು ಶೋಯಿಗು ʻದ್ವಿಪಕ್ಷೀಯ ಸಹಕಾರ ಮತ್ತು ಪರಸ್ಪರ ಹಿತಾಸಕ್ತಿಯ ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಿದರು,ʼ ಎಂದು ರಷ್ಯಾದ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ. ಮೋದಿ ಅವರ ಉಕ್ರೇನ್ ರಾಜಧಾನಿ ಕೈವ್‌ ಪ್ರವಾಸದ ಎರಡೂವರೆ ವಾರಗಳ ನಂತರ ದೋವಲ್ ಅವರ ರಷ್ಯಾ ಭೇಟಿ ನಡೆದಿದೆ.

ಯುದ್ಧ ಕೊನೆಗೊಳಿಸಲು ಉಕ್ರೇನ್ ಮತ್ತು ರಷ್ಯಾ ಸಮಯ ವ್ಯರ್ಥ ಮಾಡದೆ ಮಾತುಕತಡ ನಡೆಸಬೇಕು. ಈ ಪ್ರದೇಶದಲ್ಲಿ ಶಾಂತಿಯನ್ನು ಪುನಃಸ್ಥಾಪಿಸಲು ಭಾರತ ಸಕ್ರಿಯ ಪಾತ್ರ ವಹಿಸಲು ಸಿದ್ಧವಾಗಿದೆ ಎಂದು ಮೋದಿ ಉಕ್ರೇನ್‌ ಭೇಟಿ ವೇಳೆ ಝಲೆನ್‌ಸ್ಕಿ ಅವರಿಗೆ ಹೇಳಿದ್ದರು. ಮಾಸ್ಕೋದಲ್ಲಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಮಾತುಕತೆ ನಡೆಸಿದ ಆರು ವಾರಗಳ ನಂತರ ಉಕ್ರೇನ್‌ಗೆ ಮೋದಿ ಭೇಟಿ ನೀಡಿದ್ದರು.

ಮಾತುಕತೆ ನಡೆಯಲಿದೆ: ಬರ್ಲಿನ್‌ನಲ್ಲಿ ಜರ್ಮನ್ ವಿದೇಶಾಂಗ ಕಚೇರಿಯ ವಾರ್ಷಿಕ ರಾಯಭಾರಿಗಳ ಸಮ್ಮೇಳನದಲ್ಲಿ ಮಾತನಾಡಿದ ವಿದೇಶಾಂಗ ಸಚಿವ ಎಸ್ ಜೈಶಂಕರ್, ರಷ್ಯಾ ಮತ್ತು ಉಕ್ರೇನ್ ಮಾತುಕತೆ ಮೂಲಕ ತಮ್ಮ ಸಂಘರ್ಷವನ್ನು ಪರಿಹರಿಸಿಕೊಳ್ಳಬೇಕು ಎಂದು ಬುಧವಾರ ಹೇಳಿದ್ದರು. 

ʻಈ ಸಂಘರ್ಷ ಯುದ್ಧಭೂಮಿಯಲ್ಲಿ ಪರಿಹಾರವಾಗುವುದಿಲ್ಲ. ಒಂದು ಹಂತದಲ್ಲಿ, ಸಂಧಾನ ನಡೆಯಲೇಬೇಕು.ಆಗ, ರಷ್ಯಾ ಮತ್ತು ಉಕ್ರೇನ್ ಇರಬೇಕು,ʼ ಎಂದು ಹೇಳಿದ್ದರು. ಸೌದಿ ಅರೇಬಿಯಾದ ರಿಯಾದ್‌ನಲ್ಲಿ ಭಾರತ-ಗಲ್ಫ್ ಸಹಕಾರ ಮಂಡಳಿ (ಜಿಸಿಸಿ)ಯ ವಿದೇಶಾಂಗ ಸಚಿವರ ಸಭೆಯಲ್ಲಿ ಭಾಗವಹಿಸಿದ್ದ ರಷ್ಯಾದ ಸಹವರ್ತಿ ಸರ್ಗೆ ಲಾವ್ರೊವ್ ಅವರೊಂದಿಗೆ ʻಉಪಯುಕ್ತ ಸಂಭಾಷಣೆʼ ನಡೆಸಿದ್ದರು. 

ಮಧ್ಯವರ್ತಿಯಾಗಿ ಭಾರತ: ನವದೆಹಲಿ ಎರಡೂ ರಾಷ್ಟ್ರಗಳೊಂದಿಗೆ ಉತ್ತಮ ಸಂಬಂಧ ಹೊಂದಿರುವುದರಿಂದ, ಭಾರತ ಶಾಂತಿ ಮಾತುಕತೆಗೆ ಮುಂದಾಗಬೇಕು ಎಂಬ ಒತ್ತಾಯ ಬಂದಿದೆ. ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರು ಝೆಲೆನ್ಸ್ಕಿ ಅವರೊಂದಿಗೆ ಮಾತುಕತೆ ನಡೆಸಿದ ನಂತರ, ಭಾರತ ಮತ್ತು ಚೀನಾ ಪರಿಹಾರ ಕಂಡುಕೊಳ್ಳುವಲ್ಲಿ ಪಾತ್ರ ವಹಿಸಬಹುದು ಎಂದು ಹೇಳಿದರು.

ರಷ್ಯಾದ ಅಧ್ಯಕ್ಷ ಪುಟಿನ್ ಅವರು ಕಳೆದ ಗುರುವಾರ ವ್ಲಾಡಿವೋಸ್ಟಾಕ್‌ನಲ್ಲಿ ಮಾತನಾಡಿ, ಸಂಘರ್ಷವನ್ನು ಪರಿಹರಿಸುವಲ್ಲಿ ಪಾತ್ರ ವಹಿಸುವ ಸಂಭಾವ್ಯ ಮಧ್ಯವರ್ತಿಗಳಾಗಿ ಭಾರತ, ಬ್ರೆಜಿಲ್ ಮತ್ತು ಚೀನಾವನ್ನು ಹೆಸರಿಸಿದ್ದಾರೆ.

ಕಳೆದ ವಾರ ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್ ಅವರು ಸಂವಾದವನ್ನು ಸ್ಥಾಪಿಸಲು ಭಾರತ ಸಹಾಯ ಮಾಡಬಹುದು ಎಂದು ದಿನಪತ್ರಿಕೆಯೊಂದಕ್ಕೆ ಹೇಳಿದ್ದರು. ʻಮೋದಿಯವರು ಪುಟಿನ್, ಝೆಲೆನ್ಸ್ಕಿ ಮತ್ತು ಅಮೆರಿಕದೊಂದಿಗೆ ಮುಕ್ತವಾಗಿ ಸಂವಹನ ನಡೆಸುವುದರಿಂದ, ಸಂಘರ್ಷದಲ್ಲಿ ತೊಡಗಿಕೊಂಡಿರುವವರಿಂದ ಮೊದಲ ಮಾಹಿತಿ ಪಡೆಯಬಹುದು,ʼ ಎಂದು ಹೇಳಿದ್ದರು.

Tags:    

Similar News