ಕೆನಡಾದಲ್ಲಿ ಪಂಜಾಬ್ ಮೂಲದ ಯುವತಿ ಹತ್ಯೆ: ಆರೋಪಿ ಭಾರತಕ್ಕೆ ಪರಾರಿ ಶಂಕೆ
ಕೆನಡಾದ ಒಂಟಾರಿಯೊ ಪ್ರಾಂತ್ಯದ ಲಿಂಕನ್‌ನಲ್ಲಿರುವ ಚಾರ್ಲ್ಸ್ ಡೇಲಿ ಪಾರ್ಕ್‌ನಲ್ಲಿ ಅಕ್ಟೋಬರ್ 21 ರಂದು 27 ವರ್ಷದ ಅಮನ್‌ಪ್ರೀತ್ ಸೈನಿ ಎಂಬ ಯುವತಿಯ ಶವ ಪತ್ತೆಯಾಗಿತ್ತು. ಅವರ ದೇಹದ ಮೇಲೆ ತೀವ್ರವಾದ ಗಾಯದ ಗುರುತುಗಳಿದ್ದು, ಇದೊಂದು ಪೂರ್ವನಿಯೋಜಿತ ಹತ್ಯೆ ಎಂದು ಪೊಲೀಸರು ತೀರ್ಮಾನಕ್ಕೆ ಬಂದಿದ್ದಾರೆ.
ಅಮನ್ ಪ್ರೀತ್
ಕೆನಡಾದಲ್ಲಿ ಭಾರತೀಯ ಮೂಲದ ಯುವತಿಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದ್ದು, ಈ ಪ್ರಕರಣದ ಪ್ರಮುಖ ಆರೋಪಿ ಕೂಡ ಭಾರತೀಯ ಮೂಲದವನಾಗಿದ್ದು, ಕೃತ್ಯದ ನಂತರ ಭಾರತಕ್ಕೆ ಪರಾರಿಯಾಗಿರುವ ಸಾಧ್ಯತೆ ಇದೆ ಎಂದು ನಯಾಗರ ಪ್ರಾದೇಶಿಕ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಆರೋಪಿಯ ಬಂಧನಕ್ಕಾಗಿ ಕೆನಡಾದ ತನಿಖಾ ಸಂಸ್ಥೆಗಳು ಭಾರತೀಯ ಅಧಿಕಾರಿಗಳ ಸಹಕಾರ ಕೋರಿವೆ.
ಕೆನಡಾದ ಒಂಟಾರಿಯೊ ಪ್ರಾಂತ್ಯದ ಲಿಂಕನ್‌ನಲ್ಲಿರುವ ಚಾರ್ಲ್ಸ್ ಡೇಲಿ ಪಾರ್ಕ್‌ನಲ್ಲಿ ಅಕ್ಟೋಬರ್ 21 ರಂದು 27 ವರ್ಷದ ಅಮನ್‌ಪ್ರೀತ್ ಸೈನಿ ಎಂಬ ಯುವತಿಯ ಶವ ಪತ್ತೆಯಾಗಿತ್ತು. ಅವರ ದೇಹದ ಮೇಲೆ ತೀವ್ರವಾದ ಗಾಯದ ಗುರುತುಗಳಿದ್ದು, ಇದೊಂದು ಪೂರ್ವನಿಯೋಜಿತ ಹತ್ಯೆ ಎಂದು ಪೊಲೀಸರು ತೀರ್ಮಾನಕ್ಕೆ ಬಂದಿದ್ದಾರೆ. ಮೃತ ಅಮನ್‌ಪ್ರೀತ್ ಸೈನಿ, ಪಂಜಾಬ್‌ನ ಸಂಗ್ರೂರು ಜಿಲ್ಲೆಯ ಮೂಲದವರಾಗಿದ್ದು, ಕಳೆದ ಕೆಲವು ವರ್ಷಗಳಿಂದ ಟೊರೊಂಟೋದ ನಾರ್ತ್ ಯಾರ್ಕ್ ಪ್ರದೇಶದಲ್ಲಿ ವಾಸಿಸುತ್ತಿದ್ದರು.
ಆರೋಪಿ ಯಾರು?
ಈ ಕೊಲೆ ಪ್ರಕರಣದಲ್ಲಿ ಬ್ರಾಂಪ್ಟನ್ ನಿವಾಸಿ, 27 ವರ್ಷದ ಮನ್‌ಪ್ರೀತ್ ಸಿಂಗ್ ಎಂಬಾತನೇ ಪ್ರಮುಖ ಆರೋಪಿ ಎಂದು ಪೊಲೀಸರು ಗುರುತಿಸಿದ್ದಾರೆ. ಆತನ ವಿರುದ್ಧ ಕೆನಡಾ-ವ್ಯಾಪಿ ದ್ವಿತೀಯ ಹಂತದ ಕೊಲೆ ಪ್ರಕರಣದಡಿ (second-degree murder) ಬಂಧನ ವಾರಂಟ್ ಜಾರಿ ಮಾಡಲಾಗಿದೆ.
ಭಾರತಕ್ಕೆ ಪರಾರಿಯಾದನೇ ಆರೋಪಿ?
ಅಮನ್‌ಪ್ರೀತ್ ಅವರ ಶವ ಪತ್ತೆಯಾದ ಕೆಲವೇ ಸಮಯದಲ್ಲಿ ಆರೋಪಿ ಮನ್‌ಪ್ರೀತ್ ಸಿಂಗ್ ದೇಶವನ್ನು ತೊರೆದು ಪರಾರಿಯಾಗಿದ್ದಾನೆ ಎಂದು ತನಿಖಾಧಿಕಾರಿಗಳು ಬಲವಾಗಿ ನಂಬಿದ್ದಾರೆ. ಮೂಲಗಳ ಪ್ರಕಾರ, ಪಂಜಾಬ್ ಮೂಲದ ಮನ್‌ಪ್ರೀತ್ ಸಿಂಗ್ ತನ್ನ ಕುಟುಂಬದೊಂದಿಗೆ ಭಾರತಕ್ಕೆ ಪಲಾಯನ ಮಾಡಿರುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ, ಕೆನಡಾದ ಭದ್ರತಾ ಸಂಸ್ಥೆಗಳು ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಲು ಭಾರತೀಯ ತನಿಖಾ ಸಂಸ್ಥೆಗಳ ಸಹಾಯವನ್ನು ಕೋರಿವೆ.
ಪೊಲೀಸರು ಆರೋಪಿಯ ಭಾವಚಿತ್ರವನ್ನು ಬಿಡುಗಡೆ ಮಾಡಿದ್ದು, ಆತ ಎಲ್ಲೇ ಕಂಡರೂ ಸಾರ್ವಜನಿಕರು ಸಮೀಪಿಸದೆ ತಕ್ಷಣ 911 ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡುವಂತೆ ಮನವಿ ಮಾಡಿದ್ದಾರೆ. ಇದೊಂದು ನಿರ್ದಿಷ್ಟ ಗುರಿಯಿಟ್ಟು ಮಾಡಿದ ದಾಳಿಯಾಗಿದ್ದು, ಸಾರ್ವಜನಿಕರಿಗೆ ಯಾವುದೇ ಅಪಾಯವಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಆದರೆ, ಹತ್ಯೆಗೆ ನಿಖರವಾದ ಕಾರಣ ಏನು ಎಂಬುದು ಇನ್ನೂ ತನಿಖೆಯಿಂದ ತಿಳಿದುಬಂದಿಲ್ಲ.