ಐಫೋನ್‌ಗಳನ್ನು ಭಾರತದಲ್ಲಿ ತಯಾರಿಸಿದರೆ ಶೇಕಡಾ 25 ಟ್ಯಾಕ್ಸ್; ಟಿಮ್ ಕುಕ್‌ಗೆ ಟ್ರಂಪ್ ಧಮ್ಕಿ
ಕಳೆದ ವಾರ ಮಧ್ಯಪ್ರಾಚ್ಯ ಪ್ರವಾಸದ ಸಂದರ್ಭದಲ್ಲಿ ದೋಹಾದಲ್ಲಿ ಮಾತನಾಡಿದ್ದ ಟ್ರಂಪ್, ಆಪಲ್ ಕಂಪನಿಯು ತನ್ನ ಉತ್ಪನ್ನಗಳನ್ನು ಭಾರತದಲ್ಲಿ ತಯಾರಿಸುವುದನ್ನು ತಾನು ಬಯಸುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದರು.;
ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಶುಕ್ರವಾರ (ಮೇ 23) ಭಾರತದಲ್ಲಿ ತಯಾರಾಗುವ ಆಪಲ್ ಕಂಪನಿಯ ಉತ್ಪನ್ನಗಳ ಮೇಲೆ ಶೇಕಡಾ 25 ಸುಂಕ ವಿಧಿಸುವ ಎಚ್ಚರಿಕೆ ಕೊಟ್ಟಿದ್ದಾರೆ. ಅಮೆರಿಕದಲ್ಲಿ ಮಾರಾಟವಾಗುವ ಐಫೋನ್‌ಗಳನ್ನು ಅಮೆರಿಕದಲ್ಲೇ ತಯಾರಿಸಬೇಕು ಮತ್ತು ಭಾರತ ಅಥವಾ ಬೇರೆ ಯಾವ ಸ್ಥಳದಲ್ಲೂ ಅಲ್ಲ ಎಂದು ಟ್ರಂಪ್ ಧಮ್ಕಿ ಹಾಕಿದ್ದಾರೆ. ಈ ಹೇಳಿಕೆಯು ಆಪಲ್‌ನ ಉತ್ಪಾದನಾ ಯೋಜನೆಗಳ ಮೇಲೆ ಗಂಭೀರ ಪರಿಣಾಮ ಬೀರಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.
ಟ್ರಂಪ್ ಅವರು ತಮ್ಮ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಆಪಲ್‌ನ ಸಿಇಒ ಟಿಮ್ ಕುಕ್‌ಗೆ ನೇರವಾಗಿ ಸಂದೇಶ ರವಾನಿಸಿದ್ದಾರೆ. "ನಾನು ಬಹಳ ಹಿಂದೆಯೇ ಆಪಲ್‌ನ ಟಿಮ್ ಕುಕ್‌ಗೆ ತಿಳಿಸಿದ್ದೇನೆ, ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಮಾರಾಟವಾಗುವ ಐಫೋನ್‌ಗಳನ್ನು ಅಮೆರಿಕದಲ್ಲೇ ನಿರ್ಮಿಸಬೇಕು, ಭಾರತದಲ್ಲಿ ಅಥವಾ ಬೇರೆ ಯಾವ ಸ್ಥಳದಲ್ಲೂ ಅಲ್ಲ. ಒಂದು ವೇಳೆ ಹಾಗೆ ಮಾಡದಿದ್ದರೆ, ಆಪಲ್ ಕಂಪನಿಯು ಕನಿಷ್ಠ 25% ಸುಂಕವ ಯುಎಸ್‌ಗೆ ಪಾವತಿಸಬೇಕಾಗುತ್ತದೆ" ಎಂದು ಟ್ರಂಪ್ ಬರೆದಿದ್ದಾರೆ.
ದೋಹಾದಲ್ಲಿ ಎಚ್ಚರಿಕೆ ಕೊಟ್ಟಿದ್ದ ಟ್ರಂಪ್
ಕಳೆದ ವಾರ ಮಧ್ಯಪ್ರಾಚ್ಯ ಪ್ರವಾಸದ ಸಂದರ್ಭದಲ್ಲಿ ದೋಹಾದಲ್ಲಿ ಮಾತನಾಡಿದ್ದ ಟ್ರಂಪ್, ಆಪಲ್ ಕಂಪನಿಯು ತನ್ನ ಉತ್ಪನ್ನಗಳನ್ನು ಭಾರತದಲ್ಲಿ ತಯಾರಿಸುವುದನ್ನು ತಾನು ಬಯಸುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದರು. ನೀವು ಭಾರತದಲ್ಲಿ ತಯಾರಿಸುವುದನ್ನು ನಾನು ಬಯಸುವುದಿಲ್ಲ. ಭಾರತವನ್ನು ನೋಡಿಕೊಳ್ಳಲು ನೀವು ಬಯಸಿದರೆ ಭಾರತದಲ್ಲಿ ತಯಾರಿಸಬಹುದು, ಏಕೆಂದರೆ ಭಾರತವು ವಿಶ್ವದ ಅತಿ ಹೆಚ್ಚು ಸುಂಕ ವಿಧಿಸುವ ರಾಷ್ಟ್ರಗಳಲ್ಲಿ ಒಂದಾಗಿದೆ," ಎಂದು ಟ್ರಂಪ್ ಹೇಳಿದ್ದರು.
ಅವರು ಮತ್ತಷ್ಟು ಮಾತನಾಡಿ, "ನಾವು ನಿನ್ನನ್ನು ಚೆನ್ನಾಗಿ ನೋಡಿಕೊಂಡಿದ್ದೇವೆ. ಚೀನಾದಲ್ಲಿ ನೀವು ವರ್ಷಗಟ್ಟಲೆ ನಿರ್ಮಿಸಿದ ಎಲ್ಲಾ ಘಟಕಗಳನ್ನು ನಾವು ಸಹಿಸಿಕೊಂಡಿದ್ದೇವೆ. ಈಗ, ನೀವು ನಮಗಾಗಿ ತಯಾರಿಸಬೇಕು. ಭಾರತದಲ್ಲಿ ತಯಾರಿಸುವುದರಲ್ಲಿ ನಮಗೆ ಆಸಕ್ತಿಯಿಲ್ಲ ಎಂದು ಹೇಳಿದ್ದರು.
ಆಪಲ್ ಸಿಇಒ ಟಿಮ್ ಕುಕ್ ಹೇಳಿದ್ದೇನು?
ಈ ತಿಂಗಳ ಆರಂಭದಲ್ಲಿ, ಆಪಲ್‌ನ ಸಿಇಒ ಟಿಮ್ ಕುಕ್ ಅವರು 2025ರ ಎರಡನೇ ತ್ರೈಮಾಸಿಕದ ಗಳಿಕೆಯ ಸಮ್ಮೇಳನದಲ್ಲಿ ಮಾತನಾಡಿ, ಆಪಲ್ ಉತ್ಪನ್ನಗಳಿಗೆ ಸಂಬಂಧಿಸಿದ ಪ್ರಸ್ತುತ ಸುಂಕಗಳು ಉತ್ಪನ್ನದ ಮೂಲ ದೇಶವನ್ನು ಆಧರಿಸಿವೆ ಎಂದು ತಿಳಿಸಿದ್ದರು. "ಜೂನ್ ತ್ರೈಮಾಸಿಕದಲ್ಲಿ, ಅಮೆರಿಕದಲ್ಲಿ ಮಾರಾಟವಾಗುವ ಬಹುತೇಕ ಐಫೋನ್‌ಗಳ ಮೂಲ ದೇಶವು ಭಾರತವಾಗಿರಲಿದೆ, ಬಹುತೇಕ ಐಪ್ಯಾಡ್, ಮ್ಯಾಕ್, ಆಪಲ್ ವಾಚ್, ಮತ್ತು ಏರ್‌ಪಾಡ್ಸ್ ಉತ್ಪನ್ನಗಳ ಮೂಲ ದೇಶವು ವಿಯೆಟ್ನಾಂ ಆಗಿರಲಿದೆ," ಎಂದು ಕುಕ್ ಹೇಳಿದ್ದರು. ಅಮೆರಿಕದ ಹೊರಗಡೆ ಮಾರಾಟವಾಗುವ ಒಟ್ಟು ಉತ್ಪನ್ನಗಳ ಬಹುಪಾಲು ಮೂಲ ದೇಶವಾಗಿ ಚೀನಾ ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿದರು.
ಕೌಂಟರ್‌ಪಾಯಿಂಟ್ ರಿಸರ್ಚ್‌ನ ವಿಶ್ಲೇಷಣೆ
ಆಪಲ್‌ನ ಐಫೋನ್ ಉತ್ಪಾದನೆಯನ್ನು ಭಾರತದಿಂದ ಅಮೆರಿಕಕ್ಕೆ ಸ್ಥಳಾಂತರಿಸುವಂತೆ ಟ್ರಂಪ್ ನೀಡಿರುವ ಕರೆಯ ಬಗ್ಗೆ ಕೌಂಟರ್‌ಪಾಯಿಂಟ್ ರಿಸರ್ಚ್‌ನ ನಿರ್ದೇಶಕ ತರುಣ್ ಪಾಠಕ್ ಅವರು ಕಳೆದ ವಾರ ಪ್ರತಿಕ್ರಿಯಿಸಿದ್ದರು. ಅವರು ಇದನ್ನು "ಟ್ರಂಪ್‌ನ ಪರಿಚಿತ ತಂತ್ರ" ಎಂದು ಕರೆದಿದ್ದಾರೆ. ಟ್ರಂಪ್ ಈ ರೀತಿಯ ಒತ್ತಡದ ತಂತ್ರಗಳನ್ನು ಹಿಂದೆಯೂ ಬಳಸಿದ್ದಾರೆ ಎಂದು ಪಾಠಕ್ ಸೂಚಿಸಿದ್ದಾರೆ, ಇದರ ಮೂಲಕ ಆಪಲ್‌ನಂತಹ ಕಂಪನಿಗಳು ತಮ್ಮ ಉತ್ಪಾದನೆಯನ್ನು ಅಮೆರಿಕದಲ್ಲಿ ಹೆಚ್ಚಿಸುವಂತೆ ಒತ್ತಾಯಿಸುವುದು ಅವರ ಗುರಿಯಾಗಿದೆ.
ಭಾರತದ ಮೇಲೆ ಪರಿಣಾಮ
ಆಪಲ್ ಕಂಪನಿಯು ಇತ್ತೀಚಿನ ವರ್ಷಗಳಲ್ಲಿ ಭಾರತದಲ್ಲಿ ತನ್ನ ಉತ್ಪಾದನಾ ಸಾಮರ್ಥ್ಯವನ್ನು ಗಣನೀಯವಾಗಿ ವಿಸ್ತರಿಸಿದೆ. ಕಂಪನಿಯು ತನ್ನ ಜಾಗತಿಕ ಐಫೋನ್ ಉತ್ಪಾದನೆಯ ಸುಮಾರು 25% ಭಾರತದಲ್ಲಿ ನಿರ್ವಹಿಸುವ ಗುರಿಯನ್ನು ಹೊಂದಿದೆ, ಇದರಿಂದ ಚೀನಾದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಯೋಜಿಸಿದೆ. ಆದರೆ, ಟ್ರಂಪ್‌ನ ಈ ಎಚ್ಚರಿಕೆಯು ಭಾರತದಲ್ಲಿ ಆಪಲ್‌ನ ಉತ್ಪಾದನಾ ಯೋಜನೆಗಳ ಮೇಲೆ ಪರಿಣಾಮ ಬೀರಬಹುದು.