ಔಷಧಗಳ ಮೇಲೆ ಟ್ರಂಪ್​ ಶೇ.100 'ಸುಂಕ'ದ ಬರೆ: ಭಾರತದ ಫಾರ್ಮಾ ಉದ್ಯಮಕ್ಕೆ ಹೊಡೆತ?

ಟ್ರಂಪ್ ತಮ್ಮ ಘೋಷಣೆಯಲ್ಲಿ ಸುಂಕದಿಂದ ವಿನಾಯಿತಿ ಪಡೆಯುವ ಬಗ್ಗೆಯೂ ಸ್ಪಷ್ಟಪಡಿಸಿದ್ದು, ಯಾವುದೇ ಕಂಪನಿಯು ಅಮೆರಿಕದಲ್ಲಿ ಔಷಧ ಉತ್ಪಾದನಾ ಘಟಕವನ್ನು ನಿರ್ಮಿಸುತ್ತಿದ್ದರೆ ಈ ಸುಂಕ ಅನ್ವಯವಾಗುವುದಿಲ್ಲ ಎಂದು ಹೇಳಿದ್ದಾರೆ.

Update: 2025-09-26 04:15 GMT

ಅಕ್ಟೋಬರ್ 1 ರಿಂದ ಆಮದು ಮಾಡಿಕೊಳ್ಳಲಾಗುವ ಬ್ರಾಂಡೆಡ್ ಮತ್ತು ಪೇಟೆಂಟ್ ಔಷಧಿಗಳ ಮೇಲೆ ಶೇ. 100ರಷ್ಟು ಸುಂಕ ವಿಧಿಸುವುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಈ ನಿರ್ಧಾರವು ಅಮೆರಿಕಕ್ಕೆ ಅತಿ ಹೆಚ್ಚು ಜೆನೆರಿಕ್ ಔಷಧಿಗಳನ್ನು ರಫ್ತು ಮಾಡುವ ಭಾರತದ ಫಾರ್ಮಾ ಉದ್ಯಮದ ಮೇಲೆ ಗಂಭೀರ ಪರಿಣಾಮ ಬೀರುವ ಆತಂಕವನ್ನು ಸೃಷ್ಟಿಸಿದೆ.

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಗುರುವಾರ (ಸೆಪ್ಟೆಂಬರ್ 25) ಈ ಮಹತ್ವದ ಘೋಷಣೆ ಮಾಡಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣವಾದ 'ಟ್ರುತ್ ಸೋಶಿಯಲ್'ನಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, "ಅಕ್ಟೋಬರ್ 1, 2025 ರಿಂದ, ಬ್ರಾಂಡೆಡ್ ಮತ್ತು ಪೇಟೆಂಟ್ ಪಡೆದ ಔಷಧೀಯ ಉತ್ಪನ್ನಗಳ ಮೇಲೆ ಶೇ. 100ರಷ್ಟು ಸುಂಕವನ್ನು ವಿಧಿಸಲಾಗುವುದು," ಎಂದು ತಿಳಿಸಿದ್ದಾರೆ. 2024ರಲ್ಲಿ ಅಮೆರಿಕವು ಸುಮಾರು 233 ಬಿಲಿಯನ್ ಡಾಲರ್ ಮೌಲ್ಯದ ಔಷಧೀಯ ಮತ್ತು ವೈದ್ಯಕೀಯ ಉತ್ಪನ್ನಗಳನ್ನು ಆಮದು ಮಾಡಿಕೊಂಡಿತ್ತು.

ವಿನಾಯಿತಿ ಷರತ್ತುಗಳು

ಟ್ರಂಪ್ ತಮ್ಮ ಘೋಷಣೆಯಲ್ಲಿ ಸುಂಕದಿಂದ ವಿನಾಯಿತಿ ಪಡೆಯುವ ಬಗ್ಗೆಯೂ ಸ್ಪಷ್ಟಪಡಿಸಿದ್ದು, ಯಾವುದೇ ಕಂಪನಿಯು ಅಮೆರಿಕದಲ್ಲಿ ಔಷಧ ಉತ್ಪಾದನಾ ಘಟಕವನ್ನು ನಿರ್ಮಿಸುತ್ತಿದ್ದರೆ ಈ ಸುಂಕ ಅನ್ವಯವಾಗುವುದಿಲ್ಲ ಎಂದು ಹೇಳಿದ್ದಾರೆ. 'ನಿರ್ಮಾಣ ಹಂತದಲ್ಲಿರುವುದು' ಎಂಬುದನ್ನು 'ಭೂಮಿ ಪೂಜೆ' ಮಾಡುವುದು ಅಥವಾ ನಿರ್ಮಾಣ ಕಾರ್ಯ ಪ್ರಗತಿಯಲ್ಲಿರುವುದು ಎಂದು ವ್ಯಾಖ್ಯಾನಿಸಲಾಗಿದ್ದು, ನಿರ್ಮಾಣ ಕಾರ್ಯ ಆರಂಭವಾಗಿದ್ದರೆ, ಅಂತಹ ಕಂಪನಿಗಳ ಔಷಧ ಉತ್ಪನ್ನಗಳ ಮೇಲೆ ಯಾವುದೇ ಸುಂಕ ವಿಧಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಭಾರತೀಯ ಫಾರ್ಮಾ ಮೇಲೆ ಪರಿಣಾಮ

ಟ್ರಂಪ್ ಅವರ ಆದೇಶವು ಭಾರತೀಯ ಔಷಧ ಉದ್ಯಮದ ಮೇಲೆ ಗಣನೀಯ ಪರಿಣಾಮ ಬೀರುವ ಸಾಧ್ಯತೆ ಇದೆ, ಏಕೆಂದರೆ ಭಾರತವು ಅಮೆರಿಕಕ್ಕೆ ಜೆನೆರಿಕ್ ಔಷಧಿಗಳನ್ನು ರಫ್ತು ಮಾಡುವ ಅತಿದೊಡ್ಡ ದೇಶವಾಗಿದೆ. ಭಾರತೀಯ ಔಷಧೀಯ ರಫ್ತು ಉತ್ತೇಜನಾ ಮಂಡಳಿಯ ಪ್ರಕಾರ, 2024ರಲ್ಲಿ ಭಾರತವು ಅಮೆರಿಕಕ್ಕೆ ಸುಮಾರು 8.73 ಬಿಲಿಯನ್ ಡಾಲರ್ ಮೌಲ್ಯದ ಔಷಧಿಗಳನ್ನು ರಫ್ತು ಮಾಡಿದೆ. ಇದು ಭಾರತದ ಒಟ್ಟು ಔಷಧ ರಫ್ತಿನ (27.9 ಬಿಲಿಯನ್ ಡಾಲರ್) ಶೇ. 31ರಷ್ಟಾಗಿದೆ. ಸನ್ ಫಾರ್ಮಾ, ಗ್ಲಾಂಡ್ ಫಾರ್ಮಾ, ಡಾ. ರೆಡ್ಡೀಸ್, ಅರಬಿಂದೋ ಫಾರ್ಮಾ, ಲುಪಿನ್ ಮತ್ತು ಝೈಡಸ್ ಲೈಫ್‌ಸೈನ್ಸಸ್‌ನಂತಹ ಪ್ರಮುಖ ಭಾರತೀಯ ಕಂಪನಿಗಳು ತಮ್ಮ ಒಟ್ಟು ಆದಾಯದ ಶೇ. 30ರಿಂದ 50ರಷ್ಟು ಭಾಗವನ್ನು ಅಮೆರಿಕಕ್ಕೆ ಮಾಡುವ ರಫ್ತಿನಿಂದಲೇ ಗಳಿಸುವುದರಿಂದ ಈ ನಿರ್ಧಾರದಿಂದ ದೊಡ್ಡ ಹೊಡೆತ ಬೀಳುವ ಸಾಧ್ಯತೆಯಿದೆ.

ಅಮೆರಿಕದಲ್ಲಿ ಜೆನೆರಿಕ್ ಔಷಧಿಗಳ ಪ್ರಾಬಲ್ಯ

ವರದಿಗಳ ಪ್ರಕಾರ, ಅಮೆರಿಕದಲ್ಲಿ ಬಳಸಲಾಗುವ ಶೇ. 45ಕ್ಕಿಂತ ಹೆಚ್ಚು ಜೆನೆರಿಕ್ ಔಷಧಿಗಳು ಮತ್ತು ಶೇ. 15ರಷ್ಟು ಬಯೋಸಿಮಿಲರ್ ಔಷಧಿಗಳನ್ನು ಭಾರತೀಯ ಸಂಸ್ಥೆಗಳೇ ಪೂರೈಸುತ್ತವೆ. ಅಮೆರಿಕದ ಪ್ರಿಸ್ಕ್ರಿಪ್ಷನ್ ಮಾರುಕಟ್ಟೆಯಲ್ಲಿ ಜೆನೆರಿಕ್‌ಗಳದ್ದೇ ಪಾರುಪತ್ಯವಿದ್ದು, ಅಲ್ಲಿ ನೀಡಲಾಗುವ ಪ್ರತಿ 10 ಪ್ರಿಸ್ಕ್ರಿಪ್ಷನ್‌ಗಳಲ್ಲಿ ಸುಮಾರು 4 ಔಷಧಿಗಳನ್ನು ಭಾರತೀಯ ಕಂಪನಿಗಳು ತಯಾರಿಸಿರುತ್ತವೆ. ಅಧಿಕ ಸುಂಕ ವಿಧಿಸಿದರೆ, ಅಮೆರಿಕದ ಗ್ರಾಹಕರಿಗೆ ಔಷಧಗಳ ಬೆಲೆ ಏರಿಕೆಯಾಗಲಿದೆ. ಏಕೆಂದರೆ ಕಡಿಮೆ ಲಾಭಾಂಶದಲ್ಲಿ ಕಾರ್ಯನಿರ್ವಹಿಸುವ ಭಾರತೀಯ ಕಂಪನಿಗಳು ಹೆಚ್ಚುವರಿ ವೆಚ್ಚವನ್ನು ಭರಿಸುವುದು ಕಷ್ಟ. ಇದು ಅಮೆರಿಕದಲ್ಲಿ ಹಣದುಬ್ಬರ ಮತ್ತು ಔಷಧಗಳ ಕೊರತೆಗೂ ಕಾರಣವಾಗಬಹುದು.

ಅನಿಶ್ಚಿತತೆಗಳ ಸಾಲು

ಟ್ರಂಪ್ ತಮ್ಮ ಪೋಸ್ಟ್‌ನಲ್ಲಿ "ಬ್ರಾಂಡೆಡ್ ಮತ್ತು ಪೇಟೆಂಟ್ ಪಡೆದ ಔಷಧಗಳು" ಎಂದು ನಿರ್ದಿಷ್ಟವಾಗಿ ಉಲ್ಲೇಖಿಸಿದ್ದಾರೆ. ಈ ವಲಯವು ಬಹುರಾಷ್ಟ್ರೀಯ ಔಷಧ ಕಂಪನಿಗಳ ಪ್ರಾಬಲ್ಯ ಹೊಂದಿದೆ. ಹಾಗಾಗಿ, ಭಾರತದಿಂದ ರಫ್ತಾಗುವ ಸಂಕೀರ್ಣ ಜೆನೆರಿಕ್‌ಗಳು ಮತ್ತು ವಿಶೇಷ ಔಷಧಿಗಳ ಮೇಲೆ ಶೇ. 100ರಷ್ಟು ಸುಂಕದ ಬೆದರಿಕೆ ಪರಿಣಾಮ ಬೀರುತ್ತದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. 

Tags:    

Similar News