Rahul Gandhi in the US: ರಾಜಕೀಯದಲ್ಲಿ ಪ್ರೀತಿಯ ಕಲ್ಪನೆಯ ಪರಿಚಯ-ರಾಹುಲ್

ರಾಹುಲ್‌ ಗಾಂಧಿ ಟೆಕ್ಸಾಸ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರೊಂದಿಗೆ ಸಂವಾದ ನಡೆಸಿದರು. ವಿರೋಧ ಪಕ್ಷಗಳ ಪಾತ್ರ, ಭಾರತ್ ಜೋಡೋ ಯಾತ್ರೆಗಳು, ರಾಜಕೀಯ, ನಿರುದ್ಯೋಗ, ಕೌಶಲ,ಆರ್‌ಎಸ್‌ಎಸ್‌ ನಿಂದ ಸಾಂಸ್ಥಿಕ ಸೆರೆಹಿಡಿಯುವಿಕೆ ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ತಮ್ಮ ಆಲೋಚನೆಗಳನ್ನು ಹಂಚಿಕೊಂಡರು.

Update: 2024-09-09 08:06 GMT
ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಯುಎಸ್ ಭೇಟಿ ಸಂದರ್ಭದಲ್ಲಿ ಟೆಕ್ಸಾಸ್ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರೊಂದಿಗೆ ಸಂವಾದ ನಡೆಸಿದರು

ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಅಮೆರಿಕದ ಟೆಕ್ಸಾಸ್ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿಗಳು ಮತ್ತು ಅಧ್ಯಾಪಕ ರೊಂದಿಗೆ ಸಂವಾದ ನಡೆಸಿದರು.

ಪ್ರಜಾಪ್ರಭುತ್ವದಲ್ಲಿ ಪ್ರತಿಪಕ್ಷದ ಪಾತ್ರ, ಕಳೆದ 20 ವರ್ಷಗಳಲ್ಲಿ ರಾಜಕಾರಣಿಯಾಗಿ ತಾವು ಕಲಿತದ್ದು, ಭಾರತ್ ಜೋಡೋ ಯಾತ್ರೆಗಳಿಂದ ಕಲಿತದ್ದೇನು, ಭಾರತೀಯ ರಾಜಕೀಯದ ಬಗ್ಗೆ ಅವರ ಗ್ರಹಿಕೆ, ನಿರುದ್ಯೋಗ ಪರಿಸ್ಥಿತಿ, ಕೌಶಲದ ಸಮಸ್ಯೆ ಮತ್ತು ಕಳೆದ 10 ವರ್ಷಗಳಲ್ಲಿ ಆರ್‌ಎಸ್‌ಎಸ್/ಬಿಜೆಪಿಯಿಂದ ʻಸಾಂಸ್ಥಿಕ ಸೆರೆಹಿಡಿಯುವಿಕೆʼ ಸೇರಿದಂತೆ ಹಲವು ವಿಷಯಗಳ ಕುರಿತು ಅವರು ಮಾತನ್ನಾಡಿದರು. 

ವಿರೋಧ ಪಕ್ಷದ ಪಾತ್ರ: ವಿರೋಧ ಪಕ್ಷವು ಜನರ ಧ್ವನಿಯಾಗಿದೆ. ಜನರಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಎಲ್ಲಿ ಮತ್ತು ಹೇಗೆ ಎತ್ತಬಹುದು ಎಂಬುದನ್ನು ಪರಿಗಣಿಸುವುದು ನಿಮ್ಮ ಮುಖ್ಯ ಉದ್ಧೇಶ. ನೀವು ವೈಯಕ್ತಿಕ ದೃಷ್ಟಿಕೋನ ಮತ್ತು ಕೈಗಾರಿಕೆಗಳು- ರೈತರ ಗುಂಪುಗಳ ದೃಷ್ಟಿಕೋನದಿಂದಲೂ ಆಲೋಚಿಸಬೇಕಿದೆ. ಎಚ್ಚರಿಕೆಯಿಂದ ಆಲಿಸಿ, ಅರ್ಥಮಾಡಿಕೊಂಡ ನಂತರ ಸೂಕ್ಷ್ಮವಾಗಿ ಕಾರ್ಯ ನಿರ್ವಹಣೆ ಮುಖ್ಯವಾಗಲಿದೆ,ʼ ಎಂದು ಅವರು ಹೇಳಿದರು.

ʻಸಂಸತ್ತಿಗೆ ನೀವು ಮುಂಜಾನೆ ಆಗಮಿಸುತ್ತೀರಿ; ಆನಂತರ ಕಲ್ಪನೆಗಳು ಮತ್ತು ಪದಗಳ ಜೊತೆ ಯುದ್ಧದಲ್ಲಿ ತೊಡಗುತ್ತೀರಿ,ʼ ಎಂದು ಹೇಳಿದರು. 

ರಾಜಕಾರಣಿಯಾಗಿ ಕಲಿಕೆ: ʻಮಾತನಾಡುವುದಕ್ಕಿಂತ ಕೇಳುವುದು ಬಹಳ ಮುಖ್ಯ. ಜನರನ್ನು ಅರ್ಥಮಾಡಿಕೊಳ್ಳಲು ಇದು ಅಗತ್ಯ. ನೀವು ಪ್ರತಿಯೊಂದು ಸಮಸ್ಯೆಯನ್ನೂ ಎತ್ತಬೇಕೆಂದಿಲ್ಲ. ಆದರೆ, ಮೂಲಭೂತವಾದವನ್ನು ಪರಿಹರಿಸಲು ಗಮನ ಹರಿಸಬೇಕಾಗುತ್ತದೆ. ನಿಮ್ಮ ಯುದ್ಧಗಳನ್ನು ನೀವು ಹೆಚ್ಚು ಎಚ್ಚರಿಕೆಯಿಂದ ಆರಿಸಬೇಕಿದೆ,ʼ ಎಂದು ಹೇಳಿದರು.

ಭಾರತ್ ಜೋಡೋ ಯಾತ್ರೆ: ʻನೀವು ಕೇಳಿದ ಮೊದಲ ಪ್ರಶ್ನೆ, ನಾನು ನಾಲ್ಕು ಸಾವಿರ ಕಿಲೋಮೀಟರ್ ಪಾದಯಾತ್ರೆ ಏಕೆ ಮಾಡಿದೆ? ಇದರ ಅಗತ್ಯ ಏನಿತ್ತು? ಕಾರಣವೆಂದರೆ, ಭಾರತದಲ್ಲಿ ಎಲ್ಲಾ ಸಂವಹನ ಮಾರ್ಗಗಳು ಮುಚ್ಚಿಹೋಗಿವೆ. ಎಲ್ಲವನ್ನೂ ನಿರ್ಬಂಧಿಸಲಾಗಿದೆ. ಸಂಸತ್ತಿನಲ್ಲಿ ಮಾತನಾಡಿದ್ದು ದೂರದರ್ಶನದಲ್ಲಿ ಪ್ರಸಾರವಾಗಲಿಲ್ಲ. ಮಾಧ್ಯಮದವರ ಬಳಿ ಹೋದೆವು; ಆದರೆ, ಅವರು ನಾವು ಹೇಳಿದ ವಿಷಯಗಳನ್ನು ಎತ್ತಿಕೊಳ್ಳಲಿಲ್ಲ. ಕಾನೂನು ವ್ಯವಸ್ಥೆಗೆ ದಾಖಲೆಗಳನ್ನು ಸಲ್ಲಿಸಿದೆವು. ಆದರೆ, ಏನೂ ಆಗಲಿಲ್ಲ. ಎಲ್ಲಾ ಮಾರ್ಗಗಳು ಮುಚ್ಚಿ ಹೋಗಿರುವುದರಿಂದ ಜನರೊಟ್ಟಿಗೆ ಹೇಗೆ ಸಂವಹನ ನಡೆಸಬೇಕೆಂದು ಗೊತ್ತಾಗಲಿಲ್ಲ. ನೇರವಾಗಿ ಜನರ ಬಳಿಗೆ ಹೋಗಬೇಕು ಎಂದು ಗೊತ್ತಾಯಿತು,ʼ ಎಂದು ಹೇಳಿದರು.

ಅದಕ್ಕೆ ಪಾದಯಾತ್ರೆಯೇ ಸೂಕ್ತ ಎಂದುಕೊಂಡು,ಆರಂಭಿಸಿದೆವು. ಆರಂಭದಲ್ಲಿ ನನಗೆ ಮೊಣಕಾಲು ಸಮಸ್ಯೆ ಇತ್ತು. ಮೊದಲ 3-4 ದಿನ, ನಾನು ಏನು ಮಾಡುತ್ತಿದ್ದೇನೆ ಎಂಬ ಪ್ರಶ್ನೆ ಎದುರಾಯಿತು. ʻಬೆಳಗ್ಗೆ 10 ಕಿಲೋಮೀಟರ್ ಓಡುತ್ತೇನೆ’ ಎಂದು ಹೇಳುವುದು ಬೇರೆ: ಆದರೆ, 4,000 ಕಿಲೋಮೀಟರ್ ನಡೆಯುತ್ತೇನೆ ಎನ್ನುವುದು ಸಂಪೂರ್ಣವಾಗಿ ಭಿನ್ನವಾದುದು. ಈ ಯಾತ್ರೆಗಳು ನನ್ನನ್ನು ಮೂಲಭೂತವಾಗಿ ಬದಲಿಸಿದವು ಎಂದು ರಾಹುಲ್ ಹೇಳಿದರು.

ʻಆದರೆ, ಇಡೀ ಯಾತ್ರೆ ಕಷ್ಟಕರವಾಗಿರಲಿಲ್ಲ. ಮತ್ತು, ಅದು ನನ್ನ ಕೆಲಸದ ಬಗ್ಗೆ ನಾನು ಯೋಚಿಸುವ ವಿಧಾನವನ್ನು ಮೂಲಭೂತವಾಗಿ ಬದಲಿಸಿದೆ. ರಾಜಕೀಯವನ್ನು ಹೇಗೆ ನೋಡುತ್ತೇನೆ, ಜನರನ್ನು ಹೇಗೆ ನೋಡುತ್ತೇನೆ, ಅವರೊಂದಿಗೆ ಹೇಗೆ ಸಂವಹನ ನಡೆಸುತ್ತೇನೆ ಮತ್ತು ಹೇಗೆ ಕೇಳಿಸಿಕೊಳ್ಳುತ್ತೇನೆ ಎಂಬುದನ್ನು ಬದಲಿಸಿದೆ. ನಾನೊಬ್ಬನೇ ಅಲ್ಲ; ಯಾತ್ರೆಯಲ್ಲಿ ಭಾಗಿಯಾಗಿದ್ದ ಅನೇಕ ಜನರನ್ನೂ ಬದಲಿಸಿದೆ,ʼ ಎಂದು ಹೇಳಿದರು.

ರಾಜಕೀಯದಲ್ಲಿ ಪ್ರೀತಿಯ ಕಲ್ಪನೆ: ರಾಜಕೀಯದಲ್ಲಿ ಪ್ರೀತಿಯ ಕಲ್ಪನೆಯ ಪರಿಚಯವು ಹೇಗೆ ಸಾವಯವವಾಗಿ ಸಂಭವಿಸಿತು ಎಂದು ರಾಹುಲ್‌ ವಿವರಿಸಿದರು.

ʻಸಾವಯವವಾಗಿ ಸಂಭವಿಸಿದ ಅತ್ಯಂತ ಶಕ್ತಿಯುತವಾದ ವಿಷಯವೆಂದರೆ, ರಾಜಕೀಯದಲ್ಲಿ ಪ್ರೀತಿಯ ಕಲ್ಪನೆಯ ಪರಿಚಯ. ಇದು ವಿಚಿತ್ರ. ಏಕೆಂದರೆ, ರಾಜಕೀಯ ಭಾಷಣದಲ್ಲಿ ಪ್ರೀತಿ ಎಂಬ ಪದ ಕೇಳಿರುವುದಿಲ್ಲ. ದ್ವೇಷ, ಕೋಪ, ಅನ್ಯಾಯ, ಭ್ರಷ್ಟಾಚಾರ ಪದಗಳನ್ನು ಕೇಳಿರುತ್ತೀರಿ. ಅಪರೂಪಕ್ಕೊಮ್ಮೆ ಪ್ರೀತಿ ಪದವನ್ನು ಕೇಳಿರಬಹುದು. ಭಾರತ್ ಜೋಡೋ ಯಾತ್ರೆಯು ಭಾರತೀಯ ರಾಜಕೀಯ ವ್ಯವಸ್ಥೆಯಲ್ಲಿ ಆ ಕಲ್ಪನೆಯನ್ನು ಪರಿಚಯಿಸಿತು,ʼ ಎಂದು ವಿವರಿಸಿದರು.

ಭಾರತೀಯ ರಾಜಕೀಯ ಚಿಂತನೆ: ʻಹಿಂದಿಯಲ್ಲಿ ದೇವತಾ ಎಂಬ ಪದವಿದೆ. ಇದರ ನಿಜವಾದ ಅರ್ಥ- ದೇವರು ಅಥವಾ ದೇವತೆ ಅಲ್ಲ. ದೇವತಾ ಎಂದರೆ ವ್ಯಕ್ತಿ; ಅವನ ಆಂತರಿಕ ಭಾವನೆಗಳು ಅವನ ಬಾಹ್ಯ ಅಭಿವ್ಯಕ್ತಿಯಂತೆಯೇ ಇರುತ್ತವೆ; ಅಂದರೆ, ಅವನು ಸಂಪೂರ್ಣವಾಗಿ ಪಾರದರ್ಶಕ ಜೀವಿ. ಒಬ್ಬ ವ್ಯಕ್ತಿ ತಾನು ನಂಬುವ ಅಥವಾ ಯೋಚಿಸುವ ಎಲ್ಲವನ್ನೂ ಹೇಳಿದರೆ ಮತ್ತು ಬಹಿರಂಗವಾಗಿ ವ್ಯಕ್ತಪಡಿಸಿದರೆ, ಅದು ದೇವತಾ ವ್ಯಾಖ್ಯಾನವಾಗಿದೆ.

ರಾಜಕೀಯದ ಕುತೂಹಲಕಾರಿ ಸಂಗತಿಯೆಂದರೆ: * ಸ್ವಂತ ಆಲೋಚನೆಗಳನ್ನು ನೀವು ಹೇಗೆ ನಿಗ್ರಹಿಸುತ್ತೀರಿ? * ಸ್ವಂತ ಭಯ, ದುರಾಶೆ ಅಥವಾ ಮಹತ್ವಾಕಾಂಕ್ಷೆಗಳನ್ನು ಹೇಗೆ ನಿಗ್ರಹಿಸುತ್ತೀರಿ ಮತ್ತು ಇತರರ ಭಯ ಮತ್ತು ಮಹತ್ವಾಕಾಂಕ್ಷೆಗಳ ಮೇಲೆ ಕೇಂದ್ರೀಕರಿಸುತ್ತೀರಿ?

ನೀವು ನಮ್ಮ ಐತಿಹಾಸಿಕ ನಾಯಕರನ್ನು ನೋಡಿದರೆ, ವೈಪರೀತ್ಯಗಳನ್ನು ನೋಡಬಹುದು. ತೀವ್ರತೆಯನ್ನು ಪ್ರತಿನಿಧಿಸುವ ಬುದ್ಧ ಮತ್ತು ಭಗವಾನ್ ರಾಮ ಮತ್ತು ಮಹಾತ್ಮ ಗಾಂಧಿಯನ್ನು ನೋಡಬಹುದು. ಅಸ್ಮಿತೆಯ ನಾಶ, ಸ್ವಯಂನ ನಾಶ ಮತ್ತು ಇತರರು ಏನು ಹೇಳುತ್ತಾರೆಂದು ಕೇಳುವುದು ಇದರ ಮೂಲ ಕಲ್ಪನೆ,ʼ ಎಂದು ರಾಹುಲ್ ಹೇಳಿದರು. 

ʻಭಾರತೀಯ ನಾಯಕನೊಬ್ಬ ಅಮೆರಿಕದ ನಾಯಕನಿಗಿಂತ ಹೇಗೆ ಭಿನ್ನ ಎಂದರೆ, ʻನಾವು ಅಲ್ಲಿಗೆ ಹೋಗಬೇಕಿದೆ. ನಾನು ನಿಮ್ಮನ್ನು ವಾಗ್ದಾನ ಮಾಡಿದ ಭೂಮಿಗೆ ಕರೆದೊಯ್ಯಲಿದ್ದೇನೆʼ ಎಂದು ಅಮೆರಿಕದ ನಾಯಕ ಹೇಳುತ್ತಾನೆ . ಆದರೆ, ಭಾರತೀಯ ನಾಯಕ ಸ್ವತಃ ಸವಾಲು ಹಾಕುತ್ತಾನೆ. ಗಾಂಧೀಜಿ ಮೂಲಭೂತವಾಗಿ ಸ್ವತಃ ಸವಾಲು ಹಾಕಿದರು. ಅದೊಂದು ವಿಭಿನ್ನ ಪರಿಕಲ್ಪನೆ. ನಿಮಗೆ ಶಿವನ ಕಲ್ಪನೆ ಬಗ್ಗೆ ತಿಳಿದಿದೆ - ಶಿವ ವಿಧ್ವಂಸಕ ಎಂದಾಗ, ಅವನು ಏನು ನಾಶಮಾಡುತ್ತಿದ್ದಾನೆ? ಅವನನ್ನೇ. ಶಿವ ತನ್ನ ಅಹಂಕಾರ, ರಚನೆ, ನಂಬಿಕೆಗಳನ್ನು ನಾಶಪಡಿಸುತ್ತಾನೆ. ಹಾಗಾಗಿ, ಭಾರತೀಯ ರಾಜಕೀಯ ಚಿಂತನೆ ಮತ್ತು ಕಾರ್ಯವು ಅಂತರ್ಮುಖಿಯಾಗಿರುತ್ತದೆ,ʼ ಎಂದು ರಾಹುಲ್ ಹೇಳಿದರು. 

ನಿರುದ್ಯೋಗ ಪರಿಸ್ಥಿತಿ: ʻಭಾರತದಲ್ಲಿ ಕೌಶಲದ ಸಮಸ್ಯೆ ಇದೆ ಎಂದು ನಾನು ಭಾವಿಸುವುದಿಲ್ಲ. ಕೌಶಲಗಳಿಗೆ ಸಂಬಂಧಿಸಿದಂತೆ ಸಮಸ್ಯೆ ಇದೆ. ನಮ್ಮ ಶಿಕ್ಷಣ ವ್ಯವಸ್ಥೆಗಳು ವ್ಯಾಪಾರ ವ್ಯವಸ್ಥೆಯೊಂದಿಗೆ ಸಂಪರ್ಕ ಹೊಂದಿಲ್ಲ. ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ವ್ಯಾಪಾರ ವ್ಯವಸ್ಥೆಯನ್ನು ಮತ್ತು ದಂತ ಗೋಪುರದಲ್ಲಿರುವ ಶಿಕ್ಷಣ ವ್ಯವಸ್ಥೆಯನ್ನು ಹೊಂದಿದ್ದೇವೆ. ಶಿಕ್ಷಣ ವ್ಯವಸ್ಥೆಯು ದೇಶದ ಕೌಶಲ ರಚನೆಯೊಂದಿಗೆ ಸಂಪರ್ಕ ಹೊಂದಿಲ್ಲ.ಈ ಅಂತರ ಕಡಿಮೆ ಮಾಡುವುದು ಅಥವಾ ಈ ಎರಡು ವ್ಯವಸ್ಥೆಗಳನ್ನು ವೃತ್ತಿಪರ ತರಬೇತಿ ಮೂಲಕ ಜೋಡಿಸಬೇಕಿದೆ,ʼ ಎಂದು ಹೇಳಿದರು.

ಆರ್‌ಎಸ್‌ಎಸ್/ಬಿಜೆಪಿಯಿಂದ 'ಸಾಂಸ್ಥಿಕ ವಶ': ಶಿಕ್ಷಣ ವ್ಯವಸ್ಥೆಯ ಪ್ರಮುಖ ಸಮಸ್ಯೆಯೆಂದರೆ, ಸೈದ್ಧಾಂತಿಕ ಸೆರೆಹಿಡಿಯುವಿಕೆ. ಹೆಚ್ಚಿನ ಉಪಕುಲಪತಿಗಳನ್ನು ಆರ್‌ಎಸ್‌ಎಸ್ ನೇಮಿಸಿದೆ. ಜೀವನ, ಇತಿಹಾಸ ಮತ್ತು ಭವಿಷ್ಯದ ಬಗ್ಗೆ ನಿರ್ದಿಷ್ಟ ದೃಷ್ಟಿಕೋನವನ್ನು ಹೊಂದಿರುವಿಕೆಯು ನಿಜವಾಗಿಯೂ ಹಾನಿಕಾರಕ. ಶಿಕ್ಷಣ ವ್ಯವಸ್ಥೆಯನ್ನು ಮುನ್ನಡೆಸುತ್ತಿರುವವರು ಸ್ವತಂತ್ರರಾಗಿರಬೇಕು: ಸೈದ್ಧಾಂತಿಕ ಮತ್ತು ನಿರ್ದಿಷ್ಟ ಆಲೋಚನಾ ವಿಧಾನಕ್ಕೆ ಬದ್ಧರಾಗಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಮುಖ್ಯ,ʼ ಎಂದ ಹೇಳಿದರು. 

Tags:    

Similar News