ಶ್ವೇತಭವನದಲ್ಲಿ ಟ್ರಂಪ್, ಷರೀಫ್ ಭೇಟಿ: ಪಾಕಿಸ್ತಾನದೊಂದಿಗೆ ಹೊಸ ವ್ಯಾಪಾರ ಒಪ್ಪಂದಕ್ಕೆ ಸಹಿ
"ನಾನು ಏಳು ಯುದ್ಧಗಳನ್ನು ನಿಲ್ಲಿಸಿದ್ದೇನೆ" ಎಂದು ಈ ವೇಳೆ ಪುನರುಚ್ಚರಿಸಿದ ಟ್ರಂಪ್, ಭಾರತ-ಪಾಕಿಸ್ತಾನದ ನಡುವಿನ ಇತ್ತೀಚಿನ ಸಂಘರ್ಷವನ್ನು ತಾನು ಕೊನೆಗೊಳಿಸಿದ್ದಾಗಿ ಮತ್ತೊಮ್ಮೆ ಪ್ರತಿಪಾದಿಸಿದರು.
ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಮತ್ತು ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಅವರು ಶ್ವೇತಭವನದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿಯಾಗಿ ಮಹತ್ವದ ಮಾತುಕತೆ ನಡೆಸಿದ್ದಾರೆ. ಈ ಭೇಟಿಯ ವೇಳೆ ಉಭಯ ದೇಶಗಳ ನಡುವೆ ಹೊಸ ವ್ಯಾಪಾರ ಒಪ್ಪಂದ ಏರ್ಪಟ್ಟಿದೆ.
ವಿಶ್ವಸಂಸ್ಥೆಯ 80ನೇ ಸಾಮಾನ್ಯ ಸಭೆಯಲ್ಲಿ ಭಾಗವಹಿಸಲು ಅಮೆರಿಕಕ್ಕೆ ತೆರಳಿರುವ ಷರೀಫ್, ಶುಕ್ರವಾರ ಸಾಮಾನ್ಯ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಇದಕ್ಕೂ ಮುನ್ನ ಗುರುವಾರ, ಅವರು ನ್ಯೂಯಾರ್ಕ್‌ನಿಂದ ವಾಷಿಂಗ್ಟನ್‌ಗೆ ವಿಶೇಷವಾಗಿ ಆಗಮಿಸಿ ಟ್ರಂಪ್ ಅವರನ್ನು ಭೇಟಿಯಾದರು. ಪ್ರಧಾನಿಯಾಗಿ ಇದು ಶೆಹಬಾಜ್ ಷರೀಫ್ ಅವರ ಮೊದಲ ಶ್ವೇತಭವನ ಭೇಟಿಯಾಗಿದೆ. ಈ ಸಭೆಯಲ್ಲಿ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಕೂಡ ಉಪಸ್ಥಿತರಿದ್ದರು.
ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, "ಪಾಕಿಸ್ತಾನದ ಪ್ರಧಾನಿ ಮತ್ತು ಫೀಲ್ಡ್ ಮಾರ್ಷಲ್ ಇಲ್ಲಿಗೆ ಬರುತ್ತಿದ್ದಾರೆ, ಅವರಿಬ್ಬರೂ ಶ್ರೇಷ್ಠ ನಾಯಕರು" ಎಂದು ಶ್ಲಾಘಿಸಿದರು. "ನಾನು ಏಳು ಯುದ್ಧಗಳನ್ನು ನಿಲ್ಲಿಸಿದ್ದೇನೆ" ಎಂದು ಪುನರುಚ್ಚರಿಸಿದ ಟ್ರಂಪ್, ಭಾರತ-ಪಾಕಿಸ್ತಾನದ ನಡುವಿನ ಇತ್ತೀಚಿನ ಸಂಘರ್ಷವನ್ನು ತಾನು ಕೊನೆಗೊಳಿಸಿದ್ದಾಗಿ ಮತ್ತೊಮ್ಮೆ ಪ್ರತಿಪಾದಿಸಿದರು.
10.1 ಬಿಲಿಯನ್ ಡಾಲರ್ ಒಪ್ಪಂದ
ಈ ಭೇಟಿಯ ಪ್ರಮುಖ ಫಲಶ್ರುತಿಯಾಗಿ, ಉಭಯ ದೇಶಗಳ ನಡುವೆ ಹೊಸ ವ್ಯಾಪಾರ ಒಪ್ಪಂದಕ್ಕೆ ಬರಲಾಗಿದೆ. ಈ ಒಪ್ಪಂದದ ಅನ್ವಯ, ಪಾಕಿಸ್ತಾನದ ಆಮದುಗಳ ಮೇಲೆ ಶೇ. 19ರಷ್ಟು ಸುಂಕ ವಿಧಿಸಲಾಗುತ್ತದೆ ಮತ್ತು ಪಾಕಿಸ್ತಾನದ ತೈಲ ನಿಕ್ಷೇಪಗಳನ್ನು ಅಭಿವೃದ್ಧಿಪಡಿಸಲು ಅಮೆರಿಕ ಸಹಾಯ ಮಾಡಲಿದೆ. 2024ರಲ್ಲಿ ಅಮೆರಿಕ ಮತ್ತು ಪಾಕಿಸ್ತಾನ ನಡುವಿನ ಸರಕು ಮತ್ತು ಸೇವೆಗಳ ವ್ಯಾಪಾರವು 10.1 ಬಿಲಿಯನ್ ಡಾಲರ್‌ಗಳಷ್ಟಿತ್ತು.
2019ರಲ್ಲಿ ಅಂದಿನ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರು ಶ್ವೇತಭವನಕ್ಕೆ ಭೇಟಿ ನೀಡಿ ಟ್ರಂಪ್ ಅವರನ್ನು ಭೇಟಿಯಾಗಿದ್ದರು. ಅದಕ್ಕೂ ಮುನ್ನ, 2015ರಲ್ಲಿ ಶೆಹಬಾಜ್ ಅವರ ಸಹೋದರ ಮತ್ತು ಅಂದಿನ ಪ್ರಧಾನಿ ನವಾಜ್ ಷರೀಫ್ ಶ್ವೇತಭವನಕ್ಕೆ ಭೇಟಿ ನೀಡಿದ್ದರು.