ನಮ್ಮ ಪರಮಾಣು ಶಸ್ತ್ರಾಸ್ತ್ರಗಳು ಸುರಕ್ಷಿತವಾಗಿವೆ ಎಂದ ಪಾಕಿಸ್ತಾನ

Update: 2025-05-24 05:51 GMT

ಭಾರತದ ಸೇನಾಪಡೆದ ಪಾಕಿಸ್ತಾನದ ಅಣ್ವಸ್ತ್ರಗಳ ಸಂಗ್ರಹಾಗಾರದ ಮೇಲೆ ದಾಳಿ ನಡೆಸಿ ಹಾನಿ ಮಾಡಿದೆ ಎಂಬ ಸುದ್ದಿಯ ನಡುವೆ 'ನಮಗೇನೂ ಆಗಿಲ್ಲ' ಎಂದು ಪಾಕಿಸ್ತಾನ ಹೇಳಿಕೆ ನೀಡಿದೆ. ಶುಕ್ರವಾರ (ಮೇ 23) ತನ್ನ ಕಮಾಂಡ್ ಮತ್ತು ಕಂಟ್ರೋಲ್ ರಚನೆಗಳು ದೃಢವಾಗಿವೆ ಎಂದು ಹೇಳಿರುವ ಜೊತೆಗೆ, 'ಸಮಗ್ರ ಪರಮಾಣು ಭದ್ರತಾ ವ್ಯವಸ್ಥೆ' ಸುರಕ್ಷಿತವಾಗಿದೆ ಎಂದು ಪಾಕಿಸ್ತಾನದ ವಿದೇಶಾಂಗ ಕಚೇರಿ ಹೇಳಿದೆ.

ಪಾಕಿಸ್ತಾನದ ಪರಮಾಣು ಶಸ್ತ್ರಾಸ್ತ್ರಗಳ ಬಗ್ಗೆ ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದ "ಪಾಕಿಸ್ತಾನವು ತನ್ನ ಸಮಗ್ರ ಪರಮಾಣು ಭದ್ರತಾ ವ್ಯವಸ್ಥೆಯ ಶಕ್ತಿ ಮತ್ತು ಕಮಾಂಡ್ ಮತ್ತು ಕಂಟ್ರೋಲ್ ರಚನೆಗಳ ದೃಢತೆಯ ಬಗ್ಗೆ ಸಂಪೂರ್ಣ ವಿಶ್ವಾಸ ಹೊಂದಿದೆ," ಎಂದು ವಿದೇಶಾಂಗ ಕಚೇರಿಯ ಹೇಳಿಕೆ ತಿಳಿಸಿದೆ.

ಭಾರತದ ಆರೋಪಗಳ ನಕಾರ

ಭಾರತದ ಪರಮಾಣು ಶಸ್ತ್ರಾಗಾರದ ಬಗ್ಗೆ ಅಂತರರಾಷ್ಟ್ರೀಯ ಸಮುದಾಯವು ಹೆಚ್ಚು ಕಾಳಜಿವಹಿಸಬೇಕು ಎಂದು ಪಾಕಿಸ್ತಾನ ಹೇಳಿಕೆ ನೀಡಿದೆ. "ಭಾರತದ ರಾಜಕೀಯ ವಾತಾವರಣ, ಮಾಧ್ಯಮಗಳು ಮತ್ತು ಸಮಾಜದ ಕೆಲವು ವಿಭಾಗಗಳಲ್ಲಿ ಸೃಷ್ಟಿಯಾಗಿರುವ ಸ್ಥಿತಿಯು ಪರಮಾಣು ಭದ್ರತಾ ಕಾಳಜಿ ಹುಟ್ಟುಹಾಕುತ್ತಿದೆ," ಎಂದು ಪಾಕಿಸ್ತಾನ ಆರೋಪಿಸಿದೆ.

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಗುರುವಾರ ಶ್ರೀನಗರದಲ್ಲಿ ನೀಡಿದ ಹೇಳಿಕೆಗೆ ಪ್ರತಿಕ್ರಿಯೆಯಾಗಿ, ಪಾಕಿಸ್ತಾನ ಇಂಥ ಹೇಳಿಕೆ ನೀಡಿದೆ ಎನ್ನಲಾಗಿದೆ. ಪರಮಾಣು ಶಸ್ತ್ರಾಸ್ತ್ರಗಳು 'ದುಷ್ಟ ರಾಷ್ಟ್ರ'ದಲ್ಲಿ ಸುರಕ್ಷಿತವಾಗಿಲ್ಲ ಎಂದು ರಾಜನಾಥ್ ಸಿಂಗ್ ಹೇಳಿಕೆ ನೀಡಿದ್ದರು. ಮುಂದುವರಿದ ಅವರು  ಪಾಕ್​ನಲ್ಲಿರುವ ಅಣ್ವಸ್ತ್ರಗಳನ್ನು ಅಂತರರಾಷ್ಟ್ರೀಯ ಪರಮಾಣು ಶಕ್ತಿ ಏಜೆನ್ಸಿಯ (IAEA) ಮೇಲ್ವಿಚಾರಣೆಯಡಿಯಲ್ಲಿ ಇಡಬೇಕೆಂದು ಅಭಿಪ್ರಾಯಪಟ್ಟಿದ್ದರು. 

ರಾಜನಾಥ್ ಸಿಂಗ್‌ರ ಹೇಳಿಕೆಯು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಇತ್ತೀಚಿನ ಹೇಳಿಕೆಯನ್ನು ಅನುಸರಿಸಿದೆ. ಪಾಕಿಸ್ತಾನದ 'ಪರಮಾಣು ಬೆದರಿಕೆಯನ್ನು ಭಾರತ ಸಹಿಸದು ಮತ್ತು ಗಡಿಯಾಚೆಗಿನ ಭಯೋತ್ಪಾದನೆಯನ್ನು ಕಠಿಣವಾಗಿ ಶಿಕ್ಷಿಸುವುದಾಗಿ ಮೋದಿ ಹೇಳಿದ್ದರು. 

Tags:    

Similar News