Suzuki Motors | ವಾಹನ ತಯಾರಿಕಾ ದಿಗ್ಗಜ ಸುಜುಕಿ ಮೋಟರ್ಸ್‌ ಕಂಪನಿ ಅಧ್ಯಕ್ಷ ಒಸಾಮು ಸುಜುಕಿ ಇನ್ನಿಲ್ಲ

ಸುಜುಕಿ ಮೋಟಾರ್ ಕಾರ್ಪೊರೇಷನ್ ಮಾಲೀಕರಾಗಿದ್ದ ಮಿಚಿಯೊ ಸುಜುಕಿ ಅವರ ಮೊಮ್ಮಗಳಾದ ಶೋಕೊ ಸುಜುಕಿ ಅವರನ್ನು ಮದುವೆಯಾದ ನಂತರ ಇಡೀ ಸುಜುಕಿ ಸಂಸ್ಥೆಯ ಮಾಲೀಕತ್ವವನ್ನು ಒಸಾಮು ವಹಿಸಿಕೊಂಡಿದ್ದರು.

Update: 2024-12-28 12:33 GMT
ಸುಜುಕಿ ಮೋಟರ್ಸ್‌ ಮಾಲೀಕ ಒಸಾಮು ಸುಜುಕಿ

ಪ್ರಖ್ಯಾತ ವಾಹನ ತಯಾರಿಕಾ ಸಂಸ್ಥೆ ಸುಜುಕಿ ಮೋಟಾರ್ ಕಾರ್ಪ್‌ ಅಧ್ಯಕ್ಷ ಒಸಾಮು ಸುಜುಕಿ (94) ಅವರು ಲಿಂಪೋಮಾದಿಂದ (ಒಂದು ರೀತಿಯ ರಕ್ತದ ಕ್ಯಾನ್ಸರ್) ನಿಧನರಾಗಿದ್ದಾರೆ.

1930 ಜನವರಿ 20 ರಂದು ಜಪಾನ್‌ನ ಗೆರೋದಲ್ಲಿ ಜನಿಸಿದ್ದ ಒಸಾಮು, 1953 ರಲ್ಲಿ ಚುವೊ ವಿಶ್ವವಿದ್ಯಾಲಯದಿಂದ ಪದವಿ ಪಡೆದರು. ಬಳಿಕ ಸ್ಥಳೀಯ ಬ್ಯಾಂಕ್‌ ಒಂದರಲ್ಲಿ ಸಾಲ ಮಂಜೂರಾತಿ ವಿಭಾಗದಲ್ಲಿ ಅಧಿಕಾರಿಯಾಗಿ ಕೆಲಸ ಮಾಡಿದ್ದರು.

ಸುಜುಕಿ ಮೋಟಾರ್ ಕಾರ್ಪೊರೇಷನ್ ಮಾಲೀಕರಾಗಿದ್ದ ಮಿಚಿಯೊ ಸುಜುಕಿ ಅವರ ಮೊಮ್ಮಗಳಾದ ಶೋಕೊ ಸುಜುಕಿ ಅವರನ್ನು ಮದುವೆಯಾದ ನಂತರ ಇಡೀ ಸುಜುಕಿ ಸಂಸ್ಥೆಯ ಮಾಲೀಕತ್ವವನ್ನು ಒಸಾಮು ವಹಿಸಿಕೊಂಡಿದ್ದರು.

ಕಂಪನಿ ವಿಸ್ತರಿಸಿದ್ದ ಒಸಾಮು

40 ವರ್ಷಗಳ ಕಾಲ ಸುಜುಕಿ ಕಂಪನಿಯನ್ನು ಮುನ್ನಡೆಸಿದ ಒಸಾಮು ಅವರು ಭಾರತ ಸೇರಿದಂತೆ ವಿಶ್ವದ ಹಲವು ರಾಷ್ಟ್ರಗಳಲ್ಲಿ ವ್ಯವಹಾರ ವಿಸ್ತರಿಸಿದ್ದರು. 2015 ರಲ್ಲಿ ತಮ್ಮ ಮಗ ತೋಶಿಹಿರೊ ಸುಜುಕಿ ಅವರಿಗೆ ಜವಾಬ್ದಾರಿ ವಹಿಸಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದಿದ್ದರು.

1978 ರಲ್ಲಿ ಸುಜುಕಿ ಕಂಪನಿಯ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದ ಒಸಾಮು ಅವರು, ಹಲವು ಕ್ರಾಂತಿಕಾರಕ ಹೆಜ್ಜೆಗಳನ್ನು ಇರಿಸಿದರು. ಬಹುತೇಕ ವಾಹನ ತಯಾರಿಕಾ ಸಂಸ್ಥೆಗಳು ಅಮೆರಿಕ ಹಾಗೂ ಚೀನಾ ಮಾರುಕಟ್ಟೆಯ ಮೇಲೆ ಹಿಡಿತ ಸಾಧಿಸಿದರೆ, ಒಸಾಮು ಅವರು ಭಾರತ, ಹಂಗೇರಿ ಹಾಗೂ ಆಗ್ನೇಯ ಏಷ್ಯಾದ ಇತರ ರಾಷ್ಟ್ರಗಳಲ್ಲಿ ಸಣ್ಣ ವಾಹನಗಳು ಮತ್ತು ಅಗ್ಗದ ಕಾರುಗಳನ್ನು ತಯಾರಿಸುವ ವಿಶಿಷ್ಟ ಉಪಕ್ರಮ ಅನುಸರಿಸಿದರು. ಅದು ಸುಜುಕಿ ಕಂಪನಿಗೆ ದೊಡ್ಡ ಲಾಭ ತಂದುಕೊಟ್ಟಿತು.

ವಾಹನ ಮಾರಾಟದಲ್ಲಿ ಏರಿಕೆ

ಒಸಾಮು ನೇತೃತ್ವದಲ್ಲಿ ಸುಜುಕಿ ಕಂಪನಿ ಕಳೆದ ನಾಲ್ಕು ದಶಕಗಳಲ್ಲಿ ವಾಹನ ತಯಾರಿಕೆ ಹಾಗೂ ಮಾರಾಟದಲ್ಲಿ ಯಶೋಗಾಥೆ ಸಾಧಿಸಿತು. 1978 ರಲ್ಲಿ ಒಸಾಮು ಅಧಿಕಾರ ವಹಿಸಿಕೊಂಡಾಗ 300 ಶತಕೋಟಿ ಯೆನ್ (1.9 ಶತಕೋಟಿ ಡಾಲರ್) ಇದ್ದ ವಹಿವಾಟು 2006 ರಲ್ಲಿ 3 ಟ್ರಿಲಿಯನ್ ಯೆನ್ (19 ಶತಕೋಟಿ ಡಾಲರ್) ಗೆ ಏರಿಕೆಯಾಗಿತ್ತು ಎಂದು ವರದಿಗಳು ತಿಳಿಸಿವೆ.

ಸುಜುಕಿ ಮೋಟರ್‌ ಕಾರ್ಪ್ ಪ್ರಸ್ತುತ ವಿಶ್ವದಾದ್ಯಂತ ಅಗ್ರ ಮೋಟಾರ್‌ ಸೈಕಲ್‌ ತಯಾರಿಕ ಕಂಪನಿಗಳಲ್ಲಿ ಒಂದು. 2023-24 ನೇ ಸಾಲಿನಲ್ಲಿ ಕಂಪನಿಯು 3.2 ದಶಲಕ್ಷ ವಾಹನಗಳನ್ನು ಮಾರಾಟ ಮಾಡಿದೆ. ಇದರಲ್ಲಿ ಅರ್ಧಕ್ಕಿಂತ ಹೆಚ್ಚು ಭಾರತದಲ್ಲಿಯೇ ಮಾರಾಟವಾಗಿವೆ.

Tags:    

Similar News